ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದಕ್ಕೆ ದನಿಯಾಗುವ ಹಾದಿಯಲ್ಲಿ...

Last Updated 21 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಗ್ರಾಮೀಣ ಪ್ರದೇಶದ ಜೀವನಾಡಿ ‘ಜಾನಪದ’. ಬದುಕಿಗಾಗಿ ಜಾನಪದದ ನೆಲೆಯನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳು ಹಲವಾರಿವೆ. ಆಧುನಿಕತೆಯ ಭರಾಟೆಯಲ್ಲಿ ಬಹುತೇಕ ಜನಪದ ಕಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಮೂಲೆಗುಂಪಾಗುತ್ತಿರುವ ಈ ಕಲೆಯನ್ನು ಮುಖ್ಯವಾಹಿನಿಗೆ ತರುವ ಆಶಯದೊಂದಿಗೆ, ಜಾನಪದದ ಬೇರುಗಳನ್ನು ಗಟ್ಟಿಗೊಳಿಸುವ ನಿಲುವಿನೊಂದಿಗೆ ಈ ಕಲೆಯನ್ನೇ ಜೀವನವನ್ನಾಗಿ ಸ್ವೀಕರಿಸಿದವರು ಮೈಸೂರಿನ ದೇವಾನಂದ ವರಪ್ರಸಾಮ್ಮ ಮೂಲ ನಂಬಿಕೆಗಳು, ಒಡಲಾಳದ ನೋವು ನಲಿವುಗಳು, ಬಂಧುತ್ವದ ಸಾರವನ್ನು ಈಗಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಒಬ್ಬ ಜನಪದ ಕಲಾವಿದನದ್ದು. ಈ ಕಲೆಯನ್ನು ಪಸರಿಸುವ ಪ್ರಕ್ರಿಯೆಯಿಂದ ಸಂಬಂಧಗಳು ಇನ್ನಷ್ಟು ಪಕ್ವಗೊಳ್ಳುತ್ತವೆ.

ಜತೆಗೆ ಜಾನಪದದ ಬೇರುಗಳು ಇನ್ನಷ್ಟು ಗಟ್ಟಿಯಾಗುತ್ತಾ ಹೋಗುತ್ತವೆ’ ಎಂದು ತಮ್ಮ ನಿಲುವನ್ನು ಬಿಚ್ಚಿಟ್ಟ ದೇವಾನಂದ ಅವರ ಮಾತುಗಳಲ್ಲಿ ಈ ಕಲೆಯ ಬಗೆಗಿನ ಆಸ್ಥೆ ಎದ್ದುತೋರುತ್ತಿತ್ತು.

‘ನರಾಕ್‌ ಬ್ಯಾಂಡ್‌, ಮ್ಯೂಸಿಕ್‌ ಬ್ಯಾಂಡ್‌ಗಳ ಭರಾಟೆಯಲ್ಲಿ ಜಾನಪದದ ನಂಟು ಹಚ್ಚಿಕೊಂಡು ಅದರ ನೆರಳಲ್ಲೇ ಬದುಕನ್ನೂ ಕಂಡುಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ.

ಇಂಥ ಸಂದರ್ಭದಲ್ಲಿ ಈ ಜಾನಪದದ ಆಂತರ್ಯವನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಮೈಸೂರಿನ ದೇವಾನಂದ ವರಪ್ರಸಾದ್‌. ತಮಟೆ ಹಿಡಿದು ದೇವಾನಂದ ಅವರು ವೇದಿಕೆ ಮೇಲೆ ಬಂದರೆ ಜನಪದ ಗೀತೆ, ತತ್ವಪದ, ದಾಸಪದ, ರಂಗಗೀತೆಗಳು ಮೇಳೈಸುತ್ತವೆ. ಕೇಳುಗರ ನಾಡಿಯ ತಂತಿ ಮೀಟುತ್ತ, ಸಮಸಮಾಜದ ಕನಸು ಹೊತ್ತು ಊರುಕೇರಿಗಳಲ್ಲಿ ಅಲೆಯುತ್ತ ಜಾನಪದದ ಬೀಜ ಬಿತ್ತುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.

ರಂಗಾಯಣದ ಮಾಜಿ ನಿರ್ದೇಶಕ ಎಚ್‌.ಜನಾರ್ದನ್‌ (ಜನ್ನಿ) ಅವರ ತಂಡದಲ್ಲಿ ಸುಮಾರು ಹತ್ತು ವರ್ಷಗಳಿಂದ ಹಿನ್ನೆಲೆ ಗಾಯಕರಾಗಿ ತಮಟೆ ಹಿಡಿದು ತಿರುಗಿದ ಊರುಗಳಿಗೆ ಲೆಕ್ಕವಿಲ್ಲ. ಮೈಸೂರಿನಲ್ಲಿರುವ ‘ರಂಗಾಯಣ’, ‘ನಿರಂತರ’, ‘ನಟನ’, ‘ಜನಮನ’, ‘ಪರಸ್ಪರ’, ‘ಬಹುಮುಖಿ’, ‘ದೇಸಿರಂಗ’, ‘ಸಮಂತೆತೊ’ ಹೀಗೆ ಎಲ್ಲ ರಂಗತಂಡಗಳ ಹಿನ್ನೆಲೆಯಲ್ಲಿ ಮೊಳಗುತ್ತಿರುವ ‘ದನಿ’ ದೇವಾನಂದ ಅವರದು.

ಮಂಡ್ಯ ರಮೇಶ್‌ ನಿರ್ದೇಶನದ ‘ಚಾಮಚೆಲುವೆ’ ನಾಟಕದ ಸಂಗೀತ ಸಂಯೋಜನೆ, ಹಿನ್ನೆಲೆ ಸಂಗೀತ ದೇವಾನಂದರದು. ಮೂರು ವರ್ಷದಲ್ಲಿ 110 ಪ್ರದರ್ಶನ ಕಂಡಿರುವ ‘ಚಾಮಚೆಲುವೆ’ಗೆ 105 ಪ್ರದರ್ಶನಗಳಲ್ಲೂ ಇವರೇ ‘ದನಿ’ಯಾಗಿದ್ದಾರೆ. ‘ಚಾಮಚೆಲುವೆ’ ನಾಟಕದಲ್ಲಿನ ಅರವತ್ತು ಹಾಡುಗಳನ್ನು ನಿರರ್ಗಳವಾಗಿ ಹಾಡುವ ಮೂಲಕ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಛಾತಿ ಅವರದ್ದು.

ನೀಲಗಾರರು ಹಾಡುತ್ತಿದ್ದ ಮೂಲ ಜನಪದದ ಧಾಟಿಯಲ್ಲಿ ಈ ನಾಟಕಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದನ್ನು ಜನಪದ ದಿಗ್ಗಜರು ಬಹುವಾಗಿ ಮೆಚ್ಚಿಕೊಂಡಿದ್ದು, ಅವಕಾಶಗಳ ದೊಡ್ಡ ಬಾಗಿಲೇ ಅವರಿಗೆ ತೆರೆದುಕೊಂಡಿದೆ. 

‘ಆಧುನಿಕತೆಯ ಭರಾಟೆಯಲ್ಲಿ ನೆಲ ಸಂಸ್ಕೃತಿಯೊಂದಿಗಿನ ಒಡನಾಟ, ಕೌಟುಂಬಿಕ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಯುವಕರಾದ ನಾವೇ ಇವುಗಳ ವಿನಾಶಕ್ಕೆ ಕಾರಣವಾಗಿದ್ದೇವೆ. ಜಾನಪದದ ಮೂಲಸೆಲೆಯ ಆಂತರ್ಯವನ್ನು ಅರ್ಥೈಸುವ ತುರ್ತು ಇಂದಿನ ಪೀಳಿಗೆಗೆ ಇದೆ’ ಎನ್ನುವ ಅವರ ಮಾತುಗಳಲ್ಲಿ ತಳಮಟ್ಟಕ್ಕೆ ತಳ್ಳಿರುವ ಮೂಲಕಲೆಯನ್ನು ಮುಖ್ಯವಾಹಿನಿಗೆ ತರುವ ತಹತಹಿಕೆ ಎದ್ದುತೋರುತ್ತದೆ.

ಸಂಗೀತ ಸಂಯೋಜನೆಗೆ ಮಾತ್ರ ಸೀಮಿತವಾಗದೆ, ರಂಗದ ಮೇಲೂ ತಮ್ಮ ಛಾಪನ್ನು ಒತ್ತಿರುವ ದೇವಾನಂದ ಅವರು, ‘ಜಲಗಾರ’ ನಾಟಕದ ನಿರ್ದೇಶನಕ್ಕೂ ಕೈಹಾಕಿ ಯಶಸ್ವಿಯಾಗಿದ್ದಾರೆ. ಬೀದಿನಾಟಕ, ರಂಗಕಲೆ, ಜಾನಪದ, ತತ್ವಪದ, ರಂಗಗೀತೆಗಳ ಮೂಲಕ ಸಮಾಜದ ಡಾಂಭಿಕತನವನ್ನು ಹೊಡೆದೋಡಿಸುವ ತುಡಿತ ಅವರದ್ದು.

‘ಚಾಮಚೆಲುವೆ ನಾಟಕಕ್ಕೆ ಹಾಡಿ ಹಾಡಿ ನನ್ನ ಧ್ವನಿಯೂ ತೆರೆದುಕೊಂಡಿತು’ ಎನ್ನುವ ಅವರು, ‘ಕುರಿ’, ‘ಸಿರಿ’, ‘ಜಲಗಾರ’ ‘ಅಂಧಯುಗ’, ‘ಬರ ಅಂದ್ರೆ ಎಲ್ಲರಿಗೂ ಇಷ್ಟ’, ‘ಸ್ತ್ರೀ ಭರತಂ’ ಹೀಗೆ 15ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ಸಂಯೋಜನೆ ನೀಡಿದ್ದಾರೆ. ರಾಕ್‌ಬ್ಯಾಂಡ್‌ಗಳಿಗೆ ಆದಿವಾಸಿ ಹಾಡುಗಳು, ಜನಪದ ಹಾಡುಗಳನ್ನು ಅವರು ಹೇಳಿಕೊಟ್ಟಿದ್ದಾರೆ.

‘ಜನಪದ ಸೊಗಡು ಎಲ್ಲಾ ಕಾಲಕ್ಕೂ ಉಳಿಯಬೇಕು, ಬೆಳಗಬೇಕು. ಆಧುನಿಕತೆಯಲ್ಲಿ ನಾವೆಷ್ಟೇ ಮುಂದುವರಿದರೂ ಜಾನಪದದ ಕಡೆಗಿನ ನಮ್ಮ ಒಲವು ತಗ್ಗಬಾರದು’ ಎನ್ನುವ ನಿಲುವಿಗೆ ಕಟಿಬದ್ಧರಾಗಿರುವ ದೇವಾನಂದ  ಅವರು ಸಿನಿಮಾ ಕ್ಷೇತ್ರ, ರಾಕ್‌ಬ್ಯಾಂಡ್‌ಗಳ ಅವಕಾಶಗಳನ್ನು ಪ್ರಜ್ಞಾಪೂರ್ವಕವಾಗಿಯೇ ತಳ್ಳಿಹಾಕಿದ್ದಾರೆ.

ದೆಹಲಿಯಲ್ಲಿ ‘ಹೊರನಾಡ ಉತ್ಸವ’, ಚೆನ್ನೈನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ, ಕಲ್ಲಿಕೋಟೆ ಮೊದಲಾದೆಡೆ ಕರ್ನಾಟಕ ಜನಪದ ಗೀತೆಗಳನ್ನು ಪಸರಿಸಿದ್ದಾರೆ. ಈಚೆಗೆ ಸಿಂಗಪುರದಲ್ಲಿ ನಡೆದ ‘ಸಿಂಗಾರ’ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾಡಿದ್ದಾರೆ.

‘ಕನ್ನಡ ಸಾಹಿತ್ಯ ಸಮ್ಮೇಳನ’, ‘ಆಳ್ವಾಸ್‌ ನುಡಿಸಿರಿ’, ‘ಮೈಸೂರು ದಸರಾ ಉತ್ಸವ‘, ‘ಕದಂಬ ಉತ್ಸವ‘, ‘ಚಾಲುಕ್ಯ ಉತ್ಸವ‘, ‘ಹಂಪಿ ಉತ್ಸವ’ ಹೀಗೆ ಕರ್ನಾಟಕದ ಪ್ರಮುಖ ವೇದಿಕೆಗಳಲ್ಲೆಲ್ಲ ಇವರ ಕಂಠಸಿರಿ ನದಿಯಾಗಿ ಹರಿದಿದೆ.

ಬಾಲ್ಯದಿಂದಲೇ ಹಾಡಿನ ನಂಟು
ಹಾಸನ ಜಿಲ್ಲೆಯ ಅರಕೂಲಗೂಡಿನ ದೇವಾನಂದ ಅವರಿಗೆ ಹಾಡಿನ ನಂಟು ರಕ್ತಗತವಾಗೇ ಬಂದಿದೆ. ನಿವೃತ್ತ ಶಿಕ್ಷಕರಾಗಿರುವ ತಂದೆ ಕೆ.ಟಿ.ಕೇಶವಯ್ಯ ಹರಿಕಥೆ ದಾಸರು.ರಾತ್ರಿಯಿಡೀ ಹರಿಕಥೆ ಹೇಳುತ್ತ ಸುತ್ತಮುತ್ತಲ ಹಳ್ಳಿಗಳಲ್ಲಿ ಪ್ರಸಿದ್ಧಿ ಪಡೆದವರು.

ತಾಯಿ ಕಾಳಮ್ಮ ಸೋಬಾನೆ ಪದ, ಹೊಸಗೆಪದ, ಶಾಸ್ತ್ರಪದ ಹಾಡುವ ಪ್ರತಿಭೆ. ಪದಪ್ರತಿಭೆ, ದಾಸಪ್ರತಿಭೆ ಎರಡನ್ನೂ ಮೇಳೈಸಿಕೊಂಡ ದೇವಾನಂದ ಅವರಿಗೆ ಸಹಜವಾಗಿಯೇ ಹಾಡಿನ ನಂಟು ಬಾಲ್ಯದಿಂದಲೇ ಅಂಟಿತು. 5ನೇ ತರಗತಿ ಓದುವಾಗ ಶಾಲೆಯಲ್ಲಿ ನಡೆದ ‘ಚಿಗುರು’ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹಾಡಿದ ದೇವಾನಂದ ಅವರಿಗೆ ಮೊದಲ ಬಹುಮಾನ ದಕ್ಕಿತು. ‘ಬಹುಶಃ ಅಂದಿನಿಂದಲೇ ನನಗೆ ಹಾಡಿನ ಗುಂಗು ಶುರುವಾಯಿತು. ಪ್ರಶಸ್ತಿ ಬಂದದ್ದಕ್ಕೆ ಏನೋ ಹಿಗ್ಗು, ಸಂಭ್ರಮ. ನನ್ನ ಹಾಡುಗಾರಿಕೆ ಬಗ್ಗೆ ಸ್ವತಃ ನನಗೆ ಅರಿವಿಗೆ ಬಂದದ್ದು ಆಗಲೇ’ ಎನ್ನುವ ಅವರು, ಬದುಕಿನ ‘ಹಾಡಿನ’ ಪಯಣಕ್ಕೆ ‘ಚಿಗುರು’ ಮುನ್ನುಡಿಯಾಯಿತು ಎಂದು ಹೆಮ್ಮೆಪಡುತ್ತಾರೆ.

ಅಲ್ಲಿಂದ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜುಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಅವರ ಹಾಡಿನ ಛಾಪನ್ನು ತೋರಿದರು. ಅಪ್ಪ ಅಮ್ಮ ಹೇಳುತ್ತಿದ್ದ ಪದಗಳನ್ನು, ರಾಗದ ಧಾಟಿಯನ್ನು ಆಲಿಸಿದ್ದು ಬಿಟ್ಟರೆ ಶಾಸ್ತ್ರೀಯವಾಗಿ ಸಂಗೀತವನ್ನು ಕಲಿತಿಲ್ಲ. ಆದರೂ ಕಾಲೇಜಿನಲ್ಲಿ ತಮ್ಮ ವಿಭಿನ್ನ ಕಂಠದ ಮೂಲಕ ಮೆಚ್ಚಿನ ಶಿಷ್ಯರಾದರು. ಯಾವುದೇ ಅಂತರಕಾಲೇಜು ಸ್ಪರ್ಧೆ ನಡೆದರೂ, ಅದರಲ್ಲಿ ದೇವಾನಂದ ಅವರು ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡೇ ವಾಪಸ್ಸಾಗುತ್ತಿದ್ದುದು ಸಹಪಾಠಿಗಳಿಗೆ, ಉಪನ್ಯಾಸಕರಿಗೆ ಹೆಮ್ಮೆಯ ಸಂಗತಿಯಾಗಿತ್ತು.

2001ರಲ್ಲಿ ಪಿಯು ಶಿಕ್ಷಣದ ಬಳಿಕ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಾರೆ. ಅಲ್ಲಿಂದ ಅವರ ಕಲಾಭಿವ್ಯಕ್ತಿಗೆ  ಸೂಕ್ತ ವೇದಿಕೆ ಸಿಕ್ಕಿತು. ‘ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಹಾಡು ಹೇಳಿ ಯಶಸ್ವಿಯಾದರೆ ಪ್ರಪಂಚದ ಯಾವ ವೇದಿಕೆ ಮೇಲಾದರೂ ಹಾಡು ಹೇಳಬಹುದು. ಚೆನ್ನಾಗಿ ಹಾಡಿದವರಿಗೆ ಚಪ್ಪಾಳೆ. ಇಲ್ಲದಿದ್ದರೆ ರಥೋತ್ಸವದ ವೇಳೆ ತೇರಿಗೆ ಎಸೆಯುವ ಹೂವು, ಜವನದ ರೀತಿ, ಪೇಪರ್‌ ರಾಕೆಟ್‌ ಶುರುವಾಗುತ್ತಿದ್ದವು’ ಎಂದು ಅವರ ಪ್ರತಿಭೆಯನ್ನು ಗುರುತಿಸಿದ ವೇದಿಕೆಯ ಮೆಲುಕು ಹಾಕುತ್ತಾರೆ.

ಕಾಲೇಜಿನಲ್ಲಿ ನಡೆದ ‘ರಂಗೋತ್ಸವ’ ಶಿಬಿರದಲ್ಲಿ ಸಕ್ರಿಯವಾಗಿ ತೊಡಗಿಕೊಂಡ ದೇವಾನಂದ ಅವರೊಳಗಿನ ಹಾಡುಗಾರನನ್ನು ಗುರುತಿಸಿದ್ದು ಜನಾರ್ದನ. ಅಲ್ಲಿಯವರೆಗೂ ಪೌರಾಣಿಕ ನಾಟಕ ನೋಡಿದ್ದು ಬಿಟ್ಟರೆ, ಆಧುನಿಕ ರಂಗಭೂಮಿಯ ಗಂಧಗಾಳಿಯೂ ದೇವಾನಂದ ಅವರಿಗೆ ಗೊತ್ತಿರಲಿಲ್ಲ. ಶಿಬಿರದಲ್ಲಿ ಕಲಿತು, ನಟಿಸಿದ ‘ಜಲಗಾರ’ ನಾಟಕ ಬಹುವಾಗಿ ಅವರನ್ನು ಆಕರ್ಷಿಸುತ್ತದೆ. ದೇವಾನಂದ ಅವರ ಪ್ರತಿಭೆ ಗುರುತಿಸಿದ ಜನ್ನಿ, ಎರಡನೇ ವರ್ಷವೂ ಶಿಬಿರ ಆಯೋಜಿಸಿ, ಅದರ ನೇತೃತ್ವವನ್ನು ದೇವಾನಂದ ಅವರಿಗೆ ವಹಿಸುತ್ತಾರೆ. ಅಲ್ಲಿಂದ ಅವರ ರಂಗಭೂಮಿಯೊಂದಿಗಿನ ನಂಟು ಶುರುವಾಯಿತು.

‘ಕಥೆಗಾರ ಮಂಜಣ್ಣ’, ‘ಕಲ್ಲರಳಿ ಹೂವಾಗಿ’, ‘ರಾಮರಾವಣರ ಯುದ್ಧ’, ‘ಕಲ್ಕಿ’, ‘ನಾಗಿ’ ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯ, ಹಿನ್ನೆಲೆ ಸಂಗೀತ ನೀಡುವ ಮೂಲಕ ಆಧುನಿಕ ರಂಗಭೂಮಿಯ ಹುಚ್ಚುಹತ್ತಿತು.

‘ಭಾವಗೀತೆಗಳನ್ನು ಕಲಿತು ಪ್ರಶಸ್ತಿಗಾಗಿ ಹಾಡಿದ್ದು ಬಿಟ್ಟರೆ, ಅದನ್ನು ರಚಿಸಿದ ಕವಿಯ ಹಿನ್ನೆಲೆ, ವೈಚಾರಿಕತೆ, ಸಾಹಿತ್ಯದ ಬಗ್ಗೆ ಏನೂ ಅರಿವಿರಲಿಲ್ಲ. ಯಾವಾಗ ಕುವೆಂಪು ರಚಿತ ನಾಟಕಗಳಲ್ಲಿ ಹಾಡಲು ಆರಂಭಿಸಿದೆನೋ ಆಗ ಒಬ್ಬೊಬ್ಬರೇ ಸಾಹಿತಿಗಳ ದರ್ಶನವಾಗುತ್ತ ಹೋಯಿತು. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೆ.ರಾಮದಾಸ್‌ ಜೀವನ ಚರಿತ್ರೆ, ಸಾಹಿತ್ಯ, ರಂಗಭೂಮಿಯ ನಂಟಿನೊಂದಿಗೆ ಸಾಹಿತ್ಯಾತ್ಮಕವಾಗಿ ತೆರೆದುಕೊಳ್ಳಲು ನನಗೆ ಸಾಧ್ಯವಾಯಿತು’ ಎನ್ನುತ್ತಾರೆ ದೇವಾನಂದ.

ಕಾಲೇಜು ದಿನಗಳಲ್ಲಿ ಅವರು ತರಗತಿಗೆ ಹಾಜರಾಗಿದ್ದಕ್ಕಿಂತ ವೇದಿಕೆ ಮೇಲೆ ಕಾಣಿಸಿಕೊಂಡಿದ್ದೇ ಹೆಚ್ಚು. ಈ ರೀತಿಯ ಚಟುವಟಿಕೆಗಳಿಂದ ಮಹಾರಾಜ ಕಾಲೇಜಿನಲ್ಲಿ ‘ಸಾಂಸ್ಕೃತಿಕ ರಾಯಭಾರಿ’ಯಾಗಿ ಗುರುತಿಸಿಕೊಂಡಿದ್ದರು.

ಮಾನಸಗಂಗೋತ್ರಿಯಲ್ಲಿ ಎಂ.ಎ ಪದವಿಗೆ ಸೇರಿಕೊಂಡಾಗಲೂ ರಂಗಭೂಮಿಯ ಬಾಹುಗಳು ಬಹುವಾಗಿ ಸೆಳೆದವು. ಅಲ್ಲಿಯವರೆಗೂ ಸ್ಪರ್ಧೆಗಾಗಿ ಹಾಡಿ, ಅಭಿನಯಿಸುತ್ತಿದ್ದ ದೇವಾನಂದ ಅವರು, ಈ ಕ್ಷೇತ್ರದಲ್ಲಿ ನಾನು ಒಬ್ಬ ಸಂಪನ್ಮೂಲ ವ್ಯಕ್ತಿಯಾಗುತ್ತೇನೆ ಎಂಬ ಕನಸನ್ನೂ ಕಂಡಿರಲಿಲ್ಲ. ಆ ದಿನಗಳಲ್ಲಿ ಜನಪದ ಕಲೆ, ರಂಗಭೂಮಿಗಳಲ್ಲಿ ಗುರುತಿಸಿಕೊಂಡಿದ್ದ ರಾಜು ಅನಂತಸ್ವಾಮಿ, ಜನ್ನಿ, ಶಿವಾಜಿ ರಾವ್‌ ಜಾದವ್‌ ಮತ್ತಿತರರ ನಂಟೂ ಇವರ ಆಸೆಗಳಿಗೆ ನೀರೆರೆಯಿತು.

ಮೂರು ವರ್ಷಗಳ ಕಾಲ ರಂಗಚಟುವಟಿಕೆಗಳಿಗೆ ಅಲ್ಪವಿರಾಮ ನೀಡಿ, ಬಿ.ಇಡಿ, ಎಂ.ಇಡಿ ಶಿಕ್ಷಣ ಪಡೆದರು. ಬಿ.ಇಡಿ ಶಿಕ್ಷಣ ಪಡೆದ ಸೋಮಾನಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ  ಕಾರ್ಯ ನಿರ್ವಹಿಸುತ್ತಿರುವಾಗಲೇ ಪಿಎಚ್‌.ಡಿ ಮಾಡಲು ನಿರ್ಧರಿಸಿ ‘ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಬೀದಿನಾಟಕಗಳು’ ವಿಷಯದ ಮೇಲೆ ಸಂಶೋಧನೆಗೂ ಇಳಿದರು.

ಎರಡು ವರ್ಷ ಶ್ರಮಪಟ್ಟು ಸಂಶೋಧನೆಯಲ್ಲಿ ತೊಡಗಿದರು. ಆದರೆ, ಉಪನ್ಯಾಸ, ಸಂಶೋಧನೆ ಹಾಗೂ ರಂಗ ಚಟುವಟಿಕೆ ಈ ಎಲ್ಲವನ್ನೂ ಒಟ್ಟಿಗೆ ನಿಭಾಯಿಸಲು ಕಷ್ಟವೆಂದು ಅರಿವಿಗೆ ಬರುತ್ತದೆ. ಆಗ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಸವಾಲು ಅವರಿಗೆ ಎದುರಾಗುತ್ತದೆ. ಆಗ ಮುಖ ಮಾಡಿದ್ದು ‘ರಂಗ’ದೆಡೆಗೆ.

‘ಏಕತಾರಿ’ ತಂಡ
‘ನನ್ನ ಮೇಲೆ ಸಾಂಸ್ಕೃತಿಕ ಜವಾಬ್ದಾರಿಗಳು ಸಾಕಷ್ಟಿವೆ’ ಎಂದು ನಿರ್ಧರಿಸಿ ಬದುಕಿನ ಇತರ ದಾರಿಗಳಿಗೆ ಪೂರ್ಣವಿರಾಮ ಇಟ್ಟು ರಂಗ ಚಟುವಟಿಕೆಯಲ್ಲೇ ಸಕ್ರಿಯವಾದರು ದೇವಾನಂದ. ಈ ತೊಡಗಿಕೊಳ್ಳುವಿಕೆಯ ಪ್ರಯತ್ನದ ಫಲವಾಗಿ ‘ಏಕತಾರಿ’ ತಂಡ ಜನ್ಮತಳೆಯಿತು.

‘ಏಕತಾರಿ’ ಇದೊಂದು ಜನಪದ ವಾದ್ಯ. ಏಕತಂತಿ ಎನ್ನುವುದು ಒಂದೇ ನಾದ– ಶ್ರುತಿಯನ್ನು ಧ್ವನಿಸುತ್ತದೆ. ಆ ನಾದದೊಟ್ಟಿಗೆ ನಾವೆಲ್ಲ ಸಾಗಬೇಕು. ಅನುಭಾವಿಗಳ ಅರಿವಿನ ಬೆಳಕಲ್ಲಿ ನಡೆದು ಹೋಗಬೇಕು ಎಂಬುದು ತಂಡದ ಆಶಯ. ‘ಜನಸಮುದಾಯ ತಮ್ಮ ಮೌಲ್ಯ– ಪ್ರಜ್ಞೆಯನ್ನು ಮರೆತಾಗೆಲ್ಲ ಅದನ್ನು ಕಾಪಾಡುವುದು ಅನುಭಾವಿಗಳ ಬದುಕು– ಬರಹ– ಪದಗಳು. ಅವರ ಬೆಳಕಿನ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡುವುದು ‘ಏಕತಾರಿ ಗುರಿ’ ಎಂಬ ಅಡಿ ಟಿಪ್ಪಣಿ ಸೇರಿಸುತ್ತಾರೆ ದೇವಾನಂದ.

ಹಾಡುವ, ನಟಿಸುವ ಹೆಬ್ಬಯಕೆ ಹೊಂದಿದವರನ್ನು ಒಟ್ಟುಗೂಡಿಸಿಕೊಂಡು ತಂಡವನ್ನು ಕಟ್ಟಿದ್ದಾರೆ. ಅವರ ಆಶಯಗಳಿಗೆ ತಂಡದಲ್ಲಿರುವ ಚಿಂತನ ವಿಕಾಸ, ಶುಭಾ ರಾಘವೇಂದ್ರ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು, ಖಾಸಗಿ ಕಂಪೆನಿ ಉದ್ಯೋಗಿಗಳು, ಕೂಲಿ ಕಾರ್ಮಿಕರು, ರೈತರು ಹೀಗೆ ಸುಮಾರು 30 ಜನರು ಒತ್ತಾಸೆಯಾಗಿ ನಿಂತಿದ್ದಾರೆ. ‘ಬಿದಿರು ನಾನಾರಿಗಲ್ಲದವಳು’– ಸಂತ ಶಿಶುನಾಳ ಶರೀಫರ ತತ್ವಪದಗಳು, ಜಿ.ಪಿ.ರಾಜರತ್ನಂ ಅವರ ‘ಹೆಂಡ, ಹೆಂಡ್ತಿ, ಕನ್ನಡ ಪದಗೋಳ್‌’, ‘ಹಾಡು ತೋರಿದ ಹಾದಿ’, ‘ಮಾಯಕಾರರಿಗೆ ಮರ್ವಾದೆ’ ಮೊದಲಾದ ಹಾಡಿನ ಕಾರ್ಯಕ್ರಮಗಳನ್ನು ತಂಡದಿಂದ ಪ್ರದರ್ಶಿಸಲಾಗಿದೆ.

ಮಂಜುನಾಥ ಬೆಳಕೆರೆ ಅವರ ‘ಶರೀಫ’ ನಾಟಕಕ್ಕೆ ಏಕತಾರಿ ತಂಡ ಸಂಗೀತದ ರೂಪಕೊಟ್ಟಿದೆ. ಶಿಶುನಾಳ ಶರೀಫರ ಪಾತ್ರ ನಿರ್ವಹಿಸಿರುವ ದೇವಾನಂದ ಅವರು ವೇದಿಕೆ ಮೇಲೆ ಹಾಡುಗಳನ್ನು ಹಾಡಿ, ಅಭಿನಯಿಸುವ ಮೂಲಕ ಹೊಸ ಸಾಧ್ಯತೆಯನ್ನು ತೋರಿಸಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಹಾಡು, ಅಭಿನಯ, ನಾಟಕ, ಮೂಕಾಭಿನಯ, ಡೊಳ್ಳುಕುಣಿತ, ಪಟದಕುಣಿತ, ರಂಗನಕುಣಿತ, ಕಂಸಾಳೆ ಹೇಳಿಕೊಡುವ ಮೂಲಕ ಜನಪದ ಕಲೆ, ರಂಗ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡುತ್ತಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಯುವಜನೋತ್ಸವ, ವಿವಿಧ ಕಾಲೇಜುಗಳಲ್ಲಿ ನಡೆಯುವ ಸ್ಪರ್ಧೆಗಳು, ಆಸಕ್ತರಿಗೆ, ವಿದ್ಯಾರ್ಥಿಗಳಿಗೆ, ಸಂಘ–ಸಂಸ್ಥೆಗಳಿಗೆ ತರಬೇತಿ ನೀಡುತ್ತಿದ್ದಾರೆ.

ತಮ್ಮ ಜಾನಪದ ಕ್ಷೇತ್ರದ ವ್ಯಾಪ್ತಿ ವಿಸ್ತರಿಸಿಕೊಳ್ಳಬೇಕು, ಜಾನಪದದ  ಆಂತರ್ಯದ ಸತ್ಯದರ್ಶನ ಮಾಡಬೇಕು ಎನ್ನುವ ಆಶಯದೊಂದಿಗೆ ಜಾನಪದದ ಕ್ಷೇತ್ರಕಾರ್ಯಕ್ಕೆ ಕೈಹಾಕಿರುವ ದೇವಾನಂದ, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಆಚರಿಸುವ ‘ಕುಂತಿಪೂಜೆ’ಯ ಅಧ್ಯಯನದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಳೆ ಮೈಸೂರು ಭಾಗದ ಸಾಂಸ್ಕೃತಿಕ ನಾಯಕ ‘ಮಲೆಮಹದೇಶ್ವರ’, ‘ಮಂಟೆಸ್ವಾಮಿ’, ‘ಅರ್ಜುನ ಜೋಗಿ’ಯ ಕ್ಷೇತ್ರಕಾರ್ಯದಲ್ಲಿ ತೊಡಗಿದ್ದಾರೆ.

‘ಜನರ ಒಡಲ ದನಿಯನ್ನು ಅನುಭವಿಸಿ ಹಾಡಿದರೆ ಶ್ರುತಿ–ತಾಳಗಳೆಲ್ಲ ಜತೆಗೂಡುತ್ತವೆ. ಆ ಮೂಲಕ ಸಮಸಮಾಜದ ಕನಸನ್ನು ಸಾರಬೇಕು. ಅನುಭವದ ನುಡಿಗಳನ್ನು ಮತ್ತೆಮತ್ತೆ ಜನರಿಗೆ ತಲುಪಿಸಬೇಕು’ ಎನ್ನುತ್ತ ತಮ್ಮ ಭವಿಷ್ಯ ಜಾನಪದದಲ್ಲಿದೆ ಎಂಬುದನ್ನು ಒತ್ತಿಹೇಳುತ್ತಾರೆ ದೇವಾನಂದ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT