ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವು ಕ್ರೀಡಾಂಗಣಗಳಷ್ಟೇ ಅಲ್ಲ...

Last Updated 25 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
‘ನಥಿಂಗ್‌ ಕ್ಯಾನ್‌ ಮ್ಯಾಚ್‌ ಇಟ್‌’...
ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದ (ಎಂಸಿಜಿ) ಘೋಷಣಾ ವಾಕ್ಯ ಇದು. ಈ ಕ್ರೀಡಾಂಗಣಕ್ಕೆ ಯಾವುದೂ ಸಾಟಿಯಾಗದು ಎಂಬುದು ಇದರ ಅರ್ಥ. ಆಸ್ಟ್ರೇಲಿಯಾದ ತಳುಕು ಬಳುಕಿನ ನಗರಗಳಲ್ಲಿ ಒಂದೆನಿಸಿರುವ ಮೆಲ್ಬರ್ನ್‌ನ ಎಂಸಿಜಿಗೆ ಭೇಟಿ ನೀಡಿದರೆ ಈ ಘೋಷವಾಕ್ಯ ನೂರಕ್ಕೆ ನೂರು ಸತ್ಯ ಎಂಬುದು ಮನದಟ್ಟಾಗುತ್ತದೆ.
ಎಂಸಿಜಿ ಕೇವಲ ಕ್ರೀಡಾಂಗಣವಾಗಿ ಉಳಿದಿಲ್ಲ. ವಿಕ್ಟೋರಿಯಾ ರಾಜ್ಯ ಹಾಗೂ ಆಸ್ಟ್ರೇಲಿಯಾದ ಜನರಿಗೆ ‘ಪುಣ್ಯ ಕ್ಷೇತ್ರ’ ಇದು. 1853 ರಲ್ಲಿ ನಿರ್ಮಾಣಗೊಂಡ ಎಂಸಿಜಿಯನ್ನು ‘ಮೆಲ್ಬರ್ನ್‌ ನಗರದ ಹೃದಯ ಮಿಡಿತ’ ಎಂದೂ ಬಣ್ಣಿಸುವರು. 
 
ಸಿಡ್ನಿಗೆ ‘ಒಪೆರಾ ಹೌಸ್‌’, ಪ್ಯಾರಿಸ್‌ಗೆ ‘ಐಫೆಲ್‌ ಗೋಪುರ’ ಮತ್ತು ನ್ಯೂಯಾರ್ಕ್‌ಗೆ ‘ಲಿಬರ್ಟಿ ಪ್ರತಿಮೆ’ ಇದ್ದಂತೆ ಮೆಲ್ಬರ್ನ್‌ ನಗರದ ಹೆಮ್ಮೆಯ ಸಂಕೇತ ಈ ಎಂಸಿಜಿ ಕ್ರೀಡಾಂಗಣ.   
 
ಭಾರತದಲ್ಲಿ ಕ್ರಿಕೆಟ್‌ ಕ್ರೀಡಾಂಗಣಗಳು ಅಂತರರಾಷ್ಟ್ರೀಯ ಪಂದ್ಯ ಇದ್ದರೆ ಮಾತ್ರ ಮೈಕೊಡವಿ ಎದ್ದು ನಿಲ್ಲುತ್ತವೆ. ಪಂದ್ಯಕ್ಕೆ ಕೆಲವೇ ದಿನಗಳು ಇದ್ದಾಗ ಕ್ರೀಡಾಂಗಣದಲ್ಲಿ ಚಟುವಟಿಕೆ ಗರಿಗೆದರುತ್ತದೆ. ಪಂದ್ಯ ಕೊನೆಗೊಂಡ ಬಳಿಕ ಯಥಾಸ್ಥಿತಿ ಮುಂದುವರಿಯುತ್ತದೆ. ಅನಂತರ ಕ್ರೀಡಾಂಗಣದತ್ತ ಜನರು ಸುಳಿಯುವುದೇ ಇಲ್ಲ. 
 
ಆದರೆ ಆಸ್ಟ್ರೇಲಿಯಾದ ಕ್ರೀಡಾಂಗಣಗಳಲ್ಲಿನ ಪರಿಸ್ಥಿತಿ  ಸಂಪೂರ್ಣ ಭಿನ್ನ. ವರ್ಷದುದ್ದಕ್ಕೂ ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಕ್ರೀಡಾಂಗಣಕ್ಕೆ ಪ್ರತಿದಿನವೂ ಜನರನ್ನು ಸೆಳೆಯುವಂತೆ ಮಾಡುವ ಕಲೆಯನ್ನು ಆಸ್ಟ್ರೇಲಿಯನ್ನರಿಂದ ಕಲಿಯಬೇಕು. ಎಂಸಿಜಿ ಸೇರಿದಂತೆ ಇತರ ಕ್ರೀಡಾಂಗಣಗಳನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿದ್ದು ಬೆರಗು ಮೂಡಿಸುತ್ತದೆ.
 
ಎಂಸಿಜಿ ಕ್ರೀಡಾಂಗಣದ ಆಡಳಿತ ನೋಡಿಕೊಳ್ಳುವ ಮೆಲ್ಬರ್ನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ‘ಎಂಸಿಜಿ ಟೂರ್‌’ ಹೆಸರಿನಲ್ಲಿ ಪ್ರವಾಸಿಗರನ್ನು ಸೆಳೆಯಲು ಯಶಸ್ವಿಯಾಗಿದೆ. ಎಂಸಿಜಿಗೆ ಭೇಟಿ ನೀಡದಿದ್ದರೆ ಮೆಲ್ಬರ್ನ್‌ ನಗರದ ಭೇಟಿ ಪೂರ್ಣ ಎನಿಸದು.  
 
ಎಂಸಿಸಿ ಸದಸ್ಯರು ಸ್ವ ಇಚ್ಛೆಯಿಂದ ಇಲ್ಲಿ ‘ಗೈಡ್‌’ಗಳಾಗಿ ಸೇವೆ ಸಲ್ಲಿಸುತ್ತಿರುವುದು ವಿಶೇಷ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಗೈಡ್‌ಗಳು ಗ್ರಂಥಾಲಯ, ವಸ್ತುಸಂಗ್ರಹಾಲಯ, ಗ್ಯಾಲರಿ, ಆಟಗಾರರ ಡ್ರೆಸಿಂಗ್‌ ಕೊಠಡಿ, ಮಾಧ್ಯಮ ಕೇಂದ್ರ, ವೀಕ್ಷಕ ವಿವರಣೆಗಾರರ ಕೊಠಡಿ, ಬೋರ್ಡ್‌ರೂಮ್‌... ಹೀಗೆ ಕ್ರೀಡಾಂಗಣದ ಮೂಲೆಮೂಲೆಗೂ ಕರೆದೊಯ್ದು ಮಾಹಿತಿ ನೀಡುತ್ತಾರೆ. 
 
ಈ ಕ್ರೀಡಾಂಗಣದಲ್ಲಿರುವ ‘ನ್ಯಾಷನಲ್‌ ಸ್ಪೋರ್ಟ್ಸ್‌ ಮ್ಯೂಸಿಯಂ’ ಜ್ಞಾನದ ಭಂಡಾರವೇ ಹೌದು. ಇಲ್ಲಿ ನಡೆದಾಡುವಾಗ ಆಸ್ಟ್ರೇಲಿಯಾದ ಕ್ರೀಡಾ ಇತಿಹಾಸ ಒಂದೊಂದಾಗಿ ನಮ್ಮ ಮುಂದೆ ತೆರೆದು ನಿಲ್ಲುತ್ತದೆ. 
 
ಕ್ರಿಕೆಟ್‌ ಮಾತ್ರವಲ್ಲದೆ, ಫುಟ್‌ಬಾಲ್‌ ಸೇರಿದಂತೆ ಇತರ ಕ್ರೀಡೆಗಳಿಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ತಿಳಿದುಕೊಳ್ಳಬಹುದು. ಸುಮಾರು 3,500ಕ್ಕೂ ಅಧಿಕ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. 
 
ಆಸ್ಟ್ರೇಲಿಯಾ ಮಾತ್ರವಲ್ಲದೆ, ವಿಶ್ವದ ವಿವಿಧ ದೇಶಗಳ ಮಹಾನ್‌ ಆಟಗಾರರು ಬಳಸಿದ ಪರಿಕರಗಳನ್ನು ಜೋಪಾನವಾಗಿ ಇಡಲಾಗಿದೆ. ಸಚಿನ್‌ ತೆಂಡೂಲ್ಕರ್‌್ ಸೇರಿದಂತೆ ಭಾರತದ ಮಾಜಿ ಆಟಗಾರರು ಬಳಸಿದ್ದ ಬ್ಯಾಟ್‌, ಜರ್ಸಿಗಳು ಇಲ್ಲಿವೆ.  
 
ಮೆಲ್ಬರ್ನ್‌ ನಗರದ ಎಲ್ಲೆಡೆ ಕಂಡುಬರುವ ಕೆಫೆ ಮತ್ತು ಪಬ್‌ ಸಂಸ್ಕೃತಿ ಈ ಕ್ರೀಡಾಂಗಣವನ್ನೂ ಬಿಟ್ಟಿಲ್ಲ. ಹಲವು ಬಾರ್‌ಗಳು ಮತ್ತು ಕೆಫೆಗಳಿಗೆ ಎಂಸಿಜಿಯ ಒಡಲಲ್ಲಿ ಜಾಗ ದೊರೆತಿವೆ. 
 
ಸಚಿನ್‌ ಮತ್ತು ಡಾನ್‌ ಬ್ರಾಡ್ಮನ್‌ ಜತೆಯಾಗಿ ನಿಂತಿರುವ ಛಾಯಾಚಿತ್ರದ ಮೂಲಪ್ರತಿಯನ್ನು ಇಲ್ಲಿನ ಗೋಡೆಯಲ್ಲಿ ತೂಗು ಹಾಕಲಾಗಿದೆ. ಈ ಚಿತ್ರದ ಕೇವಲ ಮೂರು ಮೂಲಪ್ರತಿಗಳು ಮಾತ್ರ ಇವೆ. ನೆಗೆಟಿವ್‌ ಲಭ್ಯವಿಲ್ಲ. ಇನ್ನೆರಡು ಮೂಲ ಪ್ರತಿಗಳು ಸಚಿನ್‌ ಮತ್ತು ಬ್ರಾಡ್ಮನ್‌ ಕುಟುಂಬದ ಬಳಿಯಿವೆ. 
 
ಅಡಿಲೇಡ್‌ ಓವಲ್‌
ಮೆಲ್ಬರ್ನ್‌ಗೆ ಎಂಸಿಜಿ ಮುಕುಟ ಎನಿಸಿದರೆ, ಅಡಿಲೇಡ್‌ ನಗರಕ್ಕೆ  ಮುಕುಟದಂತೆ ‘ಅಡಿಲೇಡ್‌ ಓವಲ್‌’ ಕ್ರೀಡಾಂಗಣ ಇದೆ.  ಶತಮಾನದ ಇತಿಹಾಸ ಹೊಂದಿರುವ ಈ ಕ್ರೀಡಾಂಗಣ (1871  ರಲ್ಲಿ ನಿರ್ಮಾಣವಾಗಿದ್ದು) ಹಲವು ಸಲ ನವೀಕರಣಗೊಂಡಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿದೆ.
 
ಅಭಿವೃದ್ಧಿ ಹಾಗೂ ನವೀಕರಣದ ಸಂದರ್ಭ ಪರಂಪರೆ ಮತ್ತು ಇತಿಹಾಸವನ್ನು ಕಡೆಗಣಿಸುವುದು ಸಾಮಾನ್ಯ. ಹಳೆಯದ್ದನ್ನು ಕೆಡವಿ ಅಲ್ಲಿ ಹೊಸದನ್ನು ನಿರ್ಮಿಸಲಾಗುತ್ತದೆ. ಆದರೆ ಈ ಕ್ರೀಡಾಂಗಣದಲ್ಲಿ ಅದಕ್ಕೆ ಅವಕಾಶ ನೀಡಿಲ್ಲ. ಅಡಿಲೇಡ್‌ ಓವಲ್‌ ಕ್ರೀಡಾಂಗಣ ನಿರ್ವಹಣಾ ಪ್ರಾಧಿಕಾರವು (ಎಒಎಸ್‌ಎಂಎ) ನವೀಕರಣದ ವೇಳೆ ಗತವೈಭವವನ್ನು ಸಂಪೂರ್ಣವಾಗಿ ಕಡೆಗಣಿಸಿಲ್ಲ.  
 
ಅತ್ಯಾಧುನಿಕ ಸೌಲಭ್ಯಗಳನ್ನು  ಒಳಗೊಂಡು ‘ಸೌತ್‌ ಆಸ್ಟ್ರೇಲಿಯಾದ ಹೆಮ್ಮೆಯ ಸಂಕೇತವಾಗಿ ಬೆಳೆದು ನಿಂತಿರುವ ಈ ಕ್ರೀಡಾಂಗಣ ಇತಿಹಾಸದ ಕೆಲವು ಕುರುಹುಗಳನ್ನು ಉಳಿಸಿಕೊಂಡಿದೆ. 1911ರಲ್ಲಿ ನಿರ್ಮಿಸಲಾಗಿದ್ದ ಸ್ಕೋರ್‌ಬೋರ್ಡ್‌ಅನ್ನು  ಅದೇ ಸ್ಥಾನದಲ್ಲಿ ಉಳಿಸಲಾಗಿದೆ. 
 
ಇಲ್ಲಿ ಪಂದ್ಯ ನಡೆಯುವ ವೇಳೆ ಪ್ರೇಕ್ಷಕರಿಗೆ ಎಲೆಕ್ಟ್ರಾನಿಕ್‌ ಸ್ಕೋರ್‌ ಬೋರ್ಡ್‌ ಜತೆ ಈ ಹಳೆಯ ಸ್ಕೋರ್‌ಬೋರ್ಡ್‌ನಲ್ಲೂ ಪಂದ್ಯದ ವಿವರಗಳನ್ನು ನೀಡಲಾಗುತ್ತದೆ. 
ಜಾರ್ಜ್‌ ಗಿಫಿನ್‌ (1882 ರಲ್ಲಿ ನಿರ್ಮಾಣ) ಮತ್ತು ಸರ್‌ ಎಡ್ವಿನ್‌ ಸ್ಮಿತ್‌ (1929 ರಲ್ಲಿ ನಿರ್ಮಾಣ) ಸ್ಟ್ಯಾಂಡ್‌ಗಳ ಕೆಲವು ಭಾಗಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹಳೆಯ ಕಾಲದ ಕೆಂಪು ಬಣ್ಣದ ಇಟ್ಟಿಗೆಗಳನ್ನು ನಮಗೆ ಇಲ್ಲಿನ ಗೋಡೆಗಳಲ್ಲಿ ನೋಡಬಹುದು. 
 
‘ದಿ ಬ್ರಾಡ್ಮನ್‌ ಕಲೆಕ್ಷನ್‌’ 
ಎಂಸಿಜಿಯಲ್ಲಿರುವಂತೆ ಇಲ್ಲೂ ವಸ್ತುಸಂಗ್ರಹಾಲಯ ಇದೆ. ಇದು ಕೂಡಾ ಆಸ್ಟ್ರೇಲಿಯಾದ ಕ್ರಿಕೆಟ್‌ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. 
 
ಭಾರತದ ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ಸಚಿನ್‌  ತೆಂಡೂಲ್ಕರ್‌ ‘ದೇವರು’ ಇದ್ದಂತೆ, ಆಸ್ಟ್ರೇಲಿಯನ್ನರಿಗೆ ಡಾನ್‌ ಬ್ರಾಡ್ಮನ್‌ ‘ದೇವರು’. ಬ್ರಾಡ್ಮನ್‌ ಅವರಿಗೆ ಸೇರಿದ ಹಲವು ಕ್ರಿಕೆಟ್‌ ಪರಿಕರಗಳು ಇಲ್ಲಿವೆ. 
 
ಬ್ರಾಡ್ಮನ್‌ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಬಳಸಿದ ಬ್ಯಾಟ್‌ ಇಲ್ಲಿದೆ. ಕ್ರಿಕೆಟ್‌ನಲ್ಲಿ ಭವ್ಯ ಭವಿಷ್ಯ ಕಾಣಬೇಕೆಂಬ ಕನಸಿನೊಂದಿಗೆ ಇಲ್ಲಿಗೆ ಭೇಟಿ ನೀಡುವ ಅದೆಷ್ಟೋ ಮಕ್ಕಳಿಗೆ ಈ ಬ್ಯಾಟ್‌ ಪ್ರೇಕರ ಶಕ್ತಿಯಂತಿದೆ.
 
1932–33ರ ‘ಬಾಡಿ ಲೈನ್‌’ ಸರಣಿಯಲ್ಲಿ ಆಟಗಾರರು ಬಳಸಿದ್ದ ಪರಿಕರಗಳು ಮತ್ತು ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ಅಪರೂಪದ ಚಿತ್ರಗಳೂ ಇಲ್ಲಿವೆ. ಆಸ್ಟ್ರೇಲಿಯಾದ ಪ್ರಮುಖ ಆಟಗಾರರ ಕಡುಹಸಿರು ಬಣ್ಣದ ‘ಬ್ಯಾಗಿ ಗ್ರೀನ್‌’ ಕ್ಯಾಪ್‌ ಸಾಲಾಗಿ ಜೋಡಿಸಿಡಲಾಗಿದೆ. 
 
ಅಡಿಲೇಡ್‌ ಓವಲ್ ಕ್ರೀಡಾಂಗಣದ ಚಾವಣಿಯ ಮೇಲೆ ನಡೆದಾಡಲು ಅವಕಾಶವಿದೆ. ಇದಕ್ಕೆ ‘ರೂಫ್‌ ಕ್ಲೈಂಬ್‌’ ಸಾಹಸ ಎಂಬ ಹೆಸರು ಇಡಲಾಗಿದೆ. ಚಾವಣಿ ಮೇಲೆ ನಡೆದಾಡುವುದು ವಿಶೇಷ ಅನುಭವ ನೀಡುತ್ತದೆ. 
 
ಎಂಸಿಜಿ ಮತ್ತು ಅಡಿಲೇಡ್‌ ಓವಲ್‌ ಕ್ರೀಡಾಂಗಣಗಳಲ್ಲಿ ಸುತ್ತಾಡಿ ಹೊರಬರುವಾಗ ಮನಸ್ಸು ಪುಳಕಗೊಳ್ಳದೇ ಇರದು.  
(ಲೇಖಕರು ‘ಟೂರಿಸಂ ಆಸ್ಟ್ರೇಲಿಯಾ’ ಆಹ್ವಾನದ ಮೇರೆಗೆ ಮೆಲ್ಬರ್ನ್‌ ಹಾಗೂ ಅಡಿಲೇಡ್‌ಗೆ ಭೇಟಿ ನೀಡಿದ್ದರು) 
 
**
‘ಡ್ರಾಪ್‌ ಇನ್‌’ ಪಿಚ್‌
ಎಂಸಿಜಿ ಮತ್ತು ಅಡಿಲೇಡ್‌ ಓವಲ್‌ನ ವಿಶೇಷತೆ ‘ಡ್ರಾಪ್‌ ಇನ್‌ ಪಿಚ್‌’. ಈ ಕ್ರೀಡಾಂಗಣಗಳ ಪಿಚ್‌ಗಳು ಶಾಶ್ವತವಾಗಿ ಅದೇ ಸ್ಥಾನದಲ್ಲಿರುವುದಿಲ್ಲ!
ಇಲ್ಲಿನ ಪಿಚ್‌ಗಳನ್ನು ‘ಪೋರ್ಟಬಲ್‌ ಪಿಚ್‌’ (ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯಬಹುದಾದ ಪಿಚ್‌) ಎಂಬ ಹೆಸರಿನಿಂದಲೂ ಕರೆಯುವರು. 
 
ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್‌ ಮಾತ್ರ ಜನಪ್ರಿಯ ಕ್ರೀಡೆಯಲ್ಲ. ಇಲ್ಲಿ ‘ಆಸ್ಟ್ರೇಲಿಯನ್‌ ಫುಟ್‌ಬಾಲ್‌’ (ಎಎಫ್‌ಎಲ್‌) ಮತ್ತು ರಗ್ಬಿ ಕ್ರೀಡೆ ಕ್ರಿಕೆಟ್‌ಗಿಂತಲೂ ಜನಪ್ರಿಯ. 
ಆದ್ದರಿಂದ ಕ್ರಿಕೆಟ್‌ ಕ್ರೀಡಾಂಗಣವನ್ನು  ಎಎಫ್‌ಎಲ್‌ ಮತ್ತು ರಗ್ಬಿ ಪಂದ್ಯಗಳಿಗೆ ಬಿಟ್ಟುಕೊಡಬೇಕಾಗುತ್ತದೆ. ಕ್ರಿಕೆಟ್‌ ಪಿಚ್‌ ಇರುವ ಜಾಗದಲ್ಲಿ ಹುಲ್ಲು ಇರುವುದಿಲ್ಲ. ಮಾತ್ರವಲ್ಲ ಗಟ್ಟಿಯಿರುತ್ತದೆ.  ಇದರ ಮೇಲೆ ಫುಟ್‌ಬಾಲ್‌ ಆಡಿದರೆ ಆಟಗಾರರು ಬಿದ್ದು ಗಾಯಗೊಳ್ಳುವ ಅಪಾಯವಿದೆ. 
 
ಇದಕ್ಕಾಗಿ  ‘ಡ್ರಾಪ್‌ ಇನ್‌ ಪಿಚ್‌’ ವ್ಯವಸ್ಥೆ ಅಳವಡಿಸಲಾಗಿದೆ. ಇಲ್ಲಿನ ಪಿಚ್‌ಗಳು ಅಂಗಳದಲ್ಲೇ ಸಿದ್ಧಪಡಿಸಿದ್ದಲ್ಲ. ಅಂಗಳದ ಹೊರಗಡೆ ಸಿದ್ಧಪಡಿಸಿ ಬಳಿಕ ಅದನ್ನು ಅಂಗಳದ ಮಧ್ಯಭಾಗಕ್ಕೆ ತಂದು ನಿರ್ದಿಷ್ಟ ಸ್ಥಳದಲ್ಲಿ ಇಡಲಾಗುತ್ತದೆ. ಪಿಚ್‌ಗಳನ್ನು ಅಂಗಳದ ಹೊರಗೆ ಉಕ್ಕಿನ ಟ್ರೇಗಳಲ್ಲಿ ಸಿದ್ಧಪಡಿಸುವರು. ಪಿಚ್‌ ಇರುವ ಆ ಟ್ರೇಗಳನ್ನು ಅಂಗಳದ ಒಳಗೆ ತರಲಾಗುತ್ತದೆ!
 
ಎಂಸಿಜಿ ಅಂಗಳದ ಮಧ್ಯಭಾಗದಲ್ಲಿ 10 ಪಿಚ್‌ಗಳಿವೆ. ಕ್ರಿಕೆಟ್‌ ಋತು ಕೊನೆಗೊಂಡು ಫುಟ್‌ಬಾಲ್‌ ಋತು ಆರಂಭವಾದೊಡನೆ ಈ ಪಿಚ್‌ಗಳನ್ನು ಅಂಗಳದಿಂದ ಹೊರಕ್ಕೆ ಒಯ್ಯಲಾಗುತ್ತದೆ. 
 
ಎಲ್ಲ ಪಿಚ್‌ಗಳನ್ನು ಸ್ಥಳಾಂತರಿಸಿದ ಬಳಿಕ ಆ ಸ್ಥಳದಲ್ಲಿ ಮಣ್ಣು ಹಾಕಿ ಹುಲ್ಲು ಬೆಳೆಸಲಾಗುತ್ತದೆ. ಆ ಮೂಲಕ ಫುಟ್‌ಬಾಲ್‌ ಆಟಕ್ಕೆ ಅಂಗಳ ಸಿದ್ಧಪಡಿಸುತ್ತಾರೆ. ಕ್ರಿಕೆಟ್‌ ಋತು ಬಂದಾಗ ಆ ಮಣ್ಣು ಅಗೆದು ಮತ್ತೆ ಅಲ್ಲಿ ಪಿಚ್‌ಗಳನ್ನು ತಂದಿಡಲಾಗುತ್ತಿದೆ. ಪ್ರತಿವರ್ಷ ಈ ಪ್ರಕ್ರಿಯೆ ನಡೆಯತ್ತದೆ. 
 
ಪಿಚ್‌ ಇರುವ ಪ್ರತಿ ಟ್ರೇ ಮೂರು ಮೀಟರ್‌ ಅಗಲ ಮತ್ತು 28 ಮೀ. ಉದ್ದವಿದೆ. 20 ರಿಂದ 22 ಟನ್‌ ಭಾರವಿರುತ್ತದೆ. ಪಿಚ್‌ಗಳನ್ನು ಸಾಗಿಸಲು ವಿಶೇಷ ರೀತಿಯ ವಾಹನ ಇದೆ. ಈ ಭಾರಿ ವಾಹನ ಸುಮಾರು 40 ಟನ್‌ ಭಾರ ಇದೆ. 
 
ಆಸ್ಟ್ರೇಲಿಯಾದ ಈ ಎರಡು ಕ್ರೀಡಾಂಗಣಗಳು ಮಾತ್ರವಲ್ಲದೆ, ನ್ಯೂಜಿಲೆಂಡ್‌ನ ಆಕ್ಲಂಡ್‌ ಮತ್ತು ವೆಲಿಂಗ್ಟನ್‌ ಕ್ರೀಡಾಂಗಣಗಳಲ್ಲಿ ‘ಡ್ರಾಪ್‌ ಇನ್‌ ಪಿಚ್‌’ ವ್ಯವಸ್ಥೆ ಇದೆ. 
 
*
(ಲೇಖಕರು ‘ಟೂರಿಸಂ ಆಸ್ಟ್ರೇಲಿಯಾ’ ಆಹ್ವಾನದ ಮೇರೆಗೆ ಮೆಲ್ಬರ್ನ್‌ ಹಾಗೂ ಅಡಿಲೇಡ್‌ಗೆ ಭೇಟಿ ನೀಡಿದ್ದರು)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT