ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಭೋಜನ ಪರಂಪರೆಯ ಎಳ್ಳಮಾಸಿ

ಡಿ. 29ರಂದು ಎಳ್ಳಮಾಸಿ
Last Updated 26 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಸಸ್ಯಾರಾಧನೆ ಮತ್ತು ಭೂತಾಯಿ ಆರಾಧನೆಯ ಪ್ರತೀಕವಾಗಿರುವ ಎಳ್ಳ ಅಮವಾಸ್ಯೆ ಹಬ್ಬದಂದು ಹೊಲದಲ್ಲಿ ಸಾಮೂಹಿಕ ಪೂಜೆ ಮತ್ತು ಭೋಜನ ಪರಂಪರೆಯೇ ವಿಶೇಷತೆ. ಅಂತೆಯೇ ‘ಎಳ್ಳಮಾಸಿ ಹಬ್ಬಕ್ಕ ಊಟಕ್ಕೆ ಕರಿಯದವರು ಯಾರಿಲ್ಲ, ಹೋಳಿ ಹಬ್ಬಕ್ಕೆ ಬೊಬ್ಬೆ ಹೊಡಿಯದವರು ಯಾರಿಲ್ಲ’ ಎಂಬ ಗಾದೆಯೇ ಇದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತಿತರ ಜಿಲ್ಲೆಗಳಲ್ಲಿ ಈ ಹಬ್ಬವನ್ನು ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತದೆ. ಅದೇ ರೀತಿ ಇದೇ 29ರಂದು ಗುರುವಾರ ಈ ಎಳ್ಳಮಾಸಿ ಹಬ್ಬ ನಡೆಯುತ್ತಿದೆ.
 
‘ಹಿಂಗಾರು ಹಂಗಾಮಿನ ಬಿಳಿಜೋಳ ಮುಂತಾದ ಬೆಳೆಗಳು ಹುಲುಸಾಗಿ ಬೆಳೆಯಲಿ ಮತ್ತು ಎಳ್ಳಿನಷ್ಟಾದರೂ ಭಕ್ತಿ ಭೂರಮೆಯ ಮೇಲಿರಲಿ’ ಎಂದು ಪ್ರಾರ್ಥಿಸುವ ಹಬ್ಬವೇ ಎಳ್ಳ ಅಮವಾಸ್ಯೆ. ಚಳಿಯ ಏರಿಳಿತದ ಅವಧಿಯಲ್ಲಿ ಆಚರಿಸುವ ಈ ಹಬ್ಬಕ್ಕೆ ಎಳ್ಳ ಅಮವಾಸ್ಯೆ ಹೆಸರು ಬಂದಿರಬಹುದು ಎಂಬುದು ಹಿರಿಯರ ಅಭಿಪ್ರಾಯ. ಹಬ್ಬದ ಸಂದರ್ಭದಲ್ಲಿ ಬಿಳಿಜೋಳ ಮತ್ತು ಗೋಧಿತೆನೆಗಳು ಹೊರಬರುವ ತವಕದಲ್ಲಿರುವುದು ಸಮೃದ್ಧ ಬೆಳೆಯ ಸಂಕೇತ. ಇದಕ್ಕಾಗಿ ರೈತರು ಸೀಮಂತ ಮಾದರಿಯಲ್ಲಿ ಹೊಲದ ಕೊಂಪಿಯಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸುವರು. ಪಾಂಡವರಿಗೆ ಮತ್ತು ಲಕ್ಷ್ಮಿಗೆ ನೈವೇದ್ಯ ಅರ್ಪಿಸಿ ಬೆಳೆಗೆ ಯಾವುದೇ ರೋಗ ಬಾಧೆಯಾಗದಿರಲಿ ಹಾಗೂ ಉತ್ತಮ ಫಸಲು ಬರಲೆಂದು ಅರ್ಥೈಸುವ ‘ವಲಗೆ-ವಲಗೆ ಚಾಂಗೋಂದ ಪಲಗೆ ಮತ್ತು ಯಾವ ತಾಯಿ ಕೊಟ್ಟಳು, ಭೂತಾಯಿ ಕೊಟ್ಟಳು’ ಎನ್ನುತ್ತ ಹೊಲದಲ್ಲೆಲ್ಲ ಚರಗ ಸಿಂಪಡಿಸಿ ಉತ್ತಮ ಫಸಲಿಗಾಗಿ ಪ್ರಾರ್ಥಿಸುವರು. ಹಬ್ಬದಂದು ಚರಗ ಚೆಲ್ಲುವ ಸಂಪ್ರದಾಯ ಪ್ರಾಚೀನ ಕಾಲದಿಂದ ಬಂದಿದೆ. ಇದರ ಬಳಿಕ ಎಲ್ಲರ ಸಾಮೂಹಿಕ ಭೋಜನ.
 
ಹಬ್ಬದ ಹಿಂದಿನ ದಿನ ಮಹಿಳೆಯರು ಮಾಗಿ ಚಳಿಗೆ ತಕ್ಕುದಾದ ಮತ್ತು ವೈಜ್ಞಾನಿಕ ಹಿನ್ನೆಲೆಯ ಹಬ್ಬದೂಟದ ಸಿದ್ಧತೆ ನಡೆಸುವರು. ಮೆಂತ್ಯೆ, ಪಾಲಾಕ್, ಕೊತ್ತಂಬರಿ, ಈರುಳ್ಳಿಯನ್ನು, ಅವರೆ, ತೊಗರಿ, ಬಟಾಣಿ, ಶೇಂಗಾ, ಕಡಲೆಯ ಹಸಿಕಾಳುಗಳನ್ನು, ಕಡಲೆಹಿಟ್ಟು, ಹಸಿ ಮೆಣಸಿನಕಾಯಿ, ಹುಣಸೆಕಾಯಿ ಮತ್ತು ಶುಂಠಿ, ಬೆಳ್ಳುಳ್ಳಿ ಮುಂತಾದವನ್ನು ಬಳಸಿ ರುಚಿಕಟ್ಟಾದ ಭಜ್ಜಿಪಲ್ಯೆ ತಯಾರಿಸುವರು. ಇದರೊಂದಿಗೆ ಶೇಂಗಾ-ಎಳ್ಳಿನ ಹೋಳಿಗೆ ಮತ್ತು ಚಟ್ನಿ, ಸಜ್ಜೆ-ಜೋಳದ ರೊಟ್ಟಿ, ಜೋಳದ ಅನ್ನ, ಅಂಬಲಿ, ಅಕ್ಕಿಹುಗ್ಗಿ, ಧಪ್ಪಟ್ಟಿ, ಬೆಲ್ಲದ ಕರಚೆಕಾಯಿ ಮಾಡುವರು. ಭಜ್ಜಿಪಲ್ಯೆ ಎಲ್ಲೆಡೆ ಸಾಮಾನ್ಯ. ಕೆಲವೆಡೆ ಜೋಳ ಮತ್ತು ಸಜ್ಜೆರೊಟ್ಟಿ ಬದಲಾಗಿ ಸಜ್ಜೆ ಮತ್ತು ಜೋಳದ ಕಡುಬು, ಕೆಲವಡೆ ಶೇಂಗಾ ಮತ್ತು ಹೂರಣ ಹೋಳಿಗೆಯನ್ನೂ ಸಿದ್ಧಪಡಿಸುವರು. 
 
ಸಾಮೂಹಿಕ ಊಟದ ಪರಂಪರೆ: ಹಬ್ಬದಂದು ಊಟದ ಪದಾರ್ಥಗಳೊಂದಿಗೆ ಸ್ನೇಹಿತರು, ನೆರೆಹೊರೆಯವರ, ಕುಟುಂಬದವರೆಲ್ಲ ಹೊಲಕ್ಕೆ ಬಂದು ಸಾಮೂಹಿಕ ಊಟ ಮಾಡುವರು. ಈ ದಿನದಂದು ಮಾರುವೇಷದ ಹೆಣ್ಣುದೇವತೆಗೆ ರೈತನೊಬ್ಬ ಊಟ ಮಾಡಿಸದೆ ಕಳುಹಿಸಿದ್ದಕ್ಕೆ ಅವಳ ಕಣ್ಣಿನಿಂದ ಉದುರಿದ ಕಾಡಿಗೆಯಿಂದ ಮರುದಿನ ಜೋಳದ ತೆನೆಗಳೆಲ್ಲ ಕಾಡಿಗೆ ತೆನೆಗಳಾಗಿದ್ದವು ಎಂದು  ಜನಪದ ಕಥೆಯೊಂದರಲ್ಲಿ ವಿವರಿಸಲಾಗಿದೆ. ಮಹಾಭಾರತದ ಸನ್ನಿವೇಶವೊಂದರಲ್ಲಿ ಪಾಂಡವರು ಕೌರವರೊಂದಿಗೆ ಯುದ್ಧ ಮಾಡಲು ಹೊರಟಾಗ ಮಾರ್ಗ ಮಧ್ಯದಲ್ಲಿರುವ ಹೊಲದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ತಾವು ತಂದಿದ್ದ ಆಹಾರವನ್ನು ಹೊಲದ ತುಂಬಾ ಚೆಲ್ಲಿ ಊಟ ಮಾಡಿ ಹೊರಡುತ್ತಾರೆ ಎಂಬುದನ್ನು ಸಹ ಉಲ್ಲೇಖಿಸಲಾಗುತ್ತದೆ. ಅದಕ್ಕಾಗಿಯೇ ಹಬ್ಬದ ದಿನ ಹೊಲಕ್ಕೆ ಬಂದವರಿಗೆಲ್ಲ ಊಟ ಮಾಡಿಸುವುದು ವಾಡಿಕೆ. ಊಟದ ಬಳಿಕ ಬಾಲಕರು ಗಾಳಿಪಟ ಹಾರಿಸುವ, ಬಾಲಕಿಯರು ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ, ಜೋಕಾಲಿಯಂಥ ಆಟೋಟಗಳಲ್ಲಿ ತೊಡಗುತ್ತಾರೆ. ಮಹಿಳೆಯರು ಭುಲಾಯಿ ಹಾಕುವರು. 
 
ಸಂಜೆ ಹಾಲು ಉಕ್ಕಿಸುವ, ಬುಟ್ಟಿಯಲ್ಲಿ ದೀಪದ ಜ್ಯೋತಿಯಿಡುವ, ಜೋಳದ ಐದು ದಂಟುಗಳಿಗೆ ಕುಪ್ಪಸ ಹೊದಿಸುವ, ಊರಿನ ಹನುಮಂತನನ್ನು ನಮಸ್ಕರಿಸುವ, ಕೆಲವು ಗ್ರಾಮಗಳಲ್ಲಿ ರಾತ್ರಿ ಬಡಿಗೆ ತಿರುಗಿಸುವ, ಕೀಲು ಕುದುರೆ ಮತ್ತು ಬೆಂಕಿ ನೃತ್ಯ ಮಾಡುವ ಸಂಪ್ರದಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT