ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಡ್ಡಳ್ಳಿ; ಸಚಿವ ಆಂಜನೇಯ ಭೇಟಿ

Last Updated 24 ಡಿಸೆಂಬರ್ 2016, 9:08 IST
ಅಕ್ಷರ ಗಾತ್ರ

ಸಿದ್ದಾಪುರ: ಗಿರಿಜನರು ಕಳೆದ ಹದಿನೇಳು ದಿನಗಳಿಂದ ಭೂಮಿ ಮತ್ತು ವಸತಿಗಾಗಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಶುಕ್ರವಾರ ಭೇಟಿ ನೀಡಿ ಗಿರಿಜನರ ಅಹವಾಲನ್ನು ಆಲಿಸಿದರು.

ಒತ್ತುವರಿದಾರರನ್ನು ತೆರವುಗೊಳಿಸಿದ ಪ್ರದೇಶದ ಮೂಲ ದಾಖಲಾತಿಗಳನ್ನು ಪರಿಶೀಲಿಸಿದ ಬಳಿಕ ಗಿರಿಜನರು ತಾವು ಈ ಹಿಂದೆ ಒತ್ತುವರಿ ಮಾಡಿಕೊಂಡಿದ್ದ ಸ್ಥಳದಲ್ಲಿಯೇ ಇರಬಹುದೇ ಎಂದು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಗಿರಿಜನರೊಂದಿಗೆ ಮಾತನಾಡಿದ ಸಚಿವರು ಗಿರಿಜನರು ಏಕೆ ಅರಣ್ಯವನ್ನು ಬಿಟ್ಟು ಸಮಾಜದ ಮುಖ್ಯ ವಾಹಿನಿಗೆ ಬರುವ ಉದ್ದೇಶವನ್ನು ಹೊಂದಿಕೊಳ್ಳಬಾರದು. ನಿಮಗೂ ಉನ್ನತಮಟ್ಟದ ಬದುಕು ಕಟ್ಟಿಕೊಳ್ಳುವ ಪರಿಕಲ್ಪನೆ ಇಲ್ಲವೇ ಎಂದು ಪ್ರಶ್ನಿಸಿದರು.

ಗಿರಿಜನರ ಮಕ್ಕಳು ಇಂದಿನ ತಾಂತ್ರಿಕ ಯುಗದಲ್ಲಿ ಸ್ಪರ್ಧಾತ್ಮಕ ಚಿಂತನೆಗಳೊಂದಿಗೆ ಉತ್ತಮ ಪ್ರಜೆಗಳಾಗಿ ಸಮಾಜದ ವಿವಿಧ ಹುದ್ದೆಗಳನ್ನು ಅಲಂಕರಿಸುವುದು ತಮ್ಮ ಇಲಾಖೆಯ ಉದ್ದೇಶವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಗಿರಿಜನರ ನಿರಾಶ್ರಿತರ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಗಿರಿಜನ ಮುಖಂಡರು ಸೇರಿದಂತೆ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಮಡಿಕೇರಿಯಲ್ಲಿ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಚರ್ಚಿಸಬಹುದು ಎಂದು ಸಲಹೆ ನೀಡಿದರು.

ಅರಣ್ಯದಲ್ಲಿ ಮನೆ ನಿರ್ಮಾಣ ಸಾಧ್ಯವಿಲ್ಲ:  ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ಮನೆಗಳನ್ನು ಸರ್ಕಾರದ ವತಿಯಿಂದ ನಿರ್ಮಿಸಲು ಸಾಧ್ಯವಿಲ್ಲ. ಗಿರಿಜನರಿಗೆ ನಿರ್ಮಿಸಲಾಗುವ ಮನೆಗಳಿಗೆ ವ್ಯವಸ್ಥಿತ ರಸ್ತೆ, ಚರಂಡಿ, ವಿದ್ಯುತ್ ಕಲ್ಪಿಸಬೇಕಿದೆ ಇದೇ ಉದ್ದೇಶದಿಂದ ಸರ್ಕಾರ ಗಿರಿಜನರ ವ್ಯವಸ್ಥಿತ ವಸತಿ ಯೋಜನೆಯನ್ನು ದಿಡ್ಡಳ್ಳಿಯ ನಿರಾಶ್ರಿತರಿಗೆ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.

ಅತ್ಯಾಚಾರ ನಡೆಯುತಿದೆ:  ಮುತ್ತಮ್ಮ ಮಾತನಾಡಿ, ನಿರಾಶ್ರಿತರಲ್ಲಿ ಬಹುತೇಕ ಮಂದಿ ತೋಟದ ಲೈನ್ ಮನೆಗಳಲ್ಲಿ ಈ ಹಿಂದೆ ವಾಸಿಸುತಿದ್ದವರಾಗಿದ್ದು ಹಲವರಿಂದ ಅತ್ಯಾಚಾರಕ್ಕೆ ಗಿರಿಜನರು ಒಳಗಾದ ಮಾಹಿತಿಯನ್ನು ನೀಡಿದ್ದಾರೆ. ಮಾಲೀಕರಿಗೆ ಹೆದರಿ ಗಿರಿಜನರು ತಮಗೆ ಆಗುತಿರುವ ಅನ್ಯಾಯಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುತ್ತಮ್ಮ ಆರೋಪಿಸಿದರು.

ಗಿರಿಜನ ಹಾಡಿಯ ಮುಖಂಡರಾದ ಅಪ್ಪಾಜಿ ಹಾಗೂ ಮುತ್ತಮ್ಮ ಸೇರಿದಂತೆ ಅನೇಕ ಮಂದಿ ಅರಣ್ಯ ಅಧಿಕಾರಿಗಳು ತಮ್ಮಿಂದ ವಾರಕ್ಕೆ ನೂರು ರೂಪಾಯಿಯಂತೆ ಪ್ರತಿಯೊಬ್ಬರಿಂದ ಸಂಗ್ರಹಿಸಿದ್ದಾರೆ  ಎಂದು ಆರೋಪಿಸಿದರು.

ಆದ್ಯತೆ ನೀಡಿ: ಬುಡಕಟ್ಟು ಕೃಷಿಕರು
ಸಿದ್ದಾಪುರ:  ಈಚೆಗೆ ಕಳೆದ 6 ತಿಂಗಳಿಂದ ದಿಡ್ಡಳ್ಳಿ ಗ್ರಾಮಕ್ಕೆ ಆಗಮಿಸಿ ಗುಡಿಸಲುಗಳನ್ನು ನಿರ್ಮಿಸಿಕೊಂಡ ಗಿರಿಜನರಿಂದ ತಮಗೆ ತೊಂದರೆ ಆಗುತಿದೆ. ಅನೇಕ ವರ್ಷಗಳಿಂದ ನೆಲಸಿರುವ ಮೂಲನಿವಾಸಿಗಳಾದ ನಮಗೆ ಆದ್ಯತೆ ನೀಡಿದ ಬಳಿಕ ದಿಡ್ಡಳ್ಳಿಯ ನಿರಾಶ್ರಿತರಿಗೆ ಸರ್ಕಾರ ಸವಲತ್ತುಗಳನ್ನು ಒದಗಿಸಲಿ ಎಂದು ತಟ್ಟಳ್ಳಿಯ ನಿವಾಸಿ ಜೆ.ಕೆ.ರಾಮು ಒತ್ತಾಯಿಸಿದ್ದಾರೆ.

ದಿಡ್ಡಳ್ಳಿಯ ಸಾವಿರಾರು ಮಂದಿ ನಿರಾಶ್ರಿತರು ಸ್ಥಳೀಯ ಗಿರಿಜನ ಆಶ್ರಮ ಶಾಲೆಯ ಸಮೀಪ ವಾಸಿಸುತಿದ್ದು ವಿದ್ಯಾರ್ಥಿಗಳ ಪಠ್ಯ ಚಟುವಟಿಕೆ ಕಳೆದ ಹಲವು ದಿನಗಳಿಂದ ಸ್ಥಗಿತಗೊಂಡಿದೆ ಎಂದರು.

ದಿಡ್ಡಳ್ಳಿಯ ನಿರಾಶ್ರಿತರೊಂದಿಗೆ ತಟ್ಟಳ್ಳಿ ಮೂಲ ನಿವಾಸಿಗಳನ್ನು ಹೋಲಿಸದಂತೆ ಅವರು ಮನವಿ ಮಾಡಿದ್ದಾರೆ. ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿಯಲ್ಲಿ 650 ನಿವೇಶನ ರಹಿತರ ಅರ್ಜಿಗಳು ಸಲ್ಲಿಕೆಯಾಗಿದ್ದು ಮಾಲ್ದಾರೆ ಗ್ರಾಮ ವ್ಯಪ್ತಿಯಲ್ಲಿ ಆದ್ಯತೆಯ ಮೇರೆಗೆ ನಿವೇಶನಗಳನ್ನು ನೀಡುವಂತಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದಿಡ್ಡಳ್ಳಿಗೆ ಆಗಮಿಸಿದ್ದು 21 ಮಂದಿ ಶಾಸಕರ ತಂಡ:  ದಿಡ್ಡಳ್ಳಿಗೆ ಶುಕ್ರವಾರದಂದು ಆಗಮಿಸಿ ಬೇಟಿ ನೀಡಿದ ಸಮಾಜ ಕಲ್ಯಾಣ ಸಚಿವರೊಂದಿಗೆ ಸ್ಥಳೀಯ ಶಾಸಕ ಕೆ.ಜಿ.ಬೋಪಯ್ಯ, ವೀಣಾ ಅಚ್ಚಯ್ಯ, ಮಾಜಿ ಶಾಸಕ ಅರುಣ್ ಮಾಚ್ಚಯ್ಯ, ಎ.ಕೆ.ಸುಬ್ಬಯ್ಯ, ಸೇರಿದಂತೆ ಸಮೀಪದ ಮೈಸೂರು ಜಿಲ್ಲೆಯ ಶಾಸಕರಾದ ಸೋಮಶೇಖರ್ ಒಳಗೊಂಡಂತೆ ಒಟ್ಟು ೨೧ ಮಂದಿ ಶಾಸಕರು ಗಿರಿಜನರ ಸಮಸ್ಯೆಗೆ ಬೆಂಬಲ ವ್ಯಕ್ತಪಡಿಸಿದ್ದು ಮತ್ತು ಇಷ್ಟೊಂದು ಇಲಾಖೆಯ ಅಧಿಕಾರಿಗಳು ಸಚಿವರೊಂದಿಗೆ ಬೇಟಿ ನೀಡಿದ್ದು ಜಿಲ್ಲೆಗೆ ಇದೇ ಪ್ರಥಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT