ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡ ಬೆಳೆಸಲು ಮನಸು ಸಾಕು

Last Updated 22 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕಾಂಕ್ರೀಟ್‌ ಕಾಡಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಹಸಿರು ನಿಧಾನಕ್ಕೆ ಅಳಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಹಸಿರು ಪ್ರಿಯರು ತಾರಸಿ ತೋಟಗಳನ್ನು ಮಾಡಿಕೊಂಡು ತಮ್ಮ ಕೃಷಿ ಪ್ರೀತಿಯನ್ನು ಜಾಗೃತವಾಗಿಟ್ಟಿದ್ದಾರೆ. ಆದರೆ ಇವರ ಸಂಖ್ಯೆ ಕಡಿಮೆಯೇ. ಇಂಥವರಲ್ಲೇ ಒಬ್ಬರು ಮಲ್ಲೇಶ್ವರ ನಿವಾಸಿ ವಿವೇಕ ಕುಲಕರ್ಣಿ.

ಪ್ರಯೋಗಶೀಲ ವಿವೇಕ್ ಕುಲಕರ್ಣಿ ಅವರು ಬಸವೇಶ್ವರ ನಗರದ ತಮ್ಮ ಕಚೇರಿಯ ಮೇಲೆ ಭಿನ್ನ ರೀತಿಯಲ್ಲಿ ತಾರಸಿ ತೋಟ ಮಾಡಿ, ಕ್ಯಾರೆಟ್, ಹೂಕೋಸು, ಟೊಮ್ಯಾಟೊ, ಮೆಣಸಿನಕಾಯಿ ಇನ್ನಿತರ ತರಕಾರಿ ಸೇರಿದಂತೆ ಹಲವು ಸೊಪ್ಪುಗಳನ್ನು ಬೆಳೆದಿದ್ದಾರೆ. ಇಷ್ಟೆ ಆಗಿದ್ದರೆ ಇವರ ಸಾಧನೆಯಲ್ಲಿ ಹೆಚ್ಚಿನ ವಿಶೇಷತೆ ಇರುತ್ತಿರುಲಿಲ್ಲ. ವಿವೇಕ್ ಈ ಎಲ್ಲಾ ತರಕಾರಿ, ಸೊಪ್ಪುಗಳನ್ನು ಮಣ್ಣಿನ ಸಹಾಯವಿಲ್ಲದೆ ಬೆಳೆದಿದ್ದಾರೆ ಎಂಬುದೇ ಕುತೂಹಲ.

ಹೌದು ಈ ಎಲ್ಲಾ ತರಕಾರಿಗಳನ್ನು ಬೆಳೆಯಲು ಅವರು ಬಳಸಿರುವುದು ಕೆಲವು ಬಕೆಟ್‌ಗಳು, ನೀರು ಮತ್ತು ನಿರುಪಯುಕ್ತ ತೆಂಗಿನ ನಾರು. ವಿವೇಕ್ ಅವರು ಬೆಳೆದಿರುವ ತರಕಾರಿಗಳು ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆದಿರುವ ತರಕಾರಿಗಳಿಗಿಂತಲೂ ತಾಜಾ ಆಗಿರುವುದು ವಿಶೇಷ.

ವಿಧಾನ ಹೀಗಿದೆ...
ಬಕೆಟ್‌ ಒಳಗೆ ತೆಂಗಿನ ನಾರಿನ ಪುಡಿ ತುಂಬಿದ್ದಾರೆ. ಅದರಲ್ಲಿ ಬೀಜ ಬಿತ್ತಿದ್ದಾರೆ. ಡ್ರಮ್‌ನಿಂದ ಬಕೆಟ್‌ಗೆ ಮೇಲಿನಿಂದ ಸಣ್ಣ ಪ್ರಮಾಣದಲ್ಲಿ ನೀರು ಹಾಯಿಸುತ್ತಾರೆ. ಸಸಿ ಬೆಳೆಯಲು ಬೇಕಾದ ಎಲ್ಲ ರೀತಿಯ ಲವಣ ಖನಿಜ, ಪೊಷಕಾಂಶಗಳನ್ನು ನೀರಿಗೆ ಸೇರಿಸಿರುತ್ತಾರೆ. ಹೀಗಾಗಿ ಸಸಿ ಬೆಳೆಯಲು ಮಣ್ಣಿನ ಅವಶ್ಯಕತೆಯೇ ಇರುವುದಿಲ್ಲ.

ನೀರಿನಲ್ಲಿನ ಪೋಷಕಾಂಶಗಳನ್ನು ಪಡೆದುಕೊಳ್ಳುವ ಬೀಜ ಗಿಡವಾಗಿ ಬೆಳೆಯುತ್ತದೆ. ತೆಂಗಿನ ನಾರು ತೇವಾಂಶವನ್ನು ಹಿಡಿದಿಟ್ಟು ಕೊಳ್ಳುವುದರಿಂದ ಸಸಿಗೆ ಸಾಕಷ್ಟು ನೀರು ಮತ್ತು ಪೋಷಕಾಂಶ ಲಭ್ಯವಾಗುತ್ತದೆ.

‘ಬಕೆಟ್‌ನ ತಳದಿಂದ ಸ್ವಲ್ಪ ಮೇಲೆ ಮತ್ತೊಂದು  ರಂಧ್ರ ಮಾಡಿ ಹೆಚ್ಚುವರಿ ನೀರು ಆಚೆ ಬಂದು ಮತ್ತೆ ಡ್ರಮ್‌ಗೆ ಸೇರುವಂತೆ ಸಂಪರ್ಕ ಕಲ್ಪಿಸಲಾಗಿದೆ. ಈ ಪದ್ಧತಿಯಲ್ಲಿ ಒಂದು ಹನಿ ನೀರು ಪೋಲಾಗುವುದಿಲ್ಲ’ ಎನ್ನುತ್ತಾರೆ ವಿವೇಕ್‌.

ಹವ್ಯಾಸಕ್ಕೊಲಿದ ಹಸಿರು
ಶಸ್ತ್ರ ಚಿಕಿತ್ಸೆಗೊಳಪಟ್ಟು ವೈದ್ಯರ ಸಲಹೆಯಂತೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವಿವೇಕ್‌, ಆಗಾಗ ಅಂತರ್ಜಾಲದಲ್ಲಿ ಕೃಷಿಯ ಬಗ್ಗೆ ಮಾಹಿತಿ ಹುಡುಕುತ್ತಿದ್ದರು. ಅದೇ ಸಂದರ್ಭದಲ್ಲಿ ಹೈಡ್ರೊಪಾನಿಕ್ಸ್‌ (hydroponics) ಕೃಷಿ ಪದ್ಧತಿ ಇವರ ಕಣ್ಣಿಗೆ ಬಿತ್ತಂತೆ.

ನಂತರ ಅದರ ಬಗ್ಗೆ ಅಂತರ್ಜಾಲದಲ್ಲೇ ಸಂಪೂರ್ಣ ಮಾಹಿತಿ ಪಡೆದು ಮನೆಯ ತಾರಸಿಯಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ. ಅಲ್ಲಿ ಸುತ್ತ–ಮುತ್ತಲ ಬಹುಮಹಡಿ ಕಟ್ಟಡಗಳಿಂದಾಗಿ ಬೆಳಕಿನ ಕೊರತೆ ಉಂಟಾಗಿ ಸಸಿಗಳು ಸರಿಯಾಗಿ  ಬೆಳೆಯದ ಕಾರಣ ಪ್ರಯೋಗವನ್ನು ಬಸವೇಶ್ವರ ನಗರದ ತಮ್ಮ ಇನೊವಾ ಪ್ರಿಂಟಿಂಗ್‌ ಆ್ಯಂಡ್‌ ಪ್ಯಾಕೇಜಿಂಗ್‌ ಕಾರ್ಖಾನೆಯ ತಾರಸಿಗೆ ವರ್ಗಾಯಿಸಿದ್ದಾರೆ.

ಸಾಕಷ್ಟು ತರಕಾರಿಗಳನ್ನು ಪ್ರಯೋಗಾತ್ಮವಾಗಿ ಬೆಳೆದಿರುವ ವಿವೇಕ್ ಯಾವ ತರಕಾರಿ ಈ ಪದ್ಧತಿಗೆ ಉತ್ತಮ ಪ್ರತಿಕ್ರಿಯೆ ತೋರಿ ಫಸಲು ನೀಡುತ್ತದೆಯೋ ಅದನ್ನು ಹೆಚ್ಚಾಗಿ ಬೆಳೆದು ಮಾರುಕಟ್ಟೆಗೆ ನೀಡುವ ಉಮೇದು ಹೊಂದಿದ್ದಾರೆ.

ಮಾಪನ...
ನೀರಿನಲ್ಲಿ ಬೆರಿಸಿದ ಪೌಷ್ಟಿಕಾಂಶ, ಗೊಬ್ಬರ, ಇತರ ಲವಣಗಳು ಖಾಲಿಯಾಗದಂತೆ ನೋಡಿಕೊಳ್ಳುತ್ತಿರಬೇಕು. ಇದಕ್ಕಾಗಿ ಕೆಲವು ಅವಶ್ಯಕ ಆಧುನಿಕ ಉಪಕರಣಗಳನ್ನು ಇರಿಸಿಕೊಂಡಿರುವ ವಿವೇಕ್‌ ಅವರು ನೀರಿನ ಪರೀಕ್ಷೆಯನ್ನು ತಾವೇ ಮಾಡಿ ಅವಶ್ಯಕ ಪೌಷ್ಟಿಕಾಂಶಗಳನ್ನು ನೀರಿಗೆ ಒದಗಿಸುತ್ತಾರೆ.

ಪ್ರಯೋಗಶಾಲೆ...
ಮಣ್ಣು ರಹಿತ ಕೃಷಿಯಾದ ಕಾರಣ ವಿವೇಕ್ ಅವರ ತಾರಸಿ ಸ್ವಚ್ಛವಾಗಿದೆ. ಥೇಟ್‌ ಪ್ರಯೋಗಶಾಲೆಯಂತೆ ಕಾಣುವ ಅವರ ತಾರಸಿ ತೋಟದಲ್ಲಿ ಇಟ್ಟಿರುವ ಪ್ರತಿ  ಬಕೆಟ್‌ ಮೇಲೆ ಅದರಲ್ಲಿನ ಗಿಡದ ಹೆಸರು, ಬೀಜ ಬಿತ್ತಿದ ದಿನಾಂಕಗಳನ್ನು ನಮೂದಿಸಿದ್ದಾರೆ. ವಾರಕ್ಕೊಮ್ಮೆ ಪಿಎಫ್ ಮೆಷಿನ್ ಹಿಡಿದುಕೊಂಡು ನೀರಿನಲ್ಲಿನ ಲವಣಾಂಶ, ಪೋಷಕಾಂಶಗಳನ್ನು ಅಳತೆ ಮಾಡಿ ನಮೂದಿಸಿಕೊಳ್ಳುತ್ತಾರೆ.

ಸಾಧಾರಣ ತರಕಾರಿಗಳನ್ನು ಹೊರತುಪಡಿಸಿ ಸ್ಟ್ರಾಬೆರಿ, ಪಾಲಕ್‌, ಲೇಟಿಸ್‌ (ಬರ್ಗರ್‌ನಲ್ಲಿ ಬಳಸಲಾಗುವ ಸೊಪ್ಪು) ಲೆಮನ್‌ ಬ್ಯಾಸಿಲ್‌ (ನಿಂಬೆ ರುಚಿ ನೀಡುವ ತುಳಸಿ) ಇನ್ನಿತರೆ ವಿದೇಶಿ ಮೂಲದ ತರಕಾರಿ ಮತ್ತು ಸೊಪ್ಪುಗಳು ವಿವೇಕ್ ಅವರ ತಾರಸಿಯಲ್ಲಿವೆ.

ಉಪಯೋಗಗಳು..
ಮಣ್ಣು ರಹಿತ ಕೃಷಿಯಲ್ಲಿ ರೋಗಗಳು ಕಡಿಮೆ. ಮಣ್ಣಿನ ಅವಶ್ಯಕತೆ ಇಲ್ಲದ ಕಾರಣ ಲಂಬವಾಗಿ ಒಂದರ ಮೇಲೊಂದರಂತೆ  ಬಕೆಟ್‌ಗಳನ್ನಿಟ್ಟು ಸಸಿಬೆಳೆಯಬಹುದು. ಕಡಿಮೆ ಜಾಗದಲ್ಲಿ ಹೆಚ್ಚಿನ ಬೆಳೆ ಸಾಧ್ಯ. ಈ ಪದ್ಧತಿಯಲ್ಲಿ ನೀರು ಪೋಲಾಗುವುದಿಲ್ಲ, ಗಿಡಕ್ಕೆ ಎಷ್ಟು ಅವಶ್ಯವೋ ಅಷ್ಟು ನೀರನ್ನು ಗಿಡ ಎಳೆದುಕೊಳ್ಳುತ್ತದೆ. ಉಳಿದ ನೀರು ಬಕೆಟ್‌ನ ಅಡಿಯಲ್ಲಿ ಮಾಡಿದ ರಂಧ್ರದ ಮೂಲಕ ಆಚೆ ಬಂದು ಡ್ರಮ್‌ ಸೇರುತ್ತದೆ, ಇದೇ ನೀರನ್ನು ನಾವು ಮತ್ತೆ ಬಳಸಬಹುದು. ಹವಾಮಾನ ವೈಪರಿತ್ಯದಿಂದ ಸಮಸ್ಯೆಯಿಲ್ಲ.

ಯಾವುದೇ ಹವಾಮಾನದಲ್ಲೂ ಬೆಳೆಸಬಹುದು, ನಿಯಂತ್ರಿತ ಪರಿಸರದಲ್ಲಿ ಬೆಳೆಯುವುದರಿಂದ ಎಲ್ಲಾ ಗಿಡಗಳು ಏಕ ರೀತಿಯಲ್ಲಿ ಬೆಳೆದು ಏಕ ರೀತಿಯ ಫಸಲು ನೀಡುತ್ತವೆ.ಅನುಕೂಲಕರ ಎತ್ತರಕ್ಕೆ ಗಿಡಗಳನ್ನು ಬೆಳೆಸಬಹುದು ಇದರಿಂದ ಕೊಯ್ಲು ಸುಲಭವಾಗುತ್ತದೆ.

ನಗರಕ್ಕೆ ಉಪಯುಕ್ತ ಪದ್ಧತಿ
ಸಸ್ಯಶಾಸ್ತ್ರ ಪದವಿ ಪಡೆದು ನಂತರ ಎಲ್‌ಎಲ್‌ಬಿ ಓದಿರುವ ವಿವೇಕ್‌ ಅವರು ‘ಬೆಂಗಳೂರಿಗೆ ಈ ರೀತಿಯ ಕೃಷಿ ಪದ್ಧತಿ ಸಾಕಷ್ಟು ಅವಶ್ಯಕತೆ ಇದೆ’ ಎನ್ನುತ್ತಾರೆ. ‘ಬೆಂಗಳೂರಿನಲ್ಲಿ ಸ್ಥಳದ ಕೊರತೆ ಸಾಕಷ್ಟಿದೆ ಈ ಪದ್ಧತಿ ಸ್ಥಳದ ಕೊರತೆಯನ್ನು ನಿವಾರಿಸುತ್ತದೆ.

ನಗರದ ಕೆರೆ ನೀರು ವಿಷಕಾರಿಯಾಗಿದ್ದು ಅವುಗಳ ದಂಡೆಯಲ್ಲಿ ಬೆಳೆದ ಅಥವಾ ಕೆರೆ ನೀರು ಬಳಸಿ ತೊಳೆದ ತರಕಾರಿಗಳನ್ನು ತಿನ್ನುವುದಕ್ಕಿಂತಲೂ ಸ್ವಲ್ಪ ಹಣ ಖರ್ಚು ಮಾಡಿ ಈ ಸರಳ ಪದ್ಧತಿಯಿಂದ ನಾವೇ ತರಕಾರಿ ಬೆಳೆದುಕೊಳ್ಳುವುದು ಒಳಿತು’ ಎಂಬುದು ವಿವೇಕ್ ಅವರ ಅಭಿಪ್ರಾಯ.

ಲಾಭ ಸಾಕಷ್ಟಿದೆ...
‘ಈಗ ಬೆಂಗಳೂರಿನಲ್ಲಿ ಸಾಕಷ್ಟು ಪಂಚತಾರಾ ಹೋಟೆಲ್‌ಗಳು, ಫಾಸ್ಟ್‌ ಫುಡ್‌ ಹೋಟೆಲ್‌ಗಳು ಇವೆ. ಇವಕ್ಕೆ ವಿದೇಶಿ ಮೂಲದ ತರಕಾರಿಗಳಾದ ಬ್ರೂಕ್ಲಿ, ಬರ್ಗರ್‌ ಮಾಡಲು ಬಳಸುವ  ಲೇಟಿಸ್‌ ಎಲೆಗಳು ಇನ್ನಿತರ ವಿಶಿಷ್ಟ ತರಕಾರಿಗಳ ಅವಶ್ಯಕತೆ ಇದೆ. ಮಣ್ಣು ರಹಿತ ತಾರಸಿ ಕೃಷಿ ಪದ್ಧತಿಯಲ್ಲಿ ಈ ರೀತಿಯ ವಿದೇಶಿ ಮೂಲದ ತರಕಾರಿಗಳನ್ನು ಸುಲಭವಾಗಿ ಬೆಳೆಯಬಹುದಾಗಿದೆ. ಈ ತರಕಾರಿಗಳನ್ನು ಹೋಟೆಲ್‌ಗಳಿಗೆ ಸರಬರಾಜು ಮಾಡುವುದರಿಂದ  ಲಾಭವಿದೆ’ ಎನ್ನುತ್ತಾರೆ ವಿವೇಕ್‌ ಕುಲಕರ್ಣಿ.

ಹೈಡ್ರೊಪಾನಿಕ್ಸ್‌
ವಿವೇಕ್‌ ಕುಲಕರ್ಣಿಯವರು ಅನುಸರಿಸುವ ವಿಧಾನವನ್ನು ಹೈಡ್ರಾಪಾನಿಕ್ಸ್‌ ಎನ್ನುತ್ತಾರೆ, ಕೇವಲ ನೀರನ್ನು ಮಾತ್ರವೇ ಬಳಸಿ ಗಿಡಗಳನ್ನು ಬೆಳೆಸುವ ವಿಧಾನವಿದು. ಕೆಲವು ದೇಶಗಳಲ್ಲಿ ಬಳಕೆಯಲ್ಲಿದೆ. ಭಾರತದಲ್ಲಿ ಈ ಪದ್ಧತಿ ಅನುಸರಿಸಿ ಕೃಷಿ ಮಾಡುವುದು ಸಾಕಷ್ಟು ವಿರಳ. ಮಾಹಿತಿಗೆ: 080 2323 2038
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT