ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೂ ಇದೆ ಮನಸ್ಸು !

Last Updated 23 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಆಗಷ್ಟೇ ಹುಟ್ಟಿದ ಎಳೆಯ ಮಗು. ಅದಕ್ಕೇನಿದೆ ಕೆಲಸ? ಹಾಲು ಕುಡಿ, ಬೆಚ್ಚಗೆ ಮಲಗು, ಪಿಳಿ ಪಿಳಿ ಕಣ್ಣು ಬಿಡು, ಹಸಿವಾದರೆ ಅಳು. ಡಯಾಪರ್ ಬದಲಿಸಲು ಒಬ್ಬರು, ಸ್ನಾನ ಮಾಡಿಸಲು ಮತ್ತೊಬ್ಬರು! ಸ್ವಲ್ಪ ದೊಡ್ಡ ಮಕ್ಕಳು ನವಜಾತ ಶಿಶುಗಳನ್ನು ನೋಡಿದಾಗ ಸಾಮಾನ್ಯವಾಗಿ ಉದ್ಗಾರ ತೆಗೆಯುವುದಿದೆ: ‘ಅಬ್ಬಾ ಎಷ್ಟು ಬೋರ್ ಜೀವನ ಇದರದ್ದು!’ ಅಂತ. ಅಥವಾ ಕೆಲಸ ಮಾಡಿ ಸುಸ್ತಾದ ಅಮ್ಮಂದಿರು: ‘ಈ ಪುಟ್ಟ ಶಿಶುಗಳದ್ದೇ ಜೀವನ ಆರಾಮ. ಯಾವ ಚಿಂತೆಯೂ ಇಲ್ಲ ಹಾಲು ಕುಡಿ -ಮಲಗು - ಒಂದು-ಎರಡು ಮುಗಿಸು, ಅದನ್ನೂ ಬೇರೆಯವರೇ ಸ್ವಚ್ಛ ಮಾಡುವುದು!

ಪೂರ್ಣ ‘‘ಪರಾವಲಂಬಿ’’ಗಳಾದರೂ ಸುಖದ ಪರಾವಲಂಬನ!’ ಎಂದೂ ಅನ್ನಬಹುದು. ಹಾಗಿದ್ದರೆ ಈಗಷ್ಟೇ ಹುಟ್ಟಿದ, ಇನ್ನೂ ಎರಡು ತಿಂಗಳ ಒಳಗಿನ ಮಗುವಿಗೂ ‘ಮನಸ್ಸು’ ಎನ್ನುವುದಿದೆಯೇ? ಆ ಮಗು ಯೋಚನೆ ಮಾಡುತ್ತದೆಯೇ? ಕನಸು ಕಾಣುತ್ತದೆಯೇ? ನಮ್ಮ ಬಗ್ಗೆ ಬೈದುಕೊಳ್ಳಬಹುದೆ ಅಥವಾ ಒಳಗೊಳಗೇ ನಗಬಹುದೇ?

ನವಜಾತಶಿಶುವಿನ ಮೆದುಳಿನ ಬಗೆಗಿನ ಇತ್ತೀಚೆಗಿನ ಸಂಶೋಧನೆಗಳು ಮಗುವಿನ ವಾತಾವರಣದಲ್ಲಿನ ಮಾತು-ಸಂವಹನ-ಹಿರಿಯರ ನಡವಳಿಕೆಗಳು ಮಿದುಳಿನ ಬೆಳವಣಿಗೆ ಮತ್ತು ಆರೋಗ್ಯಕರ ವ್ಯಕ್ತಿತ್ವದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ದೃಢವಾಗಿ ಸಿದ್ಧಪಡಿಸಿವೆ. ಈಗಷ್ಟೇ ಹುಟ್ಟಿದ ಮಗುವಿನ ಮೆದುಳು ಹತ್ತು ಸಾವಿರ ಕೋಟಿ ನರಕೋಶಗಳನ್ನು ಹೊಂದಿರುತ್ತದೆ. ಮಗು ದಿನೇ ದಿನೇ ಬೆಳೆದಂತೆ ಈ ನರಕೋಶಗಳು, ಒಂದಕ್ಕೊಂದರ ಕೊಂಡಿ-ಶಾಖೆಗಳನ್ನು ನಿರ್ಮಿಸುತ್ತ ಮತ್ತಷ್ಟು ಸೈನಾಪ್ಸ್‌ಗಳನ್ನು ನಿರ್ಮಿಸುತ್ತದೆ. ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರು ಹೊಂದಿರುವ ಮೆದುಳಿನ ಕೋಶಗಳ ಸಂಖ್ಯೆ ಅಪಾರವಾದದ್ದು.

ಅಂದರೆ ಪ್ರಕೃತಿಮಾತೆ ಈ ನರಪ್ರಾಣಿಗಳಿಗೆ ದೊಡ್ಡ ಮೆದುಳಿರಲಿ, ಆದರೆ ದೇಹ ಆರು ಪಟ್ಟು ದೊಡ್ಡದಾಗದಿರುವಂತೆ ಗರ್ಭಧರಿಸುವಿಕೆಯನ್ನು ಒಂಬತ್ತೇ ತಿಂಗಳಿಗೆ ಸೀಮಿತಗೊಳಿಸಿ, ತಲೆ ಮೆದುಳಿನ ಗಾತ್ರಕ್ಕೆ ತಕ್ಕಂತೆ ಬಹು ದೊಡ್ಡದಾಗಿಬಿಡುವ ಸಾಧ್ಯತೆಯನ್ನು ಇಲ್ಲವಾಗಿಸುವಂತೆ ಮೆದುಳಿನ ಬೆಳವಣಿಗೆ ಪೂರ್ಣವಾಗುವ ಮೊದಲೇ ಅಮ್ಮನ ಹೊಟ್ಟೆಯಿಂದ ಹೊರಬರುವಂತೆ ಯೋಜಿಸಿದ್ದಾಳೆ ಎನ್ನಬಹುದು!

ಅಂದರೆ ನವಜಾತ ಶಿಶುಗಳು ಹುಟ್ಟಿನ ಸಮಯದಲ್ಲಿ ಮೆದುಳಿನ ಬೆಳವಣಿಗೆ ಬೇರೆ ಪ್ರಾಣಿಗಳಲ್ಲಿ ಆಗಿರುವಂತೆ ಪೂರ್ತಿಯಾಗಿರುವುದಿಲ್ಲ. ವಾತಾವರಣದಲ್ಲಿರುವ ಪ್ರತಿಯೊಂದು ಪ್ರಚೋದನೆ-ಶಬ್ದ ವಿಶೇಷವಾಗಿ ಮಗುವಿನ ಮೆದುಳಿನ ಬೇರೆ ಬೇರೆ ಭಾಗಗಳನ್ನು ಪ್ರಚೋದಿಸುತ್ತವೆ. ಮೊದಲ ಎರಡು ತಿಂಗಳುಗಳಲ್ಲಿ 50 ಟ್ರಿಲಿಯನ್‌ನಿಂದ ಸಾವಿರ ಟ್ರಿಲಿಯನ್(ಬಿಲಿಯನ್ ಅಲ್ಲ! )ಗೆ ನರಕೋಶಗಳ ಕೊಂಡಿಗಳ ಸಂಖ್ಯೆ ಏರುತ್ತದೆ.

ಪೂರ್ಣ ಅವಧಿಯನ್ನು ಮುಗಿಸಿರುವ ಗರ್ಭಸ್ಥಶಿಶುಗಳು ತಮ್ಮ ತಾಯಿಯ ಧ್ವನಿಗೆ ಬೇರೆಯೇ ರೀತಿಯ ವಿದ್ಯುದಲೆಗಳಿಂದ ಮೆದುಳಿನ ಸಂಶೋಧನೆಗಳಲ್ಲಿ ಸ್ಪಂದಿಸಿರುವುದು ಕಂಡುಬಂದಿದೆ. ಶಿಶುಗಳ ಕಲಿಕೆಯ ಸಾಮರ್ಥ್ಯ ಮತ್ತು ಯೋಚನೆಯ ಸಾಮರ್ಥ್ಯದ ಕೆಲವು ಅಂಶಗಳು ಸೂಕ್ಷ್ಮವಾಗಿ ಗಮನಿಸಿದಂತೆ ಸ್ಪಷ್ಟವಾಗತೊಡಗುತ್ತದೆ. 2–3 ವಾರಗಳ ಮಗು ಹಾಲು ಕುಡಿಯುವಾಗ ಮಧ್ಯೆ ಮಧ್ಯೆ ತಾಯಿಯ ಮುಖವನ್ನು ದೃಷ್ಟಿಸಿ ನೋಡುತ್ತದೆ.

ಸುತ್ತ, ಮೇಲೆ ಕಣ್ಣಾಡಿಸುತ್ತದೆ. ಈ ಹಂತದಲ್ಲಿ ಇಪ್ಪತ್ತು ಅಡಿ ದೂರದವರೆಗೆ ಮಾತ್ರ ಅದರ ನೋಡುವ ಸಾಮರ್ಥ್ಯ (ದೊಡ್ಡವರಾದಂತೆ ನಾಲ್ಕು ನೂರು ಅಡಿ ದೂರ ನೋಡಬಲ್ಲವು!). ಹಾಗಾಗಿ ಬಣ್ಣದ, ಕಣ್ಣಿಗೆ ಸ್ಪಷ್ಟವಾಗಿ ಕಾಣುವ ಆಕರ್ಷಕ ವಸ್ತುಗಳು ಶಿಶುಗಳನ್ನು ಒಂದೇ ಕಡೆ ದೃಷ್ಟಿಸುವಂತೆ ಮಾಡುತ್ತವೆ.

ಮಾತಿಗೆ, ಭಾವನೆಗಳಿಗೆ ನವಜಾತ ಶಿಶುಗಳು ಸ್ಪಂದಿಸುತ್ತವೆಯೇ ಎಂಬುದರ ಬಗ್ಗೆ ಸಂಶೋಧನೆಗಳನ್ನೇ ನೋಡಬೇಕೆಂದೇನೂ ಇಲ್ಲ. ಹಾಗೆಯೇ ಅನುಭವದಿಂದ ನೋಡಿದರೂ, ‘ಅಮ್ಮ’ನಿಗೆ ಅಳು-ಬೇಸರವಾದರೆ, ಮಗು ಹಾಲು ಕುಡಿಯಲು ಕಿರಿಕಿರಿ ಮಾಡುತ್ತದೆ. ‘ಅನಾವಶ್ಯಕ’ ಎಂದು ನಮಗನ್ನಿಸುವಂತೆ ‘ಹಟ’ ಮಾಡುತ್ತದೆ. ಸುಮ್ಮನೇ ಅಳುತ್ತದೆ. ‘ಅಮ್ಮ’ನ ಧ್ವನಿ ಕೇಳಿಸಿದಾಕ್ಷಣ ‘ಅಳು’ ಆರಂಭಿಸಿ ಆ ಕಡೆಗೆ ಹೋಗಲು ಹವಣಿಸುತ್ತದೆ.

ಅಂದರೆ ಬರೀ ಹಾಲು-ನಿದ್ದೆ-ಉಚ್ಚೆ-ಕಕ್ಕ ಎಂದರೂ ನವಜಾತಶಿಶುವಿಗೂ ಸ್ಪಂದಿಸುವ ಮನಸ್ಸು, ಬೆಳೆಯುವ ಮೆದುಳು ಇರುತ್ತವೆ ಎಂಬುದು ಸುಸ್ಪಷ್ಟ. ಈ ಮನಸ್ಸು-ಮೆದುಳುಗಳನ್ನು ಸರಿಯಾಗಿ ಪ್ರಚೋದಿಸುವುದು ಮಗುವಿನ ಆರೋಗ್ಯಕರ ಬೆಳವಣಿಗೆಗೆ, ಮುಂದೆ ಬರಬಹುದಾದ ಎಷ್ಟೋ ಕಾಯಿಲೆಗಳನ್ನು ತಡೆಗಟ್ಟಲು ಆವಶ್ಯಕ.

ವಿದೇಶಗಳಲ್ಲಿ infant stimulation programme – ‘ಶಿಶು ಪ್ರಚೋದನಾ ತರಬೇತಿ’ ಎಂಬ ಕೋರ್ಸುಗಳನ್ನೇ ನಡೆಸಿ ಆಸಕ್ತರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯುತ್ತೇವೆಯೋ ಇಲ್ಲವೋ, ಆದರೆ ನಮ್ಮ ನಮ್ಮ ಸುತ್ತಮುತ್ತಲಲ್ಲಿ, ನಮ್ಮದೇ ಮನೆಗಳಲ್ಲಿ ಹುಟ್ಟುವ ಶಿಶುಗಳಿಗೆ ಈ ಪ್ರಚೋದನೆಯನ್ನು ಉಪಯೋಗಿಸುವುದು, ಮಕ್ಕಳಿಗೆ ನಾವು ನಿಜಾರ್ಥದಲ್ಲಿ ನೀಡುವ ಕೊಡುಗೆ.

ಶಿಶುಗಳಿಗೆ ಹುಟ್ಟಿನಿಂದಲೇ ಕಲಿಯುವ ಆಸಕ್ತಿ-ಆವಶ್ಯಕತೆ ಎರಡೂ ಇರುತ್ತವೆ. ಇವುಗಳಿಗೆ ಮೂಲವಾದ ಮೆದುಳಿನ ‘ನೆಟ್‌ವರ್ಕಿಂಗ್’ ಅಂದರೆ ಕೊಂಡಿಗಳು -Synapses ಮೊದಲ ಮೂರು ವರ್ಷಗಳಲ್ಲಿ ಪೂರ್ಣವಾಗಿ ಬಿಡುತ್ತದೆ. ವಯಸ್ಸಿಗೆ ತಕ್ಕ, ಆಸಕ್ತಿ ಹುಟ್ಟಿಸುವ, ಭಾವನೆಗಳೊಂದಿಗೆ ದೈಹಿಕ ಮತ್ತು ಸಾಮಾಜಿಕ  ಚಟುವಟಿಕೆಗಳ ಈ ‘ನೆಟ್‌ವರ್ಕಿಂಗ್’ ಅನ್ನು ಬಲಗೊಳಿಸಿ, ಶಾಶ್ವತ ಮಾಡುತ್ತವೆ.

ಆಸಕ್ತಿ ಹುಟ್ಟಿಸುವಂಥ ಚಟುವಟಿಕೆಗಳು ಕುತೂಹಲ ಕೆರಳಿಸುತ್ತವೆ, ಏಕಾಗ್ರತೆ ಕಾದಿಡುತ್ತದೆ, ಕಲಿಕೆಯ ಬಗ್ಗೆ ಪ್ರೀತಿಯನ್ನು ಬೆಳೆಯುವ ಶಿಶುವಿನಲ್ಲಿ ಹುಟ್ಟಿಸುತ್ತವೆ. ಮಗುವಿಗೆ ಮಾತಂತೂ ಬೇಕೇ ಬೇಕು. ಮಾತು ಇನ್ನೂ ಬರದಿದ್ದರೂ, ಕಥೆ ಹೇಳುವುದು, ಮಗುವಿಗೆ ಅರ್ಥವಾಗುತ್ತಿದೆ ಎಂದೇ ‘ಭಾವಿಸಿ’ ಮಗುವಿನೊಂದಿಗೆ ಇತರರೊಡನೆ ಮಾತನಾಡಿದಂತೆಯೇ ಮಾತನಾಡುವುದು, ಮಗುವಿನಲ್ಲಿ ನಂತರದ ಭಾಷಾ ಕಲಿಕೆಯನ್ನು ಬಲವಾಗಿ ಬೆಳೆಸುತ್ತದೆ.

ಆಸಕ್ತಿಪೂರ್ಣ ಚಟುವಟಿಕೆ ಮಾಡಬೇಕು ಎಂದಾಕ್ಷಣ ಅಪ್ಪ-ಅಮ್ಮಂದಿರು ನೆನಪಿಸಿಕೊಂಡು ತತ್‌ಕ್ಷಣ ಬಣ್ಣ ಬಣ್ಣದ ಆಟಿಕೆ ತರಲು, ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ರೀತಿಯ ಆಟದ -concept thinking ದೊಡ್ಡ ದೊಡ್ಡ ದುಬಾರಿ ಪೆಟ್ಟಿಗೆಗಳನ್ನು ಕೊಂಡು ತರಲು ಹೊರಡುತ್ತಾರೆ. ಆದರೆ ಇವು ಹೆಚ್ಚಿನ ಸಮಯ ಅಪ್ಪ-ಅಮ್ಮ ಮಕ್ಕಳ ಜೊತೆ ಕುಳಿತು ಆಡದಿದ್ದರೆ ಎರಡು ದಿನಗಳಲ್ಲಿ ಇಡೀ  ಪೆಟ್ಟಿಗೆ ಬೇರೆ ಬೇರೆ ಭಾಗಗಳಾಗಿ ಮನೆಯಲ್ಲಿ ಎಲ್ಲೆಂದರಲ್ಲಿ ಸಿಗತೊಡಗುತ್ತವೆ!

ಮಕ್ಕಳಿಗೆ, ಅವರ ಬೌದ್ಧಿಕ-ಬೆಳವಣಿಗೆಗೆ ನಿಜವಾಗಿ ಬೇಕಾದದ್ದು ಅಪ್ಪ-ಅಮ್ಮ ಸ್ವತಃ ಪಾಲ್ಗೊಳ್ಳುವ ಆಟಗಳಿಂದ ಉಂಟಾಗುವ ಪ್ರಚೋದನೆ. ಯಾವುದೇ ವಯಸ್ಸಿನಲ್ಲಿಯೂ ಇದು ನಿಜವೇ ಆದರೂ, ಮೊದಲ ಮೂರು ವರ್ಷಗಳಲ್ಲಿ ಇದು ತುಂಬಾ ಮುಖ್ಯ. ಅಂದರೆ ಅಪ್ಪ-ಅಮ್ಮ ಮಗುವಿನ ಮಟ್ಟಿಗೆ ಒಂದು ನಡೆದಾಡುವ, ಮಾತನಾಡುವ, ಮುಟ್ಟುವ ಮತ್ತು ಅದರೊಂದಿಗೆ ಮುದ್ದು ಮಾಡುವ ಒಂದು ‘ಆಟಿಕೆ’ಯೇ!  ಮಗುವಿಗೆ ಬೇಕಾದದ್ದು ‘ಆಟಿಕೆ’ಗಿಂತ ಅಪ್ಪ-ಅಮ್ಮನ ಸಮಯ!

ಮಕ್ಕಳನ್ನು ಮುದ್ದು ಮಾಡುವುದು, ಸ್ಪರ್ಶಿಸುವುದು, ಮೈ ಸವರುವುದು, ಇವು ‘ಅಮ್ಮ’ನ ಕರ್ತವ್ಯವೂ ಅಧಿಕಾರವೂ ಹೌದು. ಬೇರೆಯವರ ಮಟ್ಟಿಗೆ ಮುದ್ದು ಮಾಡುವುದು ಸ್ಪರ್ಶ-ಮೃದುವಾಗಿ ಕಾಲು ಸವರುವುದಕ್ಕೆ ಸೀಮಿತವಾದರೆ ಸಾಕು! ನವಜಾತಶಿಶುವಿಗೆ ಎಣ್ಣೆ ಹಚ್ಚುವಾಗಲೂ ಅಷ್ಟೆ, ಮಗುವಿಗೆ ಮಾತು ಬರದೆಂದು, ಟಿ.ವಿ. ನೋಡುತ್ತಾ ಎಣ್ಣೆ ಹಚ್ಚಬೇಡಿ. ನೀವೇನು ಮಾಡುತ್ತಿದ್ದೀರಿ ಎಂಬ ‘ರನ್ನಿಂಗ್ ಕಾಮೆಂಟರಿ’ ನೀಡುತ್ತಾ, ಅದರೊಂದಿಗೆ ಬೇರೆ ಬೇರೆ ಶಬ್ದ ಮಾಡುತ್ತ, ಹಾಡು ಹೇಳುತ್ತ ಮಸಾಜ್ ಮಾಡಿ.

ಕಣ್ಣನ್ನು ನೋಡಿ ಮಾತನಾಡುವುದು, ಮಕ್ಕಳು ನಮ್ಮ ಮುಖ ದಿಟ್ಟಿಸುವಾಗ ಕಣ್ಸೆರೆ ಹಿಡಿದು ಹೆಸರು ಹಿಡಿದು ಕೂಗುವುದು, ಬಾಯಿಯಲ್ಲಿ ವಿವಿಧ ಶಬ್ದಗಳನ್ನು ಮಾಡುವುದು, ಮಕ್ಕಳಲ್ಲಿ ಭಾವನಾತ್ಮಕ ಸ್ಪಂದನೆಯನ್ನು ಹೆಚ್ಚಿಸುತ್ತದೆ. ಎಳೆಯ ಮಗು ಎಂದು ಎಲ್ಲಿಗೂ ಕರೆದೊಯ್ಯದೆ ಇರಬೇಕಾಗಿಲ್ಲ. ತಾಯಿಗೆ ಮಗುವನ್ನು ನಿಭಾಯಿಸುವ ಸಾಮರ್ಥ್ಯವಿದ್ದರೆ, ಇತರರ ಬೆಂಬಲವಿದ್ದರೆ ಹೊಸ ಹೊಸ ನೋಟುಗಳು, ಹೊಸ ಹೊಸ ಮಾತುಗಳು ಪ್ರಚೋದಕವಾಗಿ ಮೆದುಳನ್ನು ಬೆಳೆಸಬಲ್ಲವು. ಮಲಗಿಸುವಾಗ ಹಾಡುವ ಲಾಲಿ ಹಾಡುಗಳು, ಬೇರೆ ಬೇರೆ ರೀತಿಯ ಲಯದಲ್ಲಿ -‘ರಿದಂ’ನಲ್ಲಿ ಹಾಡುವುದು – ಇವು ಮಗುವಿನ ಕಿವಿ, ಮನಸ್ಸು, ಬುದ್ಧಿ ಎಲ್ಲವನ್ನೂ ಚುರುಕುಗೊಳಿಸುತ್ತವೆ.

ಅಪ್ಪ-ಅಮ್ಮಂದಿರ ಅಪ್ಪುಗೆ, ಸ್ಪರ್ಶ, ಎದೆಗೊತ್ತಿ ಹಿಡಿದುಕೊಳ್ಳುವುದು, ಕೈ ಹಿಡಿದುಕೊಳ್ಳುವುದು ಇವೆಲ್ಲ ಸ್ಪರ್ಶಗಳೂ ಮಗುವಿನಲ್ಲಿ ‘ಸುರಕ್ಷಿತ’ ಭಾವನೆಯನ್ನುಂಟುಮಾಡುತ್ತವೆ. ತನ್ನ ದೇಹ, ಇತರರ ದೇಹ ಬೇರೆ ಬೇರೆ ಎಂಬ ಅರಿವೂ ಉಂಟಾಗುತ್ತದೆ. ಸಂಬಂಧಗಳಲ್ಲಿ ವಿಶ್ವಾಸ, ನಂಬುಗೆ, ಹೊಂದಾಣಿಕೆ, ಬಾಂಧವ್ಯಗಳ ಮುಖ್ಯ ತಳಹದಿ ಉಂಟಾಗುವುದು ಈ ವಯಸ್ಸಿನಲ್ಲಿಯೇ. ಮಕ್ಕಳನ್ನು ಎತ್ತಿಕೊಳ್ಳುವುದು, ನೇವರಿಸುವುದು ಮಿದುಳಿನಿಂದ ದೇಹದ ಬೆಳವಣಿಗೆಗೆ ಅಗತ್ಯವಾದ ಹಾರ್ಮೋನುಗಳನ್ನು ಸ್ರವಿಸುವಂತೆ ಮಾಡುತ್ತದೆ. ನಮ್ಮಲ್ಲಿ ಹೆಚ್ಚಿನ ತಾಯಂದಿರು ಮಕ್ಕಳು ಅತ್ತ ತಕ್ಷಣ ಹಾಲೂಡುತ್ತಾರೆ, ಇಲ್ಲವೇ ಬಾಟಲ್ ಹಿಡಿಯುತ್ತಾರೆ. ಅಳುವ ಮಗುವಿನ ಆವಶ್ಯಕತೆ ಕೇವಲ ಆಹಾರವಲ್ಲ. ಹಾಗಾಗಿ ಹಾಲೂಡುವಾಗ, ಮಗುವಿನೊಡನೆ ಮಾತನಾಡುವುದು, ಭಾವನಾತ್ಮಕ ಸ್ಪರ್ಶ ಮಗುವಿಗೆ ಗಮನ ನೀಡುವುದು ಇವು ಅಗತ್ಯ.

ವೇಗವಾಗಿ ಸಂಬಂಧಗಳು ಕಳೆದುಹೋಗುತ್ತಿವೆ. ಅಪ್ಪ-ಅಮ್ಮಂದಿರ ಸ್ಥಳವನ್ನು ಕಂಪ್ಯೂಟರ್-ಮೊಬೈಲ್-ಐ ಪ್ಯಾಡ್‌ಗಳು ಆವರಿಸುತ್ತಿವೆ. ಮೂರು ತಿಂಗಳ ಮಗುವೂ ಟಿ.ವಿ.ಯ ಮುಂದೆ ಹಾಕಿದೊಡನೆ ಟಿ.ವಿ.ಯೆಡೆಗೆ ತಿರುಗುವುದನ್ನು ನೋಡುತ್ತೇವೆ. ತಂತ್ರಜ್ಞಾನಕ್ಕೆ ಸ್ವಲ್ಪ ಕಡಿವಾಣ ಹಾಕಿ ಮರಳಿ ಮಾನವ ಮೆದುಳನ್ನು ಕುತೂಹಲದಿಂದ, ಪ್ರಯೋಗ ಮುಖೇನ ನೋಡಬಹುದಾದ ಸಂದರ್ಭ ಎಳೆಯ ಶಿಶುವಿನ ಬಾಲ್ಯ. ಅದನ್ನು ಕಳೆಯದಿರೋಣ, ಕಳೆದುಕೊಳ್ಳದಿರೋಣ! ಮಗುವಿಗೂ ಮನಸ್ಸಿದೆ ಎಂದು ಮರೆಯದಿರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT