ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಕ್ರಿಕೆಟ್‌ನಲ್ಲೊಂದು ಭರವಸೆಯ ಕಿರಣ

ನಿಕಿನ್‌ ಜೋಸ್‌ ಜೊತೆಗಿನ ಸಂದರ್ಶನ
Last Updated 25 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ನಾಲ್ಕನೇ ವಯಸ್ಸಿನಲ್ಲಿಯೇ ಕ್ರಿಕೆಟ್‌ ಆಡಲು ಶುರು ಮಾಡಿದ ಮೈಸೂರಿನ ನಿಕಿನ್‌ ಜೋಸ್‌ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ. ಅವರಿಗೀಗ ಕೇವಲ 16ವರ್ಷ ವಯಸ್ಸು. 19 ವರ್ಷದೊಳಗಿನವರ ರಾಜ್ಯ ತಂಡ ಮುನ್ನಡೆಸುವ ಅವಕಾಶ ಒಲಿದಿದೆ.
 
ನಿಕಿನ್‌ ಅವರ ಪೋಷಕರು ಮೂಲತಃ ತಮಿಳುನಾಡಿನ ಸೇಲಂನವರು. ಅರಮನೆಗಳ ನಗರಿ ಮೈಸೂರಿಗೆ ಬಂದು 25 ವರ್ಷಗಳಾಗಿವೆ. ನಿಕಿನ್ ಜನಿಸಿದ್ದು ಇಲ್ಲಿಯೇ. ತಾಯಿ ಬೇಬಿ ಲತಾ ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ವಿಜ್ಞಾನಿ. ತಂದೆ ಜಾನ್‌ ಪೀಟರ್ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ.
 
ತಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರಿಂದ ನಿಕಿನ್‌ ಅವರಿಗೆ ಕ್ರೀಡೆ ಮೇಲೆ ಬಹುಬೇಗನೇ ಆಸಕ್ತಿ ಬೆಳೆಯಿತು. ಅವರು ಈಗಾಗಲೇ 14, 16 ಹಾಗೂ 19 ವರ್ಷದೊಳಗಿನವರ ಟೂರ್ನಿಗಳಲ್ಲಿ ರಾಜ್ಯ ತಂಡ ಪ್ರತಿನಿಧಿಸಿ ಗಮನ ಸೆಳೆದಿದ್ದಾರೆ. ದಕ್ಷಿಣ ವಲಯ ತಂಡವನ್ನೂ ಪ್ರತಿನಿಧಿಸಿದ್ದಾರೆ. ಕೂಚ್‌ ಬೆಹಾರ್‌ ಟ್ರೋಫಿ ಹಾಗೂ ವಿಜಯ ಮರ್ಚೆಂಟ್‌ ಟೂರ್ನಿಗಳಲ್ಲಿ ಕರ್ನಾಟಕ ತಂಡ ಮುನ್ನಡೆಸಿದ್ದಾರೆ. ಅಷ್ಟೇ ಅಲ್ಲ; ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಲೀಗ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ‘ವರ್ಷದ ಶ್ರೇಷ್ಠ ಆಟಗಾರ’ ಎನಿಸಿಕೊಂಡಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಆಗಿರುವ ಅವರು ಸ್ಪಿನ್‌ ಬೌಲಿಂಗ್‌ನಲ್ಲಿಯೂ ಪರಿಣತಿ ಹೊಂದಿದ್ದಾರೆ.
 
ಕೆಪಿಎಲ್‌ ಟೂರ್ನಿಯ ಪದಾರ್ಪಣೆ ಪಂದ್ಯದಲ್ಲೇ 11 ರನ್‌ ನೀಡಿ 6 ವಿಕೆಟ್‌ ಪಡೆದ ಸಾಧನೆ ಮಾಡಿರುವ ನಿಕಿನ್‌ ಪ್ರತಿಭಾವಂತ ಆಲ್‌ರೌಂಡರ್‌ ಕೂಡ. ಕಳೆದ ವರ್ಷದ ಕೆಪಿಎಲ್‌ನಲ್ಲಿ ಮೈಸೂರು ವಾರಿಯರ್ಸ್‌ ತಂಡದಲ್ಲಿ ಆಡಿದ್ದರು. ಅವರು ಮೈಸೂರಿನಲ್ಲಿರುವ ಜೊಜೊ ಕ್ಲಬ್‌ ಪ್ರತಿನಿಧಿಸುತ್ತಾರೆ. ವಿವಿಧ ವಯೋಮಾನದ ಟೂರ್ನಿಯಲ್ಲಿ ಈಗಾಗಲೇ ಐದು ದ್ವಿಶತಕ ಗಳಿಸಿದ್ದಾರೆ. ಅದರಲ್ಲಿ ಜಿಮ್ಖಾನಾ ಕ್ರಿಕೆಟ್‌ ಕ್ಲಬ್‌ ಎದುರು ಅಜೇಯ289 ರನ್‌ ಗಳಿಸಿದ್ದು ವಿಶೇಷ.
 
ನಿಕಿನ್‌ ಆಟಕ್ಕೆ ಇ.ಎ.ಎಸ್‌.ಪ್ರಸನ್ನ, ಜಾವಗಲ್‌ ಶ್ರೀನಾಥ್‌, ರಘುರಾಂ ಭಟ್‌ ಸೇರಿದಂತೆ ಹೆಸರಾಂತ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಕೋಚ್‌ ಸುರೇಂದ್ರ.
 
‘9ನೇ ವಯಸ್ಸಿನಲ್ಲಿದ್ದಾಗಲೇ ನಿಕಿನ್‌ ಕೆಎಸ್‌ಸಿಎ ನಾಲ್ಕನೇ ಡಿವಿಷನ್‌ನಲ್ಲಿ ಆಡಿದ್ದ. ಮನೆಯಲ್ಲಿ ಹ್ಯಾಂಗಿಂಗ್ ಬಾಲ್‌ ವ್ಯವಸ್ಥೆ ಕಲ್ಪಿಸಿ ಅಭ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಬಿಡುವಿದ್ದಾಗಲೆಲ್ಲಾ ಅಭ್ಯಾಸ ನಡೆಸುತ್ತಾನೆ. ಓದಿನಲ್ಲೂ ಮುಂದೆ’ ಎಂದು ನಿಕಿನ್‌ ತಂದೆ ಪೀಟರ್‌ ನುಡಿಯುತ್ತಾರೆ.
 
* ಸದ್ಯದ ನಿಮ್ಮ ಗುರಿ ಏನು?
ಪೋಷಕರು ನನ್ನ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ಕ್ರಿಕೆಟ್‌ ಆಟವನ್ನು ತುಂಬಾ ಪ್ರೀತಿಸುವ ಅವರ ಕನಸನ್ನು ನನಸು ಮಾಡಬೇಕು. ರಾಷ್ಟ್ರೀಯ 19 ವರ್ಷದೊಳಗಿನವರ ತಂಡ ಹಾಗೂ ರಣಜಿಯಲ್ಲಿ ಆಡಬೇಕೆಂಬ ಗುರಿ ಇದೆ. 
 
* ಕೂಚ್‌ ಬೆಹಾರ್‌ ಟ್ರೋಫಿ ಟೂರ್ನಿಯಲ್ಲಿ ರಾಜ್ಯ ತಂಡದಿಂದ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ ಕಾರಣ?
ಒಂದೆರಡು ಪಂದ್ಯಗಳಲ್ಲಿ ಅದೃಷ್ಟ ನಮ್ಮ ಕಡೆ ಇರಲಿಲ್ಲ. ಬ್ಯಾಟಿಂಗ್‌ ವಿಭಾಗದಲ್ಲಿ ವೈಫಲ್ಯ ಕಂಡೆವು. ಇನ್ನುಳಿದ ಪಂದ್ಯಗಳು ಡ್ರಾ ಆಗಿವೆ. ಆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಮೂಡಿಬಂದಿದ್ದು, ಇನಿಂಗ್ಸ್‌ ಮುನ್ನಡೆ ಕೂಡ ಲಭಿಸಿದೆ.
 
* ಆಲ್‌ರೌಂಡರ್‌ ಆಗಿರುವ ನಿಮ್ಮ ಪ್ರದರ್ಶನ ಹೇಗಿದೆ?
ಈ ಋತುವಿನಲ್ಲೂ ಉತ್ತಮ ಫಾರ್ಮ್‌ ಕಾಯ್ದುಕೊಂಡಿದ್ದೇನೆ. ಆದರೆ, ಬೌಲಿಂಗ್‌ನತ್ತ ಅಷ್ಟೊಂದು ಗಮನ ಹರಿಸುತ್ತಿಲ್ಲ. ಕೂಚ್‌ ಬೆಹಾರ್‌ ಟ್ರೋಫಿಯಲ್ಲಿ ಒಂದು ಶತಕ ಹಾಗೂ ಮೂರು ಅರ್ಧ ಶತಕಗಳೊಂದಿಗೆ ಬ್ಯಾಟಿಂಗ್‌ನಲ್ಲಿ ಮಿಂಚಿದ್ದೇನೆ. ಸೌರಾಷ್ಟ್ರ ಎದುರು ರಾಜ್‌ಕೋಟ್‌ನಲ್ಲಿ 161 ರನ್‌ ಗಳಿಸಿದೆ. 19 ವರ್ಷದೊಳಗಿನವರ ಏಕದಿನ ಟೂರ್ನಿಯಲ್ಲೂ 5 ಅರ್ಧ ಶತಕ ಗಳಿಸಿದ್ದೇನೆ.
 
* ನಾಯಕತ್ವ ಅವಕಾಶ ಒಲಿದಿರುವ ಬಗ್ಗೆ ಹೇಳಿ?
ತಂಡ ಮುನ್ನಡೆಸುವ ಅವಕಾಶ ಲಭಿಸಿರುವುದು ಸಹಜವಾಗಿಯೇ ಖುಷಿ ಉಂಟು ಮಾಡಿದೆ. ಈಗಾಗಲೇ 16 ವರ್ಷದೊಳಗಿನವರ ರಾಜ್ಯ ತಂಡ ಮುನ್ನಡೆಸಿದ ಅನುಭವ ಇದೆ. ಈಗ 19 ವರ್ಷದೊಳಗಿನವರ ತಂಡಕ್ಕೆ ನಾಯಕನಾಗಿದ್ದೇನೆ. ಹೆಚ್ಚಿನ ಜವಾಬ್ದಾರಿ ಹಾಗೂ ಸವಾಲು ಇದೆ. ಹಾಗಂತ ಒತ್ತಡವೇನಿಲ್ಲ.
 
* ಜೂನಿಯರ್‌ ತಂಡದ ಸಾಮರ್ಥ್ಯ ಹೇಗಿದೆ?
ತಂಡದವರು ಹೆಚ್ಚಿನವರು ಆಲ್‌ರೌಂಡ್‌ ಆಟಗಾರರು. ಬೌಲಿಂಗ್‌ ವಿಭಾಗವೂ ಚೆನ್ನಾಗಿದೆ. ಪ್ರಮುಖವಾಗಿ ಉತ್ತಮ ಹೊಂದಾಣಿಕೆ ಇದೆ. ಮುಂದಿನ ಟೂರ್ನಿಗಳಲ್ಲಿ ಖಂಡಿತ ಉತ್ತಮ ಪ್ರದರ್ಶನ ನೀಡುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT