ಮೋಟೊರೋಲ ಮೋಟೊ ಜಿ4 ಪ್ಲಸ್ ಬೆಲೆಗೆ ತಕ್ಕ ಸ್ಮಾರ್ಟ್‌ಫೋನ್

ಪ್ರಪಂಚದ ಮೊತ್ತಮೊದಲ ಮೊಬೈಲ್ ಫೋನ್ ತಯಾರಿಸಿದ ಕಂಪೆನಿಯಿಂದ ಮತ್ತೊಂದು ಆಂಡ್ರಾಯ್ಡ್‌  ಫೋನ್.

ಮೋಟೊರೋಲ ಮೋಟೊ ಜಿ4 ಪ್ಲಸ್ ಬೆಲೆಗೆ ತಕ್ಕ ಸ್ಮಾರ್ಟ್‌ಫೋನ್

ಬಹುಪಾಲು ಜನರಿಗೆ ಈ ವಿಷಯ ತಿಳಿದಿದೆಯೋ ಇಲ್ಲವೋ? ಪ್ರಪಂಚದ ಮೊದಲ ಮೊಬೈಲ್ ಫೋನ್ ಅನ್ನು ತಯಾರಿಸಿದ್ದು ಮೋಟೊರೋಲ ಕಂಪೆನಿ 1973ರಲ್ಲಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಏಳು ಬೀಳುಗಳಲ್ಲಿ ಮೋಟೊರೋಲ ಕಂಪೆನಿಯೂ ಸೇರಿಕೊಂಡಿದೆ. ಅದರ ಮೊಬೈಲ್ ಫೋನ್ ವಿಭಾಗವನ್ನು 2011ರಲ್ಲಿ ಗೂಗಲ್ ಕಂಪೆನಿ ಕೊಂಡುಕೊಂಡು 2014 ಜನವರಿಯಲ್ಲಿ ಲೆನೋವೊ ಕಂಪೆನಿಗೆ ಮಾರಿತು. ಮೋಟೊರೋಲ ಕಂಪೆನಿಯ ಮೋಟೊ ಜಿ4 ಪ್ಲಸ್ (Motorola Moto G4 Plus) ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
1.52 ಗಿಗಾಹರ್ಟ್ಸ್ ವೇಗದ 8 ಹೃದಯಗಳ ಪ್ರೊಸೆಸರ್ (Qualcomm Snapdragon 617), ಆಡ್ರಿನೋ 405 ಗ್ರಾಫಿಕ್ಸ್ ಪ್ರೊಸೆಸರ್, 3 ಗಿಗಾಬೈಟ್ ಪ್ರಾಥಮಿಕ ಮೆಮೊರಿ, 32 ಗಿಗಾಬೈಟ್ ಸಂಗ್ರಹ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 2ಜಿ/3ಜಿ/4ಜಿ ಎರಡು ಸಿಮ್, 5.5 ಇಂಚು ಗಾತ್ರದ 1920x1080 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಸ್ಪರ್ಶಸಂವೇದಿ ಪರದೆ, ಗೊರಿಲ್ಲ ಗಾಜು,

16  ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಇನ್ನೊಂದು (ಸ್ವಂತೀ) ಕ್ಯಾಮೆರಾಗಳು,  ಪ್ರಾಥಮಿಕ ಕ್ಯಾಮೆರಾಕ್ಕೆ ಫ್ಲಾಶ್, 153x76.6x9.8 ಮಿ.ಮೀ. ಗಾತ್ರ, 155 ಗ್ರಾಂ ತೂಕ, 3000 mAh ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, ಬೆರಳಚ್ಚು ಸ್ಕ್ಯಾನರ್, ಆಂಡ್ರಾಯ್ಡ್‌ 6.0.1, ಇತ್ಯಾದಿ. ಮಾರುಕಟ್ಟೆ ಬೆಲೆ ₹14,999. ಇದರ ರಚನೆ ಮತ್ತು ವಿನ್ಯಾಸಗಳಲ್ಲಿ ಅಂತಹ ಹೇಳಿಕೊಳ್ಳುವಂತಹದ್ದೇನಿಲ್ಲ. ಇದು ಗಟ್ಟಿಮುಟ್ಟಾಗಿದೆ ಎನ್ನಬಹುದು. ಇದರ ಹಿಂದಿನ ಮುಚ್ಚಳ ತೆಗೆದು ಬದಲಾಯಿಸಬಹುದು. ಈ ಮುಚ್ಚಳ ತುಂಬ ಅಳ್ಳಕವಾಗಿದೆ. ಕಡಿಮೆ ಬೆಲೆಯ ಪ್ಲಾಸ್ಟಿಕ್ ಹಿಡಿದ ಭಾವನೆ ಬರುತ್ತದೆ. ಆದರೂ ಇದರ ಬ್ಯಾಟರಿ ಮಾತ್ರ ಬದಲಿಸಲು ಅಸಾಧ್ಯ.

ಹಿಂದಿನ ಮುಚ್ಚಳ ತೆಗೆದಾಗ ಎರಡು ಸಿಮ್ ಹಾಗೂ ಮೈಕ್ರೊಎಸ್‌ಡಿ ಮೆಮೊರಿ ಹಾಕುವ ಜಾಗಗಳು ಕಂಡುಬರುತ್ತವೆ. ಇತ್ತೀಚೆಗಿನ ಹಲವು ಫೋನ್‌ಗಳಂತೆ ಇದರಲ್ಲಿ ಎರಡನೆಯ ಸಿಮ್ ಜಾಗದಲ್ಲಿ ಮೆಮೊರಿ ಕಾರ್ಡ್ ಹಾಕುವುದಲ್ಲ. ಎರಡು ಸಿಮ್ ಹಾಕಿಯೂ ಮೆಮೊರಿ ಕಾರ್ಡ್ ಹಾಕಬಹುದು. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಮತ್ತು ಅದರ ಕೆಳಭಾಗದಲ್ಲಿ ವಾಲ್ಯೂಮ್ ಬಟನ್ ಇದೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿದೆ.

ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಯಿದೆ. ಹಿಂಭಾಗದಲ್ಲಿ ಕ್ಯಾಮೆರಾ, ಅದರ ಕೆಳಗೆ ಫ್ಲಾಶ್ ಮತ್ತು ಅದರ ಮೇಲ್ಭಾಗದಲ್ಲಿ ಲೇಸರ್ ಕಿರಣದ ಕಿಂಡಿಯಿದೆ. ದೇಹದ ಮೂಲೆಗಳು ಸ್ವಲ್ಪ ಜಾಸ್ತಿಯೇ ದುಂಡಗಾಗಿವೆ. ಮುಂಭಾಗದಲ್ಲಿ ಕೆಳಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಸಾಮಾನ್ಯವಾಗಿ ಹಲವು ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಕಂಡುಬರುವ ಮೂರು ಸಾಫ್ಟ್ ಬಟನ್‌ಗಳು ಇದರಲ್ಲಿಲ್ಲ. ಪರದೆಯಲ್ಲೇ ಬೇಕಾದಾಗ ಅವು ಗೋಚರಿಸುತ್ತವೆ.

ಇದರ ಕೆಲಸದ ವೇಗ ಪರವಾಗಿಲ್ಲ ಎನ್ನಬಹುದು. ಇದರಲ್ಲಿರುವುದು ಸ್ನ್ಯಾಪ್‌ಡ್ರಾಗನ್ 800 ಶ್ರೇಣಿಯ ಪ್ರೊಸೆಸರ್ ಅಲ್ಲ. ಆದುದರಿಂದ ಇದರ ಕೆಲಸದ ವೇಗ ತುಂಬ ಮೇಲ್ಮಟ್ಟದ್ದಲ್ಲ. ತುಂಬ ಶಕ್ತಿಯನ್ನು ಬೇಡುವ  ಯಾವುದಾದರೂ ಕೆಲಸ ಮಾಡುವುದಿದ್ದಲ್ಲಿ ಇದರ ಶಕ್ತಿ ಸಾಲದು. ಆದರೆ ದಿನನಿತ್ಯದ ಕೆಲಸಗಳಿಗೆ ಸಾಕು. ಹಲವು ನಮೂನೆಯ ಆಟಗಳನ್ನು ಆಡಿ ನೋಡಿದೆ.

ಮೂರು ಆಯಾಮಗಳ ಕಾರು ಓಟದ ಆಟವನ್ನೂ ಆಡಿದೆ. ವೇಗ ಪರವಾಗಿಲ್ಲ ಎಂದು ಅನ್ನಿಸಿತು. ಹೈಡೆಫಿನಿಶನ್ ವಿಡಿಯೊ ವೀಕ್ಷಿಸುವ ಅನುಭವ ಚೆನ್ನಾಗಿದೆ. ಆದರೆ 4k ವಿಡಿಯೊ ಸರಿಯಾಗಿ ಪ್ಲೇ ಆಗುವುದಿಲ್ಲ. ಆಡಿಯೊ ಗುಣಮಟ್ಟ ಪರವಾಗಿಲ್ಲ ಎನ್ನಬಹುದು. ಆದರೆ ಹೈಫೈ ಆಡಿಯೊ ಎನ್ನುವಂತಿಲ್ಲ. 4ಜಿ ಸಂಪರ್ಕ ಸೌಲಭ್ಯ ಇದೆ. VoLTE ಕೂಡ ಇದೆ. ಜಿಯೋ ಸಿಮ್ ಕೆಲಸ ಮಾಡುತ್ತದೆ.

ಇದರಲ್ಲಿರುವ ಕ್ಯಾಮೆರಾ ಕಿರುತಂತ್ರಾಂಶ (ಆ್ಯಪ್) ಅಷ್ಟಕ್ಕಷ್ಟೆ. ಕ್ಯಾಮೆರಾ ಏನೋ ತೃಪ್ತಿದಾಯಕವಾಗಿದೆ. ಆದರೆ ನಿಮಗೆ ಸೃಜನಶೀಲ ಫೋಟೊಗ್ರಫಿ ಮಾಡಬೇಕಿದ್ದಲ್ಲಿ ಓಪನ್ ಕ್ಯಾಮೆರಾ ಅಥವಾ ಬೇರೆ ಯಾವುದಾದರೂ ಉತ್ತಮ ಕಿರುತಂತ್ರಾಂಶ ಹಾಕಿಕೊಳ್ಳಬೇಕು. ಲೇಸರ್ ಫೋಕಸ್ ಕೂಡ ಇದೆ. ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ ಸೌಲಭ್ಯವೂ ಇದೆ. ಇದರ ಕ್ಯಾಮೆರಾಕ್ಕೆ ಪಾಸು ಮಾರ್ಕು ನೀಡಬಹುದು.

ಇದರ ಆಡಿಯೊ ಇಂಜಿನ್ ಪರವಾಗಿಲ್ಲ ಎನ್ನಬಹುದು. ಇಯರ್‌ಫೋನ್ ನೀಡಿದ್ದಾರೆ. ಇದರಲ್ಲಿರುವುದು ತುಂಬ ಮೇಲ್ಮಟ್ಟದ ಆಡಿಯೊ ಇಂಜಿನ್ ಅಲ್ಲ. ಅತ್ಯುತ್ತಮ ಆಡಿಯೊ ಬೇಕಾಗಿದ್ದಲ್ಲಿ ಇದು ನಿಮಗೆ ಹೇಳಿ ಮಾಡಿಸಿದ್ದಲ್ಲ. ಅಂದರೆ ಇದು ಉತ್ತಮ ಮನರಂಜನೆಗಾಗಿ ಬಳಸುವ ಫೋನ್ ಅಲ್ಲ. ಬ್ಯುಸಿನೆಸ್ ಬಳಕೆಗೆ ಉತ್ತಮ ಫೋನ್ ಎನ್ನಬಹುದು.ಎಲ್ಲ ಆಂಡ್ರಾಯ್ಡ್‌ಗಳಂತೆ ಅಂತರಜಾಲ ವೀಕ್ಷಣೆ, ಇಮೇಲ್, ವಾಟ್ಸ್‌ಆ್ಯಪ್‌, ಟ್ವಿಟರ್, ಫೇಸ್‌ಬುಕ್, ಉಪಯುಕ್ತ ಆ್ಯಪ್‌ಗಳು–ಎಲ್ಲ ಬಳಸಬಹುದು.

ಆಂಡ್ರಾಯ್ಡ್‌ 6.0 ಆಧಾರಿತ ಫೋನ್ ಆಗಿರುವುದರಿಂದ ಕನ್ನಡದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಕನ್ನಡದ ಸಂಪೂರ್ಣ ಯೂಸರ್ ಇಂಟರ್‌ಫೇಸ್ ಕೂಡ ಇದೆ.ಕನ್ನಡದ ಕೀಲಿಮಣೆ ಹಾಕಿಕೊಂಡರೆ ಎಲ್ಲ ಕಡೆ ಕನ್ನಡದ ಬಳಕೆ ಮಾಡಬಹುದು. ಒಟ್ಟಿನಲ್ಲಿ ನೀಡುವ ಹಣಕ್ಕೆ ಒಂದು ಮಟ್ಟಿಗೆ ತೃಪ್ತಿ ನೀಡುವ ಫೋನ್ ಎನ್ನಬಹುದು.‌

***
ವಾರದ ಆ್ಯಪ್

ಇಂಗ್ಲಿಷ್ ಒಂದು ವಿಚಿತ್ರ ಭಾಷೆ. ಒಂದು ಪದವನ್ನು ಹೇಗೆ ಉಚ್ಚರಿಸುವುದು ಎಂದು ಯಾರಾದರೂ ತಿಳಿಹೇಳುವ ತನಕ ನಮಗೆ ಆ ಪದದ ಉಚ್ಚಾರ ಹೇಗೆ ಎಂದು ಗೊತ್ತಾಗುವುದಿಲ್ಲ. ಕೆಲವು ಪದಗಳ ಉಚ್ಚಾರ ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇದ್ದು, ಅದು ಇನ್ನೂ ಹೆಚ್ಚು ಗೊಂದಲಕ್ಕೆ ಕಾರಣವಾಗುತ್ತದೆ.

ಯಾವುದಾದರೊಂದು ಇಂಗ್ಲಿಷ್ ಪದದ ಉಚ್ಚಾರ ಹೇಗೆ ಎಂದು ತಿಳಿಯಬೇಕೆ? ಹಾಗಿದ್ದಲ್ಲಿ ನಿಮಗೆ ಅದಕ್ಕೆಂದೇ ಇರುವ ನಿಘಂಟು ಬೇಕು. ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Pronunciation Dictionary ಎಂದು ಹುಡುಕಿದರೆ ಅಂತಹ ಒಂದು ನಿಘಂಟು ದೊರೆಯುತ್ತದೆ.

bit.ly/gadgetloka258 ಜಾಲತಾಣಕ್ಕೆ ಭೇಟಿ ನೀಡಿಯೂ ಇದನ್ನು ಪಡೆಯಬಹುದು. ಈ ನಿಘಂಟುವಿನಲ್ಲಿ ಬ್ರಿಟಿಷ್ ಮತ್ತು ಅಮೆರಿಕನ್ ಉಚ್ಚಾರಗಳೂ ಇವೆ. ಉದಾಹರಣೆಗೆ schedule ಎಂಬ ಪದದ ಉಚ್ಚಾರ ಎರಡು ರೀತಿ ಇದೆ. ನಿಜಕ್ಕೂ ಉಪಯುಕ್ತ ಕಿರುತಂತ್ರಾಂಶ (ಆ್ಯಪ್).

***
ಗ್ಯಾಜೆಟ್‌ ಸಲಹೆ

ಪ್ರಶ್ನೆ: ನಾನು ನನ್ನ ಆಂಡ್ರಾಯ್ಡ್‌ ಮೊಬೈಲಿನಲ್ಲಿ ₹500ರ ‘ಕ್ವಿಕ್ ಹೀಲ್’ (QuickHeal) ಆ್ಯಂಟಿವೈರಸನ್ನು ಪ್ಲೇ ಸ್ಟೋರ್‌ನಿಂದ ಹಾಕಿಕೊಂಡು, ಬೇರೆ ಯಾವುದಾದರು ಸಾಧನಕ್ಕೆ (ಉದಾ - ಟ್ಯಾಬ್ಲೆಟ್) ಕನೆಕ್ಟ್ ಅಥವಾ ಶೇರ್ ಮಾಡಿ ಉಪಯೋಗಿಸಬಹುದಾ?

ಉ: ಇಲ್ಲ.

***
ಗ್ಯಾಜೆಟ್‌ ತರ್ಲೆ
ಫೋಟೊ ಮುದ್ರಿಸುವ ಟೋಸ್ಟರ್

ಟೋಸ್ಟರಿನಿಂದ ಬ್ರೆಡ್‌ನ ತುಂಡು ಕರಕಲಾಗಿ ಹೊರಬರುವುದು ನೋಡಿದ್ದೀರಿ ತಾನೆ? ಇದು ಯಾವುದೋ ನವ್ಯಕಲೆಯಂತೆ ಕಂಡುಬಂದಿರಲೂಬಹುದು. ಯಾಕೆ ಈ ಕಲೆ ನಿಮ್ಮದೇ ಚಿತ್ರ ಆಗಿರಬಾರದು? ಅಮೆರಿಕದಲ್ಲಿ ಈಗ ಅಂತಹ ಟೋಸ್ಟರ್ ಮಾರುಕಟ್ಟೆಗೆ ಬಂದಿದೆ.

ನಿಮ್ಮ ಸ್ವಂತೀಯನ್ನು ಆ ಟೋಸ್ಟರ್ ತಯಾರಕರ ಜಾಲತಾಣಕ್ಕೆ ಏರಿಸಿದರೆ ನಿಮಗೆ ಎರಡು ಸ್ಟೀಲ್ ತಟ್ಟೆಗಳು ಬರುತ್ತವೆ. ಅವುಗಳನ್ನು ಟೋಸ್ಟರ್ ಒಳಗೆ ಅಳವಡಿಸಿದರೆ ಟೋಸ್ಟರಿನಿಂದ ಹೊರ ಬರುವ ಪ್ರತಿ ಬ್ರೆಡ್‌ನಲ್ಲೂ ನಿಮ್ಮದೇ ಚಿತ್ರ ಮೂಡಿಬಂದಿರುತ್ತದೆ! ನಿಮ್ಮ ಚಿತ್ರವನ್ನೇ ಕಚ್ಚಿ ತಿನ್ನಲು ಮನಸ್ಸಾಗದೆ ಉಪವಾಸ ಕುಳಿತರೆ ಅದಕ್ಕೆ ಟೋಸ್ಟರ್ ತಯಾರಿಸಿದ ಕಂಪೆನಿ ಹೊಣೆಯಲ್ಲ!

***
ಗ್ಯಾಜೆಟ್‌ ಸುದ್ದಿ
ಮತ್ತೆ ಬರಲಿದೆ ನೋಕಿಯಾ

ನೋಕಿಯಾ ಫೋನ್ ನೆನಪಿದೆ ತಾನೆ? ಈಗಿನ ಜನಪ್ರಿಯ ಆಂಡ್ರಾಯ್ಡ್‌ ಫೋನ್‌ಗಳ ಕಾಲದಿಂದ ಸ್ವಲ್ಪ ಹಿಂದೆ ಹೋದರೆ ನೀವು ನೋಕಿಯಾ ಫೋನ್‌ಗಳ ಕಾಲದಲ್ಲಿರುತ್ತೀರಿ.

ಸ್ಮಾರ್ಟ್‌ಫೋನ್‌ಗಳ ಕಾಲಕ್ಕಿಂತ ಹಿಂದೆ ನೋಕಿಯಾದವರ ಮಾಮೂಲಿ ಫೋನ್‌ (ಇವುಗಳಿಗೆ feature phone ಎನ್ನುತ್ತಾರೆ) ಮಾರುಕಟ್ಟೆಯ ಚಕ್ರವರ್ತಿಯಾಗಿತ್ತು. ಆದರೆ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ನೋಕಿಯಾ ಸೋಲು ಅನುಭವಿಸಿ ಕೊನೆಗೆ ಮೈಕ್ರೋಸಾಫ್ಟ್‌ಗೆ ಮಾರಾಟವಾಯಿತು.

ಮೈಕ್ರೋಸಾಫ್ಟ್ ಈ ವಿಭಾಗವನ್ನು ಮೈಕ್ರೋಸಾಫ್ಟ್‌ ಮೊಬೈಲ್ ಎಂದು ಹೆಸರು ಬದಲಿಸಿ, ಲುಮಿಯಾ ಫೋನ್‌ಗಳನ್ನು ತಯಾರಿಸುತ್ತಿತ್ತು. ಮೈಕ್ರೋಸಾಫ್ಟ್ ಈಗ ಅದನ್ನೂ ಕೈಬಿಟ್ಟಿದೆ.

ನೋಕಿಯಾದ ಕೆಲ ಮೂಲ ಉದ್ಯೋಗಿಗಳು ಎಚ್‌ಎಂಡಿ ಗ್ಲೋಬಲ್ ಎಂಬ ಹೆಸರಿನಲ್ಲಿ ಒಂದು ಕಂಪೆನಿ ಸ್ಥಾಪಿಸಿ ನೋಕಿಯಾ ಕಂಪೆನಿಯ ಹೆಸರನ್ನು ಬಳಸಲು ಪರವಾನಗಿ ಪಡೆದುಕೊಂಡು ನೋಕಿಯಾ ಹೆಸರಿನಲ್ಲಿ ಮತ್ತೆ ಫೋನ್‌ಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. 2017ನೆಯ ಇಸವಿಯಲ್ಲಿ ಈ ಫೋನ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸಲಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಕಡಿಮೆ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

ಗ್ಯಾಜೆಟ್ ಲೋಕ
ಕಡಿಮೆ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

15 Mar, 2018
ಕಡಿಮೆ ಬೆಲೆಯ ಸಾಧನಗಳು

ಗ್ಯಾಜೆಟ್ ಲೋಕ
ಕಡಿಮೆ ಬೆಲೆಯ ಸಾಧನಗಳು

8 Mar, 2018
ನೋಟ್ 4ನ ಉತ್ತರಾಧಿಕಾರಿ

ಗ್ಯಾಜೆಟ್ ಲೋಕ
ನೋಟ್ 4ನ ಉತ್ತರಾಧಿಕಾರಿ

1 Mar, 2018
ಒಂದು ಉತ್ತಮ ಫೋನ್

ಗ್ಯಾಜೆಟ್ ಲೋಕ
ಒಂದು ಉತ್ತಮ ಫೋನ್

22 Feb, 2018
ಟಿ.ವಿ.ಯನ್ನು  ಸ್ಮಾರ್ಟ್ ಮಾಡಿ

ಗ್ಯಾಜೆಟ್ ಲೋಕ
ಟಿ.ವಿ.ಯನ್ನು ಸ್ಮಾರ್ಟ್ ಮಾಡಿ

15 Feb, 2018