ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡ ಗಡ ಚಳಿಗೆ ನಲುಗದಿರಲಿ ಆರೋಗ್ಯ

Last Updated 23 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅಧ್ಯಯನವೊಂದರ ಪ್ರಕಾರ ಚಳಿಗಾಲದ ಅವಧಿಯಲ್ಲಿ ಮಧ್ಯರಾತ್ರಿಯ ಹೃದಯಾಘಾತ ಮತ್ತು ಹೃದಯಸ್ತಂಭನದ ಮರಣ ಅಧಿಕ. ಚಳಿಗಾಲದಲ್ಲಿ ರಕ್ತನಾಳಗಳಲ್ಲಿ, ಚರ್ಮದಲ್ಲಿ ರಕ್ತಸಂಚಾರಕ್ಕೆ ಕೊಂಚ ಅಡಚಣೆ. ನೀವೇ ತಿಳಿದಿದ್ದೀರಿ. ಚರ್ಮದ ಬಿರುಕು, ಬಿರುಸು ಸಹಜವಾಗಿ ಚಳಿಗಾಲದಲ್ಲಿ ಅಧಿಕಾಧಿಕ. ಅದನ್ನು ಹೋಗಲಾಡಿಸುವ ಸರಳ ವಿಧಾನವೇ ಮೈಕೈಗೆ ಎಣ್ಣೆ ಹಚ್ಚುವ ಮತ್ತು ಹದವಾದ ಬಿಸಿನೀರಲ್ಲಿ ಮೀಯುವ ಪದ್ಧತಿ. ಅದಕ್ಕೆ ‘ಅಭ್ಯಂಗಸ್ನಾನ’ ಎಂಬ ಹಬ್ಬದ ಪಟ್ಟ. ಹಾಗೆ ಮಿಂದದ್ದೇ ದೀವಳಿಗೆಯ ದಿನಗಳು.

ಅಲ್ಲಿಂದಲೇ ಚಳಿಯ ಕುಳಿರ್ಗಾಳಿ ಕಚಗುಳಿಯಿಡಲು ಆರಂಭ. ಅಂದಿನಿಂದ ಇಂತಹ ಅಭ್ಯಂಗದ ರಿವಾಜು ನಮ್ಮದಾಗಿತ್ತು. ವೇದಮಂತ್ರದ ‘ಜೀವೇದ ಶರದಃ ಶತಂ’ – ಅಂದರೆ ನೂರ್ಕಾಲ ಬಾಳಿರಿ ಎಂಬ ಆಶಯ ನಿಜವಾಗಲು ಇದು ಪೂರಕ. ಹೃದಯಾರೋಗ್ಯ ಕಾಪಾಡಬೇಕೆ? ಚಳಿಗಾಲದ ತೈಲಾಭ್ಯಂಗ ಕೈಗೊಳ್ಳಿರಿ. ಉಗುರು ಹದ ಬಿಸಿಸ್ನಾನ.

ನೆತ್ತಿಗೆ, ಮೈ, ಕೈಗೆ ನೆತ್ತಿಗೆ ಒತ್ತುವ ಎಣ್ಣೆ ಎಳ್ಳಿನದೋ, ಹರಳೆಣ್ಣೆಯೋ ಸೈ. ಕೊಬ್ಬರಿ ಎಣ್ಣೆಯಾದರೂ ಜೈ. ಕೊಂಚ ಬಿಸಿಯಾಗಿರಲಿ. ಹಚ್ಚಿರಿ. ಕೊಂಚ ಹೊತ್ತು, ಅಂದರೆ ಇಪ್ಪತ್ತು ನಿಮಿಷ ಕಳೆಯಿರಿ. ಎಳೆಬಿಸಿಲಿಗೆ ಒಡ್ಡಿದರೆ ಸಂತೋಷ. ಅನಂತರ ಸುಖೋಷ್ಣಜಲದಲ್ಲಿ ಸ್ನಾನ. ಮೈ ಉಜ್ಜಲು ಸೀಗೆಬಾಗೆಯ ಪುಡಿ ಹಿಂದೆ ಬಳಕೆ ಇತ್ತು.  ಅದು ಒರಟು ಎಂದು ಹೀಗಳೆಯದಿರಿ. ಚರ್ಮದಡಿ ಕೊಬ್ಬು ಶೇಖರಣೆಗೆ ಅದರಿಂದ ಕಡಿವಾಣ. ಕಡಲೆ ಹಿಟ್ಟು, ಹೆಸರು ಹಿಟ್ಟು ಒಳಿತು. ಎಣ್ಣೆಯ ಜಿಡ್ಡಷ್ಟೆ ಅವು ತೆಗೆಯುವುದಿಲ್ಲ. ಚರ್ಮಾರೋಗ್ಯಕ್ಕೆ ಪೂರಕ. ರಕ್ತಸಂಚಾರಕ್ಕೆ ಸಲೀಸು. ಹೃದಯಕ್ಕೆ ಒತ್ತಡ ಬೀಳುವ ಪ್ರಮೇಯ ಇಲ್ಲ. ದೇಹದ ಮೂಲೆ ಮೂಲೆಗೆ ಸತತ ನೆತ್ತರು ಪ್ರವಹಿಸಲು ಅದೆಷ್ಟು ಕಷ್ಟವಿದೆ ಗೊತ್ತೆ? ದೇಹಾಭ್ಯಂಗ ನಿತ್ಯ ಕೈಗೊಳ್ಳಿರಿ. ಹೃದಯವೆಂಬ ದೈವದತ್ತ ಪಂಪು ಯಾವೊಂದು ರೀಬೋರ್, ಷಂಟಿಂಗ್‌ಗೊಳಗಾಗುವ ಭಯ ಆಗ ಇಲ್ಲ. ನೂರ್ಕಾಲ ನಮ್ಮ ಸಂಗಡ ತಾಳಮೇಳದಿಂದ ಬದುಕಲು ಅದು ಸಹಕಾರಿ.

ಶೀತಗಾಳಿ ಸತತ ಬೀಸುವ ದಿನಗಳಿವು. ಋತುಸುಖವಾದ ಬಟ್ಟೆ ಧರಿಸಬೇಕು. ಅಂದರೆ ಮೈ ಕೈಗೆ ಚಳಿಯ ಕೊರೆತ ತಟ್ಟಬಾರದು. ನಸುಕಿನ ನಡಿಗೆಯ ರೂಢಿ ಇದ್ದರೆ ಮೈತುಂಬ ದಿರಸಿರಲಿ. ಕಾಲು ಚೀಲ, ಕೈಗವುಸು, ಮುಖಕ್ಕೆ ಕೂಡ ಶೀತಗಾಳಿ, ಮಂಜಿನ ವಿರುದ್ಧ ರಕ್ಷಣೆ ಒಳಿತು. ಕೊರೆಯುವ ಚಳಿಯ ದೆಸೆಯಿಂದ ಚಳಿಗಾಲದಲ್ಲಿ ಹಸಿವು ಹೆಚ್ಚುವುದು ಎಂಬ ಉಲ್ಲೇಖ ಚರಕಸಂಹಿತೆಯದು. ಎಂತಹ ಗುರು, ಅಂದರೆ ಜೀರ್ಣಕ್ಕೆ ಕಷ್ಟ ಎನಿಸುವ ಆಹಾರವನ್ನೂ ಜಾಠರಾಗ್ನಿ ದಹಿಸಿಬಿಡುವುದಂತೆ.

ಆದ್ದರಿಂದ ಅಂತಹ ಗುರು ಆಹಾರಸೇವನೆ ವಿಹಿತ. ಪೊಂಗಲ್ ಎರಡು ಬಗೆಯದು ನಮಗೆ ತಿಳಿದಿದೆ. ಹೆಸರುಬೇಳೆಯಂತೂ ಆಯುರ್ವೇದ ಪ್ರಕಾರ ಅತ್ಯಂತ ಪಥ್ಯತಮ, ಅಂದರೆ ಒಳಿತು ಮಾಡುವ ದ್ವಿದಳ ಧಾನ್ಯ. ಇದೀಗ ತಾನೇ ಕೊಯಿಲಾದ ಆಹಾರ ದವಸ–ಧಾನ್ಯ ಮನೆಯ ಉಗ್ರಾಣ ಸೇರುವ ಸುಗ್ಗಿಯ ಸಮಯವಿದು. ಅಂತಹ ಹೊಸ ದವಸ–ಧಾನ್ಯದ ಜೀರ್ಣಪ್ರಕ್ರಿಯೆ ಕೊಂಚ ನಿಧಾನವೇ. ಬೆಲ್ಲದಂತಹ ಸಿಹಿ ಸೇರಿದ ಹುಗ್ಗಿಯೇ ಸಿಹಿ ಪೊಂಗಲ್. ಖಾರ ಪೊಂಗಲ್‌ನ ಕಾಳು ಮೆಣಸು, ಶುಂಠಿಯ ಹದ ಖಾರದ ಉಪಯೋಗ ಆಪಾರ. ಕಫ, ಶೀತಸಂಬಂಧಿ ಕಾಯಿಲೆ ತಡೆಗೆ ಅದು ಹಾದಿ. ಹಾಲಿನ ಉತ್ಪನ್ನ , ಅಂದರೆ ತುಪ್ಪ, ಕೆನೆ, ಪನೀರ್, ಸಿಹಿ ಮೊಸರುಗಳನ್ನು ಧಾರಾಳ ಬಳಸೋಣ. ಉದರದ ಅತ್ಯಗ್ನಿಯನ್ನು ತಣಿಸೋಣವೆ?

ಹುಳಿ, ಸಿಹಿ ಮತ್ತು ಉಪ್ಪು ಬಳಸಲು ಶೀತಋತುಗಳಲ್ಲಿ ಅಡ್ಡಿಯಿಲ್ಲ. ವಿಟಮಿನ್ ಸಿ ಎಂದರೆ ತಕ್ಷಣ ನಮಗರ್ಥವಾಗುವ ಪರಿಭಾಷೆ ತಾನೇ. ಉತ್ಥಾನ ದ್ವಾದಶಿ ದಿನ ಮನೆಯಂಗಳಕ್ಕೆ ಬರುವ ನೆಲ್ಲಿಯಲ್ಲಿ ಹುಳಿ ರಸ ಇದೆ. ಸಿಹಿಯೂ ಇದೆ. ಅಂತಹ ಚಿನ್ನದ ಗುಣಗಳ ನೆಲ್ಲಿಯ ಬಳಕೆ ಹೃದಯದ ಬಲಕ್ಕೆ ಪೂರಕ. ಮಧುಮೇಹಿಗಳಿಗಂತೂ ನೆಲ್ಲಿಯ ಬಳಕೆಯಿಂದ ಅಪಾರ ಲಾಭ. ಅತ್ತ ಚಳಿಗಾಲದ ಬಹುಮೂತ್ರದ ತೊಂದರೆಗೆ ಕಡಿವಾಣ. ಇತ್ತ ಹುಳಿಸಿಹಿಯ ನೆಲ್ಲಿಯ ಮುರಬ್ಬ, ಲೇಹ ತಿಂದು ದೇಹಕ್ಕೆ ಪುಷ್ಟಿ. ಸಾವಿರ ವರ್ಷದ ಹಿಂದೆಯೇ ಅಲ್ಲಮ ಪ್ರಭು ಸಾರಿದರಲ್ಲ – ‘ಬೆಟ್ಟದಾ ನೆಲ್ಲಿಯ ಕಾಯಿ, ಸಮುದ್ರದಾ ಉಪ್ಪು ಎತ್ತಣಿಂದೆತ್ತಣ ಸಂಬಂಧವಯ್ಯಾ?’ ನಿಜ. ಅಂತಹ ಎರಡೂ ಸುವಸ್ತುಗಳನ್ನು ಸೇರಿಸಿ ತಯಾರಿಸಿದ ನೆಲ್ಲಿಯ ಉಪ್ಪಿನ ಕಾಯಿ ಬಳಸಿರಿ. ಬಾಯಿ ರುಚಿ ಕಾಪಾಡಿಕೊಳ್ಳಿರಿ. ಶೀತ, ಕಫದ ತೊಂದರೆ ದೂರವೇ ಇರಲಿ. ಮಾಂಸಾಹಾರಿಗಳಿಗೆ ಮೀನು, ಉಪ್ಪಲ್ಲಿಟ್ಟ ಮೀನು ಬಳಕೆ ಸೂಕ್ತ. ಖಾರ, ಕಹಿ ಮತ್ತು ಒಗರು ರಸದ ಆಹಾರಸೇವನೆ ನಿಷಿದ್ಧ. ಖಾರ, ಕಹಿ ಸೈ. ಒಗರು ಯಾವುದು ಎಂದಿರಾ? ದಿನಕ್ಕೆ ಹತ್ತಿಪ್ಪತ್ತು ಸಾರಿ ಚಹ, ಡಿಕಾಕ್ಷನ್ ಚಹ ಅತ್ಯಂತ ಒಗರು ರಸದ್ದು. ಅದು ಬೇಡ.

ಇದೀಗ ಎಳ್ಳಮವಾಸ್ಯೆ ಎಂಬ ಚಳಿ ದಿನಗಳ ಹಬ್ಬದ ಕಾಲ. ಅಂದು ಎಳ್ಳು ಕೊಳ್ಳುವ ಸಡಗರ. ತೀರ್ಥಸ್ನಾನದ ಸಮಯ. ಅನಂತರ ಬರುವ ಸಂಕ್ರಾಂತಿ. ಆಗಲಂತೂ ಮನೆ ಮನೆಗೆ ಎಳ್ಳು ಹಂಚುವ ಸಂಭ್ರಮ. ಎಳ್ಳು ಎಂಬ ಧಾನ್ಯದ ಅಪೂರ್ವ ಕೆಲರಿ (ಶಾಖ) ಕಸುವು ನಮ್ಮ ಹಿರಿಯರಿಗೆ ತಿಳಿದಿತ್ತು. ಅದಕ್ಕಾಗಿ ಚಳಿಗಾಲದಲ್ಲಿ ಹಬ್ಬದ ನೆಪದಲ್ಲಿ ಎಳ್ಳುಂಡೆ, ಕುಸುರಿ ಎಳ್ಳಿನ ಹಂಚೋಣದಿಂದ ಆರೋಗ್ಯ ಕಾಳಜಿ ಪ್ರವ್ಯಕ್ತ. ಜೊತೆಗೆ ಹಂಚುವ ಕಬ್ಬು ಸಿಹಿರಸದ ಮಧುರಬಾಂಧವ್ಯ ಹೆಚ್ಚಿಸೀತು.

ಬೋರೆ ಅಥವಾ ಎಲಚಿಯ ಹಣ್ಣು ನೆಲ್ಲಿಗಿಂತ ಮಿಗಿಲಾದ ಕಾಡಿನ ಹಣ್ಣು. ಅಂದು ಶಬರಿ ರಾಮನಿಗೆ ನೀಡಿದ ಶ್ರಮ ಪರಿಹಾರಿ. ಬದರೀ–ಕೇದಾರದಿಂದ ನಮ್ಮೂರಿನ ಬೋರೆಯ ವರೆಗೆ ಲಭ್ಯವಿರುವ ಬದರಿಫಲ ಇದು; ಸಕ್ಕರೆಯ ವಿವಿಧ ರೂಪಾಂತರದ ಗಣಿ. ಚಳಿಗಾಲದ ಹಣ್ಣುಗಳ ರಾಜ ಬೋರೆ ಹಣ್ಣು. ಕಿತ್ತಳೆ, ಮೋಸಂಬಿ, ದಾಳಿಂಬೆ – ಎಲ್ಲವೂ ಹುಳಿ ಸಿಹಿಯವು. ಧಾರಾಳ ಬಳಸುವಾ. ಹೃದಯಾರೋಗ್ಯ ಕಾಪಾಡುವಾ. ಐಸ್ ಕ್ರೀಂ, ತಣ್ಣಗಿನ ಪಾನೀಯ, ಹಣ್ಣಿನ ರಸ ಬೇಡ. ಬಿಸಿ ನೀರು ಕುಡಿಯಲು ಬಳಸೋಣ. ಜೇನಿನ ಹಿತಮಿತ ಸೇವನೆಗೆ ಅಡ್ಡಿಯಿಲ್ಲ.

ಮನೆಯೊಳಗೆ ಶಾಖ ಇರುವಂತೆ ನೋಡಿಕೊಳ್ಳಿರಿ. ನಡುರಾತ್ರಿಯ ಶೀತ ಗಾಳಿಯಿಂದ ಉಸಿರಾಟ ಕಷ್ಟವಾಗುತ್ತದೆ. ಅದಕ್ಕಾಗಿ ಉಷ್ಣತೆ ಸದಾ ಕಾಪಾಡುವ ಅಗ್ಗಿಷ್ಟಿಕೆ ವ್ಯವಸ್ಥೆ ಹಿಂದೆ ಇತ್ತು. ಈಗ ರೂಂ ಹೀಟರ್ ಸವಲತ್ತು ಇದೆ. ಅಗತ್ಯ ಇದ್ದರೆ ಅಂತಹದು ಇರಲಿ.  ಉಣ್ಣೆ (ವುಲನ್), ಚರ್ಮ, ಗೋಣೀತಾಟು, ಕಂಬಳಿಯಂತಹ ದಪ್ಪನೆ ಬಟ್ಟೆಗಳ್ನು ಹೊದ್ದು ಮಲಗುವ ಉಲ್ಲೇಖ ಚರಕ ಸಂಹಿತೆಯಲ್ಲಿದೆ.

ಎರಡೂವರೆ ಸಾವಿರ ವರ್ಷ ಪೂರ್ವದ ಚಳಿಗಾಲದ ಚರ್ಯೆ ಅದರಲ್ಲಿದೆ. ಚಳಿಗಾಲದ ಚಳಿಯನ್ನು ಹೊಡೆದೋಡಿಸಲು ಅಂಗಸಂಗದ ಸುಖವನ್ನು ಅನುಭವಿಸುವ ಬಗ್ಗೆ ಚರಕ ಮತ್ತು ಸುಶ್ರುತಸಂಹಿತೆಗಳಂತಹ ಪ್ರಾಚೀನ ಗ್ರಂಥಗಳು ವಾತ್ಸ್ಯಾಯನನ ಮತವನ್ನು ಪುಷ್ಟೀಕರಿಸುತ್ತವೆ. ‘ಬೆಚ್ಚನೆಯ ಮನೆಯಾಗಿ, ಇಚ್ಛೆಯನರಿತು ನಡೆಯುವ ಸತಿಯಿರಲಿ’ – ಎಂಬ ಸರ್ವಜ್ಞ ನುಡಿ ಚಳಿಗಾಲಕ್ಕೆ ಸಲ್ಲುತ್ತದೆ. ಇಂತಹ ಹಿತ ಮಿತದ ಚರ್ಯೆ ಚಳಿಗಾಲಕ್ಕಿರಲಿ. ನೂರ್ಕಾಲ ಬಾಳುವ ಆರೋಗ್ಯ ಭಾಗ್ಯ ನಮ್ಮದಾಗಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT