ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗ್ಗಿನ ಉಪಾಹಾರಕ್ಕೆ ಥರಾವರಿ ತಿಂಡಿ...

Last Updated 23 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಬಾಳೆದಿಂಡಿನ ಬಜ್ಜಿ
ಬೇಕಾಗುವ ಸಾಮಗ್ರಿ
ಬಾಳೆದಿಂಡು ಬಿಲ್ಲೆ 10, ಕಡಲೆಹಿಟ್ಟು ಎರಡು ಕಪ್‌, ಉಪ್ಪು ರುಚಿಗೆ, ಒಣಮೆಣಸಿನ ಪುಡಿ ಸ್ವಲ್ಪ, ಇಂಗು ಚಿಟಿಕೆ, ಕರಿಯಲು ಎಣ್ಣೆ

ಮಾಡುವ ವಿಧಾನ
ಬಾಳೆದಿಂಡನ್ನು ತೆಳ್ಳಗೆ ಬಿಲ್ಲೆ ಮಾಡಿಟ್ಟುಕೊಳ್ಳಿ. ಒಂದು ಬೌಲ್‌ನಲ್ಲಿ ಕಡಲೆಹಿಟ್ಟು ಹಾಕಿ ಅದಕ್ಕೆ ಇಂಗು, ಉಪ್ಪು, ಒಣಮೆಣಸಿನಕಾಯಿ ಪುಡಿ ಹಾಕಿ ಕಲಸಿಟ್ಟುಕೊಳ್ಳಿ. ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾದ ಮೇಲೆ ಬಿಲ್ಲೆ ಮಾಡಿಟ್ಟುಕೊಂಡ ಬಾಳೆದಿಂಡನ್ನು ಕಡಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕೆಂಪಗಾಗುವಷ್ಟು ಕರಿದು ತೆಗೆಯಿರಿ. ಇದು ತಿನ್ನಲು ಬಹಳ ರುಚಿಯಾಗಿರುತ್ತದೆ.

ರಾಗಿ ಇಡ್ಲಿ
ಬೇಕಾಗುವ ಸಾಮಗ್ರಿ

ರಾಗಿ ಎರಡು ಕಪ್‌, ಅಕ್ಕಿ ಅರ್ಧ ಕಪ್‌, ಉದ್ದಿನಬೇಳೆ ಅರ್ಧ ಕಪ್‌, ಉಪ್ಪು ರುಚಿಗೆ, ಅವಲಕ್ಕಿ ಒಂದು ಹಿಡಿ

ಮಾಡುವ ವಿಧಾನ
ರಾಗಿ, ಅಕ್ಕಿ, ಉದ್ದಿನಬೇಳೆಗಳನ್ನು ಪ್ರತ್ಯೇಕವಾಗಿ ನೆನೆಸಿ. ಮಿಕ್ಸಿಗೆ ಹಾಕಿ ಇಡ್ಲಿ ಹಿಟ್ಟು ಹದಕ್ಕೆ ರುಬ್ಬಿಕೊಂಡು ಉಪ್ಪು ಸೇರಿಸಿ. ಅವಲಕ್ಕಿಯನ್ನು ನೆನೆಸಿ ರುಬ್ಬಿ ಇದೇ ಹಿಟ್ಟಿಗೆ ಸೇರಿಸಿ. ಇಡ್ಲಿ ತಟ್ಟೆ ಅಥವಾ ಪಾತ್ರೆಯಲ್ಲಿ ಹಿಟ್ಟು ಹಾಕಿ 15 ನಿಮಿಷ ಆವಿಯಲ್ಲಿ ಬೇಯಿಸಿ. ಸಾಂಬಾರಿನೊಂದಿಗೆ ರುಚಿಯಾಗಿರುತ್ತದೆ.

ನವಣೆ ಬಿಸಿಬೇಳೆಬಾತ್‌
ಬೇಕಾಗುವ ಸಾಮಗ್ರಿ

ನವಣೆ 2 ಕಪ್‌, ಬೆಳ್ತಿಗೆ ಅಕ್ಕಿ ಕಾಲು ಕಪ್‌, ಬಿಸಿಬೇಳೆಬಾತ್‌ ಪುಡಿ ನಾಲ್ಕು ಚಮಚ, ಹುಣಸೆ ಹಣ್ಣು ಗೋಲಿ ಗಾತ್ರದ್ದು, ಬೆಲ್ಲ ಒಂದು ಸಣ್ಣ ಉಂಡೆ, ಉಪ್ಪು ರುಚಿಗೆ, ಬಟಾಣಿ ಅರ್ಧ ಕಪ್‌, ಎಣ್ಣೆ ನಾಲ್ಕು ಚಮಚ, ತರಕಾರಿ– ಹೆಚ್ಚಿದ ಬೀನ್ಸ್‌, ಬಟಾಟೆ, ಕ್ಯಾರೆಟ್‌, ಟೊಮ್ಯಾಟೊ. ಎಲ್ಲ ಸೇರಿ ಒಂದು ಕಪ್‌, ಗೋಡಂಬಿ, ದ್ರಾಕ್ಷಿ, ತುಪ್ಪ (ಬೇಕಿದ್ದರೆ ಮಾತ್ರ)

ಮಾಡುವ ವಿಧಾನ
ಒಂದು ಕುಕ್ಕರ್‌ಗೆ ಅಕ್ಕಿ ತೊಳೆದು ಹಾಕಿ, ನವಣೆಯನ್ನೂ ತೊಳೆದು ಹಾಕಿ. ಉಪ್ಪು, ಹುಳಿ, ಬೆಲ್ಲ, ಹೆಚ್ಚಿಟ್ಟ ತರಕಾರಿಗಳು, ಬಟಾಣಿ ಎಲ್ಲ ಹಾಕಿ ನಾಲ್ಕು ಲೋಟ ನೀರು ಹಾಕಿ. ಬಿಸಿಬೇಳೆಬಾತ್‌ ಪುಡಿ ಇದಕ್ಕೆ ಹಾಕಿ ತೊಳಸಿ. ಕುಕ್ಕರ್‌ ಮೂರು ವಿಷಲ್‌ ಬಂದ ಮೇಲೆ ಕೆಳಗಿಳಿಸಿ. ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವಿನ ಎಲೆ ಹಾಕಿ ಒಗ್ಗರಣೆ ಕೊಡಿ. ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಸೇರಿಸಿ. ಮೊಸರಿನೊಂದಿಗೆ ಸವಿಯಿರಿ.

ಸೌತೆಕಾಯಿ ಇಡ್ಲಿ
ಬೇಕಾಗುವ ಸಾಮಗ್ರಿ

ಎಳೆ ಸೌತೆಕಾಯಿ ಅಥವಾ ಮುಳ್ಳುಸೌತೆ ತುರಿ ಎರಡು ಕಪ್‌, ಬೆಳ್ತಿಗೆ ಅಕ್ಕಿ ಒಂದು ಕಪ್‌, ಕಾಯಿತುರಿ ಒಂದು ಕಪ್‌, ಬೆಲ್ಲ ಸ್ವಲ್ಪ, ಉಪ್ಪು ರುಚಿಗೆ

ಮಾಡುವ ವಿಧಾನ
ಅಕ್ಕಿಯನ್ನು ಐದಾರು ಗಂಟೆಗಳ ಕಾಲ ನೆನೆಸಿ. ನಂತರ ನೀರು ಬಸಿದು, ಉಪ್ಪು ಬೆಲ್ಲ ಹಾಕಿ ತರಿ ತರಿಯಾಗಿ ರುಬ್ಬಿ. ಇದಕ್ಕೆ ಸೌತೆಕಾಯಿ ತುರಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಬೇಕಿದ್ದರೆ ಸ್ವಲ್ಪ ಮೊಸರು ಹಾಕಬಹುದು. ಇಡ್ಲಿ ತಟ್ಟೆಗೆ ಹಾಕಿ 15 ನಿಮಿಷ ಹಬೆಯಲ್ಲಿ ಬೇಯಿಸಿ. ಕಾಯಿ ಚಟ್ನಿಯೊಂದಿಗೆ ಬಹಳ ರುಚಿ. ಆರೋಗ್ಯಕ್ಕೂ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT