ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗುವ ಕಲೆಗೆ ಸೋತು...

Last Updated 21 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಕನ್ನಡ ಸಾಹಿತ್ಯ ಸಮುದ್ರ ಇದ್ದಂತೆ. ಈ ಆಧುನಿಕ ಯುಗದಲ್ಲೂ ಸಾಹಿತ್ಯದಲ್ಲಿ ಗುರುತಿಸಿಕೊಳ್ಳಲು ವಿಪುಲ ಅವಕಾಶಗಳಿವೆ. ಕಲೆ, ಸಾಹಿತ್ಯ, ಶಿಕ್ಷಣ ಮೂರು ಕ್ಷೇತ್ರದಲ್ಲಿ ನೆನಪಿಟ್ಟುಕೊಳ್ಳುವಂಥ ಕೆಲಸ ಮಾಡಬೇಕೆಂಬುದೇ ನನ್ನ ಆಸೆ’ ಎಂದು ಮಾತಿಗೆ ತೆರೆದುಕೊಂಡರು ಯುವ ಹಾಸ್ಯ ಕಲಾವಿದ ಭಾಗೇಶ ಮುರಡಿ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ತಿಳಗೊಳ ಗ್ರಾಮದ ಭಾಗೇಶ ಮುರಡಿ ಅವರಿಗೆ ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಬಹುಆಸಕ್ತಿ. ಇದರೊಂದಿಗೆ ಇವರ ಕೈ ಹಿಡಿದಿರುವುದು ಹಾಸ್ಯಕಲೆ. ಇದರ ಹಿನ್ನೆಲೆಯನ್ನು ಅವರು ವಿವರಿಸಿದ್ದು ಹೀಗೆ... ‘ಕಾಲೇಜು ದಿನಗಳಲ್ಲಿ ಎನ್‌ಎಸ್‌ಎಸ್‌ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದೆ.

ಇದರಿಂದ ನನಗೆ ದೊಡ್ಡ ವೇದಿಕೆಯಲ್ಲಿ ಹಾಸ್ಯ ಕಾರ್ಯಕ್ರಮ ನೀಡಲು ಸಹಾಯವಾಯಿತು. ಪರಿಶ್ರಮ ಸದಾ ನಮ್ಮ ಕಾಯಕವಾಗಿರಬೇಕು. ಆಗ  ಸಾಧಿಸುವ ಹಾದಿ ಸುಲಭ’.ಶಾಲೆಯಲ್ಲಿರುವಾಗಲೇ ಭಾಗೇಶ ಅವರನ್ನು ಸಾಹಿತ್ಯ ಸೆಳೆದಿತ್ತು. ಪುಟ್ಟ ಕಥೆ, ಕವನ ಬರೆಯಲು ಪ್ರಾರಂಭ ಮಾಡಿ, ಹತ್ತನೇ ತರಗತಿಯಲ್ಲಿ ಇರುವಾಗ ‘ದಾರ್ಶನಿಕರ ಹಾದಿಯಲ್ಲಿ ಕೆ.ಸಿ. ಚಟ್ಟರಕಿ’ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಮುಖ್ಯಶಿಕ್ಷಕರ ಜೀವನ ಚರಿತ್ರೆ ಬರೆದು ಕಿರುಹೊತ್ತಿಗೆ ಪ್ರಕಟಿಸಿದರು. 

ಆ ಆರಂಭವೇ ಅವರನ್ನು ‘ನಿನಾದ’, ‘ಬಾಣಂತಿಯ ದಿಬ್ಬ’, ‘ಸತ್ತ ಹುಡುಗಿಯ ಸುತ್ತ, ನೂರು ಅನುಮಾನಗಳ ಹುತ್ತ’ (ಪ್ರಕಟಣೆ ಹಂತದಲ್ಲಿದೆ) ಇವುಗಳನ್ನು ಬರೆಯಲು ಪ್ರೇರೇಪಿಸಿದ್ದು. ಭಾಗೇಶ ಅವರು ಪ್ರಸ್ತುತ ವಿಜಯಪುರದ ಎಕ್ಸಲೆಂಟ್‌ ಪಿಯು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಾಲ್ಯದಲ್ಲಿ ಗಂಗಾವತಿ ಪ್ರಾಣೇಶ ಅವರ ಕಾರ್ಯಕ್ರಮ ನೋಡಿ ಬೆಳೆದವರು ಇವರು. ಕಾಲೇಜು ದಿನಗಳಲ್ಲಿ ಪ್ರಾಣೇಶ ಅವರನ್ನೇ ಗುರುವಾಗಿಸಿಕೊಂಡು ಹಾಸ್ಯ ಚಟಾಕಿ ಹಾರಿಸುವುದನ್ನು ಅಭ್ಯಾಸವಾಗಿಸಿಕೊಂಡರು. ಇವರ ಹಾಸ್ಯದ ಮಾತುಗಳಿಗೆ ಪುಷ್ಟಿ ನೀಡಿದವರು ವಿಜಯಪುರದ ಹಾಸ್ಯ ಕಲಾವಿದ ಪ್ರಶಾಂತ ಚೌಧರಿ. ಹಾಸ್ಯಕ್ಷೇತ್ರಕ್ಕೆ ಪರಿಚಯಿಸಿದವರು ಡಾ.ನಾಗರಾಜ ಮುರಗೋಡ.

‘ನನ್ನ ಮೊಟ್ಟ ಮೊದಲ ಕಾರ್ಯಕ್ರಮವನ್ನು ವಿಜಯಪುರದ ಸಿಂದಗಿ ತಾಲ್ಲೂಕಿನ ಜಿ.ಪಿ. ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ. ಸಾಲಿಮಠ ವಿಜ್ಞಾನ ಕಾಲೇಜಿನ ಎನ್ಎಸ್‌ಎಸ್‌ ಶಿಬಿರದಲ್ಲಿ  ನೀಡಿದೆ. ಅಂದಿನಿಂದ ಇಂದಿನವರೆಗೆ ಸುಮಾರು 700 ಕಾರ್ಯಕ್ರಮಗಳನ್ನು ನೀಡಿದ್ದೇನೆ’ ಎಂದು ಹಾಸ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಬಗೆಯನ್ನು ವಿವರಿಸಿದರು ಅವರು.

ಇವರ ಹಾಸ್ಯ ಪ್ರದರ್ಶನಕ್ಕೆ ಬಸವನ ಬಾಗೇವಾಡಿಯ ಬಸವ ಜನ್ಮಭೂಮಿ ಪ್ರತಿಷ್ಠಾನದಿಂದ ‘ಬಸವ ಭೂಷಣ’ ರಾಜ್ಯಮಟ್ಟದ ಪ್ರಶಸ್ತಿ, ಧಾರವಾಡ ಕಲಾ ಸಂಗಮದಿಂದ ‘ಹಾಸ್ಯರತ್ನ’ ಪ್ರಶಸ್ತಿ, ಸಿಂದಗಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಸನ್ಮಾನಗಳೂ ಬಂದಿವೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 2015–16ನೇ ಸಾಲಿನ ಎಂ.ಎ. ಕನ್ನಡ ವಿಷಯದಲ್ಲಿ ಒಟ್ಟು ಏಳು ಚಿನ್ನದ ಪದಕ ಹಾಗೂ ಬಸವ ಡಿಪ್ಲೊಮಾದಲ್ಲಿ ಒಂದು, ಒಟ್ಟು ಎಂಟು ಚಿನ್ನದ ಪದಕಗಳೊಂದಿಗೆ ಉತ್ತೀರ್ಣರಾಗಿ ಕರ್ನಾಟಕ ವಿ.ವಿಯ ಚಿನ್ನದ ಹುಡುಗ ಎಂದೂ ಗುರುತಿಸಿಕೊಂಡಿದ್ದಾರೆ.

ಧಾರವಾಡ, ಹುಬ್ಬಳ್ಳಿ, ಹಾವೇರಿ, ಗದಗ, ಮೈಸೂರು, ಬೆಂಗಳೂರು, ಶಿವಮೊಗ್ಗ, ಕೊಪ್ಪಳ, ಚಿತ್ರದುರ್ಗ, ಬೆಳಗಾವಿ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಕಡೆ,  ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶಗಳಲ್ಲೂ ಹಲವು ಕಾರ್ಯಕ್ರಮ ನೀಡಿದ್ದಾರೆ. 

ಉತ್ಸವ, ಸಮ್ಮೇಳನಗಳಲ್ಲೂ ಹಾಸ್ಯ ಲಹರಿ
ನವರಸಪುರ ಉತ್ಸವ, ರನ್ನ ಉತ್ಸವ, ಲಕ್ಕುಂಡಿ ಉತ್ಸವ, ಧಾರವಾಡ ಉತ್ಸವದಲ್ಲಿ ಹಾಸ್ಯ ಕಾರ್ಯಕ್ರಮ ನೀಡಿದ ಭಾಗೇಶ ಅವರು, 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, 13ನೇ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಸೇಡಂ ತಾಲ್ಲೂಕು ಸಾಹಿತ್ಯ ಸಮ್ಮೇಳನ, ಚಿಂಚೊಳ್ಳಿ ತಾಲ್ಲೂಕು ಸಾಹಿತ್ಯ ಸಮ್ಮೇಳನ, ಇಂಡಿ ಸಾಹಿತ್ಯ ಸಮ್ಮೇಳನ, ಬಾಗಲಕೋಟೆ ಚುಟುಕು ಸಾಹಿತ್ಯ ಸಮ್ಮೇಳನ, ವಿಜಯಪುರ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನ ಮುಂತಾದ ಜನಪ್ರಿಯ ಕಾರ್ಯಕ್ರಮಗಳಲ್ಲಿ ನಕ್ಕು ನಲಿಸಿದವರು.

ಕೃಷಿ ಕುಟುಂಬದ ಕುಡಿ
‘ನಾನು ಕೃಷಿಯನ್ನು ನಂಬಿ ಬದುಕು ನಡೆಸುತ್ತಿದ್ದೇನೆ. ನನ್ನ ಮಗ ನಾಲ್ಕು ಅಕ್ಷರ ಕಲಿಯಲಿ ಎಂದು ಶಾಲೆಗೆ ಹಚ್ಚಿದೆ. ಆದರೆ, ಇವನು ಪ್ರಾರಂಭದಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಹಾಸ್ಯ ಕಾರ್ಯಕ್ರಮ ನೀಡುತ್ತಿದ್ದ. ಇದರಿಂದ ಶಿಕ್ಷಣದಲ್ಲಿ ಹಿಂದೆ ಬೀಳುತ್ತಾನೆ ಎಂಬ ಆತಂಕವಿತ್ತು. ಧಾರವಾಡದಲ್ಲಿ 8 ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದನ್ನು ನೋಡಿ ನನ್ನ ಆತಂಕ ದೂರವಾಯಿತು. ಅವನಿಗೆ ಸಾಧನೆಗೆ ಎಲ್ಲ ರೀತಿ ಸಹಕಾರ ನೀಡುತ್ತೇನೆ’ ಎಂದು ಸಂತಸ ತುಂಬಿದ ಕಣ್ಣುಗಳಲ್ಲಿ ಹಾರೈಸಿದರು ಭಾಗೇಶ ಅವರ ತಂದೆ ಭೀಮಣ್ಣ ಮುರಡಿ.

‘ನನ್ನ ದೊಡ್ಡಪ್ಪ ಡಿ.ವೈ. ಮುರಡಿ ಅವರು ನನಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡುವಂತೆ ಮಾಡಿದರು. ತಾಯಿ ಈರಮ್ಮ ನನ್ನ ಕನಸಿಗೆ ಆಧಾರವಾಗಿ ನಿಂತರು. ನನಗೆ ಕಲಿಸಿದ ಗುರುಗಳು ಸ್ನೇಹಿತರ ಸಹಕಾರದಿಂದ ನಾನು ಹಾಸ್ಯಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತಾಯಿತು’ ಎಂದು ಸ್ಮರಿಸಿಕೊಳ್ಳುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT