ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನ ಎಂದರೆ ...

Last Updated 21 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಚೆನ್ನಾಗಿ ದುಡಿದು, ಹೊಟ್ಟೆ ಬಟ್ಟೆಗೆ ಸಾಕಾಗುವಷ್ಟು ಗಳಿಸಿ, ಮಿಗಿಸಿ ಆಶ್ರಯಕ್ಕೊಂದು ಮನೆ ಕಟ್ಟಿಕೊಂಡು, ಕಷ್ಟಕಾಲಕ್ಕಿರಲಿ ಎಂದು ಒಂದಿಷ್ಟು ದುಡ್ಡು ಕೂಡಿಟ್ಟುಕೊಳ್ಳುವ ಕನಸು ಎಲ್ಲರದ್ದು. ಆದರೆ ಎಷ್ಟು ಜನರಿಗೆ ಅದು ಸಾಧ್ಯದ ಮಾತು? ಎಷ್ಟು ಜನರಿಗೆ ಅದು ಬರಿಯ ಕನಸು? ನಮ್ಮನೆ ಎದುರು ವಾಸವಿದ್ದ ಸಣ್ಣ ಬಡ ಕುಟುಂಬವೊಂದು  ಕರೆಂಟು ಬಿಲ್ಲು ಕಟ್ಟಲು ದುಡ್ಡಿಲ್ಲದೆ ಹಲವು ತಿಂಗಳುಗಳ  ಕಾಲ ಚಿಮಣಿ ಬೆಳಕಿನಲ್ಲಿ ರಾತ್ರಿಗಳನ್ನು ಕಳೆದದ್ದನ್ನು ನೋಡಿ ಅನಿಸಿತ್ತು, ಬಡತನ ಅಂದರೆ ಕತ್ತಲೆ.

ವಿಪರೀತ ಜ್ವರದಿಂದ ಬಳಲುತ್ತಿದ್ದ ತನ್ನ ಮಗುವಿಗೆ ಅತ್ತ ದುಬಾರಿ ಚಿಕಿತ್ಸೆ ಕೊಡಿಸಲಾಗದೆ, ಇತ್ತ ಮಗುವಿನ ಸ್ಥಿತಿ ನೋಡಲಾಗದೆ ಒಂದೇ ಸಮನೆ ಕಣ್ಣೀರಿಡುತ್ತಿದ್ದ ಮನೆ ಕೆಲಸದವಳನ್ನು ನೋಡಿದಾಗ ಅನಿಸಿತ್ತು ಬಡತನ ಅಂದರೆ ನೋವು. ಅಲ್ಪ ಸ್ವಲ್ಪ ಕೊಳೆತು ತಿನ್ನಲಿಕ್ಕಾಗದ ಮಾವಿನ ಹಣ್ಣನ್ನು ಮನೆಯಾಳಿನ ಮಕ್ಕಳಿಗೆ ನೀಡುವ ಮನೆಯೊಡತಿಯನ್ನು ಕಂಡಾಗ ಅನಿಸಿತ್ತು ಬಡತನ ಅಂದರೆ ಅವಮಾನ. ಓದಲೆಂದು ಸಿಟಿಗೆ ಬಂದು ಖರ್ಚು ಸರಿದೂಗಿಸಲು, ನಾಲ್ಕೈದು ಜನ ಹುಡುಗರು ಒಂದು ಸಣ್ಣ ಕೋಣೆಯಲ್ಲಿ ಬಾಡಿಗೆಗೆ ಇರುವುದನ್ನು ಕಂಡಾಗ ಅನಿಸಿತ್ತು ಬಡತನ ಅಂದರೆ ಅನಿವಾರ್ಯ ಹೊಂದಾಣಿಕೆ.

ಪ್ರೀತಿಯಿಂದ ಬೆಳೆಸಿದ, ವಯಸ್ಸಿಗೆ ಬಂದ ಮಗಳನ್ನು ಕಡಿಮೆ ವರದಕ್ಷಿಣೆ ಕೇಳುತ್ತಾನೆಂಬ ಒಂದೇ ಕಾರಣಕ್ಕೆ ಯಾವುದೋ ಅಯೋಗ್ಯನಿಗೆ ಗಂಟು ಹಾಕಲು ಕಾರಣ ಬಡತನ, ಬಿಸಿಯೂಟ ಉಂಡು ಮಳೆ ಬಂದರೆ ಸೂರು ಸೋರುವಂಥ ಶಾಲೆಯಲ್ಲಿ ಕಲಿತೂ ಕಾನ್ವೆಂಟ್ ಸ್ಕೂಲುಗಳ ಮಕ್ಕಳೊಡನೆ ಸ್ಪರ್ಧಿಸುವಂಥ ಬುದ್ಧಿಮತ್ತೆ ಇರುವ ಮಗನನ್ನು ಕಾಲೇಜು ಸೇರಿಸದೆ ಕೆಲಸಕ್ಕೆ ಹಚ್ಚಲು ಕಾರಣ ಬಡತನ, ತನ್ನ ಮನೆಕೆಲಸಗಳನ್ನೆಲ್ಲ ಒಬ್ಬಳೇ ಮಾಡಿ ಮುಗಿಸಿ ಎರಡು ಮಕ್ಕಳನ್ನು ಸಲಹಲು ಅವಳು ಮತ್ತೆ ಹತ್ತು ಮನೆಯ ಮುಸುರೆ ತೊಳೆಯಲು ಕಾರಣ ಬಡತನ.

ಬಡತನ ಎಂದರೆ ಹಸಿದ ಹೊಟ್ಟೆ, ಹರಕು ಬಟ್ಟೆಗಳಷ್ಟೆ ಎಂದುಕೊಂಡಿದ್ದ ನನಗೆ, ದೊಡ್ಡವನಾಗುತ್ತ ಅರಿವು ವಿಸ್ತರಿಸಿದಂತೆಲ್ಲಾ ಬಡತನದ ವಿವಿಧ ಆಯಾಮಗಳು ನನ್ನೆದುರು ಅನಾವರಣಗೊಳ್ಳತೊಡಗಿದವು.

ಬಡತನ ಎಂದರೆ ಅವಮಾನ, ಬಡತನ ಎಂದರೆ ಅಸಹಾಯಕತೆ, ಬಡತನ ಎಂದರೆ ಮಜಬೂರಿತನ, ಬಡತನ ಎಂದರೆ ಸಂಘರ್ಷ, ಬಡತನ ಎಂದರೆ ನೋವು, ಬಡತನ ಎಂದರೆ ಅಸಹನೀಯ ಹೊಂದಾಣಿಕೆ. ಸಮಾಜದಲ್ಲಿ ಬಡತನ ಒಂದು ಸಮಸ್ಯೆಯಷ್ಟೇ ಅಲ್ಲ, ಅದು ಹಲವು ಸಮಸ್ಯೆಗಳ ಫಲ ಮತ್ತು ಹಲವು ಸಮಸ್ಯೆಗಳಿಗೆ ಕಾರಣ. ಬಡತನ ಅನ್ನ ಮತ್ತು ಸ್ವಾಭಿಮಾನದ ಮಧ್ಯೆ ಒಂದನ್ನು ಆಯ್ದುಕೊಳ್ಳುವ ಅನಿವಾರ್ಯತೆ ಸೃಷ್ಟಿಸುತ್ತದೆ.

ನಾವು ನಮ್ಮ ಹಳ್ಳಿಗಳನ್ನು ಬಿಟ್ಟು ಬಂದು ಪಟ್ಟಣದಲ್ಲಿ ನೆಲೆಯೂರಿ, ಮಣ್ಣಿನ ನಂಟು ಸಡಿಲಗೊಂಡು, ಲಕ್ಸುರಿ ಅಪಾರ್ಟ್‌ಮೆಂಟುಗಳಲ್ಲಿ ಮನೆ ಖರೀದಿಸಿ, ಹವಾನಿಯಂತ್ರಿತ ಕಚೇರಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡ ಮೇಲೆ ಬಡತನದ ದೃಶ್ಯಗಳು ನಮ್ಮಿಂದ ಮರೆಯಾಗಿರಬಹುದು. ಆದರೆ ಬಡತನ ಇದ್ದೇ ಇದೆ. ಸತತ ಎರಡು ವರ್ಷಗಳಿಂದ ಮಳೆಯಿಲ್ಲದೆ ಭೂಮಿಯ ಒಡಲು ಬರಿದಾಗಿದೆ ಮತ್ತು ತಾಯಿಯ ಒಡಲನ್ನೇ ನಂಬಿಕೊಂಡಿರುವ ಮಣ್ಣಿನ ಮಗನ ಒಡಲು ಕೂಡ.

ದುಡ್ಡಿನಿಂದ ಸಂತೋಷವನ್ನು ಖರೀದಿಸಲಾಗದು. ಆದರೆ ಅದು ಕಷ್ಟಗಳನ್ನು ಸಹನೀಯಗೊಳಿಸುತ್ತದೆ ಎಂಬುದು ಸತ್ಯ. ಒಂದೊಳ್ಳೆ ಮಳೆಯಾದರೆ ನನ್ನೂರಿನ ಜನರ ಮೊಗದಲ್ಲಿ ನಗು ಮೂಡುತ್ತದೆ, ಒಳ್ಳೆ ಬೆಳೆ ಬಂದು ರೈತನ ಕೈಯಲ್ಲಿ ನಾಲ್ಕು ಕಾಸು ಹುಟ್ಟುತ್ತದೆ ಎಂಬ ಯೋಚನೆಯೇ ನನ್ನ ಮನಸ್ಸನ್ನು ಮಳೆಗಾಗಿ ಪರಿತಪಿಸುವಂತೆ ಮಾಡುತ್ತದೆ. ಬಡತನದ ಅಸಹಾಯಕತೆಯಿಂದ ಯಾರು ಯಾರ ಹಂಗಿಗೂ ಒಳಗಾಗದ ಸಮೃದ್ಧ ಸಮಾಜದ ಕನಸೊಂದು ನನ್ನ ಮನಸ್ಸಿನಲ್ಲಿ ಆಗಾಗ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT