ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟದ ಮೇಜಿಗೆ ಕಲಾತ್ಮಕ ಮೆರುಗು

Last Updated 24 ಡಿಸೆಂಬರ್ 2016, 12:42 IST
ಅಕ್ಷರ ಗಾತ್ರ
ಕ್ರಿಸ್‌ಮಸ್‌ ಎಂದರೆ ಸಂಭ್ರಮ, ರಜಾ ಮಸ್ತಿ, ಆಹಾರೋತ್ಸವ. ಉಡುಗೊರೆ, ದೀಪ, ನಕ್ಷತ್ರಗಳಿಂದ ಅಲಂಕಾರಗೊಂಡ ಮನೆ. ರೆಸ್ಟೊರೆಂಟ್‌ಗಳು ಕೂಡ ಈಗ ಕ್ರಿಸ್‌ಮಸ್‌ ಸಂಭ್ರಮಾಚರಣೆಯಲ್ಲಿ ಮುಳುಗಿವೆ.
 
ಎಷ್ಟೇ ಚೆನ್ನಾಗಿ ಅಡುಗೆ ಮಾಡಿದ್ದರೂ ಸುಂದರವಾಗಿ ಅಲಂಕಾರ ಮಾಡಿ ಬಡಿಸದೇ ಹೋದರೆ ಪ್ರಯೋಜನವಿಲ್ಲ. ರೆಸ್ಟೊರೆಂಟ್‌ಗಳಲ್ಲಿ ಅಲಂಕಾರ ಮಾಡುವ ವಿನ್ಯಾಸಕರ ದಂಡೇ ಇದೆ. ತಟ್ಟೆ ವಿನ್ಯಾಸಗಾರರು, ವಾತಾವರಣ ನಿರ್ವಾಹಕರು, ಟೇಬಲ್‌ ಸ್ಟೈಲಿಸ್ಟ್‌  ಹೀಗೆ ಒಂದೊಂದಕ್ಕೂ ಒಬ್ಬರು.
 
ಈ ವರ್ಷ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕ್ರೌನ್ ಪ್ಲಾಜಾ ರೆಸ್ಟೊರೆಂಟ್‌ನಲ್ಲಿ ಕ್ರಿಸ್‌ಮಸ್ ಅಲಂಕಾರ ವಿಶೇಷ ಎನಿಸಿದೆ. ಈ ರೆಸ್ಟೊರೆಂಟ್‌ನ ಅಲಂಕಾರ ಮಾಡಿರುವುದು ಬಾಣಸಿಗ, ಟೇಬಲ್ ವಿನ್ಯಾಸಗಾರ ಥಾಮಸ್ ಜೋಸೆಫ್.
 
ಲಾಬಿಯಿಂದಲೇ ಕ್ರಿಸ್‌ಮಸ್
ರೆಸ್ಟೊರೆಂಟ್‌ಗೆ ಪ್ರವೇಶ ಮಾಡುತ್ತಿದ್ದಂತೆ ಹಬ್ಬದ ಪರಿಸರ ಇರಬೇಕು ಎಂಬ ಉದ್ದೇಶದಿಂದ ಪ್ರವೇಶ ದ್ವಾರದಲ್ಲೇ ಇರುವ ಅಲಂಕೃತ ದೊಡ್ಡ ಕ್ರಿಸ್‌ಮಸ್‌ ಟ್ರೀ ಗಮನ ಸೆಳೆಯುತ್ತದೆ. ಕ್ರಿಸ್‌ಮಸ್‌ ಬೌ ನೀಡಿ ಗ್ರಾಹಕರನ್ನು ಸ್ವಾಗತಿಸಲಾಗುತ್ತದೆ. ಟೇಬಲ್‌ನಲ್ಲಿ ಕ್ರಿಸ್‌ಮಸ್‌ನ ವಿಶೇಷ ತಿನಿಸಾದ ಶುಂಠಿ ಕುಕಿ–ಟೀ ಮತ್ತು ಸ್ಪೈಸ್ಡ್‌ ವೈನ್‌ –ಬ್ರೌನಿ ಕೇಕ್‌ ಇಡಲಾಗಿದೆ. 
 
‘ನವೆಂಬರ್‌ನಿಂದಲೇ ಕ್ರಿಸ್‌ಮಸ್‌ ಥೀಮ್‌ ಯೋಜನೆ ಆರಂಭಿಸಿದ್ದೆವು. ಕ್ರೌನ್‌ ಪ್ಲಾಜಾ ಸದಸ್ಯರೆಲ್ಲಾ ಕ್ರಿಸ್‌ಮಸ್‌ ವಿನ್ಯಾಸಕ್ಕಾಗಿ ಶ್ರಮಿಸಿದ್ದೆವು. ವಿಭಿನ್ನ ಆಹಾರ ತಯಾರಿಕೆಯೊಂದಿಗೆ ಅವುಗಳನ್ನು ಪ್ರಸ್ತುತಪಡಿಸುವ ಕಲೆಯೂ ಮುಖ್ಯ. ಅದರಲ್ಲೂ ಇಂತಹ ಹಬ್ಬದ ಸಂದರ್ಭದಲ್ಲಿ ವಿಶೇಷ ಅಲಂಕಾರ ಮುಖ್ಯವಾಗುತ್ತದೆ’ ಎನ್ನುತ್ತಾರೆ ಬಾಣಸಿಗ ಥಾಮಸ್‌.
 
ಹಸಿರು ಮತ್ತು ಕೆಂಪು
ಕ್ರಿಸ್‌ಮಸ್‌ ಸಂಭ್ರಮಾಚರಣೆ ಎಂದರೆ ವರ್ಣಮಯವಾಗಿರಬೇಕು. ಹಸಿರು ಮತ್ತು ಕೆಂಪು ಬಣ್ಣ ಈ ಹಬ್ಬದ ವಿಶೇಷ. ಮೇಜಿಗೆ ಹಾಸುವ ಬಟ್ಟೆಯಿಂದ ಹಿಡಿದು ಪ್ರತಿ ವಸ್ತು ಬಳಕೆಯಲ್ಲೂ ಕೆಂಪು ಮತ್ತು ಹಸಿರು ಬಣ್ಣ ಇರುವಂತೆ ನೋಡಿಕೊಳ್ಳುತ್ತಾರೆ. ಪ್ರತಿ ಟೇಬಲ್‌ನಲ್ಲೂ ಒಂದು ಪುಟ್ಟ ಕ್ರಿಸ್‌ಮಸ್‌ ಟ್ರೀ, ಮೇಣದಬತ್ತಿ, ಬೆಲ್‌ಗಳು, ಕೆಂಪು– ಹಸಿರು ನ್ಯಾಪ್‌ಕಿನ್ ಇರುತ್ತದೆ. 
 
‘ಮನೆಯಲ್ಲಿ ಹಬ್ಬ ಮಾಡುವಾಗ ಎಷ್ಟು ಕಾಳಜಿಯಿಂದ ಅಲಂಕಾರ ಮಾಡುತ್ತೇವೂ ಹಾಗೇ ರಸ್ಟೊರೆಂಟ್‌ನಲ್ಲೂ ವಿನ್ಯಾಸ ಮಾಡಿದ್ದೇನೆ. ರೆಸ್ಟೊರೆಂಟ್‌ ಎಂದರೆ ಬರೀ ಊಟ ಮಾಡಿ ಹೋಗುವುದಲ್ಲ. ಸುತ್ತಲಿನ ವಾತಾವರಣ, ಆಹಾರ ಎಲ್ಲವೂ ‘ಕ್ರಿಸ್‌ಮಸ್‌ ಥೀಮ್‌ಗೆ ಹೊಂದಬೇಕು.’ ಎನ್ನುತ್ತಾರೆ ಥಾಮಸ್ ಜೋಸೆಫ್. 
 
ಥಾಮಸ್ ಕಳೆದ 19 ವರ್ಷದಿಂದ ಲೀಲಾಸ್‌, ಒಬೆರಾಯ್, ತಾಜ್, ಲಲಿತ್ ಅಂತ ದೊಡ್ಡ ಸ್ಟಾರ್‌ ರೆಸ್ಟೊರೆಂಟ್‌ಗಳಲ್ಲಿ ಬಾಣಸಿಗರಾಗಿದ್ದಾರೆ.  ಪ್ರತಿ ಹಬ್ಬಕ್ಕೂ ಥೀಮ್ ಸಂಬಂಧಿ ಆಹಾರೋತ್ಸವವನ್ನು ಮಾಡುತ್ತಾರೆ.
 
ಕೆರೋಲ್ಸ್‌ ಕೇಳಿ 
ಕ್ರಿಸ್‌ಮಸ್‌ ಥೀಮ್ ಎಂದರೆ ಕೇವಲ ಪ್ಲೇಟಿಂಗ್ ಮತ್ತು ಟೇಬಲ್‌ ವಿನ್ಯಾಸವಷ್ಟೇ ಅಲ್ಲ ಸುತ್ತಲಿನ ಪರಿಸರವೂ ಮುಖ್ಯ. ನೋಡುವುದರೊಂದಿಗೆ ಕೇಳುವುದರಲ್ಲೂ ಕ್ರಿಸ್‌ಮಸ್ ತುಂತುರು ಇರಬೇಕು ಎಂದು ಕೆರೋಲ್‌ ಹಾಡುಗಾರರನ್ನು ನಿಯೋಜಿಸಲಾಗಿದೆ. ಕ್ರೌನ್‌ ಪ್ಲಾಜಾ ನಿಲಯ ಕಲಾವಿದರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಡಿ.25 ಸಂಜೆ 5ರಿಂದ 7ರವರೆಗೆ ಈ ವಿಶೇಷ ಕಾರ್ಯಕ್ರಮವಿದೆ.
 
**
ಟರ್ಕಿ ಕೋಳಿಗೆ ಕ್ರಿಸ್‌ಮಸ್ ಸ್ಪರ್ಶ
ಪ್ರತಿ ಬಾರಿ ಒಂದೊಂದು ವಿಶೇಷ ಖಾದ್ಯ ವಿನ್ಯಾಸ ಮಾಡುವುದು ವಾಡಿಕೆ. ಈ ಬಾರಿ ಟರ್ಕಿ ಕೋಳಿ ರೋಸ್ಟ್‌ಗೆ ಕ್ರಿಸ್‌ಮಸ್‌ ಸ್ಪರ್ಶ ನೀಡಿದ್ದಾರೆ ಥಾಮಸ್. ಸಣ್ಣಸಣ್ಣ ಚೆರಿ ಟೊಮೆಟೊ, ಬೆಳ್ಳುಳ್ಳಿ ರಿಂಗ್‌ನಿಂದ ಅಲಂಕರಿಸಿದ್ದಾರೆ. ಕ್ರಿಸ್‌ಮಸ್‌ ಗಿಡದ ರೂಪಕದಂತೆ ಹಸಿರು ಬಣ್ಣದಿಂದ ಕೂಡಿದ ಬ್ರಾಕ್ಯೊಲಿ ತುಂಡುಗಳು ಕಾಣ ಸಿಗುತ್ತವೆ. ಜೊತೆಗೆ ಬೆಲ್ಸ್‌, ಬಲೂನ್‌, ಮಿನುಗು ದೀಪಗಳಾಗಿ ಟ್ರಾಪಿಕಲ್ ಹಣ್ಣುಗಳು ಬಳಕೆಯಾಗಿವೆ. 
 
ಮೇಜಿನ ಎಡಭಾಗದಲ್ಲಿ ಹೊಳೆಯುವ ಗಾಜಿನ ಲೋಟದಲ್ಲಿ ಅರ್ಧ ತುಂಬಿದ ಶಾಂಪೇನ್, ಮಧ್ಯೆ ಕೆಂಪು–ಹಸಿರು ವರ್ಣಗಳಿಂದ  ಅಲಂಕೃತಗೊಂಡ ಟರ್ಕಿ ಕೋಳಿ, ಸುತ್ತ ಪುಟ್ಟಪಟ್ಟ ಗಿಫ್ಟ್‌ ಬಾಕ್ಸ್‌. ಇದು ಈ ಬಾರಿ ಕ್ರೌನ್‌ ಪ್ಲಾಸಾ ರೆಸ್ಟೊರೆಂಟ್‌ನ ಕ್ರಿಸ್‌ಮಸ್‌ ವಿಶೇಷ ಖಾದ್ಯದ ಟೇಬಲ್ ವಿನ್ಯಾಸ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT