ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ಫೋಟೊಸ್‌ ಮೂಲಕ ಕೊಲಾಜ್‌, ಅನಿಮೇಷನ್‌ ಸೃಷ್ಟಿ

Last Updated 21 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಉತ್ತಮ ಗುಣಮಟ್ಟದ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಸಿಗುತ್ತಿರುವ ಇಂದಿನ ದಿನಗಳಲ್ಲಿ ಕಾಲವನ್ನು ಚಿತ್ರಗಳಲ್ಲಿ ಕಟ್ಟಿಹಾಕುವ ಕೆಲಸಕ್ಕೆ ಅನೇಕರು ಮುಂದಾಗುತ್ತಿದ್ದಾರೆ! ಚಿತ್ರ ತೆಗೆಯುವುದು ಈಗ ಕೇವಲ ಹವ್ಯಾಸವಲ್ಲ, ಕಂಡಿದ್ದನ್ನೆಲ್ಲಾ ಕ್ಲಿಕ್ಕಿಸುವುದು ಹಲವರ ಅಭ್ಯಾಸವೂ ಆಗಿದೆ. ಹೀಗೆ ಅಲ್ಲಿ ಇಲ್ಲಿ ತೆಗೆದ ಚಿತ್ರಗಳು ಗ್ಯಾಲರಿಯಲ್ಲೋ, ಗೂಗಲ್‌ ಫೋಟೊಸ್‌ನಲ್ಲೋ ಕೊಳೆಯುವ ಬದಲು ಅವಕ್ಕೆ ಬೇರೆಯ ರೂಪಕೊಟ್ಟು ಅವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು.

ಗೂಗಲ್‌ ಫೋಟೊಸ್‌ (photos.google.com) ಮೂಲಕ ಚಿತ್ರಗಳ ಕೊಲಾಜ್‌, ಅನಿಮೇಷನ್‌, ಆಲ್ಬಮ್‌ ಸೃಷ್ಟಿಸಬಹುದು. ಉತ್ತಮ ಚಿತ್ರಗಳು ಹಾಗೂ ಸೃಜನಶೀಲ ಮನಸ್ಸು ನಿಮ್ಮಲ್ಲಿದ್ದರೆ ಒಳ್ಳೊಳ್ಳೆ ಕೊಲಾಜ್‌, ಅನಿಮೇಷನ್‌ ಸೃಷ್ಟಿಸಬಹುದು. ಗೂಗಲ್‌ ಫೋಟೊಸ್‌ನಲ್ಲಿ ಸರಳ ವಿಧಾನದ ಮೂಲಕ ಫೋಟೊಗಳಿಗೆ ಭಿನ್ನ ಆಯಾಮ ನೀಡಲು ಸಾಧ್ಯ.

ನೀವು ಸ್ಮಾರ್ಟ್‌ಫೋನ್‌ನಿಂದ ತೆಗೆದ ಚಿತ್ರಗಳು ಆಟೊಸಿಂಕ್‌ ಆಗುವಂತೆ ನಿಮ್ಮ ಡಿವೈಸ್‌ನ ಸೆಟ್ಟಿಂಗ್‌ ಬದಲಾವಣೆ ಮಾಡಿ. ಗೂಗಲ್‌ ಫೋಟೊಸ್‌ ಕ್ಲೌಡ್‌ ಸೇರುವ ನಿಮ್ಮ ಚಿತ್ರಗಳು ಇಲ್ಲಿ ಸುರಕ್ಷಿತವಾಗಿಯೂ ಇರುತ್ತವೆ.

ನಿಮ್ಮ ಡಿವೈಸ್‌ ಫಾರ್ಮಾಟ್‌ ಆದರೂ, ಫೋನ್‌ ಕಳೆದು ಹೋದರೂ ಚಿತ್ರಗಳು ನಿಮ್ಮ ಗೂಗಲ್‌ ಅಕೌಂಟ್‌ ಜತೆಗೆ ಸುರಕ್ಷಿತವಾಗಿರುತ್ತವೆ. ಹೀಗೆ ಗೂಗಲ್‌ ಫೋಟೊಸ್‌ನಲ್ಲಿರುವ ಚಿತ್ರಗಳನ್ನು ಬಳಸಿಕೊಂಡು ಕೊಲಾಜ್‌, ಅನಿಮೇಷನ್‌ ಮಾಡಬಹುದು. ಚಿತ್ರಗಳ ಕೊಲಾಜ್‌ ಇಲ್ಲವೆ ಅನಿಮೇಷನ್‌ ಸೃಷ್ಟಿಸಲು ಗೂಗಲ್‌ ಫೋಟೊಸ್‌ಗೆ (photos.google.com) ಹೋಗಿ ನಿಮ್ಮ ಗೂಗಲ್‌ ಅಕೌಂಟ್‌ಗೆ ಲಾಗ್‌ಇನ್‌ ಆಗಿ. ಗೂಗಲ್‌ ಫೋಟೊಸ್ ಪೇಜ್‌ನಲ್ಲಿ ಕಾಣುವ assistant ಮೇಲೆ ಕ್ಲಿಕ್ಕಿಸಿ. ಇಲ್ಲಿನ ಕ್ರಿಯೇಟ್‌ ನ್ಯೂ ಕೆಳಗಿನ ಕೊಲಾಜ್‌ ಅಥವಾ ಅನಿಮೇಷನ್‌ ಮೇಲೆ ಕ್ಲಿಕ್‌ ಮಾಡಿ.

ನೀವು ಕೊಲಾಜ್‌ ಮೇಲೆ ಕ್ಲಿಕ್‌ ಮಾಡಿದ ಕೂಡಲೆ ಗೂಗಲ್‌ ಫೋಟೊಸ್‌ನಲ್ಲಿರುವ ನಿಮ್ಮ ಚಿತ್ರಗಳ ಪಟ್ಟಿ ತೆರೆದುಕೊಳ್ಳುತ್ತದೆ. ಯಾವ ಯಾವ ಚಿತ್ರಗಳನ್ನು ಬಳಸಿ ಕೊಲಾಜ್‌ ಮಾಡಬೇಕೆಂದುಕೊಂಡಿದ್ದೀರೋ ಆಯಾ ಚಿತ್ರಗಳ ಮೇಲೆ ಕ್ಲಿಕ್‌ ಮಾಡಿ ಆಯ್ಕೆ ಮಾಡಿಕೊಳ್ಳಿ. ಬಳಿಕ Create ಕ್ಲಿಕ್ಕಿಸಿದರೆ ನಿಮ್ಮ ಫೋಟೊ ಕೊಲಾಜ್‌ ಸಿದ್ಧ.

ಇದೇ ರೀತಿ ಅನಿಮೇಷನ್‌ ಮೇಲೆ ಕ್ಲಿಕ್‌ ಮಾಡಿ. ಸರಣಿ ಚಿತ್ರಗಳಿದ್ದರೆ ಅನಿಮೇಷನ್‌ ಅಂದಗಾಣಿಸಬಹುದು. ಸರಣಿ ಚಿತ್ರಗಳೆಲ್ಲವನ್ನೂ ಆಯ್ಕೆ ಮಾಡಿಕೊಂಡು Create ಮೇಲೆ ಕ್ಲಿಕ್‌ ಮಾಡಿದರೆ ಅನಿಮೇಷನ್‌ ಸಿದ್ಧವಾಗುತ್ತದೆ. ಈ ಅನಿಮೇಷನ್‌ ಚಿತ್ರಗಳಿಂದ ಸೃಷ್ಟಿಸಿದ ವಿಡಿಯೊ ರೀತಿ ಕಾಣುತ್ತದೆ. ಫೋಟೊ ತೆಗೆಯುವಲ್ಲಿನ ವೈವಿಧ್ಯ ಹಾಗೂ ಅದನ್ನು ಬೇರೆ ಬಗೆಯಲ್ಲಿ ಪ್ರದರ್ಶಿಸಬೇಕೆಂಬ ಆಸಕ್ತಿ ನಿಮಗಿದ್ದರೆ ಉತ್ತಮ ಅನಿಮೇಷನ್‌ ಸೃಷ್ಟಿಸಬಹುದು.

ಸರಳ ಮಾರ್ಗದ ಮೂಲಕ ಫೋಟೊಗಳಿಗೆ ಭಿನ್ನ ಆಯಾಮ ನೀಡುವ ಕೊಲಾಜ್‌ ಮತ್ತು ಅನಿಮೇಷನ್‌ ಅನ್ನು ನೀವು ಒಮ್ಮೆ ಪ್ರಯತ್ನಿಸಿ ನೋಡಿ. ಸೃಷ್ಟಿಸಿದ ಕೊಲಾಜ್‌, ಅನಿಮೇಷನ್‌ಗಳನ್ನು ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಹಂಚಿಕೊಳ್ಳಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT