ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿದೆ ಗ್ರಾಮ

ಪಟ್ಟಣದ ಸಮೀಪವಿದ್ದರೂ ಮುಖ್ಯವಾಹಿನಿಯಿಂದ ದೂರ ಉಳಿದ ಬೆಳವಾಟ
Last Updated 27 ಡಿಸೆಂಬರ್ 2016, 6:14 IST
ಅಕ್ಷರ ಗಾತ್ರ

ಬಳಗಾನೂರು: ಪಟ್ಟಣದಿಂದ ಕೇವಲ ನಾಲ್ಕು ಕಿಲೋ ಮೀಟರ್ ದೂರದಲ್ಲಿದ್ದರೂ ಬೆಳವಾಟ ಗ್ರಾಮವು ಅಭಿವೃದ್ಧಿ ಕಾಣದೆ ನಲುಗುತ್ತಿದೆ. ಮಾನ್ವಿ ತಾಲ್ಲೂಕಿನ ಉಟಕನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮ ಪೋತ್ನಾಳ ಗ್ರಾಮಕ್ಕೆ ರಸ್ತೆ ಸಂಪರ್ಕ ಹೊಂದಿದೆ.  ಆದರೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದುವರೆಗೂ ಈ ಗ್ರಾಮ ಬಸ್ ಸಂಪರ್ಕ ಹೊಂದಿಲ್ಲ.  ಇಲ್ಲಿನ ಜನರು ವ್ಯಾಪಾರ ವಹಿವಾಟಿಗೆ ಪಟ್ಟಣಗಳಿಗೆ ತೆರಳಬೇಕಾದರೆ 14 ಕಿಲೋ ಮೀಟರ್ ದೂರದ ಪೋತ್ನಾಳ ಗ್ರಾಮಕ್ಕೆ ಹೋಗಿ ಅಲ್ಲಿಂದ ಬಸ್ ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. 

ದ್ವಿಚಕ್ರವಾಹನ ಹೊಂದಿದವರು ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವ ಸ್ಥಿತಿ ಒಂದೆಡೆಯಾದರೆ, ವಾಹನಗಳಿಲ್ಲದವರು ನಡೆದುಕೊಂಡೆ ತಿರುಗಾಡಬೇಕು.  ಇತ್ತ ಸಮೀಪದ ಬಳಗಾನೂರು ಪಟ್ಟಣಕ್ಕೆ ಬರಬೇಕಾದರೂ ಹಳ್ಳ ದಾಟಿಕೊಂಡು ಬರಬೇಕು.

ಗ್ರಾಮದಲ್ಲಿ ಸಾಮೂಹಿಕ ಶೌಚಾಲಯವಿಲ್ಲ. ಮನೆಗಳಲ್ಲಿ ವೈಯುಕ್ತಿಕ ಶೌಚಾಲಯವೂ ಇಲ್ಲ. ಆದ್ದರಿಂದ ಗ್ರಾಮದ ಮಹಿಳೆಯರ ಪರಿಸ್ಥಿತಿ ಅಸಹನೀಯವಾಗಿದೆ.  
‘ನಮ್ಮ ಗ್ರಾಮಕ್ಕೆ ಯಾವುದೆ ಸೌಲಭ್ಯ ದೊರಕಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸುವ ಜನಪ್ರತಿನಿಧಿಗಳು ಉಳಿದ ಸಮಯ ಇತ್ತ ತಲೆ ಕೂಡ ಹಾಕುವುದಿಲ್ಲ’ ಎಂದು ಗ್ರಾಮದ ಹುಲಿಗೆಮ್ಮ, ದುರುಗಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಅಗತ್ಯವಿದೆ. ನಿರಂತರ ಜ್ಯೋತಿ ಯೋಜನೆಯ ವಿದ್ಯುತ್ ಪರಿವರ್ತಕ ಸುಟ್ಟು ತಿಂಗಳುಗಳಾದರೂ ದುರಸ್ತಿ ಮಾಡಿಲ್ಲ. ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ ಚರಂಡಿ ಒಡೆದು ಹಾಳಾಗಿ, ಅದರಲ್ಲಿ  ಹೂಳುತುಂಬಿ  ಆಳೆತ್ತರಕ್ಕೆ ಜಾಲಿ ಗಿಡಗಳು ಬೆಳೆದು ನಿಂತಿವೆ. ಇದರಿಂದ ಎಲ್ಲೆಂದರಲ್ಲಿ ಕೊಳಚೆ ನೀರು ನಿಂತು ದುರ್ನಾತ ಬೀರುತ್ತಿದೆ. ಇದು ಸಾಂಕ್ರಾಮಿಕ ರೋಗ ಹರಡುವ ಆತಂಕಕ್ಕೆ ಕಾರಣವಾಗಿದೆ.

‘ಗ್ರಾಮದಲ್ಲಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಗ್ರಾಮದ ಯುವಕರಾದ ಬಸವರಾಜ, ಮೌನೇಶ, ನಾಗನಗೌಡ, ಶಿವಪ್ಪ, ರಾಮನಗೌಡ ಒತ್ತಾಯಿಸಿದರು.
- ತಾಜುದ್ದೀನ್ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT