ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಬೃಹತ್‌ ತೋಪಿದು

Last Updated 26 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
-ಗಾಯತ್ರಿ ಮಂತ ಚಂಡರಕಿ
 
**
ಈ ತೋಪಿನ ತೂಕ ಸುಮಾರು 80 ಟನ್‌. ಇದರಿಂದ ಮದ್ದು ಗುಂಡನ್ನು ಹಾರಿಸಿದರೆ 55 ಕಿ.ಮೀ ದೂರದವರೆಗೆ ಹೋಗಿ ಗುಂಡು ಬೀಳುತ್ತದೆ! ತೋಪಿನ ಮೇಲ್ಮೈಯಲ್ಲಿ ಎಡಕ್ಕೆ ಮತ್ತು ಬಲಕ್ಕೆ ಒಟ್ಟು 20 ಕೈ ಹಿಡಿಕೆಗಳಿದ್ದು, 20 ಸೈನಿಕರ ಸಹಾಯದಿಂದ ತೋಪನ್ನು ತಿರುಗಿಸುವಷ್ಟು ಬಲವಾಗಿದೆ...
 
ಇಂಥದ್ದೊಂದು ಅದ್ಭುತ ತೋಪು ಇರುವುದು ಕಲಬುರ್ಗಿಯ ಬಹಮನಿ ಸಾಮ್ರಾಜ್ಯದಲ್ಲಿ. ಇದೀಗ ವಿಶ್ವದ ಅತ್ಯಂತ ದೊಡ್ಡ ತೋಪು ಎಂದು ಪರಿಗಣಿಸಲಾಗಿದೆ. ಛಾಯಾಗ್ರಾಹಕ ಮೊಹಮ್ಮದ್‌ ಅಯಾಜುದ್ದೀನ್‌ ಪಟೇಲ್, ಉತ್ತರ ಕರ್ನಾಟಕದ ಇಂಡೊ ಇಸ್ಲಾಮಿಕ್ ಕಲೆಯ ಸಂಶೋಧಕ ಡಾ.ರೆಹಮಾನ್ ಪಟೇಲ್ ಮತ್ತು ನಾಣ್ಯ ಸಂಗ್ರಹಕಾರ ಮೊಹಮ್ಮದ್‌ ಇಸ್ಮಾಯಿಲ್ ಅವರು  ತೋಪನ್ನು ಸಂಶೋಧಿಸಿದ್ದಾರೆ. ಇದುವರೆಗೂ ಆಂಧ್ರ ಪ್ರದೇಶದ ನಿಜಾಮಾಬಾದ ಜಿಲ್ಲೆಯ ಕೌಲಾಸ್ ಕೋಟೆಯಲ್ಲಿರುವ 23 ಅಡಿ ಉದ್ದನೆಯ ತೋಪನ್ನು ಅತ್ಯಂತ ಉದ್ದನೆಯದೆಂದು ಪರಿಗಣಿಸಲಾಗಿತ್ತು. 
 
ಈ ಬೃಹತ್‌ ತೋಪು 14ನೇ ಶತಮಾನದ ತುರ್ಕಿಷ್ ನಿರ್ಮಾಣದ್ದು. ಇದನ್ನು ಪಂಚಲೋಹದಿಂದ ತಯಾರಿಸಲಾಗಿದೆ. ಇದರ ನಳಿಕೆಯ ಒಳಭಾಗದಲ್ಲಿ 29 ಅಡಿ ಉದ್ದವಾದ 2 ಇಂಚಿನ ನೇರ ಪಂಚಲೋಹದ ಪಟ್ಟಿಗಳಿಂದ ಗೋಲಾಕಾರದಂತೆ ಜೋಡಿಸಲಾಗಿದೆ. ಅದರ ಮೇಲೆ 3 ಇಂಚು ಅಗಲ, 3 ಇಂಚು ದಪ್ಪವಾದ ಲೋಹದ ವರ್ತುಲಾಕಾರಾದಲ್ಲಿ ಒಂದೊಂದಾಗಿ ಜೋಡಿಸಲಾಗಿದೆ. 
 
ಆದರೆ ಈ ತೋಪು ಕಲ್ಲುಮಣ್ಣುಗಳ ನಡುವೆ ಹೂತುಹೋಗಿದೆ. ಕೇಂದ್ರ ಪ್ರಾಚ್ಯವಸ್ತು ಸಮೀಕ್ಷಾಲಯ ಮತ್ತು ರಾಜ್ಯ ಪ್ರಾಚ್ಯ ಇಲಾಖೆ ಈ ತೋಪಿನ ರಕ್ಷಣೆ ಅದರ ಸುತ್ತಲೂ ರಕ್ಷಣಾ ಬೇಲಿ ಹಾಕುವ ಕಾರ್ಯ ತುರ್ತಾಗಿ ನಡೆಯಬೇಕಿದೆ. ತೋಪನ್ನು ಸ್ವಚ್ಛಗೊಳಿಸಿ ಅಲ್ಲೊಂದು ಫಲಕ ಹಾಕಿ, ಅದರಲ್ಲಿ ತೋಪಿನ ವಿವರಗಳನ್ನು ನಮೂದಿಸಿ, ‘ಇದು ವಿಶ್ವದ ಅತ್ಯಂತ ಉದ್ದನೆಯ ತೋಪು’ ಎಂದು ಕಾಣಿಸುವುದು ಅಗತ್ಯವಾಗಿದೆ.
 
ಬಹಮನಿ ಸಾಮ್ರಾಜ್ಯದ ಹಿನ್ನೆಲೆ: ಈ ಸಾಮ್ರಾಜ್ಯದ ಸಂಸ್ಥಾಪಕ ಅಲ್ಲಾವುದ್ದಿನ್ ಹಸನ ಬಹಮನ ಶಾ. ಈತ ದಕ್ಷಿಣ ಭಾರತದ ಮೊದಲನೆಯ ಸ್ವತಂತ್ರ ಇಸ್ಲಾಮಿಕ್ ಸುಲ್ತಾನನೂ ಹೌದು. ಇವರು 13ನೇ ಶತಮಾನದಲ್ಲಿ ಗುಲ್ಬರ್ಗಾವನ್ನು ರಾಜಧಾನಿ ಮಾಡಿಕೊಂಡಿದ್ದ. ಆ ಸಮಯದಲ್ಲಿ ಸಾಮ್ರಾಜ್ಯವನ್ನು ವಿಸ್ತರಿಸಿ ಕಲೆ, ವಾಸ್ತುಶಿಲ್ಪ ಮತ್ತು ಸಾಹಿತ್ಯದ ಕೇಂದ್ರವನ್ನಾಗಿಸಿದ್ದ. ಅವನ ನಂತರ ಬಹಮನಿ ಆಡಳಿತಗಾರರು 191 ವರ್ಷ (1347-1538) ಆಡಳಿತ ನಡೆಸಿದರು. ಈ ಕೋಟೆಯಲ್ಲಿ ಈಗ ವಿವಿಧ ಅಳತೆಯ 23 ತೋಪುಗಳಿರುವುದು ವಿಶೇಷ.
 
**
ವಿಶ್ವದ ದೊಡ್ಡ ತೋಪುಗಳಿವು
* ಟಿಸಾರ್ ತೋಪು (17.5  ಅಡಿ) 15ನೇ ಶತಮಾನ ರಷ್ಯಾ)
 
* ಪುಮ್‌ಹರ್ಟ್ ವೊನ್ ಸ್ಟೇರ್ (259 ಸೆಂ.ಮೀ.) 15ನೇ ಶತಮಾನ, ಆಸ್ಟ್ರಿಯಾ
 
* ದಿ ಬಸಲಿಕ್ ಒಟ್ಟೊಮನ್ (732 ಸೆಂ.ಮೀ) ಟರ್ಕಿ
 
* ಫೌಲೆ ಮೆಟ್ಟೆ (181 ಸೆಂ.ಮೀ) 15ನೇ ಶತಮಾನ, ಜರ್ಮನಿ
 
* ಮಲಿಕ್-ಎ-ಮದಾನ್ (14.6 ಅಡಿ) 16 ನೇ ಶತಮಾನ, ವಿಜಯಪುರ
 
* ದುಲ್ಲೆ ಗ್ರಿಯೆಟ್ ( 345 ಸೆಂ.ಮೀ) 14ನೇ ಶತಮಾನ, ಬೆಲ್ಜಿಯಮ್, ಯುರೋಪ್
 
* ದರ್ದಾನೆಲ್ಲೆಸ್ ಗನ್ ( 518 ಸೆಂ.ಮೀ) 15ನೇ ಶತಮಾನ, ಟರ್ಕಿ
 
* ಮಾನ್ಸ್ ಮೆಗ್ (4.6 ಮೀಟರ್) 15ನೇ ಶತಮಾನ, ಸ್ಕಾಟಿಷ್, ಸ್ಕಾಟ್‌ಲ್ಯಾಂಡ್
 
* ಫೌಲೆ ಗ್ರೇಟೆ (250 ಸೆಂ.ಮೀ) 15ನೇ ಶತಮಾನ
 
* ಜೈವಾನಾ (20.2 ಅಡಿ) 18ನೇ ಶತಮಾನ ಜೈಪುರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT