ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

... ಅಚ್ಚ ಬಿಳಿ ಮನಸ್ಸು ಇಲ್ಲವೇ?

Last Updated 21 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಭಾರತವಾಸಿ ಭಾರತೀಯ ಪ್ರಜೆಗಳು ವಿದೇಶಿ ಬ್ಯಾಂಕು ಖಾತೆಗಳಲ್ಲಿ ಇರಿಸಿರುವ ಹಣಕ್ಕೆ ಸಂಬಂಧಿಸಿದ ಸರ್ವ ವಿವರವನ್ನು ಆ ಬ್ಯಾಂಕುಗಳಿಂದ ಪಡೆಯುವ ಪ್ರಯತ್ನದಲ್ಲಿ ಭಾರತ ಸರ್ಕಾರ ಸಫಲವಾಗಿದೆಯೇ? ‘ಹೌದು’ ಎಂದಾದರೆ, ಎಷ್ಟರಮಟ್ಟಿಗೆ ಸಫಲವಾಗಿದೆ ಎಂಬ ವಿವರಗಳು ಈ ದೇಶದ ಪ್ರಜೆಗಳಾಗಿರುವ ನಮಗಂತೂ ಸಿಗುತ್ತಿಲ್ಲ.

ಒಂದು ವೇಳೆ ವಿದೇಶಿ ಬ್ಯಾಂಕುಗಳಲ್ಲಿ ಹಣ ಇರಿಸಿದ ಎಲ್ಲಾ  ಭಾರತೀಯ ಪ್ರಜೆಗಳ ಹೆಸರು, ಅವರ ಬ್ಯಾಂಕ್‌ ಖಾತೆ ನಂಬರ್, ಖಾತೆಯಲ್ಲಿರುವ ಒಟ್ಟು ಮೊತ್ತ ಇತ್ಯಾದಿ ಎಲ್ಲಾ ವಿವರಗಳನ್ನು ಪಡೆದುಕೊಂಡರೂ ಆ ಮಾಹಿತಿಯಿಂದ ಮಾಡುವುದಾದರೂ ಏನು? ಆ ಬ್ಯಾಂಕಿನ ಒಡೆಯರು ಆ ಹಣವನ್ನು ಭಾರತ ಸರ್ಕಾರಕ್ಕೆ ಕಳಿಸಲು ಸಿದ್ಧರಿರುತ್ತಾರೆಯೇ? ಸಿದ್ಧರಿರದಿದ್ದರೆ ಬಲವಂತವಾಗಿ ಬ್ಯಾಂಕಿನಿಂದ ನೇರವಾಗಿ ಪಡೆದುಕೊಳ್ಳಲು ಸಾಧ್ಯವಿದೆಯೇ? ಬಹುಶಃ ಅದು ಯಾವತ್ತೂ ಸಾಧ್ಯವಿಲ್ಲ. ಖಾತೆದಾರ ಮಾತ್ರ ಆ ಹಣವನ್ನು ನೀಡಲು ಸಾಧ್ಯ. 

ವಾಸ್ತವದಲ್ಲಿ, ವಿದೇಶದಲ್ಲಿ ಹಣ ಇಟ್ಟುಕೊಂಡವರಲ್ಲಿ ಎಲ್ಲರದೂ ಕಪ್ಪು ಹಣವಲ್ಲ. ಅದು, ಅಲ್ಲಿ ವಾಸ ಮಾಡುತ್ತಿರುವ ಎಷ್ಟೋ ಮಂದಿ ಅಲ್ಲಿ ದುಡಿದು ಸಂಪಾದಿಸಿದ ಹಣವಾಗಿರುತ್ತದೆ. ಅವರ ಪೈಕಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಕೂಡಿಡುತ್ತಾ ಲಕ್ಷ ಲಕ್ಷ ದಾಟಿ ಕೋಟಿ ಕೋಟಿಗಳಾಚೆ ಮುಂದೆ ಸಾಗುತ್ತಲೇ  ಇರುವವರ ಒಂದೇ ಒಂದು ಕೊರತೆಯೆಂದರೆ, ‘ತಾವು ಇನ್ನೆಷ್ಟು ಕಾಲ ಹೀಗೆ ಇಲ್ಲಿ ಜೀವಿಸಬಹುದು, ತಮಗೆ ಇನ್ನು ಎಷ್ಟು ಆಯಸ್ಸು ಇರಬಹುದು’ ಎಂಬ ಯೋಚನೆ ಇಲ್ಲದಿರುವುದು. 

ಅಲ್ಲಿಯೇ ಇರುವುದೋ ಹುಟ್ಟಿದ ನೆಲಕ್ಕೆ ಮರಳುವುದೋ, ಮರಳುವುದಿದ್ದರೆ ಯಾವಾಗ ಎಂದು ನಿರ್ಧರಿಸಲಾಗದಿರುವುದು! ಅವರಲ್ಲೆಷ್ಟೋ ಮಂದಿಯ ಬಳಿ ಡಾಲರಿನಲ್ಲಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಇರಬಹುದು. ಪಾಪ, ಆ ಹಣವನ್ನು ಯಾವತ್ತು, ಎಲ್ಲಿ, ಹೇಗೆ ಏನು ಮಾಡುವುದು ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ  ಹುಟ್ಟಿರುವುದಿಲ್ಲ! ಸ್ವಾಭಾವಿಕವಾದ ಸಾವು ಅಥವಾ ಯಾವುದೋ ಆಕಸ್ಮಿಕದಿಂದ ಆ ಹಣ ಅನಾಥವಾಗುಳಿದು, ಬ್ಯಾಂಕಿನ ಪಾಲಾಗಬಹುದು ಎನ್ನುವ ಯೋಚನೆ ಕೂಡ ಬಂದಿರುವುದಿಲ್ಲ! ಅದರಂತೆಯೇ ಅಲ್ಲಿ ಅವರು ಕೊಂಡ ಆಸ್ತಿಪಾಸ್ತಿ ಕೂಡ ವ್ಯರ್ಥವಾಗಬಹುದು! 

ವಿದೇಶದಲ್ಲಿರುವ ಭಾರತ ಪ್ರಜೆಗಳು ಭಾರತವಾಸಿಗಳಾದ ನಂತರ ತಮ್ಮ ಹೆಸರಿನಲ್ಲಿ ಅಥವಾ ಬೇರೆ ಹೆಸರುಗಳಲ್ಲಿ ವಿದೇಶದಲ್ಲಿ ಮನೆ, ಹೋಟೆಲು ಮತ್ತೇನೋ ಖರೀದಿಸಲು ಡಾಲರನ್ನು ಹೂಡುವುದಾದರೆ ಅಂಥ ವ್ಯವಹಾರಗಳ ಮೇಲೆ ನಿರ್ಬಂಧ ಹೇರಲು ಭಾರತ ಸರ್ಕಾರದಿಂದ ಸಾಧ್ಯವಿಲ್ಲ. ತಮ್ಮ ಹೆಸರಿನಲ್ಲಿ ಮತ್ತು ಬೇನಾಮಿ ಖಾತೆಗಳಲ್ಲಿ ಅವರು ಇರಿಸಿರುವ ಲಕ್ಷಗಟ್ಟಲೆ, ಕೋಟಿಗಟ್ಟಲೆ ಡಾಲರುಗಳನ್ನು ಸಾವು ಬರುವವರೆಗೆ ಜಾಗತಿಕ ಪ್ರವಾಸಗಳಿಗೆ, ದುಬಾರಿ ವೆಚ್ಚದ ವೈದ್ಯಕೀಯ ಚಿಕಿತ್ಸೆಗೆ ಬಳಸಬಹುದು. ತಮ್ಮ ಮಕ್ಕಳು– ಮೊಮ್ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ಪಡೆಯಲು ಬಳಸಬಹುದು.

ಹಾಗೆಲ್ಲ ಮಾಡಿಯೂ ಲಕ್ಷಗಟ್ಟಲೆ ಡಾಲರುಗಳು ಅವರ ಖಾತೆಯಲ್ಲಿ ಬಿದ್ದುಕೊಂಡಿದ್ದರೆ ಅದಕ್ಕೆ ಏನು ಸಂಭವಿಸುತ್ತದೆ? ಖಾತೆದಾರನ ಮರಣದ ಬಳಿಕ ಅದು ಬ್ಯಾಂಕಿನಲ್ಲೇ ಉಳಿದು ಬ್ಯಾಂಕಿನ ತಿಜೋರಿ ಸೇರುತ್ತದೆ. ಹಾಗೆಯೇ ಅಲ್ಲಿರುವ ತಮ್ಮ ಆಸ್ತಿಪಾಸ್ತಿಯನ್ನು ಕೂಡ ಮಾರಿ ಹಣವನ್ನು  ಕೂಡ ಸ್ವದೇಶಕ್ಕೆ ತರಬಹುದು. ಎಲ್ಲಾ ಬಗೆಯಲ್ಲಿ ಎಲ್ಲಾ ಡಾಲರು ಭಾರತಕ್ಕೆ ಬಂದರೆ ಭಾರತದ ವಿದೇಶಿ ವಿನಿಮಯ ಸಂಗ್ರಹ ಥಟ್ಟನೆ ದುಪ್ಪಟ್ಟಾಗಬಹುದು!

ಭಾರತವಾಸಿಗಳ ವಿದೇಶಿ ಬ್ಯಾಂಕು ಖಾತೆಗಳಲ್ಲಿರುವ ಹಣ ಭಾರತಕ್ಕೆ ಬರುವಂತೆ ಮಾಡಲು ಸಾಧ್ಯವಿಲ್ಲವೇ? ಇದೆ. ಅವರನ್ನು ‘ಕಳ್ಳರು, ದೇಶದ್ರೋಹಿಗಳು ಎಂದು ಕರೆಯುವುದನ್ನು ನಿಲ್ಲಿಸಬೇಕು’. ಅವರ ಮನವೊಲಿಸಿ, ‘ಹಣವನ್ನು ಕಾನೂನು ರೀತ್ಯಾ ನೇರವಾಗಿ ಆ ದೇಶದ ಬ್ಯಾಂಕಿನಿಂದ ತಮ್ಮ ಭಾರತದ ಬ್ಯಾಂಕ್ ಖಾತೆಗೆ ತರಲು ಸಾಧ್ಯವಿದೆ. ಹಾಗೆ ತಂದರೆ, ಈ ದೇಶದಲ್ಲಿ ಅದು ಅವರದಾಗಿ ಉಳಿದು ಹೇಗೆ ಸದ್ಬಳಕೆಯಾಗುತ್ತದೆ’ ಎಂದು ಅವರಿಗೆ ಮನವರಿಕೆ ಮಾಡಿಸಬೇಕು.

ಆ ಹಣಕ್ಕೆ ಒಂದು ನಿರ್ದಿಷ್ಟ ಪ್ರಮಾಣದ ತೆರಿಗೆಯನ್ನು ವಿಧಿಸಿ, ‘ನಿಮ್ಮ ಹಣವನ್ನು ಭಾರತದಲ್ಲಿ ಬಂಡವಾಳ ಹೂಡಿ ಇಲ್ಲೇ ಶ್ರೀಮಂತರಾಗಿ; ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು, ಅವುಗಳನ್ನು ಜಾಗತಿಕ ಮಟ್ಟದ ಶ್ರೇಷ್ಠ ಶಾಲೆಗಳನ್ನಾಗಿ ಪರಿವರ್ತಿಸಿ; ದೇಶದಲ್ಲಿ ಮರಳಿ ಮರಳಿ ಉಂಟಾಗುವ ಜಲಕ್ಷಾಮದ ಸಮಸ್ಯೆಯನ್ನು ಪರಿಹರಿಸಿ; ಮುಚ್ಚಿಹೋಗಿರುವ ಕೆರೆಗಳಿಗೆ ಮರುಜೀವ ನೀಡಿ; ಹೊಸ ಕೆರೆಗಳನ್ನು ತೋಡಿಸಿ; ಒಳ್ಳೆಯ ಆಸ್ಪತ್ರೆಗಳನ್ನು ನಿರ್ಮಿಸಿ; ವೈದ್ಯಕೀಯ ಶುಶ್ರೂಷೆಯ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿ ಕೊಡಿ...’ ಹೀಗೆ ಅವರ ಮನವೊಲಿಸಲು ಸಾಧ್ಯವಿಲ್ಲವೇ?

ಅಷ್ಟೇ ಅಲ್ಲ. ನಮ್ಮ ದೇಶದಲ್ಲಿ ಅಧಿಕಾರೀ ರಾಜಕೀಯ ಎಂಬುದೊಂದಿದೆ. ಇದರಲ್ಲಿ ರಾಜಕಾರಣಿಗಳು ಅಧಿಕಾರಿಗಳಂತೆಯೂ, ಅಧಿಕಾರಿಗಳು ರಾಜಕಾರಣಿಗಳಂತೆಯೂ ಏನೇನೋ ಮಾಡಿ ಜನರ ಜೀವ ಹಿಂಡುತ್ತಾರೆ. ಸರ್ಕಾರಿ ಅರಣ್ಯವೋ ಅಥವಾ ತಮ್ಮ ಸ್ವಂತ ಭೂಮಿಯೋ ಎಂದರಿಯದ ಅಥವಾ ನೂರಾರು ವರ್ಷಗಳಿಂದ ಕಾಡಿನಂಚಿನಲ್ಲಿ ಗುಡಿಸಲಲ್ಲಿ ಹೇಗೋ ಬದುಕುತ್ತಿರುವ  ಬಡವರನ್ನು, ಮೂಲನಿವಾಸಿಗಳನ್ನು, ಮುರುಕು ಗುಡಿಸಲುಗಳಲ್ಲಿ ಬದುಕುತ್ತಿರುವ ಬುಡಕಟ್ಟು ಜನರನ್ನು ನಿರ್ದಾಕ್ಷಿಣ್ಯವಾಗಿ ಎಬ್ಬಿಸಿ ಓಡಿಸಿ ವಸತಿಹೀನರಾಗಿಸುವುದು ನಿರಂತರ ನಡೆಯುತ್ತಾ ಇರುತ್ತದೆ. ಅವರು ಇತರ ಎಲ್ಲರಂತೆಯೇ ಈ ದೇಶದ ಪ್ರಜೆಗಳು ಎಂಬ ಅರಿವು ಇಲ್ಲದಂತೆ ಸರ್ಕಾರ ವರ್ತಿಸುತ್ತದೆ. ಇದನ್ನೆಲ್ಲ ನೋಡುತ್ತಾ ನಾವು ಕಣ್ಣೀರು ಸುರಿಸುವುದರ ಹೊರತು ಬೇರೆ ಏನು ಮಾಡಬಲ್ಲೆವು?

ಹಣದಿಂದ ಮತ್ತು ಜ್ಞಾನದಿಂದ ಪರಿಹರಿಸಲಾಗುವ ದಾರಿದ್ರ್ಯ, ಬಡತನ ಇತ್ಯಾದಿಗಳ ಸಮಸ್ಯೆ ಮಾತ್ರವೇ ಅಲ್ಲ. ಈ ದೇಶದಲ್ಲಿ ಬೇರೆ ಎಷ್ಟೋ ಸಮಸ್ಯೆಗಳಿವೆ. ಆಸ್ಪತ್ರೆಯಿಲ್ಲದ, ಡಾಕ್ಟರು ಬೇಗನೆ ಸಿಗದ ಅದೆಷ್ಟೋ ಊರುಗಳಿವೆ; ರಸ್ತೆಯಿಲ್ಲದ, ವಿದ್ಯುತ್ ಇಲ್ಲದ ಹಳ್ಳಿಗಳಿವೆ; ಯಾವುದೇ ಕ್ಷಣದಲ್ಲಿ ಉರುಳಿ ಬೀಳುತ್ತೇನೆ ಎಂಬಂಥ ಶಾಲಾ ಕಟ್ಟಡಗಳಿವೆ; ಎಂದೋ ನಿರ್ಮಿಸಿದ ಶಿಥಿಲ ಸೇತುವೆಗಳಿವೆ. ಇರಲೇ ಬೇಕಾದ ಸೇತುವೆಯೇ ಇಲ್ಲದ ಊರುಗಳಿವೆ.

ವಿದೇಶದಲ್ಲಿನ ಕಪ್ಪು ಹಣ ಎಂಬ ಹಣದಿಂದ ಈ ದೇಶದ ದಟ್ಟ ದರಿದ್ರರಿಗೆ ಸೂರು, ನೀರು, ಆಹಾರ; ಔಷಧ ಇಲ್ಲದೆ ಬದುಕಲಾರದೆ ಅಥವಾ ಬದುಕಿಯೂ ಸಾಯುತ್ತಿರುವ ನಿರ್ಗತಿಕರಿಗೆ ಒಳ್ಳೆಯ ಬದುಕನ್ನು ಕಟ್ಟಿಕೊಡಬೇಕಾದ ಅಗತ್ಯ, ಅದನ್ನು ಮಾಡುವುದರಲ್ಲಿ ಸಿಗುವ ಸಂತೋಷ, ಜತೆಗೆ ದೇಶ ಹೇಗೆ ನಿಜಕ್ಕೂ ಮುಂದುವರಿದ ದೇಶವಾಗುತ್ತದೆ ಎಂಬ ಸತ್ಯ ಕಪ್ಪು ಹಣದೊಡೆಯರಿಗೆ ಮನನವಾದರೆ ಅವರ ಮನಸ್ಸು ಬಿಳಿಯಾಗಲಿಕ್ಕಿಲ್ಲವೇ? ಆ ಹಣವನ್ನು ಅಲ್ಲೇ ಇರಿಸಿಕೊಂಡು ಇನ್ನೆಷ್ಟು ಕಾಲ ಅವರು ಒಂದು ಕಾಲು ಅಲ್ಲಿ ಒಂದು ಕಾಲು ಇಲ್ಲಿ ಎಂಬಂತೆ ಬದುಕಬಹುದು?

ತಾಯಿ ನೆಲದಲ್ಲಿ ಜೀವಿಸುವ ಸಂತೋಷ ಮತ್ತು ತಾಯಿನಾಡಿಗೆ ಕೃತಜ್ಞತೆ ಸಲ್ಲಿಸುವ ಸುಖ ಮತ್ತು ಆನಂದದ ಆಕಾಂಕ್ಷೆ ಅವರಿಗೆ ಇರಲಿಕ್ಕಿಲ್ಲವೇ? ಖಂಡಿತ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT