ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧಗಳ ಸಂಘರ್ಷದ ಪ್ರಶ್ನೋತ್ತರ

ನಿರುತ್ತರ
Last Updated 23 ಡಿಸೆಂಬರ್ 2016, 11:28 IST
ಅಕ್ಷರ ಗಾತ್ರ

ನಿರುತ್ತರ
ನಿರ್ಮಾಪಕರು: ಅರವಿಂದ್‌ ರಾಮಣ್ಣ
ನಿರ್ದೇಶಕ: ಅಪೂರ್ವ ಕಾಸರವಳ್ಳಿ
ತಾರಾಗಣ: ಭಾವನಾ ರಾಮಣ್ಣ, ಕಿರಣ್‌ ಶ್ರೀನಿವಾಸ್‌, ಐಂದ್ರಿತಾ ರೇ, ರಾಹುಲ್‌ ಬೋಸ್‌

ದಾಂಪತ್ಯದಲ್ಲಿ ಬಿರುಕು ಮೂಡಿದಾಗ ಗಂಡ–ಹೆಂಡತಿ ನಡುವೆ ಮೂರನೆಯವರು ಪ್ರವೇಶಿಸುವ, ಹೆಂಡತಿ ತನಗಿಂತ ಕಿರಿಯ ಹುಡುಗನ ಜತೆ ಸಂಬಂಧ ಬೆಳೆಸುವ ಕಥೆಗಳನ್ನು ಇಟ್ಟುಕೊಂಡ ಸಿನಿಮಾಗಳು ಸಾಕಷ್ಟು ಬಂದಿವೆ. ‘ನಿರುತ್ತರ’ ಅಂಥದ್ದೇ ಕಥನದ ಎಳೆಯನ್ನು ಇರಿಸಿಕೊಂಡಿದ್ದರೂ ಪ್ರೇಮ ಸಂಬಂಧದ ಹಲವು ಆಯಾಮಗಳನ್ನು ಇಂದಿನ ಆಧುನಿಕ ಬದುಕಿನ ಸಂದರ್ಭದಲ್ಲಿಟ್ಟು ಪರೀಕ್ಷಿಸುವ ರೀತಿಯಿಂದಾಗಿ ಭಿನ್ನವಾಗಿ ನಿಲ್ಲುತ್ತದೆ. ಹೆಣ್ಣಿನ ಬದುಕನ್ನು ನೋಡುವ ಪುರುಷಪ್ರಧಾನ ‘ದೃಷ್ಟಿಕೋನ’ ಮತ್ತು ಅವಳ ಜೊತೆಗಿನ ಸಂಬಂಧವನ್ನು ಪರಿಭಾವಿಸುವ ರೂಢಿಗತ ಕ್ರಮವನ್ನೂ ಈ ಸಿನಿಮಾ ದಿಟ್ಟವಾಗಿ ಪ್ರಶ್ನಿಸುತ್ತದೆ.

ಶ್ರಾವ್ಯಾ (ಐಂದ್ರಿತಾ ರೇ) ಭಾರತದ ಬೇರೆ ಬೇರೆ ಸ್ಥಳಗಳಲ್ಲಿನ ಅಪರೂಪದ ಜಾನಪದ ಸಂಗೀತ ಪ್ರಕಾರಗಳ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಹೊರಟಿದ್ದಾಳೆ. ಅವಳ ಸ್ನೇಹಿತೆ ಹಂಸ (ಭಾವನಾ ರಾಮಣ್ಣ) ಕೂಡ ಅವಳ ಜೊತೆಯಾಗಿದ್ದಾಳೆ. ಶ್ರಾವ್ಯಾಳ ಸ್ನೇಹಿತ ಅಚಿಂತ್‌ (ಕಿರಣ್‌ ಶ್ರೀನಿವಾಸ್‌) ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಬಂದು ರಾಕ್‌ ಬ್ಯಾಂಡ್‌ ಕಟ್ಟಿಕೊಂಡು ಕಾರ್ಯಕ್ರಮ ನೀಡುತ್ತಿರುವ ಹುಡುಗ. ಮದುವೆಯೊಂದರಲ್ಲಿ ಕಂಡ ಹಂಸಳನ್ನು ಹೇಗಾದರೂ ಒಲಿಸಿಕೊಳ್ಳಬೇಕು ಎಂಬ ಉದ್ದೇಶದಿಂದಲೇ ಅವನು ಶ್ರಾವ್ಯಾಳ ಜತೆ ಸಾಕ್ಷ್ಯಚಿತ್ರ ತಯಾರಿಗೆ ಬರಲು ಒಪ್ಪಿಕೊಂಡಿದ್ದಾನೆ. ಈ ಪ್ರವಾಸದ ಮಧ್ಯೆಯೇ ಹಂಸ ವಿವಾಹಿತೆ ಎಂಬ ಸಂಗತಿ ಅಚಿಂತ್‌ಗೆ ತಿಳಿಯುತ್ತದೆ. ಆದರೂ ಅವಳನ್ನು ಬಿಟ್ಟಿರಲಾರದ ಮನಸ್ಥಿತಿ ಅವನದು. ದಾಂಪತ್ಯದ ನಡುವಿನ ಬಿರುಕು ಮರೆಸಲು ಅವಳಿಗೂ ಒಂದು ಸಂಗಾತ ಬೇಕಾಗಿದೆ.

ಪ್ರಥಮಾರ್ಧದಲ್ಲಿ ಸಾಕ್ಷ್ಯಚಿತ್ರ ಮಾಡುವವರು ಹಿಮಾಚಲ ಪ್ರದೇಶದಿಂದ, ರಾಜಸ್ತಾನಕ್ಕೆ ಅಲ್ಲಿಂದ ಗೋವಾಕ್ಕೆ ತೆರಳಿದಷ್ಟು ವೇಗವಾಗಿ ಚಿತ್ರದ ಕಥೆ ಸಾಗುವುದಿಲ್ಲ. ಅಲ್ಲಲ್ಲೇ ಸುತ್ತಿ ಸುಳಿದು ಬೇಸರ ಹುಟ್ಟಿಸುತ್ತದೆ. ದ್ವಿತೀಯಾರ್ಧದಲ್ಲಿ ಹಂಸ ದಾಂಪತ್ಯ ಕಥನ ಅನಾವರಣಗೊಳ್ಳುತ್ತದೆ. ಅಲ್ಲಿಂದ ಕಥೆ ಹೆಚ್ಚು ಚುರುಕಾಗುತ್ತದೆ. ಫ್ಲಾಶ್‌ಬ್ಯಾಕ್‌ ಮತ್ತು ಸದ್ಯವನ್ನು ಎಲ್ಲಿಯೂ ಗೊಂದಲಕ್ಕೆ ಎಡೆಯಾಗದಂತೆ ನಿರ್ದೇಶಕರು ಸೊಗಸಾಗಿ ಹೆಣೆದು ಕಥೆ ಹೇಳಿದ್ದಾರೆ.

ಸಂಪಾದನೆ ಹಿಂದೆ ಬಿದ್ದು ಪ್ರೇಮದ ಒರತೆಯನ್ನು ಬತ್ತಿಸಿಕೊಂಡವರ ದಾಂಪತ್ಯ ಬದುಕಿನ ಅರ್ಥಹೀನತೆ ಮತ್ತು ಸಮಾಜದ ರಿವಾಜಿನಲ್ಲಿ ‘ಅನೈತಿಕ’ ಎಂದು ಪರಿಗಣಿತವಾಗುವ ಸಂಬಂಧದಲ್ಲಿಯೂ ಇರಬಹುದಾದ ಜೀವಂತಿಕೆ ಹಂಸಳ ಬದುಕಿನಲ್ಲಿ ಮುಖಾಮುಖಿಯಾಗುತ್ತವೆ. ಆದರೆ ಮನೆಯವರ ವಿರೋಧವನ್ನೂ ಲೆಕ್ಕಿಸದೇ ಕಟ್ಟಿಕೊಂಡ ದಾಂಪತ್ಯದಿಂದ ಅವಳು ವಿಮುಖಳಾಗಿ ಅಚಿಂತ್‌ನ ತೆಕ್ಕೆಗೆ ಸರಿಯುವುದನ್ನು ಸಮರ್ಥಿಸಿಕೊಳ್ಳುವಾಗ ಮಾತ್ರ ನಿರ್ದೇಶಕರು ಹಗುರವಾದ ಜನಪ್ರಿಯ ಸೂತ್ರಗಳಿಗೆ ಜೋತುಬಿದ್ದಿದ್ದಾರೆ. ಗಂಡ ಪ್ರದೀಪ್‌ನ (ರಾಹುಲ್‌ ಬೋಸ್‌) ಮೆಟೀರಿಯಲಿಸ್ಟಿಕ್‌ ಮನಸ್ಥಿತಿಯನ್ನು ದ್ವೇಷಿಸುವ ಅವಳೂ ಅವನ ಸಂಪತ್ತಿನ ಏಳಿಗೆಯನ್ನು ಬಯಸುತ್ತ, ಗಳಿಕೆಯ ಪ್ರತಿಫಲ ಉಣ್ಣುತ್ತಲೇ ಬಂದವಳು ಎಂಬ ಇನ್ನೊಂದು ಆಯಾಮದ ಬಗ್ಗೆ ನಿರ್ದೇಶಕರು ಅಷ್ಟಾಗಿ ಗಮನಹರಿಸಿಲ್ಲ.

ಮುಖ್ಯವಾಗಿ ನಾಲ್ಕು ಪಾತ್ರಗಳ ಮೂಲಕ ಪ್ರೇಮಸಂಬಂಧದ ಮೂರು ಆಯಾಮಗಳನ್ನು ಹೇಳಹೊರಟಿದ್ದು ಮೇಲ್ನೋಟಕ್ಕೆ ಕಂಡರೂ ಇಡೀ ಸಿನಿಮಾ ಹಂಸ ಮತ್ತು ಅಚಿಂತ್‌ ಪಾತ್ರದ ಮೂಲಕವೇ ವಿಸ್ತರಿಸಿಕೊಳ್ಳುತ್ತದೆ. ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ನಟನೆಯಲ್ಲಿ ಸಾಕಷ್ಟು ಪಳಗಿರುವ ಕಿರಣ್‌ ಶ್ರೀನಿವಾಸ್‌, ಹುಡುಗಾಟದ ಹುಡುಗನ ತರಲೆಗಳಲ್ಲಿಯೂ ಭಗ್ನಪ್ರೇಮಿಯ ನೋವಿನಲ್ಲಿಯೂ ಮನಮುಟ್ಟುತ್ತಾರೆ. ಸ್ವಭಾವತಃ ಅಂತರ್‌ಮುಖಿಯಾದ ಹಂಸಳ ಪಾತ್ರವನ್ನು ದಾಂಪತ್ಯದ ಬಗ್ಗೆ, ಹೆಣ್ಣಿನ ಜೀವನದ ಬಗ್ಗೆ, ಸಂಬಂಧಗಳ ಬಗ್ಗೆ ವಾಚ್ಯವಾಗಿ ವ್ಯಾಖ್ಯಾನಿಸಲು ಧಾರಾಳವಾಗಿಯೇ ಬಳಸಿಕೊಳ್ಳಲಾಗಿದೆ. ಮಾತು ಕಮ್ಮಿಯಿರುವ ದೃಶ್ಯಗಳಲ್ಲಿಯೇ ಭಾವನಾ ಮನಸನ್ನು ಆವರಿಸಿಕೊಳ್ಳುತ್ತಾರೆ. ಕಾರ್ಪೋರೆಟ್‌ ಉದ್ಯೋಗಿಯ ಪಾತ್ರದಲ್ಲಿ ಇಷ್ಟವಾಗುವ ರಾಹುಲ್‌ ಬೋಸ್‌ ಪ್ರಯಾಸಪಟ್ಟು ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

ಎಚ್‌.ಎಂ. ರಾಮಚಂದ್ರ ಅವರ ಕ್ಯಾಮೆರಾ ಈ ಸಿನಿಮಾದ ಪ್ರಮುಖ ಶಕ್ತಿ. ಹಿಮಾಚಲ ಪ್ರದೇಶದ ಸಾಲು ಪರ್ವತಗಳು, ರಾಜಸ್ತಾನದ ಮರಳುದಿಬ್ಬಗಳನ್ನು ಭವ್ಯವಾಗಿ ತೋರಿಸಿದಷ್ಟೇ ಸೂಕ್ಷ್ಮವಾಗಿ ಅವರು ಪಾತ್ರಗಳ ಕಣ್ಣ ಚಲನೆ, ಮುಖಭಾವಗಳನ್ನೂ ಸೆರೆಹಿಡಿದಿದ್ದಾರೆ. ನಿರ್ದೇಶಕರು ಇಡೀ ಸಿನಿಮಾದ ಮೂಲಕ ಹೇಳಲು ತಡವರಿಸುವುದನ್ನು ಒಂದೇ ಹಾಡಿನ ಕೆಲವು ದೃಶ್ಯಗಳ ಮೂಲಕವೇ ಹೊಳೆಯಿಸಿಬಿಡುವುದು ಛಾಯಾಗ್ರಹಣ ಪ್ರತಿಭೆಗೆ ನಿದರ್ಶನ. ಅವರಿಗಾಗಿಯೇ ಕೆಲವು ದೃಶ್ಯಗಳನ್ನು ಸೃಷ್ಟಿಸಿರುವಂತೆ ಕಾಣುತ್ತದೆ. ನೀಲಾದ್ರಿ ಕುಮಾರ್‌ ಸಂಯೋಜಿಸಿದ ಹಾಡುಗಳಲ್ಲಿ ವೈವಿಧ್ಯ ಇಲ್ಲವಾದರೂ ಇಂಪಾಗಿವೆ. ‘ಹೂ ಮೇಲೆ ಹನಿ ಇಬ್ಬನಿ..’ ಹಾಡು ಗುನುಗಿಕೊಳ್ಳುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT