ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಸಕರ ಬೈಕ್‌ ಸವಾರಿ

ನಾನು ಮತ್ತು ವರಲಕ್ಷ್ಮಿ
Last Updated 23 ಡಿಸೆಂಬರ್ 2016, 11:25 IST
ಅಕ್ಷರ ಗಾತ್ರ

ನಾನು ಮತ್ತು ವರಲಕ್ಷ್ಮಿ
ನಿರ್ದೇಶಕ: ಪ್ರೀತಂ ಗುಬ್ಬಿ
ನಿರ್ಮಾಪಕ: ಮಂಜುನಾಥ್‌ ಕೆ.
ತಾರಾಗಣ: ಪೃಥ್ವಿ, ಮಾಳವಿಕಾ, ಪ್ರಕಾಶ್‌ ರೈ, ಅಚ್ಯುತರಾವ್‌

ಓದಿಗಿಂತಲೂ ಬೈಕ್‌ ರೇಸ್‌ ಮುಖ್ಯ ಎಂದು ಪರೀಕ್ಷೆಯ ದಿನವೇ ಸ್ಪರ್ಧೆಗೆ ಹೋಗುವ ಮಗನಿಗೆ ಅಪ್ಪನ ಬೆಂಬಲವಿದೆ. ಅಮ್ಮನೂ ಅಪ್ಪನಿಗೆ ತಿಳಿಯದಂತೆ ಬೆನ್ನುತಟ್ಟುತ್ತಾಳೆ. ರೇಸ್‌ಗೆ ತೆರಳುವ ಮಾರ್ಗಮಧ್ಯೆ ರೈಲಿನಲ್ಲಿ ಊಹೆಯಂತೆಯೇ ನಾಯಕಿ ಸಿಗುತ್ತಾಳೆ. ಅವರ ನಡುವೆ ಪ್ರೀತಿ ಮೊಳೆಯುವುದು ಕಷ್ಟವೇನಲ್ಲ. ಪ್ರೀತಿಗಾಗಿ ನಾಯಕಿಯ ಅಣ್ಣನ ಎದುರು ರೇಸ್‌ನಲ್ಲಿ ಸೋಲುವ ನಾಯಕನಿಗೆ ಎದುರಾಗುವುದು ಪ್ರತಿಷ್ಠಿತ ರೇಸ್‌ನಲ್ಲಿ ಗೆಲ್ಲುವ ಸವಾಲು. ಅಣ್ಣನ ಸವಾಲಿಗೆ ತನ್ನ ಪ್ರೇಮಿ ಸೋಲಬಾರದು ಎನ್ನುವುದು ಆಕೆಯ ಗುರಿ.

ಆತನನ್ನು ಬೈಕ್‌ ರೇಸ್‌ನ ಮಾಜಿ ಚಾಂಪಿಯನ್‌, ತನ್ನ ತಂದೆಯ ಬಳಿ ಕಳುಹಿಸುತ್ತಾಳೆ. ‘ಪ್ರೀತಿಗಾಗಿ ರೇಸ್‌ನಲ್ಲಿ ಗೆಲ್ಲುವ ಛಲ ತೋರಿಸುವ ಯುವಕ’ ಎಂಬ ಖುಷಿಯಿಂದ ಗೆಲ್ಲುವ ಪಟ್ಟುಗಳನ್ನು ಹೇಳಿಕೊಡುವ ತಂದೆಗೆ ಆತ ಪ್ರೀತಿಸುತ್ತಿರುವುದು ತನ್ನ ಮಗಳನ್ನೇ ಎಂಬುದು ತಿಳಿದಿಲ್ಲ. ಅತ್ತ ಪತಿಯಿಂದ ದೂರವಿರುವ ನಾಯಕಿಯ ಅಮ್ಮನಿಗೆ ಮಗನಿಗಿಂತಲೂ, ತನ್ನ ಮಗಳನ್ನು ನಿಷ್ಕಲ್ಮಶವಾಗಿ ಪ್ರೀತಿಸುವ ಹುಡುಗನೇ ಗೆಲ್ಲಲಿ ಎಂಬ ಆಸೆ. ಸ್ಪರ್ಧೆಯ ಫಲಿತಾಂಶ ಮತ್ತು ಅಂತ್ಯವನ್ನು ಸವಾಲು ಹಾಕುವ ದ್ವಿತೀಯಾರ್ಧದ ಆರಂಭದಲ್ಲೇ ಸುಲಭವಾಗಿ ಊಹಿಸಬಹುದಾಗಿರುವುದರಿಂದ ಅದು ಅಚ್ಚರಿಯನ್ನೇನೂ ನೀಡಲಾರದು.

‘ಬಾಕ್ಸರ್‌’ ಚಿತ್ರದ ಮೂಲಕ ಆ್ಯಕ್ಷನ್‌ ಪ್ರಯೋಗ ನಡೆಸಿದ್ದ ನಿರ್ದೇಶಕ ಪ್ರೀತಂ ಗುಬ್ಬಿ, ‘ನಾನು ಮತ್ತು ವರಲಕ್ಷ್ಮಿ’ಯಲ್ಲಿ ತಮ್ಮ ಹಿಂದಿನ ಶೈಲಿಗೆ ಮರಳಿದ್ದಾರೆ. ಇಲ್ಲಿ ಕಥೆ ಹೇಳುವ ಶೈಲಿ ಮಾತ್ರವಲ್ಲ, ಸನ್ನಿವೇಶಗಳೂ ಅವರ ‘ಹಾಗೆ ಸುಮ್ಮನೆ’, ‘ಜಾನು’ ಚಿತ್ರಗಳ ಛಾಯೆಯನ್ನು ತೋರಿಸುತ್ತವೆ. ಅವರ ಸಿನಿಮಾಗಳು ಸಾಮಾನ್ಯವಾಗಿ ಪಯಣದ ಹಂದರವನ್ನು ನೆಚ್ಚಿಕೊಂಡಿರುತ್ತವೆ. ಇಲ್ಲಿಯೂ ಅದು ನಾಯಕ–ನಾಯಕಿಯನ್ನು ಬೆಸೆಯುವ ನೆಪದಲ್ಲಿ ಕೂಡಿಕೊಂಡಿದೆ. ಪಯಣದ ನಡುವೆ ಸಿಗುವ ಗಂಡ–ಹೆಂಡತಿಯ (ಸುಚೇಂದ್ರ ಪ್ರಸಾದ್‌ ಮತ್ತು ಸಂಗೀತಾ) ಸಂಬಂಧದ ಚಿತ್ರಣ ಹೆಚ್ಚು ಆಪ್ತವೆನಿಸುತ್ತದೆ. ಈ ಭಾವತೀವ್ರತೆ ಮತ್ತೊಂದು ವಯಸ್ಕ ಜೋಡಿಯ ಸಂಬಂಧದ ಚಿತ್ರಣದಲ್ಲಿ ಪರಿಣಾಮಕಾರಿಯಾಗಿಲ್ಲ.

ಹುಡುಗಾಟಿಕೆಯ ವ್ಯಕ್ತಿತ್ವದ ಯುವಕ ಪ್ರೀತಿಯನ್ನು ಗಂಭೀರವಾಗಿ ಸ್ವೀಕರಿಸುವ ಮತ್ತು ಅದನ್ನು ಉಳಿಸಿಕೊಳ್ಳಲು ಹೋರಾಡುವ ತೆಳು ಕಥೆಯನ್ನು ಹೇಳುವಲ್ಲಿ ನಿರ್ದೇಶಕರ ಅನುಕೂಲಸಿಂಧುತ್ವ ಕಾಣಿಸುತ್ತದೆ. 

ನವ ನಟ ಪೃಥ್ವಿ ಅವರಲ್ಲಿ ಉತ್ಸಾಹ ಕಂಡರೂ ಅದು ಅಭಿನಯದ ಪೂರ್ಣತೆಯನ್ನು ದಕ್ಕಿಸಿಕೊಳ್ಳುವಲ್ಲಿ ವಿಫಲವಾಗಿದೆ. ನಗುವಿನಲ್ಲಿ ಅರಳುವ ಮಾಳವಿಕಾ ಅಭಿನಯದಲ್ಲಿ ಮುದುಡುತ್ತಾರೆ. ಪ್ರಕಾಶ್‌ ರೈ ಗಡಸುತನ, ಅಚ್ಯುತರಾವ್ ತುಂಟತನ ಇಷ್ಟವಾಗುತ್ತವೆ. ಸಾಧುಕೋಕಿಲ ಅಪರೂಪಕ್ಕೆ ಸಹನೀಯ ಎನಿಸಿದ್ದಾರೆ. ಹರಿಕೃಷ್ಣ ಸಂಗೀತದಲ್ಲಿ ಎರಡು ಹಾಡುಗಳು ಇಷ್ಟವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT