ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಹಣಕಾಸು ವಹಿವಾಟು; ಗಾಳಿ ಸುದ್ದಿಗೆ ಕಿವಿಗೊಡಬೇಡಿ...

Last Updated 27 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅನೇಕ ಕಾರಣಗಳಿಂದ ಬ್ಯಾಂಕಿಂಗ್‌  ಸೌಲಭ್ಯದಿಂದ  ದೂರ ಇರುವವರ ತುರ್ತು  ಹಣಕಾಸು ಅಗತ್ಯಗಳನ್ನು ಒದಗಿಸುವ  ಕಿರು ಹಣಕಾಸು ಸಂಸ್ಥೆಗಳು (ಎಂಎಫ್‌)  ಅನೇಕರ ಬದುಕು ಹಸನಾಗಿಸಲು ಕಾರ್ಯಪ್ರವೃತ್ತವಾಗಿವೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದಲೇ ಹಣ ಪಡೆದು, ಬಡವರು, ಮಹಿಳಾ ಸ್ವಸಹಾಯ ಗುಂಪುಗಳು, ತಳ್ಳು ಗಾಡಿಯವರು, ಕಿರಾಣಿ ಅಂಗಡಿ, ಸಣ್ಣ ಪುಟ್ಟ ವ್ಯಾಪಾರಿಗಳು, ತರಕಾರಿ ಮಾರುವವರ ಪಾಲಿಗೆ ಈ ಸಂಸ್ಥೆಗಳು ಆಪತ್ಬಾಂಧವನಂತೆ ಕಾರ್ಯನಿರ್ವಹಿಸುತ್ತಿವೆ.

ಜಾಮೀನು, ಆಸ್ತಿ ಅಡಮಾನಗಳಂತಹ  ಆಧಾರ ಒದಗಿಸುವ ತಲೆನೋವು ಇಲ್ಲದೆ, ಮನೆ ಬಾಗಿಲಲ್ಲೇ ಸಾಲ ವಿತರಣೆ ಮತ್ತು  ಮರು ಪಾವತಿ ಸೌಲಭ್ಯ ಕಲ್ಪಿಸುವ ಕಿರು ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸಂಪೂರ್ಣ ನಿಯಂತ್ರಣಕ್ಕೆ ಒಳಪಟ್ಟು ಕಾರ್ಯನಿರ್ವಹಿಸುತ್ತಿವೆ, ಬ್ಯಾಂಕ್‌ಗಳ ಬಡ್ಡಿ ದರಕ್ಕೆ ಹೋಲಿಸಿದರೆ ಕಿರು ಹಣಕಾಸು ಸಂಸ್ಥೆಗಳು ಒದಗಿಸುವ ಸಾಲ ದುಬಾರಿಯಾಗಿರುವುದು ನಿಜ. ಆದರೆ, ಈ ಬಡ್ಡಿ ದರವನ್ನು ಸ್ವತಃ ಆರ್‌ಬಿಐ ನಿಗದಿ ಮಾಡಿರುವುದರಿಂದ ಇಲ್ಲಿ ಯಾರನ್ನೂ ವಂಚಿಸುವ ಪ್ರಶ್ನೆಯೂ ಎದುರಾಗದು.

ಇಲ್ಲಿ ಕಡಿಮೆ ಮೊತ್ತದ  ಸಾಲ ತುಂಬ ಸುಲಭವಾಗಿ ಸಿಗುತ್ತದೆ. ಬಡ್ಡಿ, ಚಕ್ರಬಡ್ಡಿ ಹೆಸರಿನಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರ ರಕ್ತ ಹೀರುವವರಿಂದ ಮುಕ್ತಿಯೂ ಸಿಕ್ಕಿದೆ. ಅದೇ ಕಾರಣಕ್ಕೆ ಕಿರು ಹಣಕಾಸು ಸಂಸ್ಥೆಗಳ ವಹಿವಾಟು ದೇಶದಾದ್ಯಂತ  ವಿಸ್ತರಣೆಯಾಗುತ್ತಿದೆ.

ಬಡ್ಡಿ ದರ ದುಬಾರಿ ಎಂದರೂ ಖಾತರಿಯಾಗಿ ಸಾಲ ಸಿಗುವುದು ಇಲ್ಲಿಯ ಇನ್ನೊಂದು ವಿಶೇಷತೆಯಾಗಿದೆ. ಸಕಾಲಕ್ಕೆ ಮರುಪಾವತಿ ಮಾಡುತ್ತಿದ್ದರೆ, ಸಾಲ ಪಡೆಯಲು ಯಾವುದೇ ಅಡಚಣೆಯೂ ಎದುರಾಗದು.

ಗ್ರಾಮೀಣ ಆರ್ಥಿಕತೆ ಮತ್ತು ಸ್ತ್ರೀ ಸ್ವಹಾಯ ಗುಂಪುಗಳ ಸಬಲೀಕರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಕಿರು ಹಣಕಾಸು ಸಂಸ್ಥೆಗಳ ಸಾಲ ಮರು ಪಾವತಿಗೆ ನೋಟು ರದ್ದತಿಯೂ ಕಂಟಕವಾಗಿ ಪರಿಣಮಿಸಿದೆ.  ನೋಟು ರದ್ದಾಗುತ್ತಿದ್ದಂತೆ ಸಹಜವಾಗಿಯೇ ಜನರ ಬಳಿ ನಗದು ಇಲ್ಲದೆ ಸಾಲ ಮರುಪಾವತಿ ನಿಧಾನಗೊಂಡಿತು.

ಸಾಲ ಮರುಪಾವತಿಗೆ ಅಮಾನ್ಯಗೊಂಡ ನೋಟುಗಳನ್ನು ಸ್ವೀಕರಿಸುವ ಬಗ್ಗೆಯೂ ಆರಂಭದಲ್ಲಿಯೇ ಗೊಂದಲ  ಎದುರಾಗಿತ್ತು. ಕಿರು ಹಣಕಾಸು ಸಂಸ್ಥೆಗಳ ಸಾಲ ಮರುಪಾವತಿಗೆ ಹಳೆ ನೋಟುಗಳ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದರೆ, ತೆರಿಗೆಗೆ ಒಳಪಡದ ವರಮಾನವು (ಕಪ್ಪುಹಣ) ಬಿಳಿ ಹಣವನ್ನಾಗಿ ಪರಿವರ್ತಿಸಲು ಕಾಳಧನಿಕರ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗುತ್ತಿತ್ತು. ಅಂತಹ ಸಾಧ್ಯತೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಮೊಳಕೆಯಲ್ಲಿಯೇ ಚಿವುಟಿ ಹಾಕಿತ್ತು.

ಆದರೆ, ಆರ್‌ಬಿಐ, ಸಾಲ ಮರುಪಾವತಿಗೆ ಸಂಬಂಧಿಸಿದಂತೆ  ತನ್ನ ನಿಯಮಗಳಲ್ಲಿ ಸಣ್ಣ ರಿಯಾಯ್ತಿಯೊಂದನ್ನು ನೀಡಿತ್ತು. ಇದನ್ನೇ ಕೆಲ ಸ್ಥಾಪಿತ ಹಿತಾಸಕ್ತಿಗಳು ದುರ್ಬಳಕೆ ಮಾಡಿಕೊಂಡು ಸಾಲ ಮನ್ನಾದ ಗಾಳಿ ಸುದ್ದಿ ಹಬ್ಬಿಸಿವೆ. ಹೀಗಾಗಿ ಸಾಲಗಾರರು ಸಾಲ ಮರುಪಾವತಿಗೆ ಹಿಂದೇಟು ಹಾಕತೊಡಗಿದ್ದಾರೆ.

‘ಇಂತಹ ಗಾಳಿ ಸುದ್ದಿ ಹಬ್ಬಿಸುವವರಲ್ಲಿ   ಗಿರವಿ ಅಂಗಡಿ ಮಾಲೀಕರು, ಸಣ್ಣ, ಪುಟ್ಟ ಸಾಲಗಾರರು ಮತ್ತು ರಾಜಕಾರಣಿಗಳೂ ಸೇರಿಕೊಂಡಿದ್ದರು. ಕಿರು ಹಣಕಾಸು ಸಂಸ್ಥೆಗಳು ಅಸ್ತಿತ್ವಕ್ಕೆ ಬಂದ ನಂತರ ಅಧಿಕ ಬಡ್ಡಿ ವಿಧಿಸಿ ಬಡವರನ್ನು ಶೋಷಿಸುತ್ತಿದ್ದವರ ವಂಚನೆಗೆ ತಡೆ ಬಿದ್ದಿತ್ತು. ಹೀಗಾಗಿ ಜನರಲ್ಲಿ ಗೊಂದಲ ಮೂಡಿಸುವುದು ಕೆಲವರ ಹುನ್ನಾರವಾಗಿದೆ’ ಎಂದು ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಸಂಘದ (ಎಕೆಎಂಐ) ನಿರ್ದೇಶಕರಾಗಿರುವ ಉದಯಕುಮಾರ್‌ ಮತ್ತು ಆನಂದ್‌ ರಾವ್‌ ಅವರು ಅಭಿಪ್ರಾಯಪಡುತ್ತಾರೆ.

ಸಾಲ ಮನ್ನಾಕ್ಕೆ ಸಂಬಂಧಿಸಿದ ಗಾಳಿ ಸುದ್ದಿಗಳು ಸಾಲಗಾರರಲ್ಲಿ ಸಹಜವಾಗಿಯೇ ಆಸೆ ಮೂಡಿಸಿದ್ದವು. ದಿನಕ್ಕೊಂದು ಬದಲಾಗುತ್ತಿದ್ದ ಆರ್‌ಬಿಐ ನಿಯಮಗಳಲ್ಲಿ  ಇಂದಲ್ಲ ನಾಳೆ ಸಾಲ ಮನ್ನಾದ ಗಾಳಿ ಸುದ್ದಿಯೂ ನಿಜವಾದೀತು ಎಂದು ಸಾಲಗಾರರು ಸಾಲ ಮರುಪಾವತಿ ಮುಂದೂಡುತ್ತಲೇ ಹೋದರು. ಇದರಿಂದಾಗಿ ನೋಟು ರದ್ದತಿ ಮುಂಚೆ ಶೇ 99ರಷ್ಟಿದ್ದ ಸಾಲ ಮರುಪಾವತಿ ಪ್ರಮಾಣವು ನವೆಂಬರ್‌ 8ರ ನಂತರ ದಿಢೀರನೆ ಶೇ 15ರಷ್ಟು ಕುಸಿಯಿತು.

ಈ ಗಾಳಿ ಸುದ್ದಿ ನಂಬಬೇಡಿ. ಅದಕ್ಕೆ ಯಾವುದೇ ಆಧಾರ ಇಲ್ಲ. ಸಾಲ ಮರುಪಾವತಿ ವಿಳಂಬ ಮಾಡಿದರೆ ಸಾಲ ಪಡೆದವರಿಗೆ ತೊಂದರೆಯೇ ಹೊರತು ಗಾಳಿಸುದ್ದಿ ಹಬ್ಬಿಸುವವರಿಗೆ  ಯಾವುದೇ ತೊಂದರೆ ಆಗುವುದಿಲ್ಲ ಎನ್ನುವುದನ್ನು ಸಾಲಗಾರರಿಗೆ ಮನವರಿಕೆ ಮಾಡಿಕೊಡಲು ಕಿರು ಹಣಕಾಸು ಸಂಸ್ಥೆಗಳು ಹರ ಸಾಹಸ ಮಾಡುತ್ತಿವೆ.

‘ಸಕಾಲದಲ್ಲಿ ಸಾಲ ಮರುಪಾವತಿಗೆ ಮುಂದಾದವರನ್ನೂ ಹಾಗೆ ಮಾಡದಂತೆ ತಡೆಯುತ್ತಿದ್ದಾರೆ. ಇದು ಇತರರಿಗೆ ತಪ್ಪು ಸಂದೇಶವನ್ನೂ ನೀಡುತ್ತಿದೆ. ಸಾಲ ಪಡೆದ ಗುಂಪಿನಲ್ಲಿನ ಕೆಲವರು ಸಾಲ ಮರುಪಾವತಿಸಲು ಹಿಂದೇಟು ಹಾಕಿದರೆ, ವಿನಾಕಾರಣ ಮುಂದೂಡಿದರೆ ಅದರಿಂದ ಸಾಲ ವಿತರಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಹಾಗೆ ಮಾಡಬೇಡಿ ಎಂದು  ಸಾಲ ಪಡೆದವರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಸಾಲ ಮರುಪಾವತಿಗೆ ವಿನಾಕಾರಣ  ವಿಳಂಬ ಮಾಡಿದರೆ ಅವರ  ಸಾಲದ ಮಾಹಿತಿ (ಕ್ರೆಡಿಟ್‌ ಹಿಸ್ಟರಿ) ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಭವಿಷ್ಯದಲ್ಲಿ ಸುಲಭವಾಗಿ ಸಾಲ ಪಡೆಯುವುದಕ್ಕೆ ಎರವಾಗಬಹುದು’ ಎಂದು  ಉದಯ್‌ಕುಮಾರ್‌ ಹೇಳುತ್ತಾರೆ.

ನೋಟು ರದ್ದತಿ  ಮುಂಚೆ ಸಾಲ ವಸೂಲಾತಿ ಪ್ರಮಾಣ ಸಮರ್ಪಕವಾಗಿಯೇ ಇತ್ತು. ನೋಟು ರದ್ದತಿ ಕಾರಣಕ್ಕೆ ಜನರ ಬಳಿ ನೋಟುಗಳೇ ಇಲ್ಲದಂತಾಗಿ ಸಾಲ ಮರುಪಾವತಿಗೆ ತೊಂದರೆಯಾಗಿತ್ತು. ಸಾಲ ಮರುಪಾವತಿ ವಿಳಂಬವಾಗಿದ್ದರಿಂದ 90 ದಿನಗಳ ನಂತರ ಮರುಪಾವತಿಯಾಗದ ಸಾಲಗಳನ್ನು ವಸೂಲಾಗದ ಸಾಲ ಎಂದು ಪರಿಗಣಿಸುವ ಅವಧಿಯನ್ನು ಆರ್‌ಬಿಐ 60 ದಿನಗಳಿಗೆ ಹೆಚ್ಚಿಸಿದೆ. ಇದನ್ನೇ ಕೆಲವರು ತಪ್ಪಾಗಿ ಭಾವಿಸಿ, ಸಾಲ ಮನ್ನಾ ಆಗಲಿದೆ. ಸಾಲ ಮರು ಪಾವತಿಗೆ ಅವಧಿ ವಿಸ್ತರಿಸಲಾಗದೆ ಎಂದು ಭಾವಿಸಿದ್ದಾರೆ. ಇದು ತಪ್ಪು ಕಲ್ಪನೆ ಎಂದು  ಕರ್ನಾಟಕ ಹಣಕಾಸು ಸಂಸ್ಥೆಗಳ ಸಂಘ (ಎಕೆಎಂಐ– ‘ಅಕ್ಮಿ’)  ಸ್ಪಷ್ಟಪಡಿಸಿದೆ.

‘ಎನ್‌ಪಿಎ’ ಪರಿಗಣನೆಗೆ 60 ಹೆಚ್ಚುವರಿ ದಿನ  ಒದಗಿಸಿರುವುದನ್ನು ಸಾಲ ಮರುಪಾವತಿ ಮುಂದೂಡಿಕೆ ಅಲ್ಲ ಎನ್ನುವುದನ್ನು ಸಾಲಗಾರರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಮರು ಪಾವತಿಯಲ್ಲಿ ನಿಜವಾಗಿಯೂ ಸಂಕಷ್ಟ ಎದುರಿಸುವವರು ಈ ಬಗ್ಗೆ ಹೇಳಿಕೊಂಡಿದ್ದರೆ ಅವರ ಸಮಸ್ಯೆಗಳನ್ನು ವೈಯಕ್ತಿಕ ನೆಲೆಯಲ್ಲಿ ಬಗೆಹರಿಸಲಾಗುತ್ತಿದೆ. 

‘ಬ್ಯಾಂಕ್‌ಗಳಿಂದ ಶೇ 14ರ ಬಡ್ಡಿ ದರದಲ್ಲಿ ಸಾಲ ಪಡೆಯುವ ‘ಎಂಎಫ್‌’ಗಳು ಶೇ 10ರಷ್ಟು ಲಾಭ ಪಡೆಯುವ ದರದಲ್ಲಿ ಫಲಾನುಭವಿಗಳಿಗೆ ಸಾಲ ನೀಡಬೇಕು ಎಂದು ಆರ್‌ಬಿಐ ನಿರ್ಬಂಧ ವಿಧಿಸಿದೆ. ಇದರಲ್ಲಿ ಶೇ 8ರಷ್ಟು ಕಾರ್ಯನಿರ್ವಹಣೆಗೆ ಖರ್ಚಾಗುತ್ತದೆ. ಉಳಿದ ಶೇ 2ರಷ್ಟು ಮಾತ್ರ ಲಾಭದ ಪ್ರಮಾಣವಾಗಿದೆ’  ಎಂದು ಆನಂದ್‌ ರಾವ್‌ ಹೇಳುತ್ತಾರೆ. ಸಾಲ ವಸೂಲಾತಿಯಲ್ಲಿ ತೊಂದರೆ ಎದುರಾಗಿದ್ದರೆ ಆ ಬಗ್ಗೆ ಉಚಿತ ಕರೆ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.  ಇತರ ಸಂಸ್ಥೆಗಳೂ ತೊಂದರೆ ಕೊಟ್ಟಿದ್ದರೆ ಆ ಬಗ್ಗೆಯೂ ದೂರು ನೀಡಬಹುದಾಗಿದೆ.

ದೇಶದಾದ್ಯಂತ ಚಿತ್ರಣ
ನೋಟು ರದ್ದತಿ ನಂತರ ದೇಶದಾದ್ಯಂತ ಶೇ  18 ರಷ್ಟು ಮರುಪಾವತಿ ಕಡಿಮೆಯಾಗಿದೆ. ಈ ಪ್ರಮಾಣವು ಉತ್ತರ ಪ್ರದೇಶದಲ್ಲಿ ಶೇ 40ರಷ್ಟಿದೆ. ಕರ್ನಾಟಕದಲ್ಲಿ ಶೇ 15 ರಷ್ಟು   ಕಡಿಮೆಯಾಗಿದೆ. ರಾಷ್ಟ್ರೀಯ ಮಟ್ಟದ  ಕಿರು ಹಣಕಾಸು ಸಂಸ್ಥೆಗಳ ಜಾಲ (ಎಂಎಫ್‌ಐಎನ್‌) ಮತ್ತು ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಸಂಘ (ಎಕೆಎಂಐ), ಈ ವಹಿವಾಟಿನ ಪ್ರಾತಿನಿಧಿಕ ಸಂಸ್ಥೆಗಳಾಗಿವೆ.  ‘ಎಂಎಫ್‌ಐ’ನ ರಾಜ್ಯ ಘಟಕದ ರೂಪದಲ್ಲಿ ‘ಎಕೆಎಂಐ’ (ಅಕ್ಮಿ) ಕಾರ್ಯನಿರ್ವಹಿಸುತ್ತಿದೆ.

ಮಾಲೆಗಾಂವ್‌ ಸಮಿತಿಯ ಶಿಫಾರಸಿನ ಪ್ರಕಾರವೇ ಈ ಉದ್ದಿಮೆ ಈಗ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಮೂರು ಕಿರು ಹಣಕಾಸು ಸಂಸ್ಥೆಗಳಾದ  ಉಜ್ಜೀವನ್‌, ಜನಲಕ್ಷ್ಮೀ ಫೈನಾನ್ಶಿಯಲ್‌ ಸರ್ವಿಸಸ್‌ ಮತ್ತು ಫಿನ್‌ ಕೇರ್‌ ಬ್ಯಾಂಕಿಂಗ್‌ ವಹಿವಾಟು ನಡೆಸಲು ಆರ್‌ಬಿಐನಿಂದ ಲೈಸನ್ಸ್‌ ಪಡೆದಿರುವುದು ಅವುಗಳ ಕಾರ್ಯದಕ್ಷತೆಗೆ ನಿದರ್ಶನವಾಗಿದೆ ಎಂದು ಉದಯಕುಮಾರ್‌ ಹೇಳುತ್ತಾರೆ.

ಬ್ಯಾಂಕೇತರ ಕಿರು ಹಣಕಾಸು ಸಂಸ್ಥೆಗಳು (ಎಂಎಫ್‌)   ಸಂಪೂರ್ಣವಾಗಿ  ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿಯಂತ್ರಣದಲ್ಲಿ ಇವೆ. ಇವು ಬ್ಯಾಂಕ್‌ಗಳಿಂದ ಪಡೆಯುವ ಸಾಲ ಮತ್ತು ವಿತರಿಸುವ ಸಾಲದ ಬಡ್ಡಿ ದರದ ಮಧ್ಯೆ ಶೇ 10 ಕ್ಕಿಂತ ಕಡಿಮೆ ಅಥವಾ ಹೆಚ್ಚು ಅಂತರ ಇರಬಾರದು.  ಬ್ಯಾಂಕ್‌ಗಳಿಂದ ಶೇ 14ರ ಬಡ್ಡಿ ದರಕ್ಕೆ ಸಾಲ ಪಡೆಯುವ ಕಿರು ಹಣಕಾಸು ಸಂಸ್ಥೆಗಳು, ತಾವು  ವಿತರಿಸುವ ಸಾಲದ ಬಡ್ಡಿ ದರವನ್ನು ಶೇ 24ರ ಮಟ್ಟದಲ್ಲಿ ಕಾಯ್ದುಕೊಳ್ಳಬೇಕು ಎನ್ನುವ ನಿಬಂಧನೆ ಜಾರಿಯಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT