ಮಲ ಬಳಿವ ಕುಲದವನ ಅನಂತ ಹಾಡು ಪಾಡು

ನೋಟು ರದ್ದತಿ ಎಬ್ಬಿಸಿರುವ ಭಯಭ್ರಾಂತಿ, ನರೇಂದ್ರ ಮೋದಿ-ರಾಹುಲ್ ಗಾಂಧಿ ಜಗಳದ ಜುಗಲಬಂದಿ, ಒಂದು ಕಾಲಕ್ಕೆ ದೇಶದ ಮೇಲೆ ದಂಡೆತ್ತಿ ಬಂದಿದ್ದ ತೈಮೂರನ ಹೆಸರನ್ನು ಸೈಫ್-ಕರೀನಾ ಕೂಸಿಗೆ ಇಟ್ಟಿದ್ದು ಸರಿಯೇ ತಪ್ಪೇ, ಕೇಜ್ರಿವಾಲ್ ನೇತೃತ್ವದ ಸರ್ಕಾರದ ಮೇಲೆ ಯಾರದೋ ದಾಳವಾಗಿ ಉರುಳಿದ್ದ ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್ ಜಂಗ್ ಹಠಾತ್ ರಾಜೀನಾಮೆ ಮುಂತಾದ ಹತ್ತು ಹಲವು ಮಹತ್ವದ ಸಮಕಾಲೀನ ವಿದ್ಯಮಾನಗಳು ಹೊಸ ವರ್ಷವನ್ನು ಬರಮಾಡಿಕೊಳ್ಳತೊಡಗಿವೆ.

ಮಲ ಬಳಿವ ಕುಲದವನ ಅನಂತ ಹಾಡು ಪಾಡು

ನೋಟು ರದ್ದತಿ ಎಬ್ಬಿಸಿರುವ ಭಯಭ್ರಾಂತಿ, ನರೇಂದ್ರ ಮೋದಿ-ರಾಹುಲ್ ಗಾಂಧಿ ಜಗಳದ ಜುಗಲಬಂದಿ, ಒಂದು ಕಾಲಕ್ಕೆ ದೇಶದ ಮೇಲೆ ದಂಡೆತ್ತಿ ಬಂದಿದ್ದ ತೈಮೂರನ ಹೆಸರನ್ನು ಸೈಫ್-ಕರೀನಾ ಕೂಸಿಗೆ ಇಟ್ಟಿದ್ದು ಸರಿಯೇ ತಪ್ಪೇ, ಕೇಜ್ರಿವಾಲ್ ನೇತೃತ್ವದ ಸರ್ಕಾರದ ಮೇಲೆ ಯಾರದೋ ದಾಳವಾಗಿ ಉರುಳಿದ್ದ ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್ ಜಂಗ್ ಹಠಾತ್ ರಾಜೀನಾಮೆ ಮುಂತಾದ ಹತ್ತು ಹಲವು ಮಹತ್ವದ ಸಮಕಾಲೀನ ವಿದ್ಯಮಾನಗಳು ಹೊಸ ವರ್ಷವನ್ನು ಬರಮಾಡಿಕೊಳ್ಳತೊಡಗಿವೆ.

ಈ ಹೊತ್ತಿನಲ್ಲಿ ಕಣ್ಣು ಕಿಸಿದು ಕತ್ತೆತ್ತಿ ದಮನಿತ ಸಮುದಾಯಗಳ ದುಃಖ, ಅವಮಾನದ ಬದುಕುಗಳ ಬವಣೆಯನ್ನು ಅಂಚಿನಿಂದ ಎಳೆದು ತಂದು ಮತ್ತೆ ತನ್ನ ಕಣ್ಣ ಮುಂದೆ ನಿಲ್ಲಿಸಿಕೊಳ್ಳಬೇಕಿದೆ ಮೈಮರೆತಿರುವ ಈ ಮತ್ತೊಂದು ಸಮಾಜ. ತುಳಿಸಿಕೊಂಡಷ್ಟೇ ಕಸುವಿನಿಂದ ಪುಟಿದೆದ್ದು ಹಿಂದೂಸ್ತಾನದ ದೀನ ದರಿದ್ರರ ಹೋರಾಟಗಳಿಗೆ ಸದಾ ಶಕ್ತಿ ತುಂಬಬಲ್ಲ ಅಸ್ಪೃಶ್ಯನೊಬ್ಬನ ಕತೆಯನ್ನು ಮತ್ತು ಆ ಕತೆಯ ಹಿಂದಿನ ದುರ್ಬಲ ಸಮುದಾಯದ ಬಗೆಹರಿಯದ ನೋವಿನ ಪರಂಪರೆಯನ್ನು ಮತ್ತೊಮ್ಮೆ ನಿರುಕಿಸಬೇಕಿದೆ.

ಪಂಜಾಬಿನಲ್ಲಿ ಕೂಡ ದಲಿತರ ಕೇರಿಗಳು ಊರಿನ ಅಂಚಿಗಿರುತ್ತವೆ. ಪಶ್ಚಿಮ ದಿಕ್ಕಿಗಿರುವುದು ವಾಡಿಕೆ. ಮುಂಜಾನೆಯ ಸೂರ್ಯನ ಕಿರಣಗಳು ಮೇಲ್ಜಾತಿಗಳ ಕೇರಿಗಳ ಮೇಲೆ ಬೀಳುವ ಮುನ್ನ ಅಸ್ಪೃಶ್ಯರ ಹಟ್ಟಿಗಳನ್ನು ತಾಕಿ ಮೈಲಿಗೆ ಆಗದಂತೆ ವಹಿಸಿರುವ ಎಚ್ಚರಿಕೆ. ಚರಂಡಿಯ ರೊಜ್ಜು ಕೂಡ ಪೂರ್ವದ ಎತ್ತರದಿಂದ ಪಶ್ಚಿಮದ ತಗ್ಗಿನುದ್ದಕ್ಕೆ ಚಾಚಿ ಹರಿಯಬೇಕು.

ಮಾನ್ಸಾ ಜಿಲ್ಲೆಯಲ್ಲಿ ಇಂತಹುದೊಂದು ಹಳ್ಳಿ ಬುರ್ಜ್ ಝಬ್ಬರ್. ಉಚ್ಚಕುಲದ ಜಮೀನ್ದಾರಿ ಜಾಟರು ನೂರಕ್ಕೆ ಐವತ್ತೈದು ಮಂದಿ. ದಲಿತರು ನೂರಕ್ಕೆ ನಲವತ್ತೈದು ಮಂದಿ. ಒಟ್ಟು ಜನಸಂಖ್ಯೆ 1,500. ಎಲ್ಲ ದಲಿತ ಕುಟುಂಬಗಳ ಒಬ್ಬಿಬ್ಬರು ಯುವಕರಿಗೆ ಜಾಟರ ವಾಡೆಗಳಲ್ಲಿ ಕೂಲಿ ಚಾಕರಿ. ಕೈಗೆ ಬೀಳುವ ಕಾಸು ತಿಂಗಳಿಗೆ ಎರಡು ಸಾವಿರಕ್ಕೂ ಕಡಿಮೆ. ಅಮಲಿನ ವ್ಯಸನಕ್ಕೆ ಬಿದ್ದ ನತದೃಷ್ಟರಿಗೆ ಅಫೀಮಿನ ಕೂಲಿ. ಹಗಲಿರುಳು ದಣಿಯದ ದುಡಿತ.

ಆತನ ಹೆಸರು ಬಂತ್ ಸಿಂಗ್. ಹುಟ್ಟಿನಿಂದ ಮಲ ಬಳಿಯುವ ಭಂಗಿ ಜಾತಿಗೆ ಸೇರಿದ ಈತ ಸಿಖ್ ಧರ್ಮದ ಅನುಯಾಯಿ. ಮೇಲ್ಜಾತಿಗಳ ಅಡಿಯಾಳಾಗಿ ಅವರ ಹೊಲಗದ್ದೆಗಳಲ್ಲಿ ದುಡಿಯಲು ಒಲ್ಲೆನೆಂದ ಸ್ವಾಭಿಮಾನಿ. ಶುರುವಿನಲ್ಲಿ ಹೆಣ್ಣುಮಕ್ಕಳ ಸಿಂಗಾರ ಸಾಧನಗಳನ್ನು ಮಾರಿ ಸಂಪಾದಿಸಿದ. ನಂತರ ಹಂದಿಗಳನ್ನು ಸಾಕಿ ತನ್ನ ಕಾಲ ಮೇಲೆ ನಿಂತ.

ಎಲ್ಲರೂ ಹೊಟ್ಟೆ ತುಂಬ ಉಂಡು ಉಟ್ಟು ಘನತೆಯಿಂದ ತಲೆಯೆತ್ತಿ ಬದುಕುವ ಶೋಷಣೆ ಮುಕ್ತ ಸಮಾಜದ ಕನಸು ಕಂಡವನು. ‘ಮಜ್ದೂರ್ ಮುಕ್ತಿ ಮೋರ್ಚಾ’ದ ಕಡು ನಿಷ್ಠೆಯ ಕಾಲಾಳು. ‘ನಮ್ಮ ಜೀವಕ್ಕಿಂತ ಪ್ರಿಯವಾದದ್ದು ನಮ್ಮ ದೇಶ ಕಣೋ ಗೆಳೆಯಾ, ದೇಶಕ್ಕಿಂತ ಪ್ರೀತಿಪಾತ್ರರು ಜೀವಂತ ಜನರು ಕಣೋ ಗೆಳೆಯಾ, ರಕ್ತಹೀರುವ ಜಿಗಣೆಗಳ ಹೊಸಕಿ ಹಾಕುವೆವೋ ಗೆಳೆಯಾ’ ಎಂಬಂಥ ಕ್ರಾಂತಿ ಗೀತೆಗಳಿಗೆ ಪಂಜಾಬಿನ ಜನಸಭೆಗಳಲ್ಲಿ ಮೊಳಗಿದ ದನಿಯಾಗಿ ಲಕ್ಷ ಲಕ್ಷ ಎದೆಗಳ ಕದ ತಟ್ಟಿದವನು.

ಎಲ್ಲಕ್ಕಿಂತ ಹೆಚ್ಚಾಗಿ ಮೇಲ್ಜಾತಿ ಜನರ ಹೊಲಗದ್ದೆಗಳ ಚಾಕರಿಯ ಹಂಗು ಹರಿದುಕೊಂಡು ಸ್ವಂತ ಕಾಲ ಮೇಲೆ ಎದೆ ಸೆಟೆಸಿ ನಿಂತವನು. ಅವರಂತೆ ಬಿಳಿ ಬಟ್ಟೆ ಧರಿಸಿ ಅವರ ಕಣ್ಣುಗಳನ್ನು ಕೆಂಪಾಗಿಸಿದವನು. ಮಕ್ಕಳನ್ನು ಶಾಲೆಗೆ ಕಳಿಸಿದವನು. ಬಡವರ ರೇಷನ್ ಕದಿಯುತ್ತಿದ್ದ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದು ಮಾಡಿಸಿದವನು. ಒಟ್ಟಾರೆ ಮೇಲ್ಜಾತಿಯವರ ಸಿಟ್ಟುಗಳನ್ನು ಸೆರಗಿಗೆ ಕಟ್ಟಿಕೊಂಡು ಬದುಕುತ್ತಿದ್ದವನು.

ಇಂತಹ ಬಂತ್ ಸಿಂಗ್‌ನ ಹಿರಿಯ ಮಗಳು ಬಲ್ಜಿತ್ ಕೌರ್.  ವರ್ಷದೊಪ್ಪತ್ತಿನಲ್ಲಿ ಹಸೆಮಣೆ ಏರಬೇಕಿದ್ದ ಹದಿನೇಳರ ಬಾಲೆ. ಮದುವೆ ನಿಶ್ಚಿತಾರ್ಥ ಮುಗಿದಿತ್ತು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಜರುಗಿತ್ತು. ‘ಹಳ್ಳಿ ಅಂದ್ರೆ ಇಂಥವೆಲ್ಲ ನಡೀತವೆ ತಮ್ಮಾ, ದುಡ್ಡುಗಿಡ್ಡು ಇಸಕೊಂಡು ಮಗಳ ಮದುವೆ ಮಾಡಿಬಿಡು, ಪೊಲೀಸು ಠಾಣೆಯ ಮೆಟ್ಟಿಲು ಹತ್ತಬೇಡ’ ಎಂದು ಬುದ್ಧಿ ಹೇಳಿದ ಸರಪಂಚ. ಈ ದುಡ್ಡುಗಿಡ್ಡು ಎನ್ನುವುದು ಸಾವಿರದೈನೂರರಿಂದ ಎರಡು ಸಾವಿರ ರೂಪಾಯಿಯ ಮೊತ್ತವನ್ನು ಮೀರುತ್ತಿರಲಿಲ್ಲ. ಬಂತ್ ಸಿಂಗನೊಳಗಿನ ಬಂಡುಕೋರ ಸಿಡಿದು ನಿಂತಿದ್ದ. ಅನ್ಯಾಯ ಸಹಿಸಲು ಸಿದ್ಧನಿರಲಿಲ್ಲ.

ಠಾಣೆಗೆ ಹೋದರೆ ಅಲ್ಲಿಯೂ ಪೊಲೀಸರಿಂದ ಬುದ್ಧಿವಾದ. ಜಾಟರನ್ನು ಎದುರು ಹಾಕಿಕೊಂಡು ದಲಿತ ಬದುಕಲಾದೀತೇ, ಹೆಸರು ಕೆಟ್ಟ ಮಗಳಿಗೆ ಮದುವೆ ಸಾಧ್ಯವೇ? ಸಿಕ್ಕ ಸಿಕ್ಕವರ ಲಾಲಸೆಗೆ ಬಲಿಯಾದಾಳು ಮಗಳು ಎಂದು ಎಚ್ಚರಿಕೆ. ತಂದೆ ಮಗಳ ಜೋಡಿ ನ್ಯಾಯವೇ ಬೇಕೆಂದು ಜಿದ್ದಿಗೆ ಬಿದ್ದಿತು. ಮದುವೆ ನಿಶ್ಚಿತಾರ್ಥ ಮುರಿದು ಬಿತ್ತು. ‘ಲಜ್ಜೆಗೆಟ್ಟ ಕೆಲಸ ಮಾಡಿದವರು ಅವರು, ನನಗ್ಯಾಕೆ ನಾಚಿಕೆಯಾಗಬೇಕು’ ಎಂದಳು ದಿಟ್ಟ ಮಗಳು.

ಅಪ್ಪ ಹೇಳಿಕೊಟ್ಟ ಸ್ವಾಭಿಮಾನದ ಗುಂಡಿಗೆಯವಳು. ‘... ಆಸೆ ಹಂಬಲಗಳ ಕತ್ತು ಹಿಸುಕಿ ವರದಕ್ಷಿಣೆಯ ಜೊತೆಗೆ ಬಿಕರಿಗಿಡುವ ಹಳ್ಳಿಗಳಲ್ಲಿ ಹೆಣ್ಣು ಸಂತಾನ ಹುಟ್ಟದಿರಲಿ, ಹಡೆದಪ್ಪನೇ, ನನ್ನ ವರದಕ್ಷಿಣೆಯಲ್ಲಿ ಪಿಸ್ತೂಲೊಂದನ್ನು ನನಗೆ ಕೊಟ್ಟುಬಿಡು’ ಎಂಬ ಕ್ರಾಂತಿಗೀತೆಯನ್ನು ಕೇಳಿ ಬೆಳೆದವಳು.

ಪಂಜಾಬಿನ ಹಳ್ಳಿಗಳಲ್ಲಿ ದಲಿತ ಬಾಲೆಯರ ಮೇಲೆ ಅತ್ಯಾಚಾರ ಸರ್ವೇಸಾಮಾನ್ಯ ಸಂಗತಿ. ಹುಲ್ಲು ಕೊಯ್ಯಲೆಂದೋ, ಬಹಿರ್ದೆಸೆಗೆಂದೋ ಜಮೀನ್ದಾರ ಜಾಟರ ಹೊಲಗಳನ್ನು ಹೊಕ್ಕ ಅಪರಾಧಕ್ಕಾಗಿ ಇಂತಹ ಬೆಲೆ ತೆರಬೇಕಾಗುವುದು. ‘ದಲಿತ ಹುಡುಗಿಯೇ ಮೇಲುಜಾತಿ ಹುಡುಗರಿಗೆ ಮರುಳಾಗಿ ಮೈಮೇಲೆ ಬೀಳುವಳು’. ಮೇಲೆ ಬಿದ್ದವಳೊಂದಿಗೆ ರಮಿಸುವ ಮೇಲ್ಜಾತಿ ಹುಡುಗರು ಉಪಕಾರ ಮಾಡಿದಂತೆಯೇ ಲೆಕ್ಕ. ‘ನಿಮ್ಮ ಹುಡುಗೀನ ಹದ್ದುಬಸ್ತಿನಲ್ಲಿಡಿ’ ಎಂದು ದಲಿತ ತಂದೆ ತಾಯಿಗಳಿಗೆ ಬೆದರಿಕೆ. ಪ್ರತಿಭಟಿಸಿದರೆ ಪುಡಿಕಾಸನ್ನು ಕೈಲಿಟ್ಟು ಗದುಮಿದರೆ ಮುಗಿಯಿತು.

ಪಂಜಾಬಿನ ಕೆಳಜಾತಿಗಳಿಗೆ ವಿಮೋಚನೆಯ ದಾರಿಯಾಗಿ ಕಂಡಿತ್ತು ಗುರು ನಾನಕರ ಸಿಖ್ ಧರ್ಮ. ಗುರು ಗೋವಿಂದ ಸಿಂಗ್ ಅವರ ‘ಪಂಚ ಪ್ಯಾರೇ’ಗಳ ಪೈಕಿ ಹಿಮ್ಮತ್ ರೈ ನೀರುಗಂಟಿ, ಭಾಯಿ ಸಾಹಿಬ್ ಚಂದ್ ಕ್ಷೌರಿಕ, ಭಾಯಿ ಮೋಹ್ಕಮ್ ಚಂದ್ ಮಡಿವಾಳ ಜಾತಿಗೆ ಸೇರಿದವರು. ಜಾತಿ ವ್ಯವಸ್ಥೆಯನ್ನು ಟೀಕಿಸಿದ ಸಂತರಾದ ಕಬೀರ, ನಾಮದೇವ ಹಾಗೂ ರವಿದಾಸರ ವಚನಗಳು ಸಿಖ್ಖರ ಪವಿತ್ರ ಗ್ರಂಥ ‘ಗುರುಗ್ರಂಥ ಸಾಹಿಬ್’ನಲ್ಲಿ ಸ್ಥಾನ ದೊರೆತಿದೆ. ಮಲ ಬಳಿಯುವ ಜಾತಿಗೆ ಸೇರಿದ ಭಾಯಿ ಜೈತಾಗೆ ‘ಗುರುಪುತ್ರ’ ಸಮ್ಮಾನ ನೀಡಿ ಆಲಿಂಗಿಸಿಕೊಂಡಿದ್ದರು ಗುರುಗೋವಿಂದ್ ಸಿಂಗ್.

ದಲಿತ ಅಸ್ಮಿತೆಯು ಸಿಖ್ ಅಸ್ಮಿತೆಯಲ್ಲಿ ವಿಲೀನ ಆಯಿತು. ಆದರೂ ಸಿಖ್ ಧರ್ಮದಲ್ಲಿ ಅಸಮಾನತೆ ಅಳಿಯಲಿಲ್ಲ. ಕೆಳಜಾತಿಗಳು ಮತ್ತು ಮೇಲ್ಜಾತಿಗಳ ಸಿಖ್ಖರ ನಡುವೆ ವಿವಾಹ ಸಂಬಂಧಗಳು ಏರ್ಪಡಲೇ ಇಲ್ಲ. ಜಾತಿ ವ್ಯವಸ್ಥೆ ಎಂಬ ಉಕ್ಕಿನ ಚೌಕಟ್ಟನ್ನು ಸಿಖ್ ಧರ್ಮವೂ ಮುರಿಯದೆ ಹೋಯಿತು. ಮತಾಂತರ ಹೊಂದಿದ ದಲಿತರು ಅಸ್ಪೃಶ್ಯರಾಗಿಯೇ ಉಳಿದರು. ಮೇಲ್ಜಾತಿಯವರು ಅವರೊಂದಿಗೆ ಕುಳಿತು ಉಣ್ಣಲಿಲ್ಲ. ಅಸ್ಮಿತೆ ವಿಲೀನ ಆದರೂ ದಲಿತರ ಬಾವಿಗಳು, ಸ್ಮಶಾನಗಳ ಪ್ರತ್ಯೇಕ ಅಸ್ತಿತ್ವ ಅಳಿಯಲಿಲ್ಲ. ಕಟ್ಟಕಡೆಗೆ ಪ್ರತ್ಯೇಕ ಗುರುದ್ವಾರಗಳೂ ತಲೆಯೆತ್ತಿ ನಿಂತವು.

ಅಸ್ಪೃಶ್ಯರಾಗಿಯೇ ಉಳಿದ ಮಜಹಬಿ ಸಿಖ್ಖರಿಗೆ ಆತ್ಮಘನತೆ ಸಿಗಲಿಲ್ಲ. ಜಮೀನುದಾರ ಜಾಟ ಸಿಖ್ಖರಿಗೆ ಅಡಿಯಾಳುಗಳಾಗೇ ಉಳಿದರು. ದಲಿತ ಕೂಲಿಗಳ ಕುಟುಂಬ ಮದುವೆಗೆಂದು ಪಡೆದ ಐದು ಸಾವಿರ ರೂಪಾಯಿ ಸಾಲ ಮುಂದಿನ ಹನ್ನೊಂದು ವರ್ಷಗಳ ತನಕ ಐವತ್ತೈದು ಸಾವಿರ ರೂಪಾಯಿ ತೆತ್ತರೂ ತೀರದ ಕ್ರೂರ ಸ್ವರೂಪದ ಶೋಷಣೆಗಳು ಇಂದಿಗೂ ಮುಂದುವರೆದಿವೆ.

ದಲಿತನೊಬ್ಬ ಗ್ರಾಮದ ಸರಪಂಚನ ಮಾತು ಮೀರಿ ನ್ಯಾಯ ಕೋರಿ ಕೋರ್ಟ್ ಮೆಟ್ಟಿಲು ತುಳಿದ ವಿರಳ ಪ್ರಕರಣವಿದು. ಅಪರಾಧಿಗಳಿಗೆ ಜೀವಾವಧಿ ಜೈಲು ಶಿಕ್ಷೆಯಾಯಿತು.ಮೇಲ್ಜಾತಿಯವರಿಗೆ ನಡು ಬಗ್ಗಿಸಲು ನಿರಾಕರಿಸಿದ ‘ಅಪರಾಧ’ಕ್ಕಾಗಿ ಬಂತ್ ಸಿಂಗ್ ಮತ್ತು ಆತನ ಕುಟುಂಬ ಭಾರಿ ಬೆಲೆ ತೆರಬೇಕಾಗಿ ಬಂದಿತ್ತು. ಲೋಹ್ರಿ ಹಬ್ಬದ ಮುನ್ನಾದಿನ. ಜನಸಭೆಗಳ ಕರಪತ್ರಗಳ ಹಂಚಿ ಬುರ್ಜ್ ಝಬ್ಬರ್ ಹಾದಿಯನ್ನು ಸೈಕಲ್ ತುಳಿದು ಕ್ರಮಿಸುತ್ತಿದ್ದಾಗ ಹೊತ್ತು ಕಂತಿ ಕತ್ತಲು ಇಳಿದಿತ್ತು.

ಮಕ್ಕಳಿಗೆ ಸಿಹಿ ಉಣಿಸು ಬೇಯಿಸಲು ಬೇಕಾಗಿದ್ದ ಹೈನು ಪದಾರ್ಥ ಖೋಯಾ ಖರೀದಿಸಿ ಕ್ರಾಂತಿ ಗೀತೆಯ ಗುನುಗುತ್ತಿದ್ದ ಬಂತ್ ಸಿಂಗ್. ‘ಮಲಬಳಿಯುವ ಕೀಳು ಭಂಗಿ’ಯ ಬಂಡು ದನಿಯನ್ನು ಅನವರತ ಅಡಗಿಸುವ ಹುನ್ನಾರ ಹಾದಿಯಲ್ಲಿ ಹೊಂಚು ಹಾಕಿ ಕಾದಿತ್ತು. ಈ ಹಿಂದೆ ಎರಡು ಸಲ ಹಲ್ಲೆ ನಡೆಸಿದ್ದ ಅದೇ ಮೇಲ್ಜಾತಿಯ ಏಳು ಪಡ್ಡೆಗಳು ಅಡ್ಡಗಟ್ಟಿದ್ದವು. ಕೈಯಲ್ಲಿ ಕೊಳವೆ ಬಾವಿಗಳ ಹ್ಯಾಂಡ್ ಪಂಪುಗಳ ಮಣಭಾರ ಹಿಡಿಕೆಗಳು.

ತಮ್ಮ ‘ಬೇಟೆ’ಯನ್ನು ನೆಲಕ್ಕೆ ಕೆಡವಿ ಒತ್ತಿ ಹಿಡಿದು ಮಂಡಿಯ ಕೆಳಭಾಗದ ಮೂಳೆಗಳನ್ನು ಕಸುವಿನಿಂದ ಬೀಸಿ ಬೀಸಿ ಜಜ್ಜಿದವು. ‘ದಲಿತ ಕೇರಿಯತ್ತ ಸುಳಿಯಬೇಡಿ ಅಂತೀಯಾ, ನಾವು ಎಲ್ಲಿ ಬ್ಯಾಡ್ಮಿಂಟನ್ ಆಡಬೇಕೆಂದು ತೀರ್ಮಾನಿಸಲು ನೀನ್ಯಾವನು’ ಎಂದು ಅರಚಿದವು. ಕಾಲ ಮೂಳೆಗಳನ್ನು ಪುಡಿ ಮಾಡಿದ ನಂತರ ಕೈಗಳ ಮೇಲೆ ಮತ್ತೆ ಮತ್ತೆ ಎರಗಿತು ಮಣಭಾರದ ಮೊಂಡು ಲೋಹ. ಗದ್ದೆಗೆ ಎಸೆದು ಪರಾರಿಯಾದವು... (ದಲಿತ ಬಾಲೆಯರನ್ನು ಕೆಣಕಿ ಕಾಡಲು ದಲಿತ ಕೇರಿಗಳಿಗೆ ನುಗ್ಗುತ್ತಿದ್ದ ಮೇಲ್ಜಾತಿ ಹುಡುಗರನ್ನು ಗದರಿ ದೂರ ಇರಿಸಿದ್ದ ಬಂತ್ ಸಿಂಗ್.

ನಿತ್ಯ ಮುಂಜಾನೆ ದಲಿತ ಹೆಣ್ಣುಮಕ್ಕಳು ಬಹಿರ್ದೆಸೆಗೆ ಬಳಸುವ ಬಯಲಿನ ತೀರಾ ಸನಿಹದಲ್ಲಿ ಬೇಕೆಂದೇ ಬ್ಯಾಡ್ಮಿಂಟನ್ ಕೋರ್ಟನ್ನು ಕಟ್ಟಿಕೊಂಡಿದ್ದರು ಪಡ್ಡೆಗಳು. ಹೆಣ್ಣುಮಕ್ಕಳು ಬರುವ ಮುನ್ನ ನಸುಕಿನಲ್ಲೇ ಆಟ ಶುರು ಮಾಡಿ, ಬೆಂಡು ಚೆಂಡನ್ನು ದೂರಕ್ಕೆ ಹೊಡೆಯುತ್ತಿದ್ದರು. ಅದನ್ನು ಹುಡುಕುವ ನೆವದಲ್ಲಿ, ಬಹಿರ್ದೆಸೆಗೆ ಕುಳಿತ ಹೆಣ್ಣುಮಕ್ಕಳನ್ನು ಸಮೀಪಿಸಿ ಅವಮಾನ ಮಾಡುತ್ತಿದ್ದ ಪಡ್ಡೆಗಳನ್ನು ಬೇರೆಲ್ಲಾದರೂ ಆಡಿಕೊಳ್ಳಿ ಎಂದೂ ಆತ ಗದರಿದ್ದುಂಟು).

ಆನಂತರದ ಹತ್ತಾರು ತಿಂಗಳ ಕಾಲ ಅಮಾನವೀಯ ಆಸ್ಪತ್ರೆಗಳು, ನಿರ್ಲಕ್ಷ್ಯ ತೋರಿದ ಪತ್ರಕರ್ತರು, ಘಟನೆಯನ್ನು ಅದುಮಿ ಹಾಕಲು ನೋಡಿದ ಪೊಲೀಸರ ನಡುವೆ ಸಾವು ಬದುಕಿನ ನಡುವೆ ತೂಗಿದ ಬಂತ್. ಹೇಳಹೊರಟರೆ ಅದೊಂದು ದುಃಖ, ವಿಷಾದ, ದುರಂತಗಳ ಕತೆ.

ಎರಡೂ ಕಾಲುಗಳು, ಒಂದು ಕೈಯನ್ನು ಕಳೆದುಕೊಂಡ. ಉಸಿರಾಡುವ ರುಂಡ-ಮುಂಡದಂತೆ ಹೊರಬಿದ್ದ. ಕೈಕಾಲು ಕಿತ್ತುಕೊಂಡರೇನಂತೆ, ಆಡುವ ನಾಲಗೆಯನ್ನು ಹಾಡುವ ಕೊರಳನ್ನು ಕಸಿಯುವುದು ಆಗಲಿಲ್ಲವಲ್ಲ ಎಂದು ಹಾಡಿದ, ಹಾಡಿಯೇ ಹಾಡಿದ. ‘ಬಂತ್’ ಎಂಬುದು ‘ಬೇಅಂತ್’ ತತ್ಸಮದ ತದ್ಭವ. ‘ಅಂತ್ಯವಿಲ್ಲದವನು’ ಅಥವಾ ‘ಅನಂತ’ ಎಂಬುದು ಈ ನಾಮಪದದ ಅರ್ಥ.

ಸಮ ಸಮಾಜದ ಕನಸು ನನಸಾಗಿಸಲು ಈಗಲೂ ಹಾಡುತ್ತಿದ್ದಾನೆ ಬಂತ್ ಸಿಂಗ್. ಈತನ ಈ ಹಾಡನ್ನು ಅದಮ್ಯ ಮನುಷ್ಯ ಪ್ರೀತಿಯ ಪುಸ್ತಕವಾಗಿ (The Ballad of Bant Singh) ಬರೆದಿದ್ದಾರೆ ನಿರುಪಮಾ ದತ್. Speaking Tiger ಪ್ರಕಾಶನ ಸಂಸ್ಥೆ ಬೆಳಕಿಗೆ ತಂದಿರುವ ಹೊತ್ತಿಗೆಯಿದು.

Comments
ಈ ವಿಭಾಗದಿಂದ ಇನ್ನಷ್ಟು
ಲಾಭದ ಹುದ್ದೆ ಎಂಬುದು ಶುದ್ಧಾಂಗ ಬೂಟಾಟಿಕೆ!

ದೆಹಲಿ ನೋಟ
ಲಾಭದ ಹುದ್ದೆ ಎಂಬುದು ಶುದ್ಧಾಂಗ ಬೂಟಾಟಿಕೆ!

22 Jan, 2018
ಕನ್ನಡಿ ಹಿಡಿದವರತ್ತ ಕಲ್ಲು ಬೀಸುವುದೇಕೆ?

ದೆಹಲಿ ನೋಟ
ಕನ್ನಡಿ ಹಿಡಿದವರತ್ತ ಕಲ್ಲು ಬೀಸುವುದೇಕೆ?

15 Jan, 2018
ಕೋರೆಗಾಂವ್ ವಿಜಯೋತ್ಸವ ದೇಶದ್ರೋಹದ್ದೇ?

ದೆಹಲಿ ನೋಟ
ಕೋರೆಗಾಂವ್ ವಿಜಯೋತ್ಸವ ದೇಶದ್ರೋಹದ್ದೇ?

8 Jan, 2018
ಕೇಜ್ರಿವಾಲರಿಗೆ ಹೆದರುತ್ತಾರೆಯೇ ನರೇಂದ್ರ ಮೋದಿ!

ದೆಹಲಿ ನೋಟ
ಕೇಜ್ರಿವಾಲರಿಗೆ ಹೆದರುತ್ತಾರೆಯೇ ನರೇಂದ್ರ ಮೋದಿ!

1 Jan, 2018
ಫಲ ನೀಡುವುದೇ ಮೆದು ಹಿಂದುತ್ವ?

ದೆಹಲಿ ನೋಟ
ಫಲ ನೀಡುವುದೇ ಮೆದು ಹಿಂದುತ್ವ?

25 Dec, 2017