ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಜಾತಶತ್ರು’ ಆದರ್ಶ ಅನುಕರಣೀಯ

Last Updated 26 ಡಿಸೆಂಬರ್ 2016, 6:15 IST
ಅಕ್ಷರ ಗಾತ್ರ

ಬಳ್ಳಾರಿ: ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ ಮತ್ತು ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಬಿಜೆಪಿ ಜಿಲ್ಲಾ ಘಟಕವು ನಗರದ ಶ್ರೀರಾಂಪುರ ಕಾಲೊನಿಯ ರುಕ್ಷ್ಮಿಣಿ ಪಾಂಡುರಂಗ ದೇವಾಲಯದ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡರು.

ಶಿಬಿರಕ್ಕೆ ಚಾಲನೆ ನೀಡಿದ ಸಂಸದ ಬಿ.ಶ್ರೀರಾಮುಲು, ಸಾಂಕ್ರಾಮಿಕ ಕಾಯಿಲೆಯಿಂದ ಹಲವರು ಆಸ್ಪತ್ರೆಯ ಪಾಲಾಗುತ್ತಿದ್ದಾರೆ. ವೈದ್ಯರ ಕೊರತೆಯಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಅನೇಕ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂದು ದೂರಿದರು.

ಮುಖಂಡ ಗಾಲಿ ಸೋಮಶೇಖರರಡ್ಡಿ, 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅತ್ಯಧಿಕ ಸ್ಥಾನ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. ಬಿ.ಶ್ರೀರಾಮುಲು ಉಪಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ವೈದ್ಯರಾದ ಡಾ.ಬಿ.ಕೆ. ಸುಂದರ್, ಡಾ.ಶಶಿಧರ ರೆಡ್ಡಿ ನೇತೃತ್ವದ ಸಿಬ್ಬಂದಿ ಸಂತ ಆಂತೋನಿ ಬೀದಿ, ಶ್ರೀರಾಂಪುರ ಕಾಲೊನಿ ಸೇರಿ ಸುತ್ತಮುತ್ತಲಿನ ಪ್ರದೇಶಗಳ ನೂರಾರು ಮಂದಿಯ ಆರೋಗ್ಯ ತಪಾಸಣೆ ನಡೆಸಿದರು. ಔಷಧಿ ವಿತರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಗುರುಲಿಂಗನಗೌಡ ಮಾತನಾಡಿದರು.

ಅಭಿಮಾನಿ ಬಳಗ: ಇಲ್ಲಿನ ತೇರುಬೀದಿಯಲ್ಲಿ ವಾಜಪೇಯಿ ಜನ್ಮದಿನವನ್ನು ನೂರಾರು ಅಭಿಮಾನಿಗಳು ಆಚರಿಸಿದರು. ಪಾಲಿಕೆ ಸದಸ್ಯ ವಿ.ಎಸ್‌.ಮರಿದೇವಯ್ಯ ವಾಜಪೇಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮುಖಂಡರಾದ ಡಿ.ವಿನೋದಕುಮಾರ್‌, ನಿಷ್ಠಿರುದ್ರಪ್ಪ, ಡುಂಗರ್ ಚಂದ್ ಇತರರು ಇದ್ದರು.

ಸರ್ಕಾರಿ ಆಸ್ಪತ್ರೆಯಲ್ಲಿ ವಾಜಪೇಯಿ ಜನ್ಮದಿನ
ಹೊಸಪೇಟೆ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ತಾಲ್ಲೂಕು ಬಿಜೆಪಿಯಿಂದ ಭಾನುವಾರ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಾಲು ಹಾಗೂ ಬ್ರೆಡ್‌ ವಿತರಿಸಲಾಯಿತು.

ಬಳಿಕ ಆಸ್ಪತ್ರೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅನಂತ ಪದ್ಮನಾಭ ಮಾತನಾಡಿ, ಅಟಲ್‌ ಬಿಹಾರಿ ವಾಜಪೇಯಿ ಅವರು, ಅವರ ನಡೆ–ನುಡಿಯಿಂದ ಅಜಾತಶತ್ರು ಎನಿಸಿ ಕೊಂಡಿದ್ದರು. ಅವರ ಅವಧಿಯಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿತ್ತು. ದೇಶಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದರು.

ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾ ಜಿಲ್ಲಾ ಅಧ್ಯಕ್ಷ ಜಂಬಯ್ಯ ನಾಯಕ, ತಾಲ್ಲೂಕು ಅಧ್ಯಕ್ಷ ತಾರಿಹಳ್ಳಿ ಆನಂದ, ತಾಲ್ಲೂಕು ಘಟಕದ ಅಧ್ಯಕ್ಷ ಸಂದೀಪ ಸಿಂಗ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರೂಪೇಶ್‌ ಕುಮಾರ್‌ ಇತರರು ಇದ್ದರು.

ಬಳಿಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಲಿಟ್ಲ್‌ ಫ್ಲವರ್‌ ಶಾಲೆ ಸಮೀಪದ ಕ್ಯಾಥೋಲಿಕ್‌ ಚರ್ಚ್‌ನಲ್ಲಿ ಕ್ರೈಸ್ತ ಧರ್ಮೀಯರೊಂದಿಗೆ ಕ್ರಿಸ್‌ಮಸ್‌ ಆಚರಿಸಿದರು.

ಮುತ್ಸದ್ದಿ ರಾಜಕಾರಣಿ
ಸಿರುಗುಪ್ಪ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ರಾಷ್ಟ್ರದ  ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿದ್ದು, ತಮ್ಮ ಜೀವನದುದ್ದಕ್ಕೂ ದೇಶದ ಅಭಿವೃದ್ಧಿಯ ಕನಸನ್ನು ಕಂಡವರು ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ, ಮಾಜಿ ಶಾಸಕ ಎಂ.ಎಸ್‌.ಸೋಮಲಿಂಗಪ್ಪ ಹೇಳಿದರು.

ಇಲ್ಲಿಯ 7ನೇವಾರ್ಡಿನ ಬಿ.ಜಿ.ಸಂಸ್ಥೆ ಕಾರ್ಯಾಲಯದಲ್ಲಿ ಬಿಜೆಪಿ ಪಕ್ಷದ ವತಿಯಿಂದ ವಾಜಪೇಯಿಯವರ 92ನೇ ಜನ್ಮದಿನ ಅಂಗವಾಗಿ ಆಯೋಜಿಸಿದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಆರ್‌.ಎಚ್‌.ಎಂ.ಶಾಂತಮೂರ್ತಿಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಕೊಂಚಗೇರಿ ನಾಗರಾಜಗೌಡ, ಸಿದ್ದಪ್ಪ ಮಾತನಾಡಿದರು. ನಗರಸಭೆ ಸದಸ್ಯರಾದ ದೊಡ್ಡ ಹುಲುಗಪ್ಪ ಇತರರು ಇದ್ದರು.

ಸ್ವಚ್ಛತಾ ಕಾರ್ಯಕ್ರಮ
ಸಂಡೂರು:  ವಾಜಪೇಯಿಯವರ ಜನ್ಮದಿನದ ಅಂಗವಾಗಿ ತಾಲ್ಲೂಕಿನ ಬಿಜೆಪಿಯ ವಿವಿಧ ಮೋರ್ಚಾಗಳ ಮುಖಂಡರು ಸಂಡೂರಿನ ಧನುಂಜಯ ಕ್ಲಿನಿಕ್‌ನಲ್ಲಿ  ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದಲ್ಲದೆ, ಬಿಸಿಎಂ ಹಾಸ್ಟೆಲ್‌ ಬಳಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು.

ವೈದ್ಯರಾದ ಡಾ.ಧನುಂಜಯ, ಡಾ. ಪ್ರೇಮಲತಾ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ. ನೀಲಕಂಠಪ್ಪ, ಜಿಲ್ಲಾ ಘಟಕದ ಉಪಾಧ್ಯಕ್ಷ ಪಿ.ವಿ. ಶ್ರೀನಿವಾಸಲು, ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷ ಪುರುಷೋತ್ತಮ, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಬಾಳೆಕಾಯಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಟಿ. ವೀರೇಶ್, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮುನಾಫ್, ಎಸ್‌.ಸಿ ಮೋರ್ಚಾ ಅಧ್ಯಕ್ಷ ಎಚ್. ಹನುಮಂತ, ಮಹಿಳಾ ಮೋರ್ಚಾ ಅಧ್ಯಕ್ಷೆ ಪಾರ್ವತಿ ಕರೂರ್, ಸ್ಲಂ ಮೋರ್ಚಾ ಅಧ್ಯಕ್ಷ ಮೂರ್ತಿ ಇತರರು ಇದ್ದರು. 

ರೋಗಿಗಳ ಆರೋಗ್ಯ ತಪಾಸಣೆ
ಹೂವಿನಹಡಗಲಿ: ವಾಜಪೇಯಿ ಅವರ 92ನೇ ಜನ್ಮದಿನ ಪ್ರಯುಕ್ತ ತಾಲ್ಲೂಕಿನ ಹಿರೇಮಲ್ಲನಕೆರೆ ಗ್ರಾಮದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಕೆ.ಮಲ್ಲಿಕಾರ್ಜುನಗೌಡ ಮಾತನಾಡಿದರು. ಹಿರೇಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಿ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಎಸ್ಸಿ ಮೂರ್ಚಾ ರಾಜ್ಯ ಘಟಕದ ಕೋಶಾಧ್ಯಕ್ಷ ಡಾ.ರಮೇಶ್, ಮುಖಂಡರಾದ ಎಲ್.ಮಧುನಾಯ್ಕ, ಪೂಜಪ್ಪ, ಸೊಪ್ಪಿನ ವೀರಣ್ಣ, ಎಂ.ಬಿ.ಬಸವರಾಜ, ಯು.ಕೊಟ್ರೇಶನಾಯ್ಕ, ಎಂ.ಶಿವನಗೌಡ, ಡಾ.ಲಕ್ಷ್ಮಣನಾಯ್ಕ, ಯಲಗಚ್ಚಿನ ಪ್ರಕಾಶ್ ಇತರರು ಇದ್ದರು.

200  ರೋಗಿಗಳ  ಆರೋಗ್ಯ  ತಪಾಸಣೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ಡಾ.ಸುರೇಶ್ ಆಸ್ಪತ್ರೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದಿಂದ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಭಾನುವಾರ  ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಬಿಜೆಪಿ ಪಕ್ಷದ ಜಿಲ್ಲಾ ಪ್ರಕೋಷ್ಟ ಸಂಚಾಲಕ ಡಾ. ಸುರೇಶ್ ಮಾತನಾಡಿ, ಬಡವರಿಗೆ ಇಂತಹ ಶಿಬಿರಗಳು ಸಹಾಯಕವಾಗುತ್ತವೆ. ಕೊಳಚೆ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಪಕ್ಷದ ಮಂಡಲ ಅಧ್ಯಕ್ಷ ನರೇಗಲ್ ಕೊಟ್ರೇಶ್, ಪ್ರಧಾನ ಕಾರ್ಯದರ್ಶಿ ಡಾ.ಅಜ್ಜಯ್ಯ ಮಾತನಾಡಿದರು. 

ಪಟ್ಟಣದ ವೈದ್ಯರಾದ ಡಾ. ಎಚ್.ಎನ್.ಪಿ.ವಿಠಲ್, ಡಾ. ಕರಿಬಸವಯ್ಯ, ಡಾ. ವಿನಯ್‌ಸಿಂಹ, ಡಾ. ಸುನೀಲ್, ಡಾ. ಪ್ರವೀಣ್, ಡಾ. ಗುರುಪ್ರಸಾದ್ ಇದ್ದರು.
200 ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಉಚಿತವಾಗಿ ಮಾತ್ರೆಗಳನ್ನು ನೀಡಲಾಯಿತು. ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ತಾ.ಪಂ. ಸದಸ್ಯರಾದ ಬುಡ್ಡಿ ಬಸವರಾಜ, ತಿಪ್ಪೆರುದ್ರಮುನಿ, ಜಾಣ ಅನಿಲ್‌ಕುಮಾರ್‌, ಪುರಸಭೆ ಸದಸ್ಯ ಬಿ.ಗಂಗಾಧರ, ಪಕ್ಷದ ಮುಖಂಡರಾದ ಜೆ.ಬಿ. ಶರಣಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT