ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್ಇ ಕಡ್ಡಾಯ ಪರೀಕ್ಷೆ ಹಿಮ್ಮುಖದ ನಿರ್ಧಾರ

Last Updated 22 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ 2018ರಿಂದ ಮತ್ತೊಮ್ಮೆ ಪಬ್ಲಿಕ್ ಪರೀಕ್ಷೆ ಕಡ್ಡಾಯವಾಗಲಿದೆ. ಸಿಬಿಎಸ್ಇ ಬೋರ್ಡ್ ಪರೀಕ್ಷೆ ಬರೆಯುವುದು ಅಥವಾ ತನ್ನ ನಿರ್ವಹಣೆ ಮಟ್ಟವನ್ನು ತನ್ನ ಶಾಲೆಯೇ ಅಳೆಯುವುದರ ಮಧ್ಯೆ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಇದ್ದ ಅವಕಾಶ ಇನ್ನು ಮುಂದೆ ಇರುವುದಿಲ್ಲ.

ಬೋರ್ಡ್ ಪರೀಕ್ಷೆಗಳ ಒತ್ತಡ ಇಲ್ಲವಾಗಿಸುವುದಕ್ಕಾಗಿ ಶಾಲೆಗಳಲ್ಲಿ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ (ಸಿಸಿಇ) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿತ್ತು. ಆದರೆ ಸಿಸಿಇಯ ಪ್ರಾಮುಖ್ಯ ಅರಿವಾಗದಿದ್ದುದು ದುರದೃಷ್ಟಕರ.

ವಿವಿಧ ರೀತಿಯಲ್ಲಿ ಮಕ್ಕಳ ಕಲಿಕೆಯನ್ನು ಅಳೆಯುವ ಸೂಕ್ಷ್ಮ ಜವಾಬ್ದಾರಿಯನ್ನು ಶಿಕ್ಷಕರ ಮೇಲೆ ಈ ವ್ಯವಸ್ಥೆ ಹೊರಿಸುತ್ತದೆ. ಇದರ ಅನ್ವಯ ಮಕ್ಕಳ ಕುರಿತಾದ ದಾಖಲೆಗಳನ್ನು ವ್ಯವಸ್ಥಿತವಾಗಿ ಇಡಬೇಕು. ಈ ಮೂಲಕ ಮಕ್ಕಳ ಆಸಕ್ತಿ ಹಾಗೂ ಪ್ರಗತಿಯನ್ನು ಗುರುತಿಸಲು ಶಿಕ್ಷಕ ಹಾಗೂ ತಂದೆತಾಯಿಗಳಿಗೆ ನೆರವಾಗಬೇಕು ಎಂಬ ಆಶಯ ಇಲ್ಲಿದೆ. ಶಾಲಾವ್ಯವಸ್ಥೆಯನ್ನು ಆಧುನೀಕರಿಸುವ ಈ ಪ್ರಯೋಗ, ಸಾಕಷ್ಟು ಸನ್ನದ್ಧತೆ ಇಲ್ಲದೆ ವಿಫಲವಾದದ್ದು ದುರದೃಷ್ಟಕರ.

ಈ ಕುರಿತು ಜಾಗೃತಿ ಮೂಡಿಸುವಲ್ಲಿ ಹೆಚ್ಚಿನ ಶ್ರಮವನ್ನೂ ಹಾಕಲಿಲ್ಲ, ಶಿಕ್ಷಕರಿಗೂ ಹೆಚ್ಚಿನ ಪ್ರೇರಣೆಯೇನೂ ಇರಲಿಲ್ಲ. ಸಮಕಾಲೀನ ಬೋಧನಾ ವ್ಯವಸ್ಥೆಗಳ ಬಗ್ಗೆ ಅವರಿಗೆ ತರಬೇತಿಯೇ ಇರಲಿಲ್ಲ. ಈ ವಿಚಾರದಲ್ಲಿ ತಮ್ಮ ಪಾತ್ರ ಏನು, ಹೊಣೆಗಾರಿಕೆ ಎಂತಹದ್ದು ಎಂಬ ಬಗ್ಗೆ ಸ್ವತಃ ಶಿಕ್ಷಕರಿಗೂ ಸ್ಪಷ್ಟತೆ ಇರಲಿಲ್ಲ. ಅಧ್ಯಾಪಕರು ಮಾತ್ರವಲ್ಲ ಪಾಲಕರಿಗೂ ಇದು ಬೇಕಿಲ್ಲ ಎಂದಾದದ್ದು ವಿಷಾದನೀಯ.

ಪರೀಕ್ಷಾ ಕೇಂದ್ರಿತ ಶಾಲಾವ್ಯವಸ್ಥೆ ಬದಲಾಗಬೇಕು ಎಂಬುದು ಆದರ್ಶ. ಆದರೆ ಅದಕ್ಕೆ ಸೂಕ್ತ ಸನ್ನದ್ಧತೆಯೂ ಬೇಕಾಗುತ್ತದೆ. ಶಾಲೆಗಳಲ್ಲಿ ಅಧ್ಯಾಪಕ– ವಿದ್ಯಾರ್ಥಿ ಅನುಪಾತ ಕಡಿಮೆ ಇರಬೇಕು. ಹಾಗಾದಾಗ ಮಾತ್ರ ಸಿಸಿಇ ವ್ಯವಸ್ಥೆ ಫಲ ನೀಡುತ್ತದೆ.

ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಇಂದಿನ ದಿನಗಳಲ್ಲಿ ಪ್ರವೇಶ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಉನ್ನತ ಶಿಕ್ಷಣಕ್ಕೆ ಪ್ರೌಢಶಾಲಾ ಫಲಿತಾಂಶವೇ  ಮೆಟ್ಟಿಲು ಎಂದು ಪರಿಗಣಿಸಲಾಗಿರುವುದರಿಂದ ಇಂದಿನ ಶಿಕ್ಷಣ ಪ್ರಕ್ರಿಯೆಯಲ್ಲಿ ಪರೀಕ್ಷೆಗಳ ಅಂಕಗಳು ಪ್ರಾಮುಖ್ಯ ಗಳಿಸಿಕೊಳ್ಳುತ್ತವೆ. ಅದರಲ್ಲೂ 10ನೇ ತರಗತಿ, ವಿದ್ಯಾರ್ಥಿ ಬಾಳಲ್ಲಿ ಪ್ರಮುಖ ಘಟ್ಟ. 

ಏಕೆಂದರೆ, ನಂತರದ  ಎರಡು ವರ್ಷಗಳ ಕಲಿಕೆಗೆ ಸರಿಯಾದ ವಿಷಯಗಳ ಗುಂಪಿನ ಜೊತೆಗೆ ಸರಿಯಾದ ಕಾಲೇಜಿನಲ್ಲಿ ಪ್ರವೇಶ ದೊರೆಯಬೇಕೆಂಬ ನಿರೀಕ್ಷೆಯೂ ಈ ಹಂತದಲ್ಲಿ ಸೃಷ್ಟಿಯಾಗುತ್ತದೆ. ಇಂತಹ ನಿರೀಕ್ಷೆಗಳು ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ಹಾಕುವ ಒತ್ತಡ  ಅಪಾರವಾದದ್ದು.  ಇದಕ್ಕಾಗಿಯೇ  ಐದು ವರ್ಷಗಳ ಹಿಂದೆ 10ನೇ  ತರಗತಿಯ ಕಡ್ಡಾಯ ಬೋರ್ಡ್‌ ಪರೀಕ್ಷೆ ರದ್ದುಗೊಳಿಸಲಾಗಿತ್ತು. ಆದರೆ ಪರೀಕ್ಷಾ ಸುಧಾರಣೆಯ ಈ  ಸಣ್ಣ ಪ್ರಯತ್ನಕ್ಕೂ ಆರಂಭದಿಂದಲೇ ಟೀಕೆಗಳು ವ್ಯಕ್ತವಾದವು.

ಈ ಪ್ರಯತ್ನವನ್ನು ಕಡೆಗಣಿಸಿದ ರಾಜ್ಯ ಮಂಡಳಿಗಳು ಅದರ ಹಿಂದಿನ ತತ್ವವನ್ನು ಮನಗಾಣದೇ ಹೋದವು.  50 ರಾಜ್ಯ ಮಂಡಳಿಗಳು ಹಾಗೂ ಅನೇಕ ಕೇಂದ್ರೀಯ ಮಂಡಳಿಗಳು  10ನೇ ತರಗತಿ ಕಡ್ಡಾಯ ಪರೀಕ್ಷೆಗಳನ್ನು ನಡೆಸುತ್ತಲೇ ಇವೆ. ಈ ವಿಚಾರದಲ್ಲಿ ಏಕರೂಪತೆ ಇಲ್ಲ.  ಹೀಗಾಗಿ ಕಳೆದ ವರ್ಷ 15 ಲಕ್ಷ  ವಿದ್ಯಾರ್ಥಿಗಳ ಪೈಕಿ 7 ಲಕ್ಷ ವಿದ್ಯಾರ್ಥಿಗಳು ಮಾತ್ರ ಶಾಲೆಗಳು ನಡೆಸುವ ಪರೀಕ್ಷೆ ಆಯ್ಕೆ ಮಾಡಿಕೊಂಡಿದ್ದರು. ಇಂತಹ ಸನ್ನಿವೇಶದಲ್ಲಿ ಈ ವ್ಯವಸ್ಥೆಯನ್ನು ಮುನ್ನಡೆಸುವುದರಲ್ಲಿ ಅರ್ಥವಿಲ್ಲ ಎಂಬುದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪ್ರತಿಪಾದನೆ. 

ಅಷ್ಟೇ ಅಲ್ಲ,  ಐದು ಮತ್ತು ಎಂಟನೇ ತರಗತಿಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಿ ‘ಪಾಸ್ – ಫೇಲ್’ ವ್ಯವಸ್ಥೆಯನ್ನು ಜಾರಿಗೊಳಿಸಲೂ  ಕೇಂದ್ರ ಮುಂದಾಗಿರುವುದು ಈಗ ಚರ್ಚೆಯ ಕೇಂದ್ರಬಿಂದುವಾಗಿದೆ.   ಜಗತ್ತಿನಲ್ಲಿ ಶಿಕ್ಷಣ ವ್ಯವಸ್ಥೆ ಹಾಗೂ ಬೋಧನಾ ಕ್ರಮಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ನಾವಿನ್ನೂ ಪರೀಕ್ಷಾ ಸಂಸ್ಕೃತಿಗೇ ಅಂಟಿಕೊಂಡಿದ್ದೇವೆ ಎಂಬುದು ವಿಪರ್ಯಾಸ.

ಶಿಕ್ಷಕರ ತರಬೇತಿಯ ಕೊರತೆ, ನಮ್ಮ ಹಳೆಯ ಪರೀಕ್ಷಾ ವ್ಯವಸ್ಥೆಗೆ ದೀರ್ಘವಾದ ಆಯುಷ್ಯವನ್ನು ದಯಪಾಲಿಸುತ್ತಲೇ ಇದೆ. ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಒಂದಿಷ್ಟು ಪ್ರಯತ್ನಗಳನ್ನು ನಡೆಸಿದಾಗಲೆಲ್ಲಾ ಸಾಂಸ್ಥಿಕ ಹಾಗೂ ರಾಜಕೀಯ ಶಕ್ತಿಗಳು ಒಟ್ಟಾಗಿ ಪ್ರತಿರೋಧ ತೋರಿ ಅದನ್ನು ನಗಣ್ಯಗೊಳಿಸಿಬಿಡುತ್ತಿರುವುದು ವಿಷಾದನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT