ಸುಸಂಬದ್ಧವಾದ ಸಾಹಿತ್ಯಕ ಚರ್ಚೆಯ ಕೊರತೆ

ಬೆಂಗಳೂರು ಸಾಹಿತ್ಯ ಹಬ್ಬದ ಬಗ್ಗೆ ನನಗೆ ಕುತೂಹಲವಿದ್ದುದು ಕಳೆದ ವರ್ಷದ ವಿವಾದ ಸಂದರ್ಭದಲ್ಲಿ ಅಭಿವ್ಯಕ್ತಿ ಪಡೆದ ಎರಡು ವಿಚಾರಗಳಿಂದ. ಮೊದಲನೆಯ ಪ್ರಶ್ನೆ ಕನ್ನಡನಾಡಿನ ಅತ್ಯಂತ ಪ್ರಮುಖ ನಗರದಲ್ಲಿ ನಡೆಯುವ ಈ ಸಾಹಿತ್ಯ ಹಬ್ಬವು ಕನ್ನಡ ಸಾಹಿತ್ಯ ಸಂಸ್ಕೃತಿಯ  ಜೊತೆಗೆ ಯಾವ ಬಗೆಯ ಸಂಬಂಧವನ್ನು ಕಟ್ಟಿಕೊಳ್ಳುತ್ತದೆ ಎನ್ನುವುದಾಗಿತ್ತು.

ಸುಸಂಬದ್ಧವಾದ ಸಾಹಿತ್ಯಕ ಚರ್ಚೆಯ ಕೊರತೆ

ಐದನೆಯ ಬೆಂಗಳೂರು ಸಾಹಿತ್ಯ ಹಬ್ಬವು ಕಳೆದ ವಾರಾಂತ್ಯದಲ್ಲಿ ಯಾವುದೇ ವಿವಾದಗಳಿಗೂ ಸಿಲುಕದೆ ನಡೆಯಿತು. ಎರಡು ದಿನಗಳಲ್ಲಿ ಸುಮಾರು 80 ಗಂಟೆಗಳಷ್ಟು ಚರ್ಚೆ, ಸಂವಾದ, ಪ್ರದರ್ಶನಗಳನ್ನು ನೂರಕ್ಕೂ ಹೆಚ್ಚು ಮಂದಿ ಬರಹಗಾರರು ನಡೆಸಿಕೊಟ್ಟರು. ಕವಿ ತಿರುಮಲೇಶ್ ಮತ್ತು ಆಂಗ್ಲ ಬರಹಗಾರ್ತಿ ಶಶಿ ದೇಶಪಾಂಡೆ ಸಾಹಿತ್ಯ ಹಬ್ಬಕ್ಕೆ ಚಾಲನೆ ನೀಡಿದರು. ಸುಮಾರು 15,000 ಸಾಹಿತ್ಯಾಸಕ್ತರು ಎರಡೂ ದಿನಗಳ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ್ದರು ಎನ್ನುವ ಅಂದಾಜು ಸಂಘಟಕರದು.

2015ರ ನಾಲ್ಕನೆಯ ಆವೃತ್ತಿಯ ಸಂದರ್ಭದಲ್ಲಿ ಹುಟ್ಟಿಕೊಂಡ ವಾದಗಳ ಹಿನ್ನೆಲೆಯಲ್ಲಿ ಬೆಂಗಳೂರು ಸಾಹಿತ್ಯ ಹಬ್ಬದ ಈ ಬಾರಿಯ ಆವೃತ್ತಿಯ ಬಗ್ಗೆ ಹೆಚ್ಚಿನ ಕುತೂಹಲವಿತ್ತು. ಕಳೆದ ನಾಲ್ಕು ಆವೃತ್ತಿಗಳ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕ್ರಮ್ ಸಂಪತ್  ಈ ಬಾರಿ ಹಿಂದೆ ಸರಿದಿದ್ದಲ್ಲದೆ, ಯಾವ ಗೋಷ್ಠಿಯಲ್ಲಿ ಭಾಗವಹಿಸಿದಂತೆಯೂ ಕಾಣಲಿಲ್ಲ. 2015ರಲ್ಲಿ ಭಾರತೀಯ ಸಾಹಿತಿಗಳು ಅಸಹನೆಯ ರಾಜಕಾರಣದ ವಿರುದ್ಧ ತಾವು ಪಡೆದಿದ್ದ ಪ್ರಶಸ್ತಿಗಳನ್ನು ವಾಪಸು ಮಾಡಿದ್ದರ ವಿರುದ್ಧ ಸಂಪತ್ ಮಾತನಾಡಿದ್ದರು. ಅವರ ನಿಲುವನ್ನು ಕನ್ನಡದ ಮೂವರು ಬರಹಗಾರರು,  ಓ. ಎಲ್. ನಾಗಭೂಷಣ ಸ್ವಾಮಿ, ಕೆ.ಟಿ. ದಯಾನಂದ ಮತ್ತು ಆರಿಫ್‌ ರಾಜಾ  ಪ್ರತಿಭಟಿಸಿ, ಬೆಂಗಳೂರು ಸಾಹಿತ್ಯ ಹಬ್ಬದಲ್ಲಿ ಭಾಗವಹಿಸಲು ತಾವು ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವೃತ್ತಪತ್ರಿಕೆಗಳು, ಟೆಲಿವಿಷನ್ ವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಬಿಸಿ ಚರ್ಚೆ ನಡೆಯಿತು ಎನ್ನುವುದನ್ನು ಸ್ಮರಿಸಿಕೊಳ್ಳಬಹುದು.

ಬೆಂಗಳೂರು ಸಾಹಿತ್ಯ ಹಬ್ಬದ ಬಗ್ಗೆ ನನಗೆ ಕುತೂಹಲವಿದ್ದುದು ಕಳೆದ ವರ್ಷದ ವಿವಾದ ಸಂದರ್ಭದಲ್ಲಿ ಅಭಿವ್ಯಕ್ತಿ ಪಡೆದ ಎರಡು ವಿಚಾರಗಳಿಂದ.

ಮೊದಲನೆಯ ಪ್ರಶ್ನೆ ಕನ್ನಡನಾಡಿನ ಅತ್ಯಂತ ಪ್ರಮುಖ ನಗರದಲ್ಲಿ ನಡೆಯುವ ಈ ಸಾಹಿತ್ಯ ಹಬ್ಬವು ಕನ್ನಡ ಸಾಹಿತ್ಯ ಸಂಸ್ಕೃತಿಯ  ಜೊತೆಗೆ ಯಾವ ಬಗೆಯ ಸಂಬಂಧವನ್ನು ಕಟ್ಟಿಕೊಳ್ಳುತ್ತದೆ ಎನ್ನುವುದಾಗಿತ್ತು. ಇಲ್ಲಿ ಕೇವಲ ಎಷ್ಟು ಕನ್ನಡ ಬರಹಗಾರರಿಗೆ ಅವಕಾಶ ದೊರಕುತ್ತದೆ ಎನ್ನುವುದು ಮಾತ್ರ ಮುಖ್ಯವಾಗಿರಲಿಲ್ಲ. ಗಮನಿಸಿ. ಕನ್ನಡದ ಲೇಖಕರಿಗೆ ಹೊರಗಿನ ಪ್ರಪಂಚದ ಬರಹಗಾರರೊಡನೆ ವೇದಿಕೆ ಹಂಚಿಕೊಳ್ಳುವ, ಅನುಸಂಧಾನ ಮಾಡುವ ಅಪರೂಪದ ಅವಕಾಶವನ್ನು ತಾವು ಬೆಂಗಳೂರು ಸಾಹಿತ್ಯ ಹಬ್ಬದ ಮೂಲಕ ಕಲ್ಪಿಸುತ್ತಿರುವುದಾಗಿ ವಿಕ್ರಮ್ ಸಂಪತ್ ಕಳೆದ ವರ್ಷ ಹೇಳಿಕೊಂಡಿದ್ದರು.

ಇಂತಹ ಅವಕಾಶಗಳನ್ನು ಒದಗಿಸುವ ಇತರ ವೇದಿಕೆಗಳು ಎಲ್ಲೂ ಇಲ್ಲ ಎನ್ನುವುದು ಅವರ ಮಾತಿನ ಮರ್ಮವಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷದ ಸಾಹಿತ್ಯ ಹಬ್ಬದಲ್ಲಿ ಕನ್ನಡ ಸಾಹಿತ್ಯ ಕುರಿತಾದ ಯಾವ ಬಗೆಯ ಚರ್ಚೆಗಳು ನಡೆಯುತ್ತವೆ ಎನ್ನುವುದನ್ನು ಗಮನಿಸಬಯಸಿದ್ದೆ.
ಎರಡನೆಯದಾಗಿ ಈ ಹಬ್ಬದಲ್ಲಿ ಯಾವ ಬಗೆಯ ಸಾಹಿತ್ಯ ಮತ್ತು ಪುಸ್ತಕ ಸಂಸ್ಕೃತಿಗಳ ಚರ್ಚೆಯಾಗುತ್ತದೆ ಎನ್ನುವ ಕುತೂಹಲ ನನಗಿತ್ತು. ಇದಕ್ಕೆ ಕಾರಣ ಕಳೆದ ವರ್ಷದ ವಿವಾದದ ಸಂದರ್ಭದಲ್ಲಿ ಬಲಪಂಥೀಯ ನಿಲುವುಗಳನ್ನು ಸಾರ್ವಜನಿಕವಾಗಿ ಬೆಂಬಲಿಸುತ್ತಿದ್ದ ವಿಕ್ರಮ್ ಸಂಪತ್ ತಾನು ಬೆಂಗಳೂರು ಸಾಹಿತ್ಯ ಹಬ್ಬದ ಮೂಲಕ ನಗರದ ಕಡೆಯ ‘ಸೆಂಟ್ರಿಸ್ಟ್’ ವೇದಿಕೆಯನ್ನು ತಾನು ಸೃಷ್ಟಿಸುತ್ತಿದ್ದೇನೆ ಎನ್ನುವ ಮಾತುಗಳನ್ನು ಆಡಿದ್ದು. ಅಂದರೆ ಸಿದ್ಧಾಂತಗಳಿಂದ ದೂರವಿದ್ದ ವೇದಿಕೆಯೊಂದನ್ನು ಕಟ್ಟುತ್ತ, ಅದರಲ್ಲಿ ಎಲ್ಲ ಸೈದ್ಧಾಂತಿಕ ಹಿನ್ನೆಲೆಯವರೂ ಚರ್ಚಿಸುವ ಅವಕಾಶ ಕಲ್ಪಿಸುವುದು ತನ್ನ ಉದ್ದೇಶ ಎಂದು ಅವರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಾಹಿತ್ಯ ಹಬ್ಬವು ಯಾವ ಬಗೆಯ ಹೊಸ ಗುಣಲಕ್ಷಣಗಳನ್ನು ತನ್ನದಾಗಿಸಿಕೊಳ್ಳುತ್ತದೆ ಎನ್ನುವುದನ್ನು ನೋಡಬಯಸಿದ್ದೆ.

ಐದನೆಯ ಆವೃತ್ತಿಯ ಸಂಘಟಕರಿಗೆ ಕನ್ನಡದ ಬರಹಗಾರರ ಪಾಲ್ಗೊಳ್ಳುವಿಕೆಯ ಬಗ್ಗೆ ಆತಂಕಗಳಿದ್ದವು, ಪ್ರಾತಿನಿಧ್ಯ ನೀಡುವ ಕುರಿತಾಗಿ ಎಚ್ಚರವಿತ್ತು ಎನ್ನುವುದನ್ನು ನಾನು ಕೇಳಿತಿಳಿದಿದ್ದೆ. ಆದರೂ ಕನ್ನಡ ಸಾಹಿತ್ಯ ಕೇಂದ್ರಿತ ಗೋಷ್ಠಿಗಳು ಇದ್ದುದು ಕಡಿಮೆಯೇ. ಚಂದನ್ ಗೌಡ ಅವರು ಇಂಗ್ಲಿಷಿಗೆ ಅನುವಾದಿಸಿರುವ ಅನಂತಮೂರ್ತಿಯವರ ನೀಳ್ಗತೆ ‘ಬರ’ದ ಮೇಲೆ ಹಾಗೂ (ನಾನು ಭಾಗವಹಿಸಿದ್ದ) ‘ಕರ್ನಾಟಕವನ್ನು ಅನುವಾದಿಸುವುದು’ ಎನ್ನುವ ವಿಚಾರದ ಕುರಿತಾಗಿ ಎರಡು ಗೋಷ್ಠಿಗಳಿದ್ದವು. ಇವುಗಳ ಹೊರತಾಗಿ, ಪ್ರತಿಭಾ ನಂದಕುಮಾರ್ ಹಾಗೂ ವಿವೇಕ್ ಶಾನಭಾಗ್, ಎಂ.ಎಸ್. ಶ್ರೀರಾಮ್ ಮತ್ತು ಎಸ್. ದಿವಾಕರ್ ಅರ್ಧ ಗಂಟೆ ಕಾಲಾವಧಿಯ ಎರಡು ಸಂವಾದ ಗೋಷ್ಠಿಗಳಲ್ಲಿ ಪಾಲ್ಗೊಂಡರು. ಈ ಆವೃತ್ತಿಯನ್ನು ಉದ್ಘಾಟಿಸಿದ ತಿರುಮಲೇಶ್ ಅವರೂ ಸೇರಿದಂತೆ ಕನ್ನಡದ ಬರಹಗಾರರಿಗೆ ಕನ್ನಡೇತರ ಸಾಹಿತಿ, ಬರಹಗಾರರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಅವಕಾಶಗಳು ದೊರಕಿದ್ದು ಮೂರು-ನಾಲ್ಕು ಮಾತ್ರ. ನಮಗೆ ಸ್ಪಷ್ಟವಾಗುವ ಅಂಶಗಳು ಇಷ್ಟು. ಕನ್ನಡ ಸಾಹಿತ್ಯ ಪರಂಪರೆಯ ಗಂಭೀರ ಚರ್ಚೆಯಾಗಲಿ, ಇಂದಿನ ಕನ್ನಡ ಸಾಹಿತ್ಯದಲ್ಲಿ ನಡೆಯುತ್ತಿರುವ ಪ್ರಯೋಗಗಳೇನು ಎನ್ನುವುದಾಗಲಿ ಇಲ್ಲಿ ಮುಖ್ಯವಾಗಿರಲಿಲ್ಲ. ಜೊತೆಗೆ ಪ್ರಾತಿನಿಧ್ಯ ದೊರಕಿದ್ದು ಸಹ ಇಂಗ್ಲಿಷ್ ಬರುವ ಕನ್ನಡ ಬರಹಗಾರರಿಗೆ ಮಾತ್ರ. 

ಕನ್ನಡದ ಸ್ಥಾನ ಈ ಸಾಹಿತ್ಯ ಹಬ್ಬದ ಅಂಚುಗಳಲ್ಲಿತ್ತು ಎನ್ನುವುದು ಒಂದೆಡೆಯಾದರೆ, ಯಾವ ಬಗೆಯ ಚರ್ಚೆಗಳು ಇಲ್ಲಿ ನಡೆದವು, ಚರ್ಚೆಗಳಲ್ಲಿ ಭಾಗವಹಿಸಿದವರು ಯಾರು ಎನ್ನುವುದು ಮತ್ತೊಂದು ಕುತೂಹಲದ ಅಂಶ. ಗಮನಿಸಿ. ಶಶಿ ತರೂರ್, ರಾಮಚಂದ್ರ ಗುಹಾರಂತಹ ಉದಾರವಾದಿ ಬರಹಗಾರರ ಜೊತೆಗೆ ರಾಜೀವ್ ಮಲ್ಹೋತ್ರ ಮತ್ತು ಸಂಜೀವ್ ಸನ್ಯಾಲ್ ರಂತಹ ಬಲಪಂಥದ ಒಲವಿರುವವರು ಇಲ್ಲಿದ್ದರು. ಬೆಜವಾಡ ವಿಲ್ಸನ್‌ರಂತಹ ಸಾಮಾಜಿಕ ಕಾರ್ಯಕರ್ತರ ಜೊತೆಗೆ ಐಶ್ವರ್ಯ ರಜನಿಕಾಂತ್ ಧನುಷ್‌ರಂತಹ ‘ಸೆಲೆಬ್ರಿಟಿ’ಗಳೂ ಸ್ಥಾನ ಪಡೆದರು. ಅಲ್ಲದೆ ಚೇತನ್ ಭಗತ್, ಸುಧಾ ಮೂರ್ತಿ, ಮೋಹನದಾಸ್  ಪೈ, ಆಕಾರ್ ಪಟೇಲ್ ಇತ್ಯಾದಿ ವಿಭಿನ್ನ ಹಿನ್ನೆಲೆಯ ಬರಹಗಾರರು, ಸಾಮಾಜಿಕ ಅಸ್ತಿತ್ವವನ್ನು ಹೊಂದಿರುವವರು ಪಾಲ್ಗೊಂಡರು. ಅಲ್ಲದೆ ಮಕ್ಕಳ ಸಾಹಿತ್ಯ, ಪೌರಾಣಿಕ ಕಥನಗಳ ಕುರಿತಾದ ಹೊಸ ಬರವಣಿಗೆಗಳು ...ಹೀಗೆ ಹಲವಾರು ವಿಷಯಗಳ ಬಗ್ಗೆ ಗೋಷ್ಠಿಗಳು ನಡೆದವು.

ಸಾಹಿತ್ಯ ಹಬ್ಬವೆಂಬ ನಾಮಧೇಯವನ್ನು ಹೊಂದಿದ್ದರೂ, ಈ ಆವೃತ್ತಿಯಲ್ಲಿ ನಡೆದ ಚರ್ಚೆಗಳು ಇಂಗ್ಲಿಷ್ ನಲ್ಲಿ ಪ್ರಕಟವಾಗುವ (ಪಠ್ಯಪುಸ್ತಕಗಳನ್ನು ಹೊರತುಪಡಿಸಿ) ಎಲ್ಲ ಬಗೆಯ ಪುಸ್ತಕಗಳ ಕುರಿತಾದವು ಆಗಿದ್ದವು. ಅಂದರೆ ಸಾಹಿತ್ಯ ಸಂಸ್ಕೃತಿಯ ಗಂಭೀರ ಚರ್ಚೆಯೆನ್ನುವುದಕ್ಕಿಂತಲೂ, ಪ್ರಕಾಶನ ಸಂಸ್ಥೆಗಳು ಪ್ರಕಟಿಸುತ್ತಿರುವ ಕೃತಿಗಳು ಮತ್ತು ಪ್ರೋತ್ಸಾಹಿಸುತ್ತಿರುವ ಬರಹಗಾರರ ಸುತ್ತಲಿರುತ್ತಿತ್ತು. ಈ ಮಾತುಗಳನ್ನು ದಾಖಲಿಸುವಾಗ, ಇಲ್ಲಿ ನಡೆದ ಗೋಷ್ಠಿಗಳಲ್ಲಿನ ಚರ್ಚೆಗಳ ಗುಣಮಟ್ಟ ಉತ್ತಮವಾಗಿರಲಿಲ್ಲ ಎನ್ನುತ್ತಿಲ್ಲ. ಬದಲಿಗೆ, ಸುಸಂಬದ್ಧವಾದ ಸಾಹಿತ್ಯಕ ಚರ್ಚೆ ಇಲ್ಲಿ ನಡೆಯಲಿಲ್ಲ ಎನ್ನುವುದನ್ನು ಗುರುತಿಸಬಯಸುತ್ತೇನೆ. ಬಹುಶಃ ಇದು  ಭಾರತದ ಬೇರೆ ಬೇರೆ ನಗರಗಳಲ್ಲಿ ನಡೆಯುತ್ತಿರುವ ಸಾಹಿತ್ಯ ಹಬ್ಬಗಳೆಲ್ಲವುಗಳಲ್ಲಿಯೂ ಕಾಣಬರುವ ಸಾಮಾನ್ಯ ಅಂಶವಿರಬಹುದು.

ಅಂದರೆ ಇಂಗ್ಲಿಷ್‌ನಲ್ಲಿ ಪ್ರಕಟಿಸುತ್ತಿರುವ ಪ್ರಕಾಶಕರ ಆದ್ಯತೆಗಳು, ಅವರು ಮುಂಚೂಣಿಗೆ ತರಬಯಸುವ ಲೇಖಕರು ಇಂತಹ ಸಮ್ಮೇಳನಗಳಲ್ಲಿ ಕಾಣಬರುತ್ತಿದ್ದಾರೆ. ಸ್ಥಾಪಿತ ಖ್ಯಾತನಾಮರಿರಲಿ ಅಥವಾ ಈಗ ತಾನೆ ಪ್ರಕಟಗೊಳ್ಳುತ್ತಿರುವ ಬರಹಗಾರರಿಗಿರಲಿ. ತಮ್ಮನ್ನು ಸ್ಥಾಪಿಸಿಕೊಳ್ಳುವ ಇಲ್ಲವೆ ಮರುಸ್ಥಾಪಿಸಿಕೊಳ್ಳುವ ಅಗತ್ಯದಿಂದ, ತಮ್ಮ ಕೃತಿಗಳಿಗೆ ಪ್ರಚಾರ ಒದಗಿಸುವ ಕಾರಣದಿಂದ ಬರಹಗಾರರು ಈ ಹಬ್ಬಗಳಲ್ಲಿ ಭಾಗವಹಿಸುತ್ತಾರೆ. ಹೀಗೆ ಮಾರುಕಟ್ಟೆ ಕೇಂದ್ರಿತ ಘಟನೆಯೆಂದು ಈ ಹಬ್ಬಗಳನ್ನು ಗುರುತಿಸುವಾಗ, ಇದನ್ನು ಸೈದ್ಧಾಂತಿಕ ನೆಲೆಗಟ್ಟಿನ ಟೀಕೆಯಾಗಿ ನಾನು ಓದುಗರ ಮುಂದಿಡುತ್ತಿಲ್ಲ. ಬದಲಿಗೆ, ಇಂತಹ ಸಾಹಿತ್ಯ ಹಬ್ಬಗಳ ಪ್ರಮುಖ ‘ಗುಣಲಕ್ಷಣ’ವಿದು ಎಂದು ಗುರುತಿಸಬಯಸುತ್ತೇನೆ.

ಇದಕ್ಕೆ ಪ್ರತಿಯಾಗಿ, ಪ್ರತಿವರ್ಷವೂ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನವನ್ನೊ ಅಥವಾ ಧಾರವಾಡದಲ್ಲಿ ನಡೆಯುವ ಸಾಹಿತ್ಯ ಸಂಭ್ರಮವನ್ನೊ ಗಮನಿಸಿ. ಅಲ್ಲಿ ಯಾರೂ ತಮ್ಮ ಪುಸ್ತಕಗಳನ್ನು ಮಾರಾಟ ಮಾಡಲೆಂದು ಅಥವಾ ತಮ್ಮ ಹೊಸ ಪುಸ್ತಕಕ್ಕೆ ಪ್ರಚಾರ ಬಯಸಿ ಭಾಗವಹಿಸುವುದಿಲ್ಲ. ಭೈರಪ್ಪನವರಾಗಲಿ ಅಥವಾ ಕುಂ.ವೀ.ಯವರಾಗಲಿ, ಅವರ ಕೃತಿಗಳು ಪ್ರಕಟವಾಗುವುದೇ ಒಂದು ಘಟನೆ, ವಿದ್ಯಮಾನ; ಅವು ಅವರ ಸೃಜನಶೀಲತೆಯನ್ನು ಹಾಗೂ ಬರಹಗಾರನೆಂಬ ಅಸ್ತಿತ್ವವನ್ನು ಸಿದ್ಧಪಡಿಸುವ, ಭದ್ರಪಡಿಸುವ ಸಾಧನಗಳು. ಈ ಮಾತು ಉದಯೋನ್ಮುಖ ಬರಹಗಾರರ ವಿಚಾರದಲ್ಲಿಯೂ ಸತ್ಯ. ಹಾಗಾಗಿಯೇ ಬೆಂಗಳೂರು ಸಾಹಿತ್ಯ ಹಬ್ಬಕ್ಕೆ ಒಂದು ವಾರ ಮೊದಲು ರಾಯಚೂರಿನಲ್ಲಿ ನಡೆದ  ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷಾಂತರ ಜನರು ಕನ್ನಡ ಸಾಹಿತಿಗಳ ಮಾತುಗಳನ್ನು ಕೇಳಿದರು. ‘ಸೆಲ್ಫಿ’ ತೆಗೆದುಕೊಂಡು ಸಂಭ್ರಮಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಹಲವು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷಿಕರ ರಾಜಕೀಯ ಏಕೀಕರಣ, ಕನ್ನಡ ನುಡಿ -ಸಾಹಿತ್ಯಗಳ ಉಳಿವು, ಅಭಿವೃದ್ಧಿ ಮತ್ತು ಔನ್ನತ್ಯ, ಕನ್ನಡ ಬೌದ್ಧಿಕ ಪರಂಪರೆಯನ್ನು ಕಟ್ಟುವ ಮಹತ್ವಾಕಾಂಕ್ಷೆ, ಕನ್ನಡಿಗರ ಸಂಪನ್ಮೂಲಗಳನ್ನು ಸರಿಯಾಗಿ ಬಳಸಬೇಕೆನ್ನುವ ಕಾಳಜಿ - ಇವುಗಳನ್ನೆಲ್ಲ ಒಳಗೊಂಡ ವೇದಿಕೆಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ರೂಪುಗೊಂಡಿದೆ.

ಇಲ್ಲಿ ಸಹ ಸಂಭ್ರಮ ಹೆಚ್ಚಾಗಿದೆ, ಮೌಲಿಕ ಚರ್ಚೆಗಳು ಕಡಿಮೆಯಾಗಿವೆ, ರಚನಾತ್ಮಕವಾದ ಪರಿಹಾರಗಳು ಮೂಡುತ್ತಿಲ್ಲ ಎನ್ನುವ ಕೂಗು ಆಗಾಗ ಕೇಳಿಬರುತ್ತಿವೆ. ಆದರೂ ಕನ್ನಡನಾಡಿನ ಮೂಲೆಮೂಲೆಗಳಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ತಲುಪಿಸುವಲ್ಲಿ ಮತ್ತು ಕನ್ನಡದ ಪ್ರಜ್ಞೆಯನ್ನು ವಿಸ್ತರಿಸುವಲ್ಲಿ ಸಾಹಿತ್ಯ ಸಮ್ಮೇಳನಗಳ ಪಾತ್ರ ಅಪಾರವಾದುದು. ಇದು ಎಲ್ಲ ಭಾರತೀಯ ಭಾಷೆಗಳಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳ ವಿಚಾರದಲ್ಲಿಯೂ ಸತ್ಯ.

ಇಂತಹ ಸಾಹಿತ್ಯಕ ಚಟುವಟಿಕೆಗಳ ಇತಿಹಾಸವನ್ನು ಬೆಂಗಳೂರು ಸಾಹಿತ್ಯ ಹಬ್ಬದಂತಹ ಸಮ್ಮೇಳನಗಳ ಸಂಘಟಕರು ಅವಲೋಕಿಸುವುದು ಒಳ್ಳೆಯದು. ಆಗ ಸಾಹಿತ್ಯ-ಪುಸ್ತಕ ಸಂಸ್ಕೃತಿಗಳ ಚರ್ಚೆಗೆ ಹೊಸದನ್ನು ನೀಡುವ ಚೈತನ್ಯ ದೊರಕುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

ನಿಜದನಿ
ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

26 Jan, 2018

ನಿಜದನಿ
ಮಹಾರರು ಎದುರಿಸುವ ಪರೀಕ್ಷೆ ರಾಜ ಮನೆತನಗಳಿಗಿಲ್ಲ

ರಾಷ್ಟ್ರಪ್ರೇಮವನ್ನು ‘ದುರ್ಜನರು ಕಡೆಯಲ್ಲಿ ಆಶ್ರಯಿಸುವ ವಿದ್ಯಮಾನ’ ಎನ್ನುತ್ತಾನೆ ಸ್ಯಾಮ್ಯುಯೆಲ್ ಜಾನ್ಸನ್. ನಾವು ಆ ಅತಿಗೆ ಹೋಗಬೇಕಿಲ್ಲ....

12 Jan, 2018
ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ

ನಿಜದನಿ
ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ

29 Dec, 2017
ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

ನಿಜದನಿ
ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

15 Dec, 2017
ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

ನಿಜದನಿ
ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

30 Nov, 2017