ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪಕ್ಷಗಳ ನಿಧಿ ಪಾರದರ್ಶಕತೆ ಬೇಕು

Last Updated 21 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ರಾಜಕೀಯ ಪಕ್ಷಗಳ ನಿಧಿ ಸೇರುವ ಬೇನಾಮಿ ದೇಣಿಗೆಗಳ ಮೇಲೆ ನಿಷೇಧ ಹೇರುವ ನಿಯಮವನ್ನು ಕೇಂದ್ರ ಸರ್ಕಾರ  ಜಾರಿಗೆ ತರಬೇಕೆಂಬ  ಪ್ರಸ್ತಾವವನ್ನು ಚುನಾವಣಾ ಆಯೋಗ ಮುಂದಿಟ್ಟಿದೆ. ಈ ಬೇನಾಮಿ ದೇಣಿಗೆಗಳ ನಿಯಂತ್ರಣಕ್ಕೆ ಸದ್ಯಕ್ಕೆ ಗಟ್ಟಿಯಾದ ನಿಯಮಗಳಿಲ್ಲ.

1951ರ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 29ಸಿ ಅಡಿ  ಅನಾಮಧೇಯ ದೇಣಿಗೆಗೆ ಪರೋಕ್ಷ ನಿಷೇಧ ಇದೆ. ಎಂದರೆ, ಈ ಪ್ರಕಾರ ₹20,000ಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆಗಳನ್ನು ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಘೋಷಿಸಬೇಕು.

₹20,000ಕ್ಕಿಂತ ಕಡಿಮೆ ದೇಣಿಗೆಯನ್ನು ಯಾರು ನೀಡದರೆಂಬುದನ್ನು ಘೋಷಿಸುವ ಅಗತ್ಯವಿಲ್ಲದಿರುವುದರಿಂದ ಈ ನಿಯಮ ದುರ್ಬಳಕೆ ಆಗುತ್ತಿದೆ ಎಂಬುದು ಸ್ಪಷ್ಟ.  ಹೀಗಾಗಿ ಈಗ  ₹2000 ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಬೇನಾಮಿ ದೇಣಿಗೆಗಳನ್ನು  ನಿಷೇಧಿಸಲು ನಿಯಮ ರೂಪಿಸಬೇಕು ಎಂದು ಚುನಾವಣಾ ಆಯೋಗ ಹೇಳಿರುವುದು ಸರಿಯಾಗಿಯೇ ಇದೆ.

ಅಧಿಕ ಮುಖಬೆಲೆಯ ನೋಟುಗಳ ರದ್ದತಿಯ ನಂತರ ರಾಷ್ಟ್ರದ ವಿವಿಧೆಡೆ ತೆರಿಗೆ ದಾಳಿಗಳು ನಡೆಯುತ್ತಲೇ ಇವೆ. ನಗದುರಹಿತ ಆರ್ಥಿಕತೆಯತ್ತ ಭಾರತವನ್ನು ಒಯ್ಯುವ ಪ್ರಯತ್ನಗಳು ದೊಡ್ಡದಾಗಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನಗದು ದೇಣಿಗೆಗಳನ್ನು ಸ್ವೀಕರಿಸುತ್ತಾ ಆದಾಯ ತೆರಿಗೆ ತಪ್ಪಿಸುವ ಮಾರ್ಗಗಳಿಗೆ ದಾರಿ ಮಾಡಿಕೊಡಬಾರದು. ರಾಜಕೀಯ ಪಕ್ಷಗಳ ಹಣಕಾಸಿನ ವಹಿವಾಟಿನಲ್ಲಿ  ಪಾರದರ್ಶಕತೆ ಬೇಕು.   ಇದು ಈಗ ಸರ್ಕಾರ ಹಾಗೂ ಪ್ರತಿಪಕ್ಷಗಳ ಮುಂದಿರುವಂತಹ ದೊಡ್ಡ  ವಿಚಾರ ಎಂದು ಪರಿಗಣಿಸುವುದು ಅಗತ್ಯ.

ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್‍ಸ್  (ಎಡಿಆರ್) ನಡೆಸಿದ ಅಧ್ಯಯನದ ಪ್ರಕಾರ, 2004ರಿಂದ 2012ರವರೆಗೆ  ಆರು ರಾಷ್ಟ್ರೀಯ ರಾಜಕೀಯ ಪಕ್ಷಗಳು ಪಡೆದುಕೊಂಡ ಶೇ 75ಕ್ಕೂ ಹೆಚ್ಚಿನ  ದೇಣಿಗೆಗಳ ಮೂಲವನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ. ₹20,000ಕ್ಕಿಂತ ಕಡಿಮೆ ದೇಣಿಗೆಯಿಂದ ಬಂದ ಹಣ ಇದು ಎಂದು ರಾಜಕೀಯ ಪಕ್ಷಗಳು ಸಹಜವಾಗಿ ಪ್ರತಿಪಾದಿಸಿಕೊಳ್ಳುತ್ತವೆ.

ಕಾಳಧನವನ್ನು ಬೇನಾಮಿಯಾಗಿ ನೀಡಿ ರಾಜಕೀಯ ಪಕ್ಷಗಳ ಕೃಪಾಶ್ರಯ ಪಡೆದುಕೊಳ್ಳುವುದಕ್ಕೆ ಕಾಳಧನಿಕರಿಗೆ ಹೀಗೆ ಅನುವು ಮಾಡಿಕೊಡುವಂತಹದ್ದು ಎಷ್ಟು ಸರಿ? ಇದೇ ಸಂದರ್ಭದಲ್ಲಿ  ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಧಾನಸಭೆ ಚುನಾವಣಾ ಪೂರ್ವ ಸಭೆ ಉದ್ದೇಶಿಸಿ ಮಾತನಾಡುತ್ತಾ,  ರಾಜಕೀಯ ಪಕ್ಷಗಳು ಪಡೆದುಕೊಳ್ಳುವ ದೇಣಿಗೆಗಳ ಬಗ್ಗೆ ಪಾರದರ್ಶಕತೆ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವುದು ಸ್ವಾಗತಾರ್ಹ ಬೆಳವಣಿಗೆ. 

ಚುನಾವಣೆ ಆಯೋಗದ ಸಲಹೆಗೆ ಪ್ರಧಾನಿಯವರಷ್ಟೇ ಅಲ್ಲ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಸ್ಪಂದಿಸಿದ್ದಾರೆ.  ಒಂದು ರೂಪಾಯಿ ಆಗಲಿ, 10 ರೂಪಾಯಿ ಆಗಲಿ ಅದನ್ನು ತಮಗೆ ಯಾರು ನೀಡಿದರೆಂಬುದನ್ನು ರಾಜಕೀಯ ಪಕ್ಷಗಳು ತಿಳಿಸುವುದು ಕಡ್ಡಾಯವಾಗುವಂತೆ ಕಾನೂನು ತಿದ್ದುಪಡಿ ಆಗಬೇಕು ಎಂದು ನಿತೀಶ್ ಅವರು ಹೇಳಿರುವುದು ಸರಿಯಾದದ್ದೇ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇಂತಹದೊಂದು ತಿದ್ದುಪಡಿ ತರಬಹುದಾದ ಸಾಧ್ಯತೆಯ ಬಗ್ಗೆಯೂ ನಿತೀಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಚಾರದಲ್ಲಿ  ಬಿಜೆಪಿ  ಮಾದರಿ ಆಗಬೇಕು. ಹಾಗಾದಾಗ  ಕಪ್ಪು ಹಣ ನಿಯಂತ್ರಣದ ವಿಚಾರದ ಆದರ್ಶವನ್ನು ದೊಡ್ಡದಾಗಿ ಬಿಂಬಿಸುವ ಬಿಜೆಪಿಯ ಮಾತುಗಳಿಗೂ ಬೆಲೆ ಬರುತ್ತದೆ.

ರಾಜಕೀಯ ಪಕ್ಷ ರಚಿಸಿಕೊಳ್ಳುವ ಮೂಲಕ ತೆರಿಗೆ ತಪ್ಪಿಸಬಹುದು ಎಂಬಂತಹ ಸ್ಥಿತಿ ನಮ್ಮ ನಡುವೆ ಇದೆ. ಹೀಗಾಗಿಯೇ ರಾಷ್ಟ್ರದಲ್ಲಿ 1900 ನೋಂದಾಯಿತ ರಾಜಕೀಯ ಪಕ್ಷಗಳಿವೆ. ಈ ಪೈಕಿ 400 ಪಕ್ಷಗಳು ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಿಲ್ಲ ಎಂಬುದನ್ನು ಗಮನಿಸಬೇಕು. ಹೀಗಾಗಿ ಈಗ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಸ್ಥಾನಗಳನ್ನು ಗೆದ್ದ ರಾಜಕೀಯ ಪಕ್ಷಗಳಿಗೆ ಮಾತ್ರ ಆದಾಯ ತೆರಿಗೆ ರಿಯಾಯಿತಿಗಳನ್ನು ವಿಸ್ತರಿಸಬೇಕೆಂಬ ಚುನಾವಣಾ ಆಯೋಗದ ಸಲಹೆಯೂ ಪಾಲನೆಯಾಗಬೇಕು.

ಚುನಾವಣೆ ಸುಧಾರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಕೈಗೊಳ್ಳಬೇಕಾಗಿದೆ. ಸುಧಾರಣೆಗೆ ಸಂಬಂಧಪಟ್ಟಂತೆ ಕಾನೂನು ರೂಪಿಸಲು ಈಗಾಗಲೇ ಚುನಾವಣಾ ಆಯೋಗ 47 ಪ್ರಸ್ತಾವಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

ರಾಜಕೀಯ ಪಕ್ಷಗಳನ್ನು ಆರ್‌ಟಿಐ ಕಾಯಿದೆ ಅಡಿ ತರುವುದಲ್ಲದೆ ಪಕ್ಷದ ಆದಾಯಕ್ಕೂ ನಿರ್ದಿಷ್ಟ ಮಿತಿಯ ಮೇಲೆ ತೆರಿಗೆ ಹೇರಿ ಉತ್ತರದಾಯಿಯಾಗಿಸುವುದು ಮುಖ್ಯ. ಚುನಾವಣೆಯಲ್ಲಿ ಕಪ್ಪು ಹಣದ ಪಾತ್ರ ದೊಡ್ಡದು ಎಂಬುದನ್ನು  ಚುನಾವಣಾ ಆಯೋಗದ ಅಧಿಕಾರಿಗಳು ಪದೇ ಪದೇ ಎತ್ತಿ ಹೇಳುತ್ತಲೇ ಇದ್ದಾರೆ. ಭ್ರಷ್ಟಾಚಾರ ಹಾಗೂ ಕಪ್ಪುಹಣ ಮುಕ್ತ ಭಾರತವನ್ನು ಸೃಷ್ಟಿಸಲು ಭ್ರಷ್ಟಾಚಾರ ಹಾಗೂ ಕಪ್ಪುಹಣದ ಮೂಲವಾಗಿರುವಂತಹ ರಾಜಕೀಯ ಪಕ್ಷಗಳ ಹಣಕಾಸು ಮೂಲಗಳ ಮೇಲಿನ ದಾಳಿ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT