ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋತ’ ಮನಕೆ ಒಂದು ದಿನದ ಶಿಕ್ಷೆ...

Last Updated 24 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಅಲಮೇಲಮ್ಮನ  ಮನೆ’ ಎಂದೇ ಪ್ರಸಿದ್ಧಿ ಹೊಂದಿದ್ದ ಮನೆಯೊಂದು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಗೆ ಸ್ವಲ್ಪ ದೂರದಲ್ಲಿತ್ತು. ಅಲಮೇಲಮ್ಮ ನೇರ ನುಡಿಯ ದಿಟ್ಟ ಮಹಿಳೆ. ಸ್ಥಳೀಕರ ಮಧ್ಯೆ ನಡೆಯುತ್ತಿದ್ದ ಜಗಳಗಳನ್ನು ಬಗೆಹರಿಸುತ್ತಿದ್ದಳಲ್ಲದೆ ಸುತ್ತಮುತ್ತಲ ಹೆಂಗಸರಿಗೆ ನೆರವಾಗುತ್ತಿದ್ದಳು. ಅವಳಿಗೆ ಬರುತ್ತಿದ್ದ ಮನೆ ಬಾಡಿಗೆ ಇವುಗಳಿಗಾಗಿಯೇ ಕರಗುತ್ತಿತ್ತು.

ಅದೊಂದು ಭಾನುವಾರದ ಬೆಳಿಗ್ಗೆ ಅಲಮೇಲಮ್ಮ ಉಪಾಹಾರ ಸೇವಿಸುತ್ತಿದ್ದಾಗ ಪಕ್ಕದಲ್ಲಿದ್ದ ಶ್ರೀಪಾದ ಗೌಡನ ಮನೆ ಕಡೆಯಿಂದ ಚೀರಾಟ ಕೇಳಿ ಬಂತು. ಎಲ್ಲರೂ ಆ ಮನೆ ಕಡೆ ದೌಡಾಯಿಸುತ್ತಿದ್ದಂತೆ ಶ್ರೀಪಾದ ಗೌಡನ  ಭಾಮೈದ ದೇವಕುಮಾರ ರಕ್ತಸಿಕ್ತವಾಗಿದ್ದ ಚಾಕುವಿನಿಂದ ಅವರೆಲ್ಲರ ಎದುರೇ ತನ್ನ ಎದೆ ಹೊಟ್ಟೆ ಮೇಲೆಲ್ಲಾ ತಿವಿದುಕೊಂಡವನೇ ನೆಲದ ಮೇಲೆ ಉರುಳಿದ.

ಅವನಾಚೆಗೆ ನೋಡಿದಾಗ ವರಾಂಡಾದಲ್ಲಿ ಶ್ರೀಪಾದನ ಹೆಂಡತಿ ಮಾಯಮ್ಮ ಹಾಗೂ ಮಗಳು ಜವನಮ್ಮ, ಮಗ ಮಣಿ ಗಂಭೀರ ಗಾಯಗಳೊಂದಿಗೆ ವಿಲವಿಲ ಒದ್ದಾಡುತ್ತಿದ್ದರು. ಎಲ್ಲರಿಗೂ ಕೂಡಲೇ ನೀರುಣಿಸಿದಳು ಅಲಮೇಲಮ್ಮ. ‘ಪರಿಸ್ಥಿತಿ ಈ ಮಟ್ಟಕ್ಕೆ ಹೋಗಬಾರದು ಎಂಬ ಕಾರಣಕ್ಕೆ ಮಾಯಮ್ಮನಿಗೆ ಎಚ್ಚರಿಸುತ್ತಲೇ ಇದ್ದೆ, ಆದರೇನು  ಮಾಡುವುದು? ಗಂಡನ ದರ್ಪದ ಮುಂದೆ ಮಾಯಮ್ಮನ ಮಾತುಗಳು ನಡೆಯಲೇ ಇಲ್ಲ. ಈಗ ನೋಡಿ ಹೇಗೆಲ್ಲಾ ಆಗಿದೆ’ ಎಂದಳು.

ಅಲಮೇಲಮ್ಮನ ಧ್ವನಿಯಲ್ಲಿ ಅಡಗಿದ್ದ ಸತ್ಯಾಂಶ ಅಲ್ಲಿ ಜಮಾಯಿಸಿದ ಜನರಿಗೆ ಅರ್ಥವಾಗಲೇ ಇಲ್ಲ. ಪೊಲೀಸ್ ಠಾಣೆಗೆ ಸುದ್ದಿ ಹೋಯಿತು. ಠಾಣೆಯಿಂದ ಪೊಲೀಸ್ ವ್ಯಾನ್‌ನಲ್ಲಿ ಬಂದ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.

ಬೇರೊಂದು ಕಡೆ ಕರ್ತವ್ಯದಲ್ಲಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಕುನ್ನಪ್ಪ, ವಿಚಾರ ತಿಳಿದು ಅಲ್ಲಿಂದಲೇ ಆಸ್ಪತ್ರೆಗೆ ಹೋಗಿ ಶ್ರೀಪಾದ ಗೌಡನ ಹೇಳಿಕೆ ಪಡೆದರು. ‘ಮುಂದಿನ ಭಾನುವಾರವೇ ನನ್ನ ಮಗಳು ಜವನಮ್ಮನ ಮದುವೆ ನಿಶ್ಚಯವಾಗಿದೆ. ಎರಡೂ ಕಡೆಯವರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಹೇಗಾದರೂ ಮಾಡಿ ನಾವು ಮದುವೆ ನೆರವೇರಿಸಲು ಸಹಾಯ ಮಾಡಿ’ ಎಂದು ಕುನ್ನಪ್ಪ ಅವರನ್ನು ಶ್ರೀಪಾದ ಗೌಡ ಯಾಚಿಸಿದ.

ಎಲ್ಲರೂ ಆಸ್ಪತ್ರೆಯಲ್ಲಿ ಮಲಗಿದಂಥ ಕಠಿಣ ಸಂದರ್ಭದಲ್ಲಿ ಮದುವೆ ನೆರವೇರಿಸಲು ಅನುವು ಮಾಡಿಕೊಡುವ ವಿಚಾರ ತನಿಖಾಧಿಕಾರಿಗೆ ಸವಾಲಾಯಿತು. ಏಕೆಂದರೆ ಗಾಯಾಳುಗಳಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರು ಅವಧಿಗೆ ಮುನ್ನವೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ  ಮಾಡಲು ಒಪ್ಪಲಿಲ್ಲ. ಮದುಮಗಳು ಜವನಮ್ಮ ಮತ್ತು ಅವಳ ತಾಯಿಯನ್ನು ಬ್ಯಾಂಡೇಜ್ ಸಹಿತ ಮದುವೆಯ ದಿನ ಬಿಡುಗಡೆ ಮಾಡಲು ವೈದ್ಯರು ಕೊನೆಗೂ ಒಪ್ಪಿದರು. ಅದರಂತೆ ಮದುವೆಯ ದಿನ ಇಬ್ಬರೂ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

ಅದೇ ಕಾಲಕ್ಕೆ ಪೊಲೀಸರು  ದೇವಕುಮಾರನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಕರೆದೊಯ್ದರು.  ಮುಹೂರ್ತಕ್ಕೆ ಸ್ವಲ್ಪ ಮುಂಚಿತವಾಗಿ ಬ್ಯಾಂಡೇಜ್ ಸಮೇತ ಮದುಮಗಳು ಜವನಮ್ಮ ಮತ್ತು ತಾಯಿ ಮಂಟಪಕ್ಕೆ ಬಂದರು. ಸೂತಕದ ಛಾಯೆಯಲ್ಲೇ ಅಂತೂ ಮದುವೆ ನಡೆಯಿತು. ಮದುವೆಯ ಸಮಾರಂಭದುದ್ದಕ್ಕೂ ಸಂಭ್ರಮದ ಮಾತುಗಳ ಬದಲಾಗಿ ಬಂದವರ ಬಾಯಲ್ಲೆಲ್ಲ ದುರ್ಘಟನೆಯ ಮಾತೇ.

ಶ್ರೀಪಾದ ಗೌಡ ಮತ್ತು ಮಗ ಮಣಿ ಒಂದು ತಿಂಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಆದರು. ಗೌಡನ ಮಗಳು ಜವನಮ್ಮ ಮತ್ತು ಅವನ ಹೆಂಡತಿಯನ್ನು ಆಸ್ಪತ್ರೆಯಲ್ಲಿ ಪ್ರತಿದಿನವೂ ನೋಡಲು ಬರುತ್ತಿದ್ದ ಅಲಮೇಲಮ್ಮ, ಈ ಘಟನೆಗೆ ಮೂಲ ಕಾರಣ ಶ್ರೀಪಾದ ಗೌಡನೇ ಎಂದು ವೈದ್ಯರು ಮತ್ತು ತನಿಖಾಧಿಕಾರಿಯ ಮುಂದೆ  ಹೇಳುವುದನ್ನು ಮರೆಯಲಿಲ್ಲ. ಅವನನ್ನು ಎಂದಿಗೂ ಕ್ಷಮಿಸಬೇಡಿ ಎಂದೂ ತನಿಖಾಧಿಕಾರಿಗೆ ಹೇಳುತ್ತಿದ್ದಳು.

ತನಿಖೆಯನ್ನು ಮುಂದುವರೆಸಿದ ಕುನ್ನಪ್ಪನವರು, ತೀವ್ರಗತಿಯಲ್ಲಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದರು.  ಕೊಲೆ ಪ್ರಯತ್ನ ಮತ್ತು ಆತ್ಮಹತ್ಯೆ ಪ್ರಯತ್ನದ ಅಡಿ ದೇವಕುಮಾರನ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿದರು.

ಪ್ರಕರಣ ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಬಂತು. ದೇವಕುಮಾರ ತನ್ನದೇ ಸಂಬಂಧಿಗಳ ಮೇಲೆ ಪ್ರಾಣಾಂತಿಕ ಹಲ್ಲೆ ಮಾಡಿದ್ದರಿಂದ ಎಲ್ಲರಿಗೂ ಅವನ ಮೇಲೆ ಕೋಪ ಉಕ್ಕುತ್ತಿತ್ತು. ಆದರೆ, ತನ್ನ ದೇಹವನ್ನು ಚಾಕುವಿನಿಂದ ತಿವಿದುಕೊಂಡು ಭೀಕರವಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಏಕೆ ಎಂಬ ವಿಷಯ ಎಲ್ಲರಲ್ಲೂ ಕುತೂಹಲ ಉಂಟು ಮಾಡಿತ್ತು. ದೇವಕುಮಾರನ ಪರವಾಗಿ ನಾನು ವಕಾಲತ್ತು ವಹಿಸಿದ್ದೆ.

ಶ್ರೀಪಾದ ಗೌಡ, ಅವನ ಹೆಂಡತಿ  ಮತ್ತು ಮಕ್ಕಳು ವಿಚಾರಣೆಯ ಕಾಲದಲ್ಲಿ ಸಾಕ್ಷಿ ನುಡಿಯುವಾಗ ಆರೋಪಿ ದೇವಕುಮಾರನನ್ನು ಒಬ್ಬ ಖಳನಾಯಕನಂತೆ ಬಿಂಬಿಸಿದರು. ಆರೋಪಿಯ ಅಕ್ಕ ಮಾಯಮ್ಮ ಕೂಡ ತಮ್ಮನ ವಿರುದ್ಧವಾಗಿಯೇ ಹೇಳಿದರು. ಆದರೆ ಅವರು ಅದನ್ನು ಮನಃಪೂರ್ವಕವಾಗಿ ನುಡಿಯದೇ ಗಂಡನ ಆಣತಿಯಂತೆ ವರ್ತಿಸುತ್ತಿದ್ದುದು ನನಗೆ ಅರಿವಾಗುತ್ತಿತ್ತು. ವಿಚಾರಣೆ ಮುಂದುವರೆದಂತೆಲ್ಲಾ ದೇವಕುಮಾರನ ವಿರುದ್ಧ ಸಾಕ್ಷಿದಾರರು ಭದ್ರಕೋಟೆಯನ್ನೇ ಕಟ್ಟುತ್ತಿರುವಂತೆ ಕಂಡುಬಂತು.

ಈ ಬೆಳವಣಿಗೆಗಳ ಎದುರು ದೇವಕುಮಾರ ಎಂದೂ ವಿಚಲಿತನಾದಂತಾಗಲೀ, ಜರ್ಜರಿತನಾದಂತಾಗಲೀ ಕಂಡು ಬರಲಿಲ್ಲ. ಮೇಲಾಗಿ ಅವನ ಪ್ರತಿಕ್ರಿಯೆಯಲ್ಲಿ ದೃಢಾಭಿಪ್ರಾಯದ ಕೆಚ್ಚು ಎದ್ದು ಕಾಣುತ್ತಿತ್ತು.

ನಾನು ಈ ಎಲ್ಲಾ ಸಾಕ್ಷಿದಾರರ ಪಾಟೀಸವಾಲನ್ನು ಮಾಡಿದೆ. ಆದರೆ ಈ ಸವಾಲು–ಜವಾಬುಗಳು ಪ್ರಕರಣವನ್ನು ಆರೋಪಿಯ ಕಡೆ ಸಂಪೂರ್ಣವಾಗಿ ವಾಲುವಂತೆ ಮಾಡಿತೇ ಇಲ್ಲವೇ ಎಂಬ ಅಳುಕಿತ್ತು.

ಆಗ ನನಗೆ ಅನಿರೀಕ್ಷಿತ ಅದೃಷ್ಟದಂತೆ ಅಲಮೇಲಮ್ಮ ಒದಗಿಬಂದಳು. ಅಲಮೇಲಮ್ಮನ ಮಾತು ಮತ್ತು ವರ್ತನೆಯನ್ನು ಆಸ್ಪತ್ರೆಯಲ್ಲಿ ಕಣ್ಣಾರೆ ಕಂಡಿದ್ದ ತನಿಖಾಧಿಕಾರಿಯವರಿಗೆ  ಆಕೆಯನ್ನು ದೋಷಾರೋಪ ಪಟ್ಟಿಯಲ್ಲಿ ಸಾಕ್ಷಿಯನ್ನಾಗಿ ಮಾಡುವ ಧೈರ್ಯವಾಗಿರಲಿಲ್ಲ. ಇದರ ಹಿಂದೆ ತನಿಖಾಧಿಕಾರಿಯ ತಂತ್ರಗಾರಿಕೆಯೂ ಕೆಲಸ ಮಾಡಿತ್ತು. ಘಟನೆಗೆ ಸಂಬಂಧಿಸಿದಂತೆ ಅಲಮೇಲಮ್ಮ ಆಸ್ಪತ್ರೆಯಲ್ಲಿ ನಡೆದುಕೊಳ್ಳುತ್ತಿದ್ದ ನಡವಳಿಕೆ ಬಗ್ಗೆ ಪಾಟಿಸವಾಲಿನಲ್ಲಿ ವೈದ್ಯರಿಂದ ಬಾಯಿ ಬಿಡಿಸಿದೆ.

ವೈದ್ಯರು ನೀಡಿದ ಉತ್ತರಗಳನ್ನು ಹಿಯರ್‌ಸೆ (hearsay- ಕಾನೂನಿನ ಭಾಷೆಯಲ್ಲಿ ಗಾಳಿಸುದ್ದಿ) ಎಂದು ಮಾಡದೇ ರೆಸ್‌ಜೆಸ್ಟೆ (Resjestae– ಖಚಿತವಾದ ಸುದ್ದಿ) ಎಂಬ ಸೂತ್ರಕ್ಕೆ ದಕ್ಕುವಂತೆ ವಾದಿಸಿ ನನ್ನ ಪರವಾಗಿ ಕೋರ್ಟ್‌ನಿಂದ ಅಧಿಕೃತ ನಿರ್ಣಯವೊಂದನ್ನು ಪಡೆದುಕೊಂಡೆ. ಇದಕ್ಕೆ ವಿರೋಧವೇನಾದರೂ ಇದ್ದರೆ ಪ್ರಾಸಿಕ್ಯೂಟರ್‌ ಅವರು ಈ ನಿರ್ಣಯವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಆದ್ದರಿಂದ ಪ್ರಾಸಿಕ್ಯೂಟರ್‌ ಅವರ ದೊಡ್ಡ ಹಡಗಿಗೆ ಒಂದು ರಂಧ್ರ ಮಾಡಲು ಸಾಧ್ಯವಾಗಿದ್ದು ಇಲ್ಲೆ.

ಅಲಮೇಲಮ್ಮ, ಬೆಟ್ಟಯ್ಯ ಮತ್ತು ಜಿಂಕಲ್ಲಪ್ಪ ಇವರನ್ನು ಆರೋಪಿ ಪರ ಸಾಕ್ಷಿಗಳನ್ನಾಗಿ ವಿಚಾರಣೆ ಮಾಡಲು ಅನುಮತಿ ಕೋರಿ ನಾನು ಸಲ್ಲಿಸಿದ ಅರ್ಜಿಯನ್ನು ಕೋರ್ಟ್‌ ಮಾನ್ಯ ಮಾಡಿತು. ಅವರೆಲ್ಲರ ಸಾಕ್ಷಿ ದಾಖಲಾದ ಮೇಲೆ ಕೋರ್ಟ್‌ಗೆ ನಾನು ಬಿಚ್ಚಿಟ್ಟ ಸತ್ಯ ಎಂದರೆ...

ಶ್ರೀಪಾದ ಗೌಡ ಹಳ್ಳಿಯೊಂದರಲ್ಲಿ ವಿದ್ಯಾಭ್ಯಾಸ ಮಾಡಿ ಪದವೀಧರನಾಗಿ ವಿಧಾನಸೌಧದ ಕಾರ್ಯಾಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ. ಕೇಳದಿದ್ದರೂ ಲಂಚ ಗಿಟ್ಟಿಸಿಕೊಳ್ಳುವ ‘ಅದೃಷ್ಟ’ ಆ ಉದ್ಯೋಗಕ್ಕಿತ್ತು. ಅಡ್ಡದಾರಿ ಸಂಪಾದನೆ ಅವನನ್ನು ಕೊಬ್ಬಿಸಿ ಪೂರ್ವಾಶ್ರಮದ ಬಗ್ಗೆ ಮರೆವು ತರಿಸಿತ್ತು. ತಂದೆ ತಾಯಿಗೆ ಅವನೊಬ್ಬನೇ ಮಗನಾಗಿದ್ದ. 

ಮನೆ ಒಳಗೆ-ಹೊರಗೆ ನಿಗಾ ವಹಿಸಲು ಮತ್ತು ಸಹಾಯಕ್ಕಾಗಿ ಮಾಯಮ್ಮ ಗಂಡನ ಅನುಮತಿ ಪಡೆದು ಸಹೋದರ ದೇವಕುಮಾರನನ್ನು ಮನೆಯಲ್ಲಿ ದತ್ತು ಪುತ್ರನಂತೆ ಇರಿಸಿಕೊಂಡಳು. ಅದು ಅಷ್ಟಕ್ಕೇ ನಿಲ್ಲಲಿಲ್ಲ. ಮಗಳನ್ನು ಅವನಿಗೇ ಕೊಟ್ಟು ಮದುವೆ ಮಾಡಿಕೊಡುವ ಆಸೆಯನ್ನೂ ಇಟ್ಟುಕೊಂಡಳು.

ದೇವಕುಮಾರ ಕುಟುಂಬದ ಸದಸ್ಯನಾಗುತ್ತಲೇ ಶ್ರೀಪಾದ ಗೌಡ- ಮಾಯಮ್ಮ ದಂಪತಿಗೆ ಗಂಡುಮಗು ಹುಟ್ಟಿತು. ಇದು ತಮ್ಮನ ಕಾಲ್ಗುಣವೆಂದು ಮಾಯಮ್ಮ ಹೆಮ್ಮೆ ಪಟ್ಟರೆ, ಶ್ರೀಪಾದ ಗೌಡ ‘ಇದ್ದರೂ ಇರಬಹುದು’ ಎಂದನಷ್ಟೆ. ಶ್ರೀಪಾದ ಗೌಡ ಮನೆಯಲ್ಲಿ  ಏರ್ಪಡಿಸುತ್ತಿದ್ದ ಪಾನಗೋಷ್ಠಿಗಳಲ್ಲಿ ದೇವಕುಮಾರನೇ ಎಲ್ಲರಿಗೂ ಎಲ್ಲವನ್ನೂ ಒದಗಿಸುವ, ಪಾರ್ಟಿ ಉಪಕರಣಗಳನ್ನು ತೊಳೆಯುವ, ಮನೆಮಂದಿಗೆ ಅಡುಗೆ ಮಾಡುವ, ಊಟ ಬಡಿಸುವ, ಅವರ ಊಟದ ತಟ್ಟೆಗಳನ್ನು ತೊಳೆಯುವ ಕಾರ್ಯದಲ್ಲಿ ತೊಡಗಿದ.

ಇದರ ಜೊತೆಗೆ, 10 ವರ್ಷದ ಜವನಮ್ಮನನ್ನು ಶಾಲೆಗೆ ಬಿಡುವುದು-ಕರೆತರುವುದು, ಆಕೆಯ ತಮ್ಮನ ಮೈತೊಳೆಯುವ, ಬಟ್ಟೆತೊಡಿಸುವ ಕೆಲಸಗಳನ್ನೂ ಎಗ್ಗಿಲ್ಲದೇ  ಮಾಡುತ್ತಿದ್ದ. ಒಟ್ಟಾರೆ ಮನೆಮಂದಿಯ ಸೇವಕನಾಗಿದ್ದ.

ಈ ರೀತಿಯಾಗಿ ದೇವಕುಮಾರನ ಸೇವೆ ಆ ಮನೆಗೆ ದೊರಕುತ್ತಿದ್ದುದು ಅಲಮೇಲಮ್ಮ, ಬೆಟ್ಟಯ್ಯ, ಜಿಂಕಲ್ಲಪ್ಪ ಇವರ ಕಣ್ಣುಕುಕ್ಕತೊಡಗಿತು. ಮಾಯಮ್ಮ ತನ್ನ ಮಗಳನ್ನು ದೇವಕುಮಾರನಿಗೆ ಕೊಟ್ಟು ಮದುವೆ ಮಾಡಿಕೊಡುವ ಇಂಗಿತವನ್ನು ಅವರೊಂದಿಗೂ ವ್ಯಕ್ತಪಡಿಸಿದ್ದಳು. ಅಲಮೇಲಮ್ಮನಂತೂ ಮಾಯಮ್ಮನ ಈ ನಿಲುವನ್ನು ಹಾಡಿ ಹೊಗಳುತ್ತಿದ್ದಳು.

ಜವನಮ್ಮನಿಗೆ 18 ವರ್ಷ ತುಂಬುತ್ತಲೇ ಚಂದನದ ಬೊಂಬೆಯಂತೆ ರೂಪುಗೊಂಡಳು. ಮನೆಯಲ್ಲಿ ಶ್ರೀಪಾದ ಗೌಡನ ಜೊತೆ ಪಾರ್ಟಿ ಮಾಡುತ್ತಿದ್ದ ಸಹೋದ್ಯೋಗಿಗಳು ಜವನಮ್ಮನನ್ನು ತಮ್ಮ ಸೊಸೆಯಾಗಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸತೊಡಗಿದರು. ಈ ಬದಲಾದ ಸಂದರ್ಭಗಳು ಶ್ರೀಪಾದ ಗೌಡನನ್ನೂ ಬದಲಾಯಿಸಿದವು. ತನ್ನ ಹೆಂಡತಿಯ ವಿರೋಧವನ್ನು ಲೆಕ್ಕಿಸದೆ ಮಗಳನ್ನು ಶ್ರೀಮಂತನೊಬ್ಬನ ಮಗನಿಗೆ ಮದುವೆ ಮಾಡಿಕೊಡಲು ತೀರ್ಮಾನಿಸಿದ. ಅತಿಯಾದ ವ್ಯವಹಾರಬುದ್ಧಿಯಿಂದ ಕೃತಕವಾಗಿದ್ದ ಶ್ರೀಪಾದ ಗೌಡನ ಎದುರು ಮಾಯಮ್ಮ ಸೋಲತೊಡಗಿದಳು.

ಶ್ರೀಪಾದ ಗೌಡನ ತಂದೆ ಕಾಯಿಲೆಯಿಂದ ಹಾಸಿಗೆ ಹಿಡಿದರು. ಹಳ್ಳಿಯಲ್ಲಿದ್ದ ಅವರನ್ನು ನೋಡಿಕೊಳ್ಳುವಂತೆ ಶ್ರೀಪಾದ ಗೌಡ  ದೇವಕುಮಾರನಿಗೆ ಹೇಳಿದ. ಊರಿಗೆ ಹೋಗಿ ಒಂದು ತಿಂಗಳಿದ್ದು ಆರೋಗ್ಯ ಸುಧಾರಿಸಿದ ಮೇಲೆ ಬರುವಂತೆ ಪುಸಲಾಯಿಸಿ ಕಳುಹಿಸಿಬಿಟ್ಟ. ದೇವಕುಮಾರ ಊರಕಡೆ ಮುಖಮಾಡುತ್ತಲೇ ತಾನು ಮಾಡಿದ ಉಪಾಯದಂತೆ ರಾತ್ರಿ–ಬೆಳಿಗ್ಗೆ ಕಳೆಯುತ್ತಲೇ ಮಗಳ ಮದುವೆಯ ಏರ್ಪಾಟು ಮಾಡಿದ.

ಮಾಯಮ್ಮ ಮದುವೆ ವಿರೋಧಿಸುವಲ್ಲಿ ಅಳಿದುಳಿದ ಪ್ರಯತ್ನಗಳನ್ನು ಮಾಡಿದಳಾದರೂ  ವಿಫಲವಾದಳು. ಶ್ರೀಮಂತನ ಮಾವನಾಗ ಹೊರಟಿದ್ದರಿಂದ ತನ್ನ ಹೆಂಡತಿಯ ತವರುಮನೆಗೆ ಮದುವೆಯ ಆಹ್ವಾನ ಪತ್ರಿಕೆಯನ್ನು ಅಂಚೆಯ ಮೂಲಕ ಕಳಿಸುವಷ್ಟು ‘ದೊಡ್ಡ’ ವ್ಯಕ್ತಿಯಾಗಿಬಿಟ್ಟ ಶ್ರೀಪಾದ.

ಊರಿನಲ್ಲಿದ್ದ ದೇವಕುಮಾರನ ಕೈಗೆ ಲಗ್ನಪತ್ರಿಕೆ ಸಿಕ್ಕಿತು. ಅದನ್ನು ನೋಡುತ್ತಲೇ ತಲೆ ತಿರುಗಿತು. ಬೆಂಕಿಯ ಮೇಲೆ ಕುಳಿತಂತೆ ಆ ರಾತ್ರಿ ಕಳೆದ. ಬೆಳಗಿನ ಜಾವ ಯಾರಿಗೂ ತಿಳಿಸದೆ ಮನೆಬಿಟ್ಟ. ಮನೆಗೆ ಬಂದಾಗ ಶ್ರೀಪಾದ ಗೌಡ ಉಪಾಹಾರ ಮುಗಿಸಿ ಎಂದಿನಂತೆ ವರಾಂಡದಲ್ಲಿ ಚಾಕುವಿನಿಂದ ಹಣ್ಣನ್ನು ಕತ್ತರಿಸಿ ತಿನ್ನುತ್ತಿದ್ದ. ದೇವಕುಮಾರ ಭಾವನ ಎದುರು ಕುಳಿತು ಜೇಬಿನಿಂದ ಲಗ್ನಪತ್ರಿಕೆಯನ್ನು ಹೊರತೆಗೆದು ಅವನ ಮುಂದಿಟ್ಟ.

ಇದನ್ನು ಉದ್ಧಟತನವೆಂದು ಭಾವಿಸಿದ ಶ್ರೀಪಾದ ಗೌಡ ತನ್ನ ಕಾರ್ಯ ಸಾಧನೆಯನ್ನು ವಿಕೃತ ರೀತಿಯಲ್ಲಿ ಸಮರ್ಥಿಸಿಕೊಳ್ಳತೊಡಗಿದ. ಅವನ ಮಾತುಗಳಲ್ಲಿ ಸಮಯಸಾಧಕತನ ಮತ್ತು ಆಸ್ತಿ ಆರಾಧನೆ ಮಾತ್ರ ಕಾಣುತ್ತಿತ್ತು.

ಹೀಗೆ ದರ್ಪದಿಂದ ಮಾತನ್ನು ಮುಂದುವರಿಸಿದಾಗ ತನ್ನ ಅಪಾಯದ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿರುವುದು ಅರಿವಾಗಲಿಲ್ಲ. ಆದರೆ ದೇವಕುಮಾರನಿಗೆ ತಾನು ಇಷ್ಟು ದಿನ ಮಾಡಿದ ತ್ಯಾಗ ಹಾಗೂ ತನ್ನ ಕನಸುಗಳನ್ನು ಭಾವ ಅವಮಾನಿಸುತ್ತಿರುವಂತೆ ಕಂಡಿತು. ಅದನ್ನು ಸಹಿಸುವುದು ಅವನಿಗೆ ಸಹ್ಯವಾಗಲಿಲ್ಲ. ಇನ್ನು ತನ್ನಲ್ಲಿ ಕಳೆದುಕೊಳ್ಳುವುದು ಏನೂ ಉಳಿದಿಲ್ಲ ಅನ್ನಿಸಿತು. ಆಶಾಭಂಗ, ಅವಮಾನದಿಂದ ಉಂಟಾದ ಉದ್ವೇಗದಿಂದ ಅವನಿಗೆ ಸ್ವಾಧೀನ ತಪ್ಪಿದಂತಾಯಿತು.

ಹಣ್ಣನ್ನು ಕತ್ತರಿಸುತ್ತಿದ್ದ ಚಾಕು ದೇವಕುಮಾರನ ಕೈಗೆ ಬಂತು. ಉಕ್ಕಿ ಹರಿಯುತ್ತಿದ್ದ ರೋಷವನ್ನು ತಡೆದುಕೊಳ್ಳಲಾರದೆ ಭಾವನನ್ನು ಇರಿಯತೊಡಗಿದ. ಅವನ ಕೂಗು ಉಳಿದವರನ್ನೂ ಅಲ್ಲಿಗೆ ಬರಮಾಡಿಕೊಂಡಿತು. ಅವರಿಗೂ ಇದೇ ಗತಿಯಾಯಿತು. ಇನ್ನು ಬದುಕುವುದರಲ್ಲಿ ಅರ್ಥವಿಲ್ಲವೆಂದು ತೀರ್ಮಾನಿಸಿದ ದೇವಕುಮಾರ ತನ್ನನ್ನೇ ಇರಿದುಕೊಂಡು ಆತ್ಮಹತ್ಯೆಗೂ ಮುಂದಾದ. ಆದರೆ ಅಲಮೇಲಮ್ಮ ಮತ್ತವಳ ಮಂದಿ ಹಾಗಾಗಲು ಬಿಡಲಿಲ್ಲ.

***
ಇಷ್ಟು ವಿಷಯ ಕೋರ್ಟ್‌ ಮುಂದಿಟ್ಟೆ. ವಾದ–ಪ್ರತಿವಾದ ಇನ್ನೇನು ಮುಗಿಯಲಿದ್ದ ವೇಳೆಯದು. ಆದೇಶ ಹೊರಬೀಳುವುದರಲ್ಲಿತ್ತು. ಮಧ್ಯೆ ಪ್ರವೇಶಿಸಿದ ನಾನು, ‘ಅಪರಾಧ ಕೂಡ ಮಾನವನ ಬದುಕಿನ ಭಾಗವೇ ಆಗಿದೆ. ಅದನ್ನು ಯಾವ ನ್ಯಾಯಾಲಯಗಳೂ ತಪ್ಪಿಸಲಾರವು. ವಂಚನೆಯೇ ಅಪರಾಧಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ...’ ಎಂಬ ಮಾತುಗಳನ್ನು ನ್ಯಾಯಾಧೀಶರ ಮುಂದೆ ಹೇಳಿದೆ.  

ಆದೇಶ ಏನು ನೀಡಬೇಕು ಎಂಬ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದ  ನ್ಯಾಯಾಧೀಶರು, ಆ ತಲ್ಲೀನತೆಯಿಂದ ಹೊರಬಂದು, ‘ನಿಜ... ನಿಜ... ವಕೀಲರೇ... ನೀವು ಹೇಳುತ್ತಿರುವುದು ಸರಿಯಾಗಿದೆ. ದಯವಿಟ್ಟು ನಿಮ್ಮ ಮಾತನ್ನು ಮುಂದುವರೆಸಿ’ ಎಂದರು.  ಅವರ ಮಾತಿನಿಂದ ಉತ್ತೇಜಿತನಾಗಿ ಘಟನೆಯನ್ನು ಇನ್ನಷ್ಟು ವಿವರಿಸಿದೆ.

ಆರೋಪಿ ದೇವಕುಮಾರ ಯಾವ ಪರಿಸ್ಥಿತಿಯಲ್ಲಿ ಇಂಥ ಕೃತ್ಯ ಎಸಗಿದ, ಆತನ ಮನಸ್ಥಿತಿ ಆಗ ಹೇಗಿತ್ತು ಎಂಬುದನ್ನೆಲ್ಲಾ ಗಮನಿಸಿಕೊಂಡ ನ್ಯಾಯಾಧೀಶರು, ಒಂದು ದಿನದ ಮಟ್ಟಿನ ಕಾರಾಗೃಹ ಶಿಕ್ಷೆಯನ್ನು ಮಾತ್ರ ವಿಧಿಸಿದರು.
-ಲೇಖಕ ಹೈಕೋರ್ಟ್‌ ವಕೀಲ(ಎಲ್ಲರ ಹೆಸರು ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT