ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮೀಯ ಸಾವಧಾನ!

Last Updated 23 ಡಿಸೆಂಬರ್ 2016, 12:20 IST
ಅಕ್ಷರ ಗಾತ್ರ

ಚಿತ್ರ: ದಂಗಲ್ (ಹಿಂದಿ)
ನಿರ್ಮಾಣ: ಅಮೀರ್ ಖಾನ್, ಕಿರಣ್ ರಾವ್, ಆದಿತ್ಯ ರಾಯ್ ಕಪೂರ್
ನಿರ್ದೇಶನ: ನಿತೇಶ್ ತಿವಾರಿ
ತಾರಾಗಣ: ಅಮೀರ್ ಖಾನ್, ಫಾತಿಮಾ ತನಾ ಶೇಖ್, ಸಾಕ್ಷಿ ತನ್ವರ್, ಸಾನ್ಯಾ ಮಲ್ಹೋತ್ರ
*

‘ಮುಂದಿನ ಕುಸ್ತಿ ಯಾವಾಗ?’– ಕಟ್ಟುಮಸ್ತಾದ ಹುಡುಗನ ಎದುರು ಒಂದು ಲಡತ್ತಿನಲ್ಲಿ ಸೋತ ಹುಡುಗಿ, ಅಪ್ಪನನ್ನು ಕೇಳುತ್ತಾಳೆ. ಅಪ್ಪನ ಮುಖ ಅರಳುತ್ತದೆ. ಅದಕ್ಕೂ ಮೊದಲು ತನ್ನ ಹೆಣ್ಣುಮಕ್ಕಳನ್ನು ಕುಸ್ತಿ ಅಖಾಡಕ್ಕೆ ಇಳಿಸಲು ಆ ಅಪ್ಪ ಪಡುವ ಪಡಿಪಾಟಲುಗಳು ಅಷ್ಟಿಷ್ಟಲ್ಲ.

ಕುಸ್ತಿ ಅಖಾಡದಲ್ಲಿ ಏರಿಳಿತಗಳನ್ನು ಕಂಡಿರುವ ಮಹಾವೀರ್ ಸಿಂಗ್ ಫೊಗಾಟ್ ಆತ್ಮಕಥೆಯನ್ನು ಆಧರಿಸಿದ ‘ದಂಗಲ್’ ಹಿಂದಿ ಚಿತ್ರದಲ್ಲಿ ಇಂಥ ಇಡುಕಿರಿದ ಭಾವನಾತ್ಮಕ ಸನ್ನಿವೇಶಗಳಿವೆ. ಪದೇ ಪದೇ ಕಣ್ಣೀರು ತರಿಸುವ ಸಿನಿಮೀಯ ಶೈಲಿಯ ಚಿತ್ರಕಥೆ ಮೆಚ್ಚುಗೆಯಾಗುವುದು ಅದರಲ್ಲಿನ ಸಾವಧಾನದಿಂದ.
ಕೆಲವೇ ತಿಂಗಳುಗಳ ಹಿಂದೆ ತೆರೆಕಂಡಿದ್ದ ‘ಸುಲ್ತಾನ್’ ಹಿಂದಿ ಚಿತ್ರದ ವಸ್ತುವನ್ನು ಇದು ನೆನಪಿಸುತ್ತದೆ. ಕುಸ್ತಿಪಟುವಿನ ಹೋರಾಟದ ಅತಿ ಸಿನಿಮೀಯವಾದ ಆ ಕಥಾನಕದಲ್ಲಿ ಸ್ಟಾರ್‌ಗಿರಿಯ ಮುಚ್ಚಟೆ ಇತ್ತು.

ಈ ಚಿತ್ರದಲ್ಲಿ ಅಮೀರ್‌ ಖಾನ್ ಕೆಳಗಿನ ಮೆಟ್ಟಿಲುಗಳ ಮೇಲೆ ನಿಂತು, ಹೊಸ ನಟಿಯರನ್ನು ಮೇಲಿನ ಮೆಟ್ಟಿಲುಗಳ ಮೇಲೆ ನಿಲ್ಲಿಸಿದ್ದಾರೆ. ‘ಸುಲ್ತಾನ್‌’ಗೂ  ‘ದಂಗಲ್’ಗೂ ಇರುವ ಮುಖ್ಯ ವ್ಯತ್ಯಾಸವಿದು. ಸಂಕಲನದಲ್ಲಿ ಕೆಲವು ಸಾಮಾಜಿಕ ಅಂಶಗಳನ್ನು ಉಪೇಕ್ಷಿಸಿದ್ದರೂ ಇಡೀ ಚಿತ್ರದ ಓಘದಲ್ಲಿ ಸಂಯಮವಿದೆ. ಎರಡನೇ ಅರ್ಧ ಆ ಕಾರಣಕ್ಕೇ ಲಂಬಿಸಿದಂತೆ ಭಾಸವಾಗುವುದೂ ಉಂಟು.

ಕ್ರೀಡಾಪಟುಗಳ ಕಥನವನ್ನು ಚಿತ್ರವಾಗಿಸುವಾಗ ಅನುಕೂಲಗಳು ಒದಗಿಬರುವಂತೆ ಮಿತಿಗಳೂ ಏರ್ಪಡುತ್ತವೆ. ಸ್ಪರ್ಧೆಯ ತೀವ್ರತೆಯಲ್ಲಿ ಕಾಣುವ ಏಕತಾನ ಭಾವತೀವ್ರತೆ ಅದು. ನೋಡಿಸಿಕೊಂಡು ಮೈಮರೆಸುವುದಲ್ಲದೆ ಏಕತಾನವೂ ಆಗಿಬಿಡುವ ದೃಶ್ಯಗಳು ‘ಕಪ್ಪು–ಬಿಳುಪು’ ಧಾಟಿಯಿಂದ ಹೊರಳಿಕೊಳ್ಳುವುದು ಕಷ್ಟ. ‘ದಂಗಲ್’ ಸಹ ಇದಕ್ಕೆ ಅಪವಾದವಲ್ಲ.

ಸಿನಿಮಾ ಪದೇ ಪದೇ ಕಣ್ಣರಳಿಸುವಂತೆ ಮಾಡುತ್ತದೆ. ಬೇರೆ ಬೇರೆ ವಯೋಮಾನದಲ್ಲಿ ಪ್ರಕಟಗೊಳ್ಳುವ ಪಾತ್ರದ ಪರಕಾಯ ಪ್ರವೇಶ ಮಾಡಲು ಅಮೀರ್ ಖಾನ್ ಪಟ್ಟಿರುವ ಕಷ್ಟ ಅಡಿಗಡಿಗೂ ಕಣ್ಣಿಗೆ ರಾಚುತ್ತದೆ. ತಗ್ಗಿಸಿಕೊಂಡು ಅಭಿನಯಿಸುವ ತಮ್ಮತನವನ್ನು ಅವರು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.
ಹೆಣ್ಣು ಮಕ್ಕಳ ಕುಟುಂಬದ ತಂದೆಗೆ ದೇಶಕ್ಕೊಂದು ಅಂತರರಾಷ್ಟ್ರೀಯ ಚಿನ್ನದ ಪದಕ ಗೆದ್ದುಕೊಡಬಲ್ಲ ಕುಸ್ತಿಪಟುವನ್ನು ತಯಾರು ಮಾಡುವ ಮಹತ್ವಾಕಾಂಕ್ಷೆ. ಒಂದಲ್ಲ; ಅಂಥ ಎರಡು ಮಕ್ಕಳನ್ನು ಆತ ತಯಾರು ಮಾಡುವ ಮಣ್ಣಿನ ಕಥಾನಕವಿದು.

ಪ್ರಕೃತಿ ಸಹಜ ಹೆಣ್ಣು ಬಯಕೆಗಳನ್ನು ಹತ್ತಿಕ್ಕಿ, ಸಮಾಜದ ವಿರೋಧ ಕಟ್ಟಿಕೊಂಡು ಹೆಣ್ಣುಮಕ್ಕಳನ್ನು ಅಖಾಡಕ್ಕೆ ಇಳಿಸುವ ಪರಮ ಗುರಿ ಈಡೇರಿಸಿಕೊಳ್ಳುವ ನಾಯಕನಿಗೆ ಇಲ್ಲಿ ‘ಸ್ಟಾರ್‌ಗಿರಿ’ಯ ಹಂಗಿಲ್ಲ. ಆದರೆ, ಸಿನಿಮಾ ಗೆಲ್ಲಿಸಬೇಕೆಂದರೆ ಅಳಿಸಬೇಕು ಎಂಬ ಧೋರಣೆಯಂತೂ ಇದೆ. ಹರಿಯಾಣದ ನೆಲದ ಭಾಷೆಯನ್ನು ಬಳಸಿಕೊಂಡಿರುವುದರಿಂದ ಉಳಿದ ಕೆಲವು ಸಾಮಾಜಿಕ ಅಂಶಗಳ ಉಪೇಕ್ಷೆಯನ್ನು ತುಸು ಮಟ್ಟಿಗೆ ಮನ್ನಿಸಬಹುದು.

ಯಶೋಗಾಥೆ ಹೇಳುವ ಭರದಲ್ಲಿ ಈ ಚಿತ್ರದಲ್ಲಿಯೂ ಕೆಲವು ಲೋಪಗಳು ಉಳಿದುಕೊಂಡಿವೆ. ತಂದೆ, ಹೆಣ್ಣುಮಕ್ಕಳು ಕಥನ ಕೇಂದ್ರದಲ್ಲಿ ಇದ್ದಮಾತ್ರಕ್ಕೆ ಉಳಿದ ಪೋಷಕ ಪಾತ್ರಗಳ ಪೋಷಣೆ ಇಷ್ಟು ಉಪೇಕ್ಷೆಗೆ ಒಳಗಾಗುವ ಅಗತ್ಯವಿರಲಿಲ್ಲ. ಅದರಲ್ಲೂ ಹೆಣ್ಣುಮಕ್ಕಳ ತರಬೇತಿಗೆ ಬಳಕೆಯಾಗುವ ಅವರದ್ದೇ ಓರಗೆಯ ಯುವಕನ ಪಾತ್ರ ಏನೂ ಸಾಧಿಸದೇ ಹೋದದ್ದು ಏಕೆ ಅನ್ನಿಸುತ್ತದೆ.

ಹಾಡುಗಳು ಕಥನದ ಭಾಗವಾಗಿಯೇ ಬಳಕೆಯಾಗಿರುವುದು, ಸೇತು ಶ್ರೀರಾಮ್ ಸಿನಿಮಾಟೋಗ್ರಫಿಯ ವೃತ್ತಿಪರತೆ ಚಿತ್ರದ ಘನತೆಗೆ ಪೂರಕವಾಗಿವೆ. ಬಲ್ಲು ಸಲೂಜಾ ಅವರ ಸಂಕಲನಕ್ಕೆ ಸವಾಲುಗಳು ಎದುರಾಗಿರುವುದಕ್ಕೂ ಪುರಾವೆಗಳು ಸಿಗುತ್ತವೆ.

ಅಮೀರ್ ಖಾನ್ ಅಭಿನಯದ ಹದ ಮೆಚ್ಚುಗೆಗೆ ಅರ್ಹ. ಪಾತ್ರದ ಚಲನಶೀಲತೆಯೇ ಹೊಸ ನಟಿ ಫಾತಿಮಾ ತನಾ ಶೇಖ್ ಅವರಿಗೆ ಉತ್ತಮ ಭೂಮಿಕೆ ಕಲ್ಪಿಸಿದೆ. ಅವರ ತಂಗಿಯ ಪಾತ್ರದಲ್ಲಿ ಸಾನ್ಯಾ ಮಲ್ಹೋತ್ರ ಅಭಿನಯವೂ ಶ್ಲಾಘನೀಯ. ತನ್ನ ಪ್ರಭಾವಳಿಯನ್ನಲ್ಲದೆ ಚಿತ್ರವನ್ನು ಮುದ್ದಿಸುವ ಅಮೀರ್‌ ಖಾನ್ ಅವರ ಇಂಥ ಧೋರಣೆ ಅನುಕರಣೀಯವಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT