ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನಿಗೆ ಏಣಿ ಹಾಕಿ…

Last Updated 21 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕನಸುಗಳು ಯಾವಾಗಲೂ ದೊಡ್ಡದಾಗಿರಬೇಕು ಎಂದು ಅನುಭವಿಗಳು ಹೇಳುತ್ತಾರೆ. ಉದಾಹರಣೆಗೆ, ನಾವು ಚಂದ್ರನಿಗೆ ಏಣಿ ಹಾಕಲು ಯತ್ನಿಸಿದರೆ ಕನಿಷ್ಠಪಕ್ಷ ವಿದ್ಯುತ್ ಕಂಬಕ್ಕಾದರೂ ಏಣಿ ಹಾಕುತ್ತೇವೆ. ಅರ್ಥಾತ್, ಪ್ರಯತ್ನಶೀಲರಾಗುತ್ತೇವೆ. ಆ ಯತ್ನವೇ ನಮ್ಮನ್ನು ಸಾಧಕರನ್ನಾಗಿ ರೂಪಿಸುತ್ತದೆ ಎಂಬುದಕ್ಕೆ ಈ ಯುವಕರೇ ಸಾಕ್ಷಿಯಾಗಿದ್ದಾರೆ.

ಕರಣ್‌ವೀರ್‌ ಸಿಂಗ್‌
ದೇಶದ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಕ್ಯಾಬ್‌ಗಳು ಹೆಚ್ಚಾಗಿವೆ. ಆದರೆ ಎರಡು ಮತ್ತು ಮೂರನೇ ದರ್ಜೆ ನಗರಗಳಲ್ಲಿ ಸಾರ್ವಜನಿಕರು ಆಟೊಗಳನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ಇಂತಹ ನಗರಗಳಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಮೂಲಕವೇ ಮನೆ ಬಾಗಿಲಿಗೆ ಆಟೊಗಳನ್ನು ತರಿಸಿಕೊಳ್ಳುವಂತಾದರೆ ಎಷ್ಟು ಚೆನ್ನ ಎಂಬ ಆಲೋಚನೆ ಮಾಡಿದವರು ಕರಣ್‌ ವೀರ್‌ ಸಿಂಗ್‌ ಎಂಬ ಯುವಕ. ತಮ್ಮ ಆಲೋಚನೆಯನ್ನು ಕಾರ್ಯರೂಪಕ್ಕೆ ಇಳಿಸಿ, ಓಲಾ ಮತ್ತು ಉಬರ್ ಟ್ಯಾಕ್ಸಿ ಸೇವೆ ಮಾದರಿಯಲ್ಲೇ ಟೆಲಿರಿಕ್ಷಾ ಸ್ಟಾರ್ಟ್ಅಪ್ ಆರಂಭಿಸಿದ ಕಥೆ ಇದು.

‘ಎರಡು ಮತ್ತು ಮೂರನೇ ದರ್ಜೆ ನಗರಗಳಲ್ಲಿ ಜನರು ಆಟೊಗಳಿಗಾಗಿ ಪರದಾಡುವ ಪರಿಸ್ಥಿತಿಯನ್ನು ನಾನು ಇಂದೋರ್‌ನಲ್ಲಿ ವಿದ್ಯಾಭ್ಯಾಸ ಮಾಡುವಾಗ ಗಮನಿಸಿದ್ದೆ.ಹಾಗಾಗಿ ಇಂತಹ ನಗರಗಳಲ್ಲಿ ಜನರಿಗೆ ಸುಲಭವಾಗಿ ಆಟೊ ಸೇವೆ ದೊರೆಯಬೇಕು ಎಂಬ ಆಕಾಂಕ್ಷೆಯೊಂದಿಗೆ ಟೆಲಿಆಟೊ ಕಂಪೆನಿ ತೆರೆದೆ’ ಎನ್ನುತ್ತಾರೆ ಕರಣ್.

ಕರಣ್ ಮೂಲತಃ ಲೂದಿಯಾನದವರು. ಎಂಜಿನಿಯರಿಂಗ್ ಅಭ್ಯಾಸ ಮಾಡಲು ಇಂದೋರ್‌ಗೆ ಬಂದಿದ್ದರು. ಪದವಿ ಬಳಿಕ ಟೆಲಿರಿಕ್ಷಾ ಕಂಪೆನಿ ಆರಂಭಿಸಿದರಾದರೂ ಪ್ರಾರಂಭದಲ್ಲಿ ಆಟೊ ಚಾಲಕರು ಟೆಲಿಆಟೊ ಸೇರಲು ಹಿಂದೇಟು ಹಾಕಿದ್ದರು. ಕೇವಲ 50 ಆಟೊಗಳಲ್ಲೇ ಕರಣ್್ ಟೆಲಿಆಟೊ ಸೇವೆಯನ್ನು ಆರಂಭಿಸಿದರು. ಹೀಗೆ ನಿಧಾನಗತಿಯಲ್ಲಿ ಲಯ ಕಂಡುಕೊಂಡ ಈ ಕಂಪೆನಿಯಲ್ಲಿ ಇಂದು 5000ಕ್ಕೂ ಹೆಚ್ಚು ಆಟೊಗಳು ಪ್ರಯಾಣ ಸೇವೆ ನೀಡುತ್ತಿವೆ. ಇದೀಗ ಉಜ್ಜೈನಿ ಮತ್ತು ಭೋಪಾಲ್‌ಗೂ ಟೆಲಿಆಟೊ ಸೇವೆಯನ್ನು ವಿಸ್ತರಿಸಲಾಗುತ್ತಿದೆ ಎಂದು ಕರಣ್ ಹೇಳುತ್ತಾರೆ.

ಗ್ರಾಹಕರು ವೆಬ್‌ಸೈಟ್ ಅಥವಾ ದೂರವಾಣಿ ಮೂಲಕ ತಮ್ಮ ಮನೆ ಬಾಗಿಲಿಗೆ ಆಟೊವನ್ನು ಬುಕ್ ಮಾಡಬಹುದು. ಕ್ಯಾಬ್‌ಗಳನ್ನು ಬುಕ್ ಮಾಡುವ ಮಾದರಿಯಲ್ಲೇ ಟೆಲಿಆಟೊಗಳನ್ನು ಬುಕ್ ಮಾಡಬೇಕಾಗುತ್ತದೆ. ಪ್ರಯಾಣ ಸೇವೆ ನೀಡಿದ ನಂತರವೇ ಗ್ರಾಹಕರ ಹಣ ಪಾವತಿಸಿ ರಸೀದಿ ಪಡೆಯಬಹುದು. ಈ ಟೆಲಿಆಟೊ ಸೇವೆಯಿಂದ ಗ್ರಾಹಕರು ಮಾತ್ರವಲ್ಲದೆ ಆಟೊ ಚಾಲಕರು ಕೂಡ ಸಂತೃಪ್ತರಾಗಿದ್ದಾರೆ ಎನ್ನುತ್ತಾರೆ ಕರಣ್. ಈ ಸೇವೆಯನ್ನು ಭಾರತದ ಇನ್ನಿತರ ಎರಡನೇ ಮತ್ತು ಮೂರನೇ ದರ್ಜೆ ನಗರಗಳಿಗೆ ವಿಸ್ತರಿಸುವುದು ಕರಣ್ ಗುರಿಯಾಗಿದೆ.telerickshaw.com

***
ಹುಸೇನ್ ಖಾಲೊ

ಪಿಜ್ಜಾ ಮಾರುವ ಹುಡುಗ  ಹುಸೇನ್ ಖಾಲೊ ಕಾಶ್ಮೀರ ಕಣಿವೆಯಲ್ಲಿ ಕೇಬಲ್ ಸುದ್ದಿ ವಾಹಿನಿ ಸ್ಥಾಪಿಸಿದ ಸಾಧನೆಯ ಕಥೆ ಇದು. ಕಾರ್ಗಿಲ್‌ನಲ್ಲಿ ಹುಟ್ಟಿದ ಹುಸೇನ್, ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದವರು. ಒಂದು ಹೊತ್ತಿನ ರೊಟ್ಟಿಗಾಗಿ ಪರದಾಡುವಂತಹ ಸ್ಥಿತಿ ಅವರ ಕುಟುಂಬದ್ದಾಗಿತ್ತು. ಮನೆಯವರ ಹೊಟ್ಟೆ ತುಂಬಿಸಲು ಪಿಜ್ಜಾ ಕೆಫೆ ಸೇರಿ ನಂತರ ಸುದ್ದಿ ಚಾನೆಲ್ ಆರಂಭಿಸಿದ ಅವರ ಕಥೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.

ಬಡತನದಿಂದಾಗಿ ಹುಸೇನ್ ಶಾಲೆಯನ್ನೇ ಮೊಟಕುಗೊಳಿಸಬೇಕಾಯಿತು. ಸಂಸಾರದ ಭಾರ ಸಂಪೂರ್ಣವಾಗಿ ಹುಸೇನ್ ಹೆಗಲ ಮೇಲೆ ಬಿತ್ತು. ಅಮ್ಮ ಹಾಗೂ ಒಡಹುಟ್ಟಿದವರನ್ನು ಸಾಕುವ ಸಲುವಾಗಿ ಪಿಜ್ಜಾ ಡೆಲಿವರಿ ಮಾಡುವ ಕೆಲಸಕ್ಕೆ ಸೇರಿಕೊಂಡರು. ಪಿಜ್ಜಾ ಕೆಫೆಯಲ್ಲಿ ಕೆಲಸ ಮಾಡುತ್ತಲೇ ಅರ್ಧಕ್ಕೆ ನಿಲ್ಲಿಸಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಕೆಫೆಯಲ್ಲಿ ಹುಸೇನ್, ಮನರಂಜನಾ ಚಾನೆಲ್‌ಗಳಿಗಿಂತಲೂ ಹೆಚ್ಚಾಗಿ ಸುದ್ದಿ ವಾಹಿನಿಗಳನ್ನು ವೀಕ್ಷಿಸುತ್ತಿದ್ದರು! ಅವುಗಳ ಪ್ರಭಾವದಿಂದಾಗಿ ಹುಸೇನ್, ಸುದ್ದಿ ವಾಹಿನಿ ಆರಂಭಿಸುವ ಕನಸು ಕಂಡರು.

ನ್ಯೂಸ್ ಚಾನೆಲ್ ಆರಂಭಿಸುವಷ್ಟು ಹಣ ಮತ್ತು ಅನುಭವ ಅವರಿಗಿರಲಿಲ್ಲ! ಆದರೆ ಇದ್ದದ್ದು ದೊಡ್ಡ ಕನಸು ಮಾತ್ರ! ಪದವಿ ಪಡೆದ ಬಳಿಕ ಹುಸೇನ್ ಗೆಳೆಯನ ಜೊತೆ ಸೇರಿ ‘ಕಾರ್ಗಿಲ್ ಟುಡೇ’ ಎಂಬ ಯೂಟ್ಯೂಬ್ ನ್ಯೂಸ್ ಚಾನೆಲ್ ಶುರು ಮಾಡಿದರು. ಹೀಗೆ ಶೂನ್ಯ ಬಂಡವಾಳದ ಮೂಲಕ ಆರಂಭವಾದ ಯೂಟ್ಯೂಬ್ ಚಾನೆಲ್, ಇಂದು ಕೇಬಲ್ ನ್ಯೂಸ್ ಚಾನೆಲ್ ಆಗಿ ಬೆಳೆದಿರುವುದು ಮಾತ್ರವಲ್ಲದೆ ಕಾರ್ಗಿಲ್ ಮತ್ತು ಲಡಾಕ್‌ನಲ್ಲಿ ಜನಪ್ರಿಯವಾಗಿದೆ.

ಆ ಭಾಗದ ರಾಜಕೀಯ ಸುದ್ದಿ ಮಾತ್ರವಲ್ಲದೆ ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಬಿತ್ತರಿಸುವುದು ವಿಶೇಷ. ಈ ಚಾನೆಲ್ ಅನ್ನು ಉಪಗ್ರಹ ಚಾನೆಲ್ ಆಗಿ ಮರುಸ್ಥಾಪನೆ ಮಾಡಬೇಕು ಎಂಬುದು ಹುಸೇನ್ ಗುರಿ. www.youtube.com/user/kargiltodaynews 

***
ಸೌರಭ್ ಮತ್ತು ಸಾಹಿಲ್

ವಿದ್ಯಾರ್ಥಿಗಳಿಗೆ ರಜಾ ದಿನಗಳಲ್ಲಿ ಏನು ಮಾಡಬೇಕು ಎಂಬುದೇ ದೊಡ್ಡ ಗೊಂದಲ. ಕೆಲ ಯುವಕರಿಗೆ ಯಾವ ರಾಜ್ಯ, ಯಾವ ದೇಶಕ್ಕೆ ಪ್ರವಾಸ ಹೋದರೆ ಚೆಂದ ಎಂಬ ಯೋಚನೆ. ಆದರೆ ಇನ್ನೂ ಕೆಲವರು ದೇಶ ಮತ್ತು ವಿದೇಶಗಳಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಲು ಬಯಸುತ್ತಿರುತ್ತಾರೆ. ಇಂಥವರಿಗಾಗಿಯೇ ‘ವಾಲೆಂಟರಿಂಗ್  ಸಲ್ಯೂಷನ್’ ಎಂಬ ಕಂಪೆನಿ, ಮಾಹಿತಿ ನೀಡುವ ಮತ್ತು ಸ್ವಯಂ ಸೇವಕರಾಗಿ ಕೆಲಸ ಮಾಡಲು ಸ್ಥಳಾವಕಾಶಗಳನ್ನು ಕಲ್ಪಿಸಿಕೊಡುವ ಕೆಲಸ ಮಾಡುತ್ತಿದೆ. ಈ ಕಂಪೆನಿಯನ್ನು ಹುಟ್ಟು ಹಾಕಿದವರು ದೆಹಲಿ ಮೂಲದ ಸೌರಭ್ ಮತ್ತು ಸಾಹಿಲ್ ಎಂಬ ಸಹೋದರರು.

ಸೌರಭ್ ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡಿದ್ದರೆ, ಸಾಹಿಲ್ ಅಮೆರಿಕದಲ್ಲಿ ಓದಿದವರು. ಸೌರಭ್, ಟ್ರಾವೆಲಿಂಗ್ ಕಂಪೆನಿ ಸ್ಥಾಪಿಸುವ ಕನಸು ಕಂಡಿದ್ದರಾದರೂ ಮಾರುಕಟ್ಟೆಯಲ್ಲಿನ ಪೈಪೋಟಿ ನೋಡಿ ಅದು ಲಾಭದಾಯಕ ಉದ್ಯಮವಾಗುವುದಿಲ್ಲ ಎಂಬುದನ್ನು ಅರಿತು ಆ ಯೋಜನೆಯನ್ನು ಕೈಬಿಟ್ಟರು. ನಂತರ ಸಾಮಾಜಿಕ ಕ್ಷೇತ್ರಗಳು, ಶಿಕ್ಷಣ, ಔಷಧಿ, ವೈಲ್ಡ್‌ಲೈಫ್, ಬೀದಿಮಕ್ಕಳು, ಶಿಶುಗಳ ರಕ್ಷಣೆ, ಟೂರಿಸಂ ಕ್ಷೇತ್ರಗಳಲ್ಲಿ ವಾಲೆಂಟರಿಂಗ್ ಸೇವೆ ಮಾಡುವ ಸ್ವಯಂ ಸೇವಕರನ್ನು ವಿದೇಶಗಳಿಗೆ ಕಳುಹಿಸುವ ಯೋಜನೆಯನ್ನು ರೂಪಿಸಿ 2006ರಲ್ಲಿ ವಾಲೆಂಟರಿಂಗ್  ಸಲ್ಯೂಷನ್ ಕಂಪೆನಿ ಆರಂಭಿಸಿದರು.

ಇಲ್ಲಿ ಸೌರಭ್ ಮತ್ತು ಸಾಹಿಲ್ ಶ್ರಮ ವ್ಯರ್ಥವಾಗಲಿಲ್ಲ! ಉದ್ಯಮ ಅವರ ಕೈಹಿಡಿಯಿತು. ಕೇವಲ ಐದಾರು ವರ್ಷಗಳಲ್ಲಿ  ಇವರು 5 ರಿಂದ 8 ಕೋಟಿ ರೂಪಾಯಿ ವರಮಾನ ಗಳಿಸಿದ್ದು  ವಿಶೇಷ. ವಿಶ್ವದ 20 ದೇಶಗಳಲ್ಲಿ ವಾಲೆಂಟರಿಂಗ್ ಸಲ್ಯೂಷನ್ ಕಂಪೆನಿ ಕೆಲಸ ಮಾಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆದಿರುವವರನ್ನು ಸ್ವಯಂ ಸೇವಕರನ್ನಾಗಿ (ಕೆಲವು ತಿಂಗಳುಗಳಿಗೆ ಮಾತ್ರ) ವಿದೇಶಗಳಿಗೆ ಕಳುಹಿಸಿಕೊಡಲಾಗುತ್ತದೆ. ವಿದೇಶಗಳಲ್ಲಿ ಪ್ರವಾಸಕ್ಕೆ ತೆರಳುವವರಿಗೂ ಮಾರ್ಗದರ್ಶನ ನೀಡಲಾಗುತ್ತದೆ.

ಅಲ್ಲದೆ ವಿಮಾನ ಟಿಕೆಟ್ ಬುಕ್ಕಿಂಗ್ ಮತ್ತು ವಿಮೆಗಳನ್ನು ಮಾಡಿಸಿ ಕೊಡುವ ಸೇವೆಯನ್ನು ನೀಡಲಾಗುತ್ತಿದೆ ಎನ್ನುತ್ತಾರೆ ಸೌರಭ್. ನಮ್ಮ ಕಂಪೆನಿಯ ತರುವಾಯ ದೇಶದಲ್ಲಿ ಇದೇ ಮಾದರಿಯ ನೂರಾರು ಕಂಪೆನಿಗಳು ಹುಟ್ಟಿಕೊಂಡಿವೆ. ವಿಶ್ವಾಸಾರ್ಹತೆಯಿಂದಾಗಿ ನಮ್ಮ ಕಂಪೆನಿ ಹೆಚ್ಚು ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ ಎಂದು ಸಾಹಿಲ್ ಹೇಳುತ್ತಾರೆ. ವಿಭಿನ್ನ ಆಲೋಚನೆ ಮೂಲಕ ಯಶಸ್ವಿ ಉದ್ಯಮ ಕಟ್ಟಿದ ಈ ಸಹೋದರರ ಸಾಧನೆ ನಿಜಕ್ಕೂ ಅನನ್ಯ. www.volunteeringsolutions.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT