ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟವೇನು,ನೋಟವೇನು...

ಭಾರತೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಜೋಡಿಯ ಜುಗಲ್‌ಬಂದಿ
Last Updated 24 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅದು ಕ್ರಿಕೆಟ್‌ ಆಟಗಾರರ ತರಬೇತಿ ಶಿಬಿರ. ಒಂದು ದಿನ ಹುಡುಗನೊಬ್ಬ ತರಬೇತಿಗೆ ಇಪ್ಪತ್ತು ನಿಮಿಷ ತಡವಾಗಿ ಬಂದ. ಕೋಚ್‌ಗೆ ಸಿಟ್ಟು ನೆತ್ತಿಗೇರಿತು. ಆ ಹುಡುಗ ಎಂದೂ ತಡವಾಗಿ ಬಂದವನಲ್ಲ ಎನ್ನುವುದು ನೆನಪಿಗೆ ಬಂದರೂ ಕೋಚ್‌ ಕೋಪ ತಣ್ಣಗಾಗಲಿಲ್ಲ. ಶಿಷ್ಯನನ್ನು ಗದರಿದ ಅವರು, ಮೈದಾನದಲ್ಲಿ ಓಡುತ್ತಿದ್ದ ಹಿರಿಯ ಆಟಗಾರರನ್ನು ತೋರಿಸಿ, ‘ಅವರ ಜೊತೆ ನೀನೂ ಓಡು’ ಎಂದರು. ಹುಡುಗ ಓಡತೊಡಗಿದ.

ಯಾವುದೋ ಕೆಲಸದಲ್ಲಿ ತೊಡಗಿಕೊಂಡಿದ್ದ ಕೋಚ್‌ ಮೈದಾನದತ್ತ ಗಮನಹರಿಸಿದರೆ ಹುಡುಗ ಇನ್ನೂ ಓಡುತ್ತಲೇ ಇದ್ದಾನೆ. ಅವನೊಂದಿಗೆ ಬಂದಿದ್ದವರು ಅಂದಿನ ಅಭ್ಯಾಸ ಮುಗಿಸಿ ಮನೆಗಳಿಗೆ ತೆರಳಿಯಾಗಿತ್ತು. ಆದರೆ, ಈ ಹುಡುಗ ಮಾತ್ರ ಹೆಚ್ಚೂಕಡಿಮೆ ಮೂರು ತಾಸುಗಳ ಕಾಲ ಓಡಿದ್ದಾನೆ! ‘ಯಾಕೆ ಹೀಗೆ ಒಂದೇಸಮನೆ ಓಡುತ್ತಿರುವೆ?’ ಎನ್ನುವ ಕೋಚ್‌ ಪ್ರಶ್ನೆಗೆ ದೊರೆತ ಉತ್ತರ – ‘ನೀವೇ ಹೇಳಿದ್ದೀರಲ್ಲಾ ಸರ್‌.

ಶಿಷ್ಯನ ಬದ್ಧತೆ ನೋಡಿ ಕೋಚ್‌ಗೆ ಅಚ್ಚರಿ. ಹೇಳಿದ್ದನ್ನು ಮಾಡುವ ಮನಸ್ಸು ಮತ್ತು ಬದ್ಧತೆ ಅವರಿಗೆ ಇಷ್ಟವಾಯಿತು. ‘ಮುಂದೊಂದು ದಿನ ಈ ಹುಡುಗ ಎತ್ತರಕ್ಕೆ ಬೆಳೆಯುತ್ತಾನೆ’ ಎಂದವರಿಗೆ ಅನ್ನಿಸಿತು. ಆ ಹುಡುಗನ ಹೆಸರು ಕರುಣ್‌ ನಾಯರ್‌! ಕಳೆದ ವಾರ (ಡಿ.16–20) ಚೆನ್ನೈನಲ್ಲಿ ನಡೆದ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ತ್ರಿಶತಕ ಗಳಿಸಿದ ಕರುಣ್‌ ಈಗ ಕ್ರಿಕೆಟ್‌ಪ್ರಿಯರ ಪಾಲಿಗೆ ಹೊಸ ತಾರೆ. ಅಂದಹಾಗೆ, ಕರುಣ್‌ ಅವರನ್ನು ತಿದ್ದಿದ ಅವರ ಬಾಲ್ಯದ ಕೋಚ್‌ ಹೆಸರು ಶಿವಾನಂದ. ತಮ್ಮ ಶಿಷ್ಯ ಏರಿ ನಿಂತಿರುವ ಎತ್ತರದ ಬಗ್ಗೆ ಮಾತನಾಡುವಾಗ ಶಿವಾನಂದ ಅವರ ಆನಂದ ಹೇಳತೀರದು.

ಭಾರತೀಯ ಕ್ರಿಕೆಟ್‌ನಲ್ಲಿ ಈಗ ಹೊಸ ಶಕೆ. ಕ್ರಿಕೆಟ್‌ ಎನ್ನುವುದು ಭಾರತೀಯರ ಪಾಲಿಗೆ ಒಂದು ಆಟವಷ್ಟೇ ಅಲ್ಲ; ಅದು ಬದುಕನ್ನು ಸಹನೀಯಗೊಳಿಸುವ ಉಲ್ಲಾಸದ ಒಂದು ಮಾರ್ಗವೂ ಹೌದು. ಕಳೆದ 25 ವರ್ಷಗಳಿಂದ ಭಾರತೀಯರನ್ನು ಆಟದ ಮೂಲಕ ರಂಜಿಸಿಕೊಂಡು ಬಂದವರು ಒಬ್ಬಿಬ್ಬರಲ್ಲ. ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, ವೀರೇಂದ್ರ ಸೆಹ್ವಾಗ್‌ – ಕ್ರಿಕೆಟ್‌ ಅಂಗಳದಲ್ಲಿ ಎಷ್ಟೊಂದು ನಕ್ಷತ್ರಗಳು! ‘ದಾದಾ’ ಎಂದೇ ಹೆಸರಾಗಿರುವ ಗಂಗೂಲಿ ನಾಯಕತ್ವ ಮತ್ತು ಬ್ಯಾಟಿಂಗ್ ಶೈಲಿ ನೋಡುವ ಅವಕಾಶವನ್ನು ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ.

‘ಗೋಡೆ’ ಖ್ಯಾತಿಯ ದ್ರಾವಿಡ್‌ ಕಲಾತ್ಮಕ ಆಟ, ಸ್ಫೋಟಕ ಆಟಕ್ಕೆ ಹೆಸರಾದ ಸೆಹ್ವಾಗ್‌ ಅಬ್ಬರ ಮತ್ತು ಕ್ರಿಕೆಟ್‌ ಅಭಿಮಾನಿಗಳ ‘ದೇವರು’ ಸಚಿನ್‌ ಅವರ ಬ್ಯಾಟಿಂಗ್ ನೋಡುವುದೇ ಸೌಭಾಗ್ಯವೆನಿಸಿದ್ದ ದಿನಗಳವು. ಆದರೆ, ಕಾಲಚಕ್ರ ಉರುಳಿದಂತೆಲ್ಲಾ ಒಬ್ಬೊಬ್ಬರೂ ಅಂಗಳದಿಂದ ದೂರಸರಿದರು. ನಿವೃತ್ತಿಯೇ ಇಲ್ಲ ಎನ್ನುವಂತಿದ್ದ ಸಚಿನ್‌ ಕೂಡ ಮಂತ್ರದಂಡ ಕೆಳಗಿಟ್ಟರು. ಇನ್ನೇನು, ಭಾರತೀಯ ಕ್ರಿಕೆಟ್‌ ಕಳಾಹೀನವಾಯಿತು ಎನ್ನುವಾಗ್ಗೆ ಸಚಿನ್‌ ಕೆಳಗಿಟ್ಟ ಮಂತ್ರದಂಡವನ್ನು ವಿರಾಟ್‌ ಕೊಹ್ಲಿ ಕೈಗೆತ್ತಿಕೊಂಡರು.

ದಶಕದ ಹಿಂದೆ ಹೆಚ್ಚು ಜನಕ್ಕೆ ಗೊತ್ತೇ ಇರದಿದ್ದ ವಿರಾಟ್‌ ಕೊಹ್ಲಿ ಈಗ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನ್ನುವಂತೆ ಬೆಳೆದಿದ್ದಾರೆ. ಈಗ ಕರ್ನಾಟಕದ ಕರುಣ್‌ ಒಂದೇ ಪಂದ್ಯದಲ್ಲಿ ತಾರಾವರ್ಚಸ್ಸು ಪಡೆದಿದ್ದಾರೆ. ಅವರ ಬೆನ್ನಿಗೇ ಕೆ.ಎಲ್‌. ರಾಹುಲ್‌ ಇದ್ದಾರೆ. ಹಾಗೆ ನೋಡಿದರೆ, ಭಾರತೀಯ ಕ್ರಿಕೆಟ್‌ಗೆ ಕರ್ನಾಟಕದ ಕೊಡುಗೆ ಬಹು ದೊಡ್ಡದು.

ರೋಜರ್‌ ಬಿನ್ನಿ, ಸೈಯದ್‌ ಕಿರ್ಮಾನಿ, ಬುದಿ ಕುಂದರನ್‌, ಬ್ರಿಜೇಶ್‌ ಪಟೇಲ್‌, ಇಎಎಸ್‌ ಪ್ರಸನ್ನ, ಜಿ.ಆರ್. ವಿಶ್ವನಾಥ್‌, ಬಿ.ಎಸ್‌. ಚಂದ್ರಶೇಖರ್‌, ಜಾವಗಲ್‌ ಶ್ರೀನಾಥ್‌, ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ವೆಂಕಟೇಶ್ ಪ್ರಸಾದ್‌, ಸುನಿಲ್‌ ಜೋಶಿ ಸೇರಿದಂತೆ ಅನೇಕ ಆಟಗಾರರು ವಿಶ್ವಕ್ರಿಕೆಟ್‌ನ ನಕ್ಷೆಯಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿದ್ದಾರೆ. ಈಗ ರಾಜ್ಯದಲ್ಲಿಯೂ ಹೊಸ ಆಟಗಾರರ ಪರ್ವ ಶುರುವಾಗಿದೆ.

ಇದು ಹೊಸ ಆಟಗಾರರ ಕಾಲ
ಚೆನ್ನೈ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಎದುರಿನ ಸರಣಿಯ ಐದನೇ ಪಂದ್ಯದಲ್ಲಿ ಕೊನೆಯ ದಿನ ಹತ್ತು ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಇದಕ್ಕೂ ಒಂದು ದಿನ ಮೊದಲೇ ಕರ್ನಾಟಕದ ಕ್ರಿಕೆಟ್‌ ಪ್ರೇಮಿಗಳಿಗೆ ದೊಡ್ಡ ಸಿಹಿಸುದ್ದಿ ಸಿಕ್ಕಿತ್ತು. ಕರುಣ್‌ ನಾಯರ್‌ ತಮ್ಮ ಮೂರನೇ ಟೆಸ್ಟ್‌ನಲ್ಲಿ ತ್ರಿಶತಕ ಹೊಡೆದು ಕ್ರಿಕೆಟ್‌ ಪ್ರೇಮಿಗಳು ಹುಬ್ಬೇರಿಸುವಂತೆ ಮಾಡಿದ್ದರು. ಕರುಣ್‌ ತ್ರಿಶತಕ ಹೊಡೆಯುವ ಒಂದು ದಿನ ಮೊದಲು ಕನ್ನಡಿಗ ಕೆ.ಎಲ್. ರಾಹುಲ್‌ 199 ರನ್‌ ಗಳಿಸಿದ್ದರು. ಇದರಿಂದಲೇ ಆತಿಥೇಯ ತಂಡ 759 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿತು.

ಭಾರತ ತಂಡದ ಐದನೇ ಟೆಸ್ಟ್ ಗೆಲುವಿನಲ್ಲಿ ರಾಜ್ಯದ ಆಟಗಾರರೇ ಕಮಾಲ್‌ ಮಾಡಿದರು. ಕರುಣ್‌ ತ್ರಿಶತಕ ಹೊಡೆದ ದಿನದಂದು ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಸಂದೇಶ ಹರಿದಾಡಿದ್ದವು. ಇಂಗ್ಲೆಂಡ್‌ ತಂಡ ಮೊದಲ ಇನಿಂಗ್ಸ್‌ 477 ರನ್‌ ಗಳಿಸಿದರೆ, ಕರ್ನಾಟಕದ ಬ್ಯಾಟ್ಸ್‌ಮನ್‌ಗಳು 501 ರನ್‌ ಸಿಡಿಸಿದ್ದಾರೆ ಎನ್ನುವ ಸಂದೇಶ ಹೆಚ್ಚು ಗಮನ ಸೆಳೆಯಿತು. ಒಂದೇ ಟೆಸ್ಟ್‌ನಲ್ಲಿ ರಾಜ್ಯದ ಬ್ಯಾಟ್ಸ್‌ಮನ್‌ಗಳು ಮಾಡಿದ ಮೋಡಿಗೆ ಇದು ಸಾಕ್ಷಿ.

ಹತ್ತು ವರ್ಷಗಳ ಹಿಂದೆ ಭಾರತ ತಂಡದಲ್ಲಿ ‘ಮಿನಿ ಕರ್ನಾಟಕ’ವೇ ಇತ್ತು. ರಾಜ್ಯದ ಐದಾರು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಕಾಯಂ ಸ್ಥಾನ ಹೊಂದಿದ್ದರು. ಆದರೆ, ಇತ್ತೀಚಿನ ಐದಾರು ವರ್ಷಗಳಲ್ಲಿ ಭಾರತ ತಂಡಕ್ಕೆ ಆಯ್ಕೆಯಾದವರು ‘ಬಂದ ಪುಟ್ಟ ಹೋದ ಪುಟ್ಟ’ ಎನ್ನುವಂತಾದುದೇ ಹೆಚ್ಚು. ಹೆಚ್ಚು ಪಂದ್ಯಗಳಲ್ಲಿ ಸ್ಥಾನ ಉಳಿಸಿಕೊಂಡವರ ಸಂಖ್ಯೆ ಕಡಿಮೆ. ರಾಬಿನ್‌ ಉತ್ತಪ್ಪ, ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌, ಎಸ್‌. ಅರವಿಂದ್‌ – ಹೀಗೆ ಕೆಲವರು ಸ್ಥಾನ ಗಳಿಸಿ ಮತ್ತೆ ಅವಕಾಶ ಕಳೆದುಕೊಂಡಿದ್ದಾರೆ.

ಆದರೆ ಈಚೆಗಿನ ಎರಡು ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ. ಕೆ.ಎಲ್‌. ರಾಹುಲ್, ಮನೀಷ್‌ ಪಾಂಡೆ, ಕರುಣ್‌ ನಾಯರ್‌ ಭಾರತ ತಂಡದಲ್ಲಿ ಹೆಚ್ಚು ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ತಮ್ಮ  ಸಾಮರ್ಥ್ಯವನ್ನೂ ಸಾಬೀತು ಮಾಡುತ್ತಿದ್ದಾರೆ. ಇಂಗ್ಲೆಂಡ್‌ ಎದುರು ಕರುಣ್‌ ಮತ್ತು ರಾಹುಲ್‌ ಮಾಡಿದ ಬ್ಯಾಟಿಂಗ್‌ ಮೋಡಿಯಿಂದ ಕರ್ನಾಟಕದ ಕ್ರಿಕೆಟ್‌ಗೆ ಹೊಸ ಕಳೆ ಬಂದಿದೆ.

ಸಾವಧಾನದ ಸಾಕಾರ
ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸುವ ವಿವಿಧ ವಯೋಮಿತಿಯೊಳಗಿನ ಕ್ರಿಕೆಟ್‌ ಟೂರ್ನಿಗಳಲ್ಲಿ ಆಡುತ್ತಿದ್ದ ದಿನಗಳಲ್ಲಿ ಕರುಣ್‌ ನಾಯರ್‌ ಮನಮೋಹಕ ಪ್ರತಿಭೆ ಎಂದೇನೂ ಯಾರಿಗೂ ಅನ್ನಿಸಿರಲಿಲ್ಲ. ಆದರೆ, ರಣಜಿ, ಇರಾನಿ ಮತ್ತು ವಿಜಯ್‌ ಹಜಾರೆ ಟೂರ್ನಿಗಳಲ್ಲಿ ದೊರೆತ ಅವಕಾಶಗಳನ್ನು ಅವರು ಪರಿಣಾಮಕಾರಿಯಾಗಿ ಬಳಸಿಕೊಂಡರು.

‘ಐಪಿಎಲ್‌’ನಲ್ಲಿ ‘ರಾಜಸ್ತಾನ ರಾಯಲ್ಸ್’ ತಂಡದಲ್ಲಿ ಸ್ಥಾನ ಪಡೆದಾಗ ಕರುಣ್‌ ಬ್ಯಾಟಿಂಗ್‌ ವೈಭವ ನಿಧಾನವಾಗಿ ಅರಳತೊಡಗಿತು. ಕರುಣ್‌ ಹುಟ್ಟಿದ್ದು ಜೋಧಪುರದಲ್ಲಿ. ಇವರ ತಂದೆ ಕಲಾಧರನ್‌ ನಾಯರ್ ಅವರು ಜೋಧಪುರದಲ್ಲಿ ಟ್ರ್ಯಾಕ್ಟರ್‌ ಕಂಪೆನಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಮೂಲತಃ ಕೇರಳದ ಆಲಪ್ಪಿ ಜಿಲ್ಲೆಯ ಚೆಂಗನ್ನೂರಿನವರು. ಕರುಣ್ ರಾಜಸ್ತಾನದಲ್ಲಿ ಹುಟ್ಟಿದ್ದರೂ ಕ್ರಿಕೆಟ್‌ ಬದುಕಿಗೆ ಕರ್ನಾಟಕದ ನೆಲವನ್ನು ಭೂಮಿಕೆ ಮಾಡಿಕೊಂಡರು. ಈಗಂತೂ ಕನ್ನಡದ ಹುಡುಗರ ಜೊತೆಗೆ ಅವರು ಕನ್ನಡಿಗನೇ ಆಗಿಹೋಗಿದ್ದಾರೆ.

ಕರುಣ್ ತನ್ನ ಹತ್ತನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿರುವ ‘ಕೋರಮಂಗಲ ಕ್ರಿಕೆಟ್‌ ಅಕಾಡೆಮಿ’ಯಲ್ಲಿ ಮೊದಲ ಬಾರಿಗೆ ವೃತ್ತಿಪರ ತರಬೇತಿ ಆರಂಭಿಸಿದರು. ‘ಕರುಣ್‌ಗೆ ಕ್ರಿಕೆಟ್‌ ಎಂದರೆ ತುಂಬಾ ಇಷ್ಟ. ನಾಲ್ಕನೇ ತರಗತಿಯ ಪರೀಕ್ಷೆ ಮುಗಿಸಿಕೊಂಡು ಬಂದವನೇ ನನ್ನ ಸ್ನೇಹಿತ ಶಿವಾನಂದ ಬಳಿ ತರಬೇತಿ ಪಡೆದು ಹಂತಹಂತವಾಗಿ ಈ ಸ್ಥಾನಕ್ಕೆ ಏರಿದ್ದಾನೆ. ಇದು ಆರಂಭವಷ್ಟೇ, ಮುಂದೆ ಇನ್ನಷ್ಟು ಚೆನ್ನಾಗಿ ಆಡಬೇಕು. ಹಲವಾರು ಶತಕಗಳನ್ನು ಹೊಡೆಯಬೇಕು’ ಎಂದು ಕಲಾಧರನ್‌ ಹೇಳುತ್ತಾರೆ.

ಬ್ಯಾಟ್‌ ಮೂಲಕ ಅಬ್ಬರಿಸುವ ಕರುಣ್‌ ಅಂತಹ ವಾಚಾಳಿಯೇನೂ ಅಲ್ಲ. ಕ್ರಿಕೆಟ್‌ ಹೊರತಾಗಿ ಅವರ ಪ್ರಪಂಚ ತುಂಬಾ ಚಿಕ್ಕದು. ‘ಮನೆಯಲ್ಲಿದ್ದಾಗ ಕರುಣ್‌ ಮಾತು ಕಡಿಮೆ.ಆತನಿಗೆ ಇರುವುದು ಎಲ್ಲರೂ ಕ್ರಿಕೆಟ್‌ ಸ್ನೇಹಿತರೇ. ಎಲ್ಲಿಯೇ ಹೋಗಲಿ ಕ್ರಿಕೆಟ್‌ ಬಗ್ಗೆಯೇ ಮಾತು. ಮನೆಯಲ್ಲಿದ್ದಾಗಲೂ ಕ್ರಿಕೆಟ್‌ ಬಿಟ್ಟು ಬೇರೆ ಏನನ್ನೂ ನೋಡುವುದಿಲ್ಲ. ಬಾಲ್ಯದಿಂದಲೇ ಈ ಕ್ರೀಡೆಯ ಬಗ್ಗೆ ಅಪರಿಮಿತಿ ಆಸಕ್ತಿ’ ಎನ್ನುತ್ತಾರೆ ಕಲಾಧರನ್

ಅತ್ಯಂತ ತಾಳ್ಮೆಯಿಂದ ಆಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರುವುದು ಕರುಣ್‌ ಅವರಲ್ಲಿನ ಅತಿ ದೊಡ್ಡ ಶಕ್ತಿ. ರಾಜ್ಯ ಮತ್ತು ರಾಷ್ಟ್ರೀಯ ತಂಡದಲ್ಲಿ ಆಡುವಾಗ ರನ್‌ ಗಳಿಸಲು ಅವರು ಯಾವತ್ತೂ ಅವಸರಿಸುವುದಿಲ್ಲ. ನಿಧಾನವಾಗಿ ರನ್‌ ಗಳಿಸಲು ಆರಂಭಿಸಿ, ನಂತರ ರನ್‌ ವೇಗ ಹೆಚ್ಚಿಸುವ ಕೌಶಲ ಅವರದ್ದು.

ಕಾಯುವುದರ ಮಹತ್ವ ಕರುಣ್‌ಗಿಂತಲೂ ಚೆನ್ನಾಗಿ ಬಲ್ಲವರು ಕಡಿಮೆ. ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕರ್ನಾಟಕ ರಣಜಿ ತಂಡದಲ್ಲಿ ಅವಕಾಶ ಪಡೆಯಲು ಕರುಣ್‌ ಆರು ವರ್ಷ ತಾಳ್ಮೆಯಿಂದ ಕಾಯಬೇಕಾಯಿತು. ತಮ್ಮ 15ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ರಾಜ್ಯ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದರು. ಆದರೆ ಅಂತಿಮ ತಂಡದಲ್ಲಿ ಅವಕಾಶ ಸಿಕ್ಕಿದ್ದು ಮೂರು ವರ್ಷಗಳ ಹಿಂದೆಯಷ್ಟೇ. ಈಗ ‘ಭಗವಾನ್‌ ಮಹಾವೀರ ಜೈನ್‌ ಕಾಲೇಜ್‌’ನಲ್ಲಿ ಬಿ.ಕಾಂ ಅಂತಿಮ ವರ್ಷ ಓದುತ್ತಿದ್ದಾರೆ.

ಕರುಣ್‌ಗೊಬ್ಬ ಜೊತೆಗಾರ
ಕರುಣ್‌ ಅವರಂತೆಯೇ ಭಾರತೀಯ ಕ್ರಿಕೆಟ್‌ನಲ್ಲಿ ಗಮನಸೆಳೆಯುತ್ತಿರುವ ಕರ್ನಾಟಕದ ಮತ್ತೊಬ್ಬ ಆಟಗಾರ ರಾಹುಲ್‌. ಭಾರತ ಟೆಸ್ಟ್‌ ಮತ್ತು ಏಕದಿನ ತಂಡಕ್ಕೆ ರಾಜ್ಯದ ಕಣ್ಣೂರು ಲೋಕೇಶ್‌ (ಕೆ.ಎಲ್‌) ರಾಹುಲ್‌ ಕಾಯಂ ಆಟಗಾರ. ಮಂಗಳೂರಿನ ರಾಹುಲ್‌ ತಳಮಟ್ಟದ ಕ್ರಿಕೆಟ್‌ ಟೂರ್ನಿಗಳಿಂದ ರಾಷ್ಟ್ರೀಯ ತಂಡವೆಂಬ ಏಣಿ ಹತ್ತಿದವರು. ಇದಕ್ಕೆ ಬೆಂಗಳೂರಿನ ಜೈನ್‌ ಕಾಲೇಜು ವೇದಿಕೆಯಾಯಿತು.

ಈಗಿನ ಕರ್ನಾಟಕ ತಂಡದಲ್ಲಿ ಜೈನ್‌ ಕಾಲೇಜಿನಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮನೀಷ್‌ ಪಾಂಡೆ, ಮಯಾಂಕ್‌ ಅಗರವಾಲ್, ಶ್ರೇಯಸ್‌ ಗೋಪಾಲ್‌, ಸ್ಟುವರ್ಟ್‌ ಬಿನ್ನಿ, ಆರ್‌. ಸಮರ್ಥ್‌ – ಇವರೆಲ್ಲಾ ಜೈನ್‌ ಕಾಲೇಜಿನ ಪ್ರತಿಭೆಗಳೇ.

ಹನ್ನೊಂದು ವರ್ಷದವರಾಗಿದ್ದಾಗಿನಿಂದ ರಾಹುಲ್ ಮಂಗಳೂರಿನಲ್ಲಿ ಮುತ್ತುರಾಜ್‌ ಬಳಿ ತರಬೇತಿ ಪಡೆಯಲು ಆರಂಭಿಸಿದರು. ಪಿಯುಸಿ ಮುಗಿಸಿದ ಬಳಿಕ ಬೆಂಗಳೂರಿಗೆ ಬಂದು ಜೈನ್‌ ಕಾಲೇಜಿಗೆ ಸೇರಿದಾಗಲೇ ರಾಹುಲ್‌ ಕ್ರಿಕೆಟ್ ಆಟದ ಅನೇಕ ಕೌಶಲಗಳನ್ನು ಕಲಿತರು. ಇದಕ್ಕೂ ಮೊದಲು ವಿವಿಧ ವಯೋಮಿತಿ ಒಳಗಿನವರ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. 13 ವರ್ಷದವರಾಗಿದ್ದಾಗ ಎರಡು ಸಲ ದ್ವಿಶತಕ ಹೊಡೆದಿದ್ದರು. ಅವರ ಕ್ರಿಕೆಟ್‌ ಆಸಕ್ತಿಗೆ ರಾಜಧಾನಿ ಉತ್ತಮ ವೇದಿಕೆಯಾಯಿತು.ಅದರಲ್ಲಿಯೂ ಜೈನ್‌ ಕಾಲೇಜು ಸೇರಿದ ಬಳಿಕ ವೃತ್ತಿಪರತೆ ಹೆಚ್ಚಾಯಿತು.

2009ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಟೂರ್ನಿಯೊಂದರಲ್ಲಿ ರಾಹುಲ್‌ ಆಡುತ್ತಿದ್ದರು. ಆಗ ರಾಹುಲ್ ದ್ರಾವಿಡ್‌ ಅವರು ತಮ್ಮ ಹೆಸರನ್ನೇ ಹೊಂದಿರುವ ಹೊಸ ಪ್ರತಿಭೆಯ ಬ್ಯಾಟಿಂಗ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರಲ್ಲದೇ, ‘ಮುಂದೊಂದು ದಿನ ಭಾರತ ತಂಡದಲ್ಲಿ ಆಡುವ ಸಾಮರ್ಥ್ಯ ಆತನಲ್ಲಿದೆ’ ಎಂದಿದ್ದರು. ದ್ರಾವಿಡ್‌ ಹೀಗೆ ಹೇಳಿ ಕೆಲವು ದಿನಗಳಷ್ಟೇ ಕಳೆದಿದ್ದವು. ಅಷ್ಟರಲ್ಲಿ ರಾಹುಲ್‌ 2010ರಲ್ಲಿ ನಡೆದ 19 ವರ್ಷದ ಒಳಗಿನವರ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದುಕೊಂಡು ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೊತ್ತರು. ಕರ್ನಾಟಕದ ಮತ್ತೊಬ್ಬ ಕ್ರಿಕೆಟಿಗ ಮಯಾಂಕ್‌ ಅಗರವಾಲ್‌ ಜೊತೆ ಬ್ಯಾಟಿಂಗ್ ಆರಂಭಿಸುತ್ತಿದ್ದರು.

ಒಂದೆಡೆ ರಾಷ್ಟ್ರೀಯ ಜೂನಿಯರ್ ತಂಡದಲ್ಲಿ ಮಿಂಚುತ್ತಲೇ ಮತ್ತೊಂದೆಡೆ ರಾಜ್ಯ ತಂಡದ ಬ್ಯಾಟಿಂಗ್ ಆಧಾರಸ್ಥಂಭವಾದರು. ಆರು ವರ್ಷಗಳ ಹಿಂದೆಯೇ ರಾಜ್ಯ ತಂಡದಲ್ಲಿ ಮೊದಲ ಬಾರಿಗೆ ಅವಕಾಶ ಪಡೆದರಾದರೂ ನಂತರದ ವರ್ಷಗಳಲ್ಲಿ ಹೆಚ್ಚು ಪಂದ್ಯಗಳಲ್ಲಿ ಸ್ಥಾನ ಲಭಿಸಲಿಲ್ಲ. ಆದರೆ 2013–14ರ ರಣಜಿ ಟೂರ್ನಿ ರಾಹುಲ್‌ ಬದುಕಿಗೆ ಸಿಕ್ಕ ದೊಡ್ಡ ತಿರುವು. ಆ ವರ್ಷ ಕರ್ನಾಟಕ ತಂಡ ರಣಜಿ ಚಾಂಪಿಯನ್‌ ಆಯಿತು. ಆಗ ಟೂರ್ನಿಯಲ್ಲಿ ಅವರು ಒಟ್ಟು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದರು.ಇದರಿಂದಲೇ ಟೆಸ್ಟ್‌ ತಂಡಕ್ಕೂ ಆಯ್ಕೆಯಾಗಿ ಈಗ ರಾಷ್ಟ್ರೀಯ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದಾರೆ.

ರಾಹುಲ್‌ ಅಲ್ಲ ರೋಹನ್‌
ರಾಹುಲ್‌ ತಂದೆ ಕಣ್ಣೂರು ಲೋಕೇಶ್‌ ಅವರು ಸುನಿಲ್‌ ಗಾವಸ್ಕರ್‌ ಅವರ ಅಪ್ಪಟ ಅಭಿಮಾನಿ. ಅಭಿಮಾನದ ರೂಪದಲ್ಲಿ ಗಾವಸ್ಕರ್‌ ಮಗ ರೋಹನ್‌ ಹೆಸರನ್ನು ತಮ್ಮ ಮಗನಿಗೆ ಇಡಬೇಕೆಂದು ಲೋಕೇಶ್ ನಿರ್ಧರಿಸಿದ್ದರಂತೆ. ಆದರೆ ಅವರು ರೋಹನ್ ಹೆಸರನ್ನು ರಾಹುಲ್‌ ಎಂದು ತಪ್ಪಾಗಿ ಭಾವಿಸಿ, ತಮ್ಮ ಮಗನನ್ನು ರಾಹುಲ್ ಎಂದು ಕರೆದರು. ಈಗಲೂ  ಇದೇ ಹೆಸರು ಉಳಿದುಕೊಂಡಿದೆ.

ಸ್ನೇಹವೂ ಸ್ಪರ್ಧೆಯೂ
ಭಾರತ ಕ್ರಿಕೆಟ್‌ ತಂಡದಲ್ಲಿ ಹೊಸ ನಕ್ಷತ್ರಗಳಾಗಿ ಮಿಂಚುತ್ತಿರುವ ರಾಹುಲ್‌ ಮತ್ತು ಕರುಣ್‌ ರಾಜ್ಯ ತಂಡದಲ್ಲಿ ಇದ್ದಾಗಿನಿಂದಲೇ ಉತ್ತಮ ಸ್ನೇಹಿತರು. ತಮ್ಮ ಬ್ಯಾಟಿಂಗ್‌ನಲ್ಲಿ ಬದಲಾವಣೆ ಅಗತ್ಯವಿದ್ದಾಗ ಪರಸ್ಪರ ಚರ್ಚಿಸುವಷ್ಟು ಆರೋಗ್ಯಕರ ಸ್ಪರ್ಧೆ ಅವರ ನಡುವಿದೆ.

ಮೊನ್ನೆ ಇಂಗ್ಲೆಂಡ್‌ ಎದುರು ಕರುಣ್‌ ತ್ರಿಶತಕ ಹೊಡೆದಾಗ ‘ನೀವು ರಾಹುಲ್‌ಗೆ ಪೈಪೋಟಿ ನೀಡುತ್ತಿದ್ದೀರಾ?’ ಎಂದು ಮಾಧ್ಯಮಗಳು ಪ್ರಶ್ನಿಸಿದ್ದವು. ‘ಹೌದು, ಪರಸ್ಪರ ಒಬ್ಬರಿಗೊಬ್ಬರು ಪೈಪೋಟಿ ಒಡ್ಡಿಕೊಳ್ಳುತ್ತಿದ್ದೇವೆ. ನಮ್ಮದು ಆರೋಗ್ಯಕರ ಸ್ಪರ್ಧೆ’ ಎನ್ನುವ ಉತ್ತರ ಕರುಣ್ ಅವರದಾಗಿತ್ತು.

‘ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು’ ಎಂದು ಪ್ರಶ್ನಿಸಿದರೆ ಕರುಣ್ ಹೇಳುವುದು – ‘ಸಾಕಷ್ಟು ಆಟಗಾರರು ನನಗೆ ಅಚ್ಚುಮೆಚ್ಚು. ಅದರಲ್ಲಿಯೂ ರಾಹುಲ್‌ ಆಟ ನೋಡಲು ತುಂಬಾ ಖುಷಿಯಾಗುತ್ತದೆ. ಅವರಿಂದ ಕಲಿಯುವುದೂ ಸಾಕಷ್ಟಿದೆ’ ಎನ್ನುತ್ತಾರೆ. ಗೆಳೆಯರು ಇರಬೇಕಾದುದೇ ಹೀಗಲ್ಲವೇ? ಆಟದ ಜೊತೆಗೆ ನಡವಳಿಕೆಯ ಮೂಲಕವೂ ಕರುಣ್ ಹಾಗೂ ರಾಹುಲ್‌ ಗಮನಸೆಳೆಯುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಕಲರವ ಮತ್ತೆ ಶುರುವಾಗಿದೆ.

ತ್ರಿಶತಕದಲ್ಲಿಯೂ ಪೈಪೋಟಿ
ಆತ್ಮೀಯ ಸ್ನೇಹಿತರಾದ ರಾಹುಲ್ ಮತ್ತು ಕರುಣ್‌ ಅವರು ಪೈಪೋಟಿಗೆ ಬಿದ್ದವರಂತೆ ರಣಜಿಯಲ್ಲಿ ಒಂದೇ ವರ್ಷ ತ್ರಿಶತಕ ಹೊಡೆದಿದ್ದರು. 2014–15ರ ಟೂರ್ನಿಯ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ರಾಹುಲ್‌ ಮತ್ತು ಫೈನಲ್‌ನಲ್ಲಿ ತಮಿಳುನಾಡು ಮೇಲೆ ಕರುಣ್ ತ್ರಿಶತಕ ಬಾರಿಸಿದ್ದರು.

ರಾಜ್ಯ ತಂಡಕ್ಕೆ ಸ್ಫೂರ್ತಿ
ಕರ್ನಾಟಕ ರಣಜಿ ತಂಡದಲ್ಲಿರುವ ಅರ್ಧದಷ್ಟು ಜನ ಈಗಾಗಲೇ ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ, ಮತ್ತೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ವಿನಯ್‌, ರಾಬಿನ್‌ ಉತ್ತಪ್ಪ, ಅರವಿಂದ್, ಮಿಥುನ್‌ ಭಾರತ ತಂಡದ ಪೋಷಾಕು ಧರಿಸುವ ನಿರೀಕ್ಷೆ ಹೊಂದಿದ್ದಾರೆ. ಇದಕ್ಕೆ ಕರುಣ್ ಮತ್ತು ರಾಹುಲ್‌ ಅವರ ಸಾಧನೆ ಸ್ಫೂರ್ತಿಯಾಗಿದೆ.

‘ಪ್ರತಿ ಕ್ರಿಕೆಟಿಗನಿಗೂ ದೇಶವನ್ನು ಪ್ರತಿನಿಧಿಸಬೇಕೆನ್ನುವ ಆಸೆಯಿರುತ್ತದೆ. ಆ ಅವಕಾಶ ಸಿಕ್ಕರೆ ಯಾರಿಗೆ ತಾನೆ ಖುಷಿಯಾಗುವುದಿಲ್ಲ. ನಮ್ಮ ತಂಡದಲ್ಲಿ ಸಾಕಷ್ಟು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ. ಈಗ ಕರುಣ್‌ ಮತ್ತು ರಾಹುಲ್ ನೀಡಿರುವ ಪ್ರದರ್ಶನದಿಂದ ನಮಗೂ ಪ್ರೇರಣೆ ಲಭಿಸಿದೆ. ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ರಾಜ್ಯದ ಆಟಗಾರರ ಸಂಖ್ಯೆ ಹೆಚ್ಚಾಗಲಿದೆ’ ಎಂದು ರಾಜ್ಯ ತಂಡದ ನಾಯಕ ವಿನಯ್‌ ಭರವಸೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT