ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಶಾಲೆಯೂ ಪ್ರಯೋಗಶಾಲೆಯೇ

Last Updated 23 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮಹಿಳೆಯರು ವಿಜ್ಞಾನವನ್ನು ಕಲಿಯಲು ಅಪೇಕ್ಷಿಸುವುದಿಲ್ಲ ಎಂಬ ಸಾಮಾನ್ಯ ವೀಕ್ಷಣೆ ಭಾರತದ ಸಮಸ್ಯೆಯಲ್ಲ. ಇದು ಜಾಗತಿಕವಾಗಿ ವ್ಯಾಪಕವಾಗಿದೆ. ವಿಜ್ಞಾನಕ್ಷೇತ್ರದ ವಿಶೇಷ ಸಾಧನೆ ಮಾಡಿದ ಮಹಿಳೆಯರಿಗೆ ಅವರ ಅರ್ಹತೆಯನ್ನು ಕಡೆಗಣಿಸಿರುವುದೂ  ಅಷ್ಟೇ ವ್ಯಾಪಕವಾಗಿದೆ. ಮೇಡಂ ಕ್ಯೂರಿಯವರ ಪತಿ ಅಪಘಾತದಲ್ಲಿ ತೀರಿಕೊಂಡಾಗ ಪತಿಯ ಹುದ್ದೆಯನ್ನು ಪತ್ನಿಗೆ ನೀಡಲೂ ಹಿಂದೆ ಮುಂದೆ ನೋಡಿದ ಸಂಗತಿ ಈಗ ಇತಿಹಾಸ!

ಆದರೆ ಅದೇ ಮಹಿಳೆ ವೃದ್ಧ ಮಾವನನ್ನು, ತನ್ನೆರಡು ಕಂದಮ್ಮಗಳನ್ನು ಸಾಕುತ್ತಲೇ ತನ್ನ ವೃತ್ತಿಯ ಘನತೆಯನ್ನು ಹೆಚ್ಚಿಸಿದ್ದಲ್ಲದೆ ನೊಬೆಲ್‌ ಪುರಸ್ಕಾರದ ದಾಖಲೆ ಗಳಿಸಿದ್ದು, ವಿರೋಧಿಸಿದ ಪಟ್ಟಭದ್ರರನ್ನು ಕೆಡವಿದ ಕ್ರಿಯಾತ್ಮಕ ಪೆಟ್ಟು. ಹೀಗಾಗಿ ಮಹಿಳೆಯರಿಗೆ ವಿಜ್ಞಾನದ ಅಭಿರುಚಿ ಇಲ್ಲವೆಂಬ ಆಂತರಿಕ ಕಾರಣಕ್ಕೆ ಬಾಹ್ಯ ಉಪೇಕ್ಷೆಯಿಂದಾಗಿರುವ ಬೇಸರವೂ ಮುಖ್ಯವಾಗುತ್ತದೆ. ಮಕ್ಕಳನ್ನು ಸಾಕುವ ಹೊಣೆ ತಾಯಿಗೆ ಮಾತ್ರ ಸೇರಿದ್ದು ಎಂಬ ಪುರುಷಹುಂಬತನವೂ ಇದಕ್ಕೆ ತನ್ನ ಕೊಡುಗೆಯನ್ನು ನೀಡುತ್ತದೆ.

ವಿಜ್ಞಾನದ ಸಂಶೋಧನೆ ಎಂದರೆ ಅದು ಒಂದು ರೀತಿಯಲ್ಲಿ ಅವೇಳೆಯ ಕೆಲಸ; ಅಪರಿಚಿತರ ಭೇಟಿ, ಹೊಸ ಊರುಗಳಿಗೆ ಪ್ರವಾಸವನ್ನೂ ಮಾಡಬೇಕಾಗುತ್ತದೆ. ಸಂಸಾರದ ಹೊಣೆ ಹೊತ್ತಿರುವ ಹೆಣ್ಣಿಗೂ ಅವಳ ಕುಟುಂಬದ ಕ್ಷೇಮಕ್ಕೂ ಅಂಥ ಸಾಹಸಗಳಿಂದಾಗಿ ಧಕ್ಕೆ ಎಂಬ ಭಾವವು ಪಿತರಿಗೂ, ಪತಿರಾಯರಿಗೂ ಇದ್ದಾಗ ಆಕೆಯ ಅಭಿರುಚಿಯು ಅಭಿವ್ಯಕ್ತಿಯಾಗಲು ಅವಕಾಶವೇ ದೊರೆಯದು.

ಆದರೆ, ಕುತೂಹಲಕ್ಕೆ ಹೆಣ್ಣು–ಗಂಡುಗಳ ಭೇದವಿಲ್ಲ. ಅದು ಎಲ್ಲರಲ್ಲೂ ಸಮಾನವಾಗಿ ಕಂಡುಬರುವ ನಿಸರ್ಗದ ಕಾಣಿಕೆ. ತೊಂದರೆ ಇರುವುದು ಪರಿಸರದಲ್ಲಿ ಎನ್ನುವಿರಾ?
ಊಹೂಂ, ಹಾಗೆ ನೋಡಿದರೆ ನಿಸರ್ಗದಲ್ಲಿ ಲಭ್ಯವಿರುವ ವಸ್ತುಗಳನ್ನು ಆಕೆ ಅಡುಗೆಯಾಗಿ ಸಂಸ್ಕರಿಸುವಾಗ ಆಕೆಗೆ ಅನೇಕ ಕುತೂಹಲಕರ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ. ಆದರೆ ಆ ಪ್ರಶ್ನೆಗಳಿಗೆ ಗೌರವವನ್ನು ನೀಡಿ ಉತ್ತರ ಹೇಳುವವರಿಲ್ಲದೆ ಅವು ‘ಗರ್ಭಪಾತ’ವಾಗಿ ಬಿಡುತ್ತವೆ. ಇಲ್ಲವೆ ಮಾತಾಗಿ ಹೊರಗೆ ಬರುವುದೇ ಇಲ್ಲ. ಬಂದರೂ ಗೇಲಿಗೋ ಉಪೇಕ್ಷೆಗೋ ಬಲಿಯಾಗಿಬಿಡುತ್ತವೆ.

ಈ ಅಂಶವನ್ನು ಗಮನಿಸಿಯೇ ಪ್ರಸ್ತುತ ಲೇಖಕ ಹೆಣ್ಣುಮಕ್ಕಳ ಕುತೂಹಲವನ್ನು ತಣಿಸಲು, ‘ಅಡುಗೆಮನೆ ವಿಜ್ಞಾನ’ ಎಂಬ ಉಪನ್ಯಾಸಮಾಲಿಕೆ ಪ್ರಾರಂಭಿಸಿದಾಗ – ಆ ಕಾರ್ಯಕ್ರಮದಲ್ಲಿ ಮಹಿಳೆಯರು ಪಾಲ್ಗೊಂಡ ಉತ್ಸುಕತೆ ಹಾಗೂ ಕೇಳಿದ ಪ್ರಶ್ನೆಗಳು, ಹೇಳಿದ ಉತ್ತರಗಳಿಗೆ ಅವರು ತೋರಿದ ಸಂತೃಪ್ತಿ ಹಾಗೂ ಧನ್ಯಭಾವ ಅವಿಸ್ಮರಣೀಯ. ಪ್ರಶ್ನೆಗಳಲ್ಲೂ ಅನೇಕವು ಅತ್ಯಂತ ಗಂಭೀರವಾಗಿದ್ದು ಅವು ಬೋಧನೆಯ ಉದಾಹರಣೆಗಳಾಗಿ, ಲೇಖನಕ್ಕೆ ಸಾಮಗ್ರಿಯಾಗಿ ಈ ಲೇಖಕನಿಗೆ ಉಪಯುಕ್ತ ಕೂಡ ಆದವು!

ಅಂದಮೇಲೆ, ಮಹಿಳೆಯರು ವಿಜ್ಞಾನಿಗಳಾಗಲು ಮಹಿಳಾ ಮನೋಭಾವ ಅಡ್ಡಿಯಲ್ಲ.
ಅಡುಗೆಮನೆಯಲ್ಲಿ ಭೌತಿಕ ಹಾಗೂ ರಾಸಾಯನಿಕ ಬದಲಾವಣೆಗಳು ಹೇರಳವಾಗಿ ಆಗುತ್ತಿರುತ್ತವೆ ಎನ್ನುವುದು ಸುಳ್ಳು; ಭೌತಿಕ ಹಾಗೂ ರಾಸಾಯನಿಕ ಬದಲಾವಣೆ ಅಲ್ಲದ್ದು ಏನೂ ಇಲ್ಲ ಎಂಬುದು ಸತ್ಯ.

ವಿಜ್ಞಾನದ ಅನೇಕ ಪದಪುಂಜಗಳು ಅಡುಗೆಮನೆಯ ಶಬ್ದಾವಳಿಗಳಿಂದ ರೂಪುಗೊಂಡವು. ಅದುರನ್ನು ‘ಹುರಿಯಲಾಗುತ್ತದೆ’ (Roasted) ಮೊಸರಿನ ಗರಣೆಯಂತಹ ಒತ್ತರ (Curdy-precipitate), Sugar of Lead (ಸೀಸದ ಸಕ್ಕರೆ=ಸೀಸದ ಅಸಿಟೇಟ್‌) - ಕೆಲವು ಉದಾಹರಣೆಗಳು ಮಾತ್ರ. ಕೆಲವೊಮ್ಮೆ ಅಡುಗೆಮನೆಯ   ಮತ್ತು ಬಟ್ಟೆಯನ್ನು ಹಾಗೂ ಪಾತ್ರೆಯನ್ನು ತೊಳೆಯುವಿಕೆಯ ವಿದ್ಯಮಾನವನ್ನು ವಿವರಿಸಲು ವಿಜ್ಞಾನದ ಎಲ್ಲ ಶಾಖೆಗಳ ಮಾಹಿತಿಯಿದ್ದರೂ ಸಾಲುವುದಿಲ್ಲ. ಸಾಂದರ್ಭಿಕವಾಗಿ ಸಮನ್ವಯಗೊಳಿಸಿ ಅನ್ವಯಿಸುವ ‘ಪ್ರತ್ಯುತ್ಪನ್ನಮತಿ’ ಇರಲೇ ಬೇಕು. ಇಲ್ಲವಾದರೆ ಊಹಿಸಿ ಹೇಳಿದ ಉತ್ತರ. ಅನುಭವಾಧಾರಿತ ಮತ್ತೊಂದು ಪ್ರಶ್ನೆಯಲ್ಲಿ ಸೋತು ಶರಣಾಗುತ್ತದೆ.

ಯಾವ ವಿಜ್ಞಾನದ ಅಧ್ಯಾಪಕರು ಅಡುಗೆಮನೆಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ವೀಕ್ಷಿಸುವರೋ, ಅವರಿಗೆ, ಅವರು ಬೋಧನೆ ಮಾಡುವ ವಿಷಯದ ನಿರೂಪಣೆಗೆ ಅಲ್ಲಿನ ಅನುಭವಗಳು ನೆರವಿಗೆ ಬರುವುದರಲ್ಲಿ ಸಂದೇಹವೇ ಇಲ್ಲ. ಮಹಿಳಾ ಅಧ್ಯಾಪಕರೂ ಈ ಪ್ರಯತ್ನವನ್ನು ಮಾಡಿರುವುದು ಕಡಿಮೆಯೇ. ಅಥವಾ ಇನ್ನೂ ತೀವ್ರವಾಗಿ ಕೈಗೊಳ್ಳಲು ವಿಪುಲ ಅವಕಾಶವಿದೆ. ಇದು ಪ್ರೌಢಶಾಲೆ, ಪದವಿಪೂರ್ವ ಹಂತದವರೆಗೆ ವಿಶೇಷವಾಗಿ ಬಳಕೆ ಮಾಡುವಂತಹವು. ಪದವಿಯ ಹಂತದಲ್ಲಿ ಕೂಡ ಬಳಕೆ ಮಾಡಿರುವ ಅನುಭವ ಈ ಲೇಖಕನಿಗಿದೆ.

ಕಂಪನ ಉಂಟಾದರೆ ಮಾತ್ರ ಶಬ್ದದ ಅಲೆಗಳು ಮೂಡಲು ಸಾಧ್ಯ ಎಂಬ ಪಾಠವನ್ನು ಕೇಳಿರುತ್ತೇವೆ. ಒಗ್ಗರಣೆ ಹಾಕುವಾಗಿನ ಶಬ್ದ ಹಾಗೂ ಸಾಸಿವೆಕಾಳಿನ ಕಂಪನ ಹಾಗೂ ಎಣ್ಣೆಯು ಸೌಟಿನಲ್ಲಿ ಪದರವಾಗಿ ಕುಣಿಯುವುದನ್ನು ಅಡುಗೆಮನೆಯಲ್ಲಿ ಕಾಣಬಹುದು, ಆದರೆ ಎಲ್ಲ ಕಂಪನಗಳೂ ಕಿವಿಗೆ ಗ್ರಾಹ್ಯಶಬ್ದವನ್ನು ಉಂಟುಮಾಡುವುದಿಲ್ಲವೆಂದೂ ವಿಜ್ಞಾನ ಹೇಳುತ್ತದೆ. ಇದನ್ನು ಕೂಡ ಅಡುಗೆಮನೆಯಲ್ಲಿ ಸದ್ದಿಲ್ಲದೇ ಉಕ್ಕಿ ಹರಿವ ಹಾಲು ನಿರೂಪಿಸುತ್ತದೆ.

ಮಹಿಳೆಯರ ಭಾವನೆಗಳನ್ನು ಮಾನ್ಯ ಮಾಡುವ ಸಾಮಾಜಿಕ ಪರಿವರ್ತನೆ ದೂರದ ಕನಸೇನೋ ಎಂದು ಅನಿಸದಿರದು. ತಮ್ಮ ದೈನಂದಿನ ಅನುಭವವನ್ನು ಗೌರವಿಸಿಕೊಂಡು ಪ್ರಶ್ನೆಯಾಗಿಸಿಕೊಳ್ಳುವ ಪ್ರವೃತ್ತಿಗೆ, ಕೇವಲ ಮಹಿಳೆಯರಿಗೆ ಮಾತ್ರವೇ ಅಲ್ಲ, ದುಡಿಯುವ ವರ್ಗದ ಎಲ್ಲ ಶ್ರಮಿಕರಿಗೂ ಪ್ರೋತ್ಸಾಹವನ್ನು ನೀಡಬೇಕು.
ಪ್ರಶ್ನೆಗಳನ್ನು ಏಳಿಸುವುದಕ್ಕೇನೂ ಶ್ರಮ ಪಡಬೇಕಾಗಿಲ್ಲ.

ಆ ಪ್ರಶ್ನೆಗಳನ್ನು ಆಲಿಸಿ ಅದರ ವಿಶೇಷಗಳನ್ನು ವಿವರಿಸಿ ವಿಜ್ಞಾನದ ಹಿನ್ನೆಲೆಯಲ್ಲಿ ಅರ್ಥೈಸುವ ಕೆಲಸವನ್ನು ವಿಜ್ಞಾನದ ಪ್ರಜ್ಞಾವಂತರು ಕೈಗೊಳ್ಳಬೇಕು. ಆಗ ಮಾತ್ರ ವಿಜ್ಞಾನವು ‘ಸರ್ವಾಂತರ್ಯಾಮಿ’ (Omnipresent) ಆಗುವುದು. ವಿಜ್ಞಾನಿಗಳ ಸಾಧನೆ ಜನಪರವಾಗುವುದು; ಜನಜನಿತವೂ ಆಗುವುದು. ಇಲ್ಲವಾದರೆ ಮಹಿಳೆಯ ವಿಜ್ಞಾನಪರಿಜ್ಞಾನದ ಕೊರತೆಯಿಂದಾಗಿ ಆಕೆ ತೊಳೆದಿಟ್ಟ ಬಾಣಲೆಯನ್ನು ಒರಸದೆ ತುಕ್ಕು ಹಿಡಿದು ಬೇಗ ತೂತಾಗುವ ಹಾಗೆಯೇ  ಆಕೆಯ ಅನುಭವ, ಅರಿವಿನ ಆರಂಭಬಿಂದುವಾಗದೆ, ಕಾಲ ಪ್ರವಾಹದಲ್ಲಿ ಕೊಚ್ಚಿ ಹೋಗುವುದು.

ಎಲ್ಲ ಕಲಿಕೆಗಳೂ ಅನುಭವದಿಂದಲೇ ಮೊದಲಾಗಿ, ಅನುಭವದ ಅರ್ಥೈಸುವಿಕೆಗೆ ಬಳಕೆ ಆಗಬೇಕು. ಆದರೆ ಅನುಭವವನ್ನು, ಊಹೆ, ತಪ್ಪುಗಳನ್ನು ದೂರವಿರಿಸಿ – ಕೇವಲ ಸರಿಮಾಹಿತಿ, ಆ ಮಾಹಿತಿಯ ಹಿಂದಿನ ತರ್ಕಕ್ಕೆ ಅತಿಯಾದ ಒತ್ತು ನೀಡಿದರೆ – ಕಲಿಕೆ ಎನ್ನುವುದು ಶಬ್ದ–ತರ್ಕಗಳ ದೊಂಬರಾಟವಾದೀತೇ ವಿನಾ ಜೀವನಶ್ರದ್ಧೆಯನ್ನು ಮೂಡಿಸುವಲ್ಲಿ ವಿಫಲವಾಗುತ್ತದೆ.

ಇದೆಲ್ಲಕ್ಕೂ ಮಿಗಿಲಾಗಿ ಮಹಿಳೆಯೇ ಕುಟುಂಬದ ಖರೀದಿಗಳ ಬಗೆಗೆ ನಿರ್ಣಯ ತೆಗೆದುಕೊಳ್ಳುವಾಕೆ. ಆಕೆಗೆ ತಾನು ಕೊಳ್ಳುವ ಸಾಮಗ್ರಿಗಳ ಅರಿವು ಇದ್ದಾಗ ಮಾತ್ರ ಆಯ್ಕೆ ಸುಲಭವಾಗುತ್ತದೆ. ಇಲ್ಲವಾದರೆ ಆಕೆ ಅನಗತ್ಯ ಗೊಂದಲಗಳಿಗೆ ಒಳಗಾಗುವುದೇ ಅಲ್ಲದೆ ಕಲಬೆರಕೆಯ ಜಾಲಕ್ಕೆ ಬಲಿಯಾಗಬೇಕಾಗುತ್ತದೆ, ವಿಜ್ಞಾನಿಯಾಗದ ಸದ್ಗೃಹಿಣಿಗೂ ವೈಜ್ಞಾನಿಕ ಸಾಕ್ಷರತೆ ಅಗತ್ಯವಿದೆ.

ಸರ್ಕಾರವು ಬಡವರಿಗೆ  ಒದಗಿಸುವ ಉಪ್ಪನ್ನು ನೀರಿಗೆ ಹಾಕಿದೊಡನೆ ನೀಲಿಬಣ್ಣಕ್ಕೆ ತಿರುಗುತ್ತದೆ ಎಂದು ವರದಿಯಾಯಿತು. ಅದನ್ನು ಸೇವಿಸುವುದು ಅಪಾಯವೇ ಎಂಬ ಗಾಬರಿಯೂ ಜನರಲ್ಲಿ ಉಂಟಾಯಿತು.  ಪಡಿತರ ಅಂಗಡಿಗಳಲ್ಲಿ ಆಯೋಡೈಸ್ಡ್‌ ಉಪ್ಪನ್ನು ನೀಡಲಾಗುತ್ತದೆ. ಅದರಲ್ಲಿರುವ ಆಯೋಡೈಡ್‌ ಆಯಾನ್‌ ಆ ಬಗೆಯ ನೀಲಿಬಣ್ಣ  ಬರಲು ಕಾರಣವೂ ಆಗಿರಬಹುದು.

ಈಗ ಅಡುಗೆ–ಉಪ್ಪು ನೀಲಿಬಣ್ಣಕ್ಕೆ ತಿರುಗುವ ಸಮಸ್ಯೆಯನ್ನು ತೆಗೆದುಕೊಳ್ಳೋಣ. ಅಡುಗೆ–ಉಪ್ಪಿನಲ್ಲಿ ಅಯೋಡೈಡು ಅಧಿಕವಾಗಿರುತ್ತದೆ. ಅದು ಕ್ಲೋರಿನ್‌ಯುತ ನೀರಿನೊಂದಿಗೆ ಬೆರೆತು ಅಯೋಡಿನ್‌ ಆಗುತ್ತದೆ. ಆ ಅಯೋಡಿನ್‌ ಪಿಷ್ಟಪದಾರ್ಥದೊಂದಿಗೆ ವರ್ತಿಸಿ ನೀಲಿಬಣ್ಣ ಆಗುತ್ತದೆ. ಹೀಗಾಗಿ ನೀಲಿಬಣ್ಣ ಅದು ಅಯೊಡೈಸ್‌್ಡ ಉಪ್ಪು ಎಂಬುದನ್ನು ಸೂಚಿಸುವುದೂ ಆಗಿರಬಹುದು. ಆದರೆ, ಅದನ್ನು ಪರಿಣಾತ್ಮಕವಾಗಿ ಪರೀಕ್ಷೆ  ಮಾಡಿ ಖಾತರಿ ಮಾಡಿಕೊಳ್ಳುವುದು ಅಗತ್ಯ. ಏಕೆಂದರೆ ಅಯೋಡಿನ್‌ ಸೇವನೆ (ಟಿಂಕ್ಚರ್‌ನಲ್ಲಿ ಉರಿ ತರಿಸುವ ಘಟಕ) ಅಪೇಕ್ಷಣೀಯ ಅಲ್ಲ – ಎಂದು ಗುಣತ್ಮಕವಾಗಿ ಹೇಳಿದರೂ ನಂಜಿನ ಮಿತಿ (Toxicity limit)ಯಲ್ಲಿ ಅದರ ಸೇವನೆ ಅಪಾಯವಲ್ಲ. ಹಾಗೆ ನೋಡಿದರೆ ಅಯೋಡೈಡು ಹೊಟ್ಟೆಗೆ ಸೇರಿದಾಗ ಜಠರಾಮ್ಲದ ಹೈಡ್ರೋಕ್ಲೋರಿಕ್‌ ಆಮ್ಲದೊಂದಿಗೆ ವರ್ತಿಸಿ ಅಯೋಡಿನ್‌ ಆಗುವಂತಹದೇ!

ಅದೇನೇ ಇರಲಿ, ಈ ಬಗ್ಗೆ ವರದಿ ಮಾಡಿರುವ ಗೃಹಿಣಿಯರು ಮತ್ತು ಅವರಿಗಿರುವ ವೈಜ್ಞಾನಿಕ ಜಾಗ್ರತೆಯನ್ನು ಮೆಚ್ಚಿದವರ್‍ಯಾರು?
ಅನೇಕ ಮಹಿಳಾ ಸಂಘಟನೆಗಳಲ್ಲಿ ಕಲಬೆರಕೆ ಮತ್ತು ಪ್ರಸಾಧನ ಸಾಮಗ್ರಿಗಳ ಅತಿ ಬಳಕೆಯ ಅಪಾಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟದ್ದುಂಟು. ಆಗ ಆ ಮಹಿಳೆಯರು ತಮ್ಮ ಬಳಿ ಇರುವ ಪದಾರ್ಥಗಳನ್ನು ಬಳಕೆ ಮಾಡಿ ಈ ಬಗ್ಗೆ ಪ್ರಯೋಗ ಮಾಡಿ ತಿಳಿಯುವ ವಿಧಾನವನ್ನು ಕುರಿತು ಪ್ರಶ್ನೆ ಕೇಳಿದರು. ‘ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು’– ಎಂಬ ಕನ್ನಡಿಗ ಅನಕ್ಷರಸ್ಥ ದೊರೆ ಬರೆದ ಅತ್ಯಂತ ವೈಜ್ಞಾನಿಕ ಗಾದೆಯ ಸಾಕಾರವಾಗಿ ಈ ಮಹಿಳೆಯರು ಇದ್ದಾರೆ!

ಮಹಿಳೆಯರಿಗೆ ಕಲಿಸಬೇಕಾದದ್ದು – ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಪ್ರವೃತ್ತಿಯನ್ನು ಅಲ್ಲ. ಅದು ಅವರ ಬಳಿ ಈಗಾಗಲೇ ವಿಪುಲವಾಗಿ ಇದೆ. ಅದನ್ನು ಸಾಮಾಜಿಕ ಸಂದರ್ಭಕ್ಕೆ ಅಳವಡಿಸಿಕೊಳ್ಳುವ, ನಿಸರ್ಗದ ವಿಚಿತ್ರ ಲಕ್ಷಣಗಳನ್ನು ಅರ್ಥೈಸಿಕೊಂಡು ಬೆರಗಾಗುವ ಹಾಗೆ ಆರೋಗ್ಯಕರವಾಗಿ ಅವರ ಪ್ರವೃತ್ತಿಯನ್ನು ಅನ್ವಯಿಸಿಕೊಳ್ಳುವ ಕಲೆ ಇಂದಿನ ಅಗತ್ಯ. ಎಲ್ಲ ಮಹಿಳೆಯರಿಗೂ ಕಲಿಯುವ ಹಂಬಲವಿರುತ್ತದೆ. ಕಸೂತಿಯಂಥ ಕಲೆಗಳಷ್ಟೆ  ಅವರ ಕ್ಷೇತ್ರವಲ್ಲ. ಆದರೆ ಹಾಗೆ ಭಾಸವಾಗುವ ಮಟ್ಟಿಗೆ ಅವರ ಸ್ವಾತಂತ್ರ್ಯವನ್ನೂ ಸಂದರ್ಭವನ್ನೂ ನಾವು ರೂಪಿಸಿದ್ದೇವೆ.

ಹೆಂಗಸರು ರುಚಿಕಟ್ಟಾಗಿ ಮಾಡುವ ಅಡುಗೆಯನ್ನು ಮೀರಿಸುವ ನಳಪಾಕ, ಭೀಮಪಾಕಗಳಿರಬಹುದಾದರೆ, ಪುರುಷವಿಜ್ಞಾನಿಗಳ ಸಾಧನೆಗೆ ಮಹಿಳೆಯರು ಕೇವಲ ಪ್ರೇರಕರೇ ಏನು, ಪೂರಕರೂ  ಅವರನ್ನು ಮೀರುವವರೂ ಆಗಲು ಖಂಡಿತ ಸಾಧ್ಯ. ಅಂತಹವರು ಕಡಿಮೆ ಎನ್ನುವ ಅಂಕಿ–ಅಂಶವು ಅವರಿಗೆ ಪೂರಕ ಸಾಮಾಜಿಕ ಪರಿಸರದ ಕೊರತೆಗೆ ಹಿಡಿದ ಕೈಗನ್ನಡಿ ಮಾತ್ರ.

ಮಹಿಳೆಯ ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೆ ಅವಳ ಬೌದ್ಧಿಕ ಸಾಮರ್ಥ್ಯವನ್ನೂ ಉಪೇಕ್ಷೆಯಿಂದ ನೋಡುವುದು ತುಂಬ ಹಿಂದಿನ ಕಾಲದಿಂದಲೂ ನಡೆದುಬಂದಿರುವ ವಿದ್ಯಮಾನ. ವೈಜ್ಞಾನಿಕ ಮನೋಧರ್ಮಕ್ಕೂ ಸ್ತ್ರೀಗೂ ಎಣ್ಣೆ–ಸೀಗೆಕಾಯಿಗಳ ಸಂಬಂಧ ಎಂಬ ಹೇಳಿಕೆಯನ್ನೂ ಆಗಾಗ ಕೇಳುತ್ತಿರುತ್ತೇವೆ. ವಿಜ್ಞಾನ ಮತ್ತು ಸಂಶೋಧನೆಗಳು ತುಂಬ ಬೌದ್ಧಿಕಶಕ್ತಿಯನ್ನೂ ದೈಹಿಕ ಪರಿಶ್ರಮವನ್ನೂ ಬಯಸುತ್ತವೆ; ಇದು ಮಹಿಳೆಗೆ ಸಾಧ್ಯವಿಲ್ಲದ ಸಂಗತಿ – ಎಂಬ ಸಮಾಜದ ಮಾನಸಿಕತೆಯನ್ನು ಪ್ರಶ್ನಿಸುವಂತೆ ಹಲವರು ಮಹಿಳಾ ವಿಜ್ಞಾನಿಗಳು ವಿಶ್ವದಾದ್ಯಂತ ಸಾಧನೆ ಮಾಡಿದ್ದಾರೆ.

ಮಹಿಳೆಯು ಶಿಕ್ಷಣ ಪಡೆಯುವುದೇ ತಪ್ಪು ಎನ್ನುವ ಕಾಲವೂ ಇತ್ತು. ಆದರೆ ಇಂದು ಮಹಿಳೆ ಸಮಾಜದ ಎಲ್ಲ ಕ್ಷೇತ್ರದಲ್ಲೂ ಅಪಾರವಾದ ಸಾಧನೆಯನ್ನು ಮಾಡಿದ್ದಾಳೆ; ಅದನ್ನು ಮುಂದುವರಿಸಿದ್ದಾಳೆ. ಇಸ್ರೋದ ಮಂಗಳಯಾನದ ಯಶಸ್ಸಿನಲ್ಲಿ ಹಲವರು ಮಹಿಳೆಯರ ಶ್ರಮ ಮತ್ತು ಬೌದ್ಧಿಕ ಕ್ಷಮತೆಗಳ ದೊಡ್ಡ ಪಾತ್ರವಿದೆ. ಸಾವಿರಾರು ವರ್ಷಗಳಿಂದ ನಡೆದುಬಂದಿರುವ ಹಲವು ರೀತಿಯ ಸಾಮಾಜಿಕ ಕಟ್ಟುಪಾಡುಗಳು, ವ್ಯವಸ್ಥೆಗಳು ಮಹಿಳೆಯ ಒಟ್ಟು ಬೌದ್ಧಿಕ ಬೆಳವಣೆಗೆಯಲ್ಲಿ ಪ್ರಭಾವವನ್ನು ಬೀರಿರುವುದು ಸ್ಪಷ್ಟ.

ಈ ಕಬಂಧಬಾಹು ಅವಳನ್ನು ಹಲವು ವಿಧದಲ್ಲಿ ಕುಬ್ಜಗೊಳಿಸಿರುವುದು ವಾಸ್ತವ. ಹೀಗಿದ್ದರೂ ಅವಳು ಆ ಎಲ್ಲ ಮಿತಿಗಳನ್ನು ಮೀರಿ ವಿಕಾಸವಾಗಿದ್ದಾಳೆ. ಕಲಿಕೆ ಎನ್ನುವುದನ್ನು ಕೇವಲ ಶಾಲೆಗೋ ಪ್ರಯೋಗಶಾಲೆಗೋ ಸೀಮಿತ ಮಾಡದೆ ಬದುಕಿನ ಎಲ್ಲ ಆಯಾಮಗಳಿಗೂ ವಿಸ್ತರಿಸುವ/ಅನ್ವಯಿಸುವ ಕುಶಲತೆ ಹೆಣ್ನಿಗಿದೆ. ಅಡುಗೆಮನೆಯಲ್ಲಿಯೇ ಮಾಡುವ ಸಂಶೋಧನೆಗಳಿಂದ ಹಿಡಿದು, ಮಾರುಕಟ್ಟೆಯಲ್ಲಿ ಅವಳು ತೋರುವ ಗಣಿತದ ಜಾಣ್ಮೆಯ ತನಕ ಅವಳ ಸಹಜ ಕಲಿಕಾಕೌಶಲವನ್ನು ನೋಡಬಹುದು. ವೈಜ್ಞಾನಿಕ ಸಂಶೋಧನೆಗೆ ಬೇಕಾದ ಏಕಾಗ್ರತೆ ಮತ್ತು ಕುತೂಹಲಬುದ್ಧಿ ಅವಳಲ್ಲಿ ಸಮೃದ್ಧವಾಗಿದೆ. ಅವಳ ಈ ಬಲವನ್ನು ಸರಿಯಾಗಿ ಬಳಸಿಕೊಳ್ಳುವುದರ ಬಗ್ಗೆ ಸಮಾಜವೂ ಕುಟುಂಬವೂ ಪ್ರಾಮಾಣಿಕವಾಗಿ ಆಲೋಚಿಸಿ ಕ್ರಿಯಾಶೀಲವಾಗಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT