ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾರ್ ಹೀಟರ್‌ ವಿ–ಗಾರ್ಡ್‌ ದಾಪುಗಾಲು

Last Updated 27 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸ್ಟೆಬಿಲೈಸರ್‌ಗಳ ಮೂಲಕ ಮನೆಮಾತಾಗಿರುವ ‘ವಿ–ಗಾರ್ಡ್‌’ ಕಂಪೆನಿ ಹುಟ್ಟಿದ್ದು ತಿರುವನಂತಪುರದ ಪುಟ್ಟ ಗ್ಯಾರೇಜ್‌ವೊಂದರಲ್ಲಿ ಎಂಬ ವಿಷಯ ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ.

‘ಟೆಲೆಕ್ಸ್’ ಎಂಬ ಮಧ್ಯಮ ಗಾತ್ರದ ಎಲೆಕ್ಟ್ರಾನಿಕ್ ಸ್ಟೆಬಿಲೈಜರ್ ತಯಾರಿಕಾ ಸಂಸ್ಠೆಯೊಂದರಲ್ಲಿ ಮೇಲ್ವಿಚಾರಕರಾಗಿ ವೃತ್ತಿ ಜೀವನ ಆರಂಭಿಸಿದ ಕೊಚುಸೆಫ್ ಚಿಟ್ಟಿಲಪಿಲ್ಲಿ ಕೆಲವೇ ದಿನಗಳಲ್ಲಿ ನೌಕರಿ ತೊರೆದರು. ಆಗ ಅವರಿಗೆ ಹೆಚ್ಚೆಂದರೆ 27 ವರ್ಷ ಮತ್ತು ಮೂರು ವರ್ಷದ ಅನುಭವ. 

1977ರಲ್ಲಿ  ಚಿಕ್ಕ ಗ್ಯಾರೇಜ್‌ವೊಂದರಲ್ಲಿ ಒಂದು ಲಕ್ಷ ರೂಪಾಯಿ ಆರಂಭಿಕ ಬಂಡವಾಳ ಮತ್ತು ಇಬ್ಬರು ಕೆಲಸಗಾರರೊಂದಿಗೆ ಸ್ವಂತ ಕಂಪೆನಿ ಆರಂಭಿಸಿದರು.   ಆಗ ಶುರುವಾದದ್ದೇ ‘ವಿ-ಗಾರ್ಡ್’ ಸ್ಟೆಬಿಲೈಜರ್ ತಯಾರಿಕಾ ಕಂಪೆನಿ. ಆರಂಭದಲ್ಲಿ ತಿಂಗಳಿಗೆ 50 ಸ್ಟೆಬಿಲ್ಶೆಜರ್‌ ತಯಾರಿಸುತ್ತಿದ್ದ ಕೊಚುಸೆಫ್, ತಮ್ಮ ಲ್ಯಾಂಬ್ರೆಟಾ ಸ್ಕೂಟರ್‌ನಲ್ಲೇ ತಿರುವನಂತಪುರದ ಗಲ್ಲಿಗಳಲ್ಲಿ ತಿರುಗಿ ಸ್ಟೆಬಿಲೈಜರ್‌ ಮಾರಾಟ ಮಾಡುತ್ತಿದ್ದರು.

ಕ್ರಮೇಣ ಜನರಲ್ಲಿ ವಿ–ಗಾರ್ಡ್‌ ಗುಣಮಟ್ಟದ ಬಗ್ಗೆ ಜನರಲ್ಲಿ  ವಿಶ್ವಾಸ ಮೂಡತೊಡಗಿತ್ತು. ಇದನ್ನು ಅರಿತ ಕೊಚುಸೆಫ್ ಅವರು ಸ್ಟೆಬಿಲೈಜರ್ ಹೊರತುಪಡಿಸಿ ಇತರ ಗೃಹೋಪಯೋಗಿ ಉತ್ಪನ್ನಗಳ ಮಾರುಕಟ್ಟೆ ಪ್ರವೇಶಿಸಲು ನಿರ್ಧಸಿದರು. ಅದರ ಫಲವಾಗಿ ಕೆಲವು ಸ್ಟೆಬಿಲೈಜರ್ ತಯಾರಿಕಾ ಘಟಕಗಳನ್ನು  ತೆಕ್ಕೆಗೆ ತೆಗೆದುಕೊಂಡು  ಉದ್ಯಮ ಸಾಮ್ರಾಜ್ಯ ವಿಸ್ತರಿಸಿಕೊಂಡರು. ವಿ–ಗಾರ್ಡ್‌ ಕ್ರಮೇಣ ಏರ್‌ ಕಂಡಿಷನರ್‌, ರೆಫ್ರಿಜಿರೇಟರ್‌, ಟಿ.ವಿಗಳಿಗೆ ಪ್ರತ್ಯೇಕ ಸ್ಟೆಬಿಲೈಸರ್‌ ತಯಾರಿಸಲು ಆರಂಭಿಸಿತು.
ವಿ–ಗಾರ್ಡ್‌ನ ವೈರಿಂಗ್‌ ಕೇಬಲ್‌,   ಪಂಪ್‌ಸೆಟ್‌, ಸೋಲಾರ್‌ ಮತ್ತು ಎಲೆಕ್ಟ್ರಿಕಲ್‌ ವಾಟರ್ ಹೀಟರ್‌, ಯು.ಪಿ.ಎಸ್‌, ಫ್ಯಾನ್‌, ಮಿಕ್ಸರ್‌ ಮತ್ತು ಗ್ರೈಂಡರ್‌, ಮನೋರಂಜನಾ ಪಾರ್ಕ್, ಸಿದ್ಧ ಉಡುಪು ಉದ್ಯಮಗಳು ತಮ್ಮ  ಗುಣಮಟ್ಟ ಹಾಗೂ ಕಾರ್ಯದಕ್ಷತೆಯಿಂದಾಗಿ ಮನೆಮಾತಾಗಿವೆ.

ಹೊಸ ಕ್ಷೇತ್ರದಲ್ಲೂ ಹೆಜ್ಜೆ ಗುರುತು

ವಿದ್ಯುತ್‌ ಸಲಕರಣೆಗಳ ಕ್ಷೇತ್ರದಲ್ಲಿ ಮನೆಮಾತಾಗಿದ್ದ ವಿ–ಗಾರ್ಡ್‌, ಸೌರಶಕ್ತಿ ಆಧಾರಿತ ಉದ್ಯಮಕ್ಕೆ ಉತ್ತಮ ಭವಿಷ್ಯವಿದೆ ಎಂದು ಸೋಲಾರ್‌ ವಾಟರ್‌ ಹೀಟರ್‌ ತಯಾರಿಕಾ ಕ್ಷೇತ್ರ ಪ್ರವೇಶಿಸಿತು. ತಮಿಳುನಾಡಿನ ಕೊಯಿಮತ್ತೂರಿನ ಹೊರವಲಯದ ಚಾವಡಿ ಎಂಬಲ್ಲಿ ಹೊಸ ಕಾರ್ಖಾನೆಗೆ 2002ರಲ್ಲಿ ಅಡಿಗಲ್ಲು ಹಾಕಿತು.  ದಶಕದ  ನಂತರ ಈ ಘಟಕವನ್ನು  (2013ರಲ್ಲಿ) ಈರೋಡ್‌ ಜಿಲ್ಲೆಯ ಪೆರುಂದುರೈನ ವಿಶೇಷ ಆರ್ಥಿಕ ವಲಯದ ‘ಸಿಪ್‌ಕಾಟ್‌’ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.

ಸುಮಾರು 35 ಎಕರೆ ವಿಶಾಲ ಪ್ರದೇಶದಲ್ಲಿ 90 ಚದರ ಅಡಿಯಲ್ಲಿ  ₹18 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾರ್ಖಾನೆ ದೇಶದ ಅತ್ಯಾಧುನಿಕ ಸೌಲಭ್ಯ ಹೊಂದಿದ ಅತಿ ದೊಡ್ಡ ಸೋಲಾರ್‌ ವಾಟರ್ ಹೀಟರ್ ತಯಾರಿಕಾ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ವರ್ಷಕ್ಕೆ 90 ಸಾವಿರ ಹಾಗೂ ತಿಂಗಳಿಗೆ 7,500  ವಾಟರ್‌ ಹೀಟರ್‌ ತಯಾರಾಗುತ್ತವೆ.

ಕ್ರಾಂತಿಕಾರಕ ತಂತ್ರಜ್ಞಾನ
2005ರವರೆಗೂ ಸಾಂಪ್ರದಾಯಿಕ ಶೈಲಿಯ ತಟ್ಟೆಯಾಕಾರದ ಸೌರಫಲಕ (ಫ್ಲ್ಯಾಟ್‌ಪ್ಲೇಟ್‌ ಕಲೆಕ್ಟರ್‌–ಎಫ್‌ಪಿಸಿ)   ಬಳಸುತ್ತಿದ್ದ ಕಂಪೆನಿ, ಬೋರೊಸಿಲಿಕೇಟ್‌  ಇವ್ಯಾಕ್ಯುವೇಟೆಡ್‌ ಟ್ಯೂಬ್‌ ಕಲೆಕ್ಟರ್‌ (ಇಟಿಸಿ) ಎಂಬ ಗಾಜಿನ ಕೊಳವೆಗಳ ಹೊಸ ತಂತ್ರಜ್ಞಾನ ಬಳಸಲು ಆರಂಭಿಸಿತು. ಸೋಲಾರ್‌ ವಾಟರ್ ಹೀಟರ್‌ಗಳಲ್ಲಿ ಈ ತಂತ್ರಜ್ಞಾನ ಬಳಸಿದ ದೇಶದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಯನ್ನು ವಿ–ಗಾರ್ಡ್‌ ತನ್ನದಾಗಿಸಿಕೊಂಡಿತು.

ಒಳಮೈಯಲ್ಲಿ ತಾಮ್ರದ ಲೇಪನ   ಹಾಳೆ (ಫಿಲಾಮೆಂಟ್‌) ಹೊಂದಿದ ಈ ನೀಲಿ ಬಣ್ಣದ ಗಾಜಿನ ಕೊಳವೆಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.   
ಮೋಡ ಮುಸುಕಿದ ವಾತಾವರಣ, ಮಳೆಗಾಲದಲ್ಲೂ  ಕಾರ್ಯಕ್ಷಮತೆ ಕುಗ್ಗುವುದಿಲ್ಲ ಮತ್ತು ಗಡಸು ನೀರಿನಿಂದಲೂ ಕೊಳವೆ ಕಟ್ಟಿಕೊಳ್ಳುವುದಿಲ್ಲ ಎಂಬುವುದೇ  ಇವುಗಳ ವಿಶೇಷತೆಯಾಗಿದೆ.

‘ಜಾಗತಿಕ ಮಾರುಕಟ್ಟೆಯಲ್ಲಿ ಇಟಿಸಿ ತಂತ್ರಜ್ಞಾನ  ಕ್ರಾಂತಿಕಾರಕ ಬದಲಾವಣೆ ತಂದಿದ್ದು ಅದರ ಲಾಭವನ್ನು ನಮ್ಮ ಗ್ರಾಹಕರಿಗೂ ನೀಡುವ ಉದ್ದೇಶದಿಂದ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಯಿತು’  ಎನ್ನುತ್ತಾರೆ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಮಿಥುನ್ ಚಿಟ್ಟಿಲಪಿಳ್ಳಿ. ಹಿಂಡಾಲ್ಕೊ ಕಂಪೆನಿಯ ದುಬಾರಿ ಸ್ಟ್ಯಾಕೋ ಫಿನಿಷ್‌ ಜಿಂಕ್‌ ಅಲ್ಯುಮಿನಿಯಂ ತುಕ್ಕು ನಿರೋಧಕ ಹೊರಕವಚವನ್ನು ವಿ–ಗಾರ್ಡ್‌ ಸೋಲಾರ್‌ ವಾಟರ್‌ ಹೀಟರ್‌ಗಳಲ್ಲಿ ಬಳಸಲಾಗಿದೆ.

ತುಕ್ಕು ನಿರೋಧಕ `ಇಪಿಎಸಿ'  ಲೇಪನದ ಸ್ಟೇನ್‌ ಲೆಸ್‌ ಸ್ಟೀಲ್‌ ಟ್ಯಾಂಕ್‌ ದೀರ್ಘ ಬಾಳಿಕೆ ಹೊಂದಿದ್ದು, ಬಿರುಕು ಬಿಡುವುದಿಲ್ಲ. ಗಡಸು ನೀರಿರುವ ಪ್ರದೇಶಗಳ ಬಳಕೆಗಾಗಿಯೇ ವಿಶೇಷವಾಗಿ ‘ ಗಾಲ್ವನೈಸ್‌ ಐಯಾನ್‌ ಟ್ಯಾಂಕ್‌ (ಜಿಐ)’ ತಯಾರಿಸಲಾಗುತ್ತದೆ.

ಕಾಯ್ದ ನೀರು ಬಹಳ ಹೊತ್ತು ಬಿಸಿಯಾಗಿರುವಂತೆ ತಾಪಮಾನ ಕಾಯ್ದುಕೊಳ್ಳಲು ವಿಶೇಷ ಬಗೆಯ ಹೈ ಡೆನ್ಸಿಟಿ ಪಾಲಿಯುರೇಥಿನ್‌ ಫೋಮ್‌ (ಯುಪಿಎಫ್‌) ಎಂಬ ರಾಸಾಯನಿಕ ಸ್ಪಂಜ್‌   ಬಳಸಲಾಗುತ್ತದೆ. 

‘ವಿಶ್ವದ ಮೊದಲ ಸ್ಮಾರ್ಟ್ ಫ್ಲೋಟ್ ಆಧುನಿಕ ತಂತ್ರಜ್ಞಾನ ಅಳವಡಿಸಲಾದ ‘ಪೆಬಲ್' ಶ್ರೇಣಿ ತಯಾರಿಸಿದ ಕೀರ್ತಿ ಕೂಡ ನಮಗೆ ಸಲ್ಲಬೇಕು’ ಎನ್ನುತ್ತಾರೆ  ಮಿಥುನ್‌.
ಪದೇ ಪದೇ ಕೈಕೊಡುವ ವಿದ್ಯುತ್, ದುಬಾರಿ ಶುಲ್ಕ, ಹೆಚ್ಚುತ್ತಿರುವ ವಿದ್ಯುತ್‌ ಮತ್ತು ಗ್ಯಾಸ್‌ ಗೀಸರ್‌ ಅವಘಡಗಳ ಕಾರಣಕ್ಕಾಗಿ ಗ್ರಾಹಕರು ಎಲೆಕ್ಟ್ರಿಕಲ್‌ ವಾಟರ್‌ ಹೀಟರ್‌ಗಳಿಂದ  ಹೆಚ್ಚು ಸುರಕ್ಷಿತವಾದ  ಸೋಲಾರ್‌ ವಾಟರ್‌ ಹೀಟರ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಸೌರಶಕ್ತಿಯಿಂದ ನೀರು ಕಾಯಿಸುವ ಸಾಧನಗಳಲ್ಲಿ ಈ ಯಾವ ಸಮಸ್ಯೆಗಳೂ ಇಲ್ಲ.  ಸ್ವಲ್ಪ ದುಬಾರಿ ಎನಿಸಿದರೂ ಒಮ್ಮೆ  ಹಣ ಹೂಡಿದರೆ ಕನಿಷ್ಠ 15 ರಿಂದ 20 ವರ್ಷ ನೆಮ್ಮದಿಯಿಂದ ಇರಬಹುದು. ಜತೆಗೆ ನಿರ್ವಹಣಾ ವೆಚ್ಚವೂ ಕಡಿಮೆ ಎನ್ನುತ್ತಾರೆ ಪೆರಂದುರೈ ವಿ–ಗಾರ್ಡ್‌ ಸೋಲಾರ್‌ ಹೀಟರ್ ತಯಾರಿಕಾ ಘಟಕದ ಮ್ಯಾನೇಜರ್‌ ಸರವಣಕುಮಾರ್‌ ಶಿವರಾಜನ್‌. 

ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ  ಗಾಜಿನ ಕೊಳವೆ ಹೊರತುಪಡಿಸಿದರೆ ಟ್ಯಾಂಕ್‌, ಸ್ಟ್ಯಾಂಡ್‌ ಸೇರಿದಂತೆ ಉಳಿದೆಲ್ಲವೂ  ಪರಿಪೂರ್ಣವಾಗಿ ಸ್ಥಳೀಯವಾಗಿ ತಯಾರಾಗುತ್ತವೆ. ಇದರಿಂದ ತಯಾರಿಕಾ ವೆಚ್ಚವೂ ಕಡಿಮೆ.

ಅತ್ಯಾಧುನಿಕ ವೆಲ್ಡಿಂಗ್‌ ತಂತ್ರಜ್ಞಾನಬಳಸುತ್ತಿರುವ ಕಾರಣ ನೀರು ಸಂಗ್ರಹಿಸುವ ಟ್ಯಾಂಕ್‌ ಸೋರಿಕೆ ನಿರೋಧಕವಾಗಿವೆ.  ಒಮ್ಮೆ ನೀರು ಕಾಯ್ದರೆ 24 ಗಂಟೆ 80 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಯಾಗಿರುತ್ತವೆ.   ಮೋಡಮುಸುಕಿದ ದಿನ ಮತ್ತು ಮಳೆಗಾಲದಲ್ಲಿ  ವಿದ್ಯುತ್‌ನಿಂದ ನೀರು ಕಾಯಿಸುವ ಆಯ್ಕೆಯನ್ನೂ  ನೀಡಲಾಗಿದೆ.
‘ನಮ್ಮ ಸೌರಶಕ್ತಿಯಿಂದ ನೀರು ಕಾಯಿಸುವ ಯಂತ್ರಗಳು 20 ವರ್ಷದವರೆಗೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತವೆ. ಆ  ನಂತರ ಶೇ 80ರಷ್ಟು  ಸಾಮರ್ಥ್ಯ ಹೊಂದಿರುತ್ತವೆ’ ಎನ್ನುತ್ತಾರೆ ಸರವಣಕುಮಾರ್‌.

ಗೃಹಬಳಕೆಗೆ 60 ಲೀಟರ್ ಸಾಮರ್ಥ್ಯದಿಂದ ವಾಣಿಜ್ಯ ಉದ್ದೇಶಕ್ಕಾಗಿ 5,000 ಲೀಟರ್ ಸಾಮರ್ಥ್ಯದವರೆಗೆ 60 ವಿವಿಧ ಶ್ರೇಣಿಯಲ್ಲಿ ಸೋಲಾರ್‌ ಹೀಟರ್‌   ಲಭ್ಯ. ಕಡಿಮೆ ತೂಕ ಮತ್ತು ಗಾತ್ರವಾದ್ದರಿಂದ  ಅಳವಡಿಕೆಯೂ ಸುಲಭ.

ಬದಲಾದ ಕಾಲ
ಮೊದಲೆಲ್ಲಾ ಬೆಳಿಗ್ಗೆ ಎದ್ದ ಕೂಡಲೇ ಸ್ನಾನಕ್ಕಾಗಿ ಮನೆಯ ಹಿತ್ತಲಲ್ಲಿ ನೀರು ಕಾಯಿಸಲು ಸೌದೆ, ತೆಂಗಿನ ಕರಟ,  ಶೇಂಗಾ ಸಿಪ್ಪೆ, ಅಡಕೆ ಹೊಟ್ಟು ಉರಿಸುತ್ತಿದ್ದರು.   
ಈಗ ಕಾಲ ಬದಲಾಗಿದೆ. ಉರುವಲು ಸಂಗ್ರಹಿಸುವ ಮತ್ತು ನೀರು ಕಾಯಿಸಲು ಪುರಸೊತ್ತು ಇಲ್ಲ. ಸಣ್ಣ, ಪುಟ್ಟ ಪಟ್ಟಣಗಳ ಮನೆಗಳ ತಾರಸಿಗಳನ್ನು ‘ಸೋಲಾರ್‌ ವಾಟರ್‌ ಹೀಟರ್‌’ ಆವರಿಸಿಕೊಂಡಿವೆ. ನಲ್ಲಿ ತಿರುವಿದರೆ ದಿನದ 24 ಗಂಟೆ ಬಿಸಿನೀರು ಬರುತ್ತವೆ. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೌರಶಕ್ತಿ ಬಳಕೆಗೆ ಒತ್ತು ನೀಡುತ್ತಿರುವುದರಿಂದ ಸೌರಶಕ್ತಿಯಿಂದ ನೀರು ಕಾಯಿಸುವ ಯಂತ್ರಗಳಿಗೆ ಈಗ ಎಲ್ಲಿಲ್ಲದ   ಬೇಡಿಕೆ ಕುದುರಿದೆ.

ಕರ್ನಾಟಕ ಅತಿ ದೊಡ್ಡ ಮಾರುಕಟ್ಟೆ

ಎರಡು ವರ್ಷಗಳ ಹಿಂದೆ ನಡೆದ ಸಮೀಕ್ಷೆ ಪ್ರಕಾರ ಸೋಲಾರ್‌ ವಾಟರ್‌ ಹೀಟರ್‌ ಮಾರಾಟ ಮತ್ತು ಬಳಕೆಯಲ್ಲಿ ಕರ್ನಾಟಕ ದೇಶದ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಕರ್ನಾಟಕದಲ್ಲಿ ಸೋಲಾರ್‌ ವಾಟರ್ ಹೀಟರ್ ಮಾರುಕಟ್ಟೆ ಶೇ 43ರಷ್ಟಿದ್ದರೆ, ನಂತರದ ಸ್ಥಾನದಲ್ಲಿರುವ  ಮಹಾರಾಷ್ಟ್ರದಲ್ಲಿ ಶೇ 28ರಷ್ಟಿದೆ.  ತಮಿಳುನಾಡು, ಗುಜರಾತ್‌, ಆಂಧ್ರ ಪ್ರದೇಶ (ಶೇ 6ರಿಂದ –ಶೇ 7) ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

ವಿ–ಗಾರ್ಡ್‌ ಸೋಲಾರ್‌ ವಾಟರ್ ಹೀಟರ್‌ಗಳಿಗೂ ಕೂಡ ಕರ್ನಾಟಕದಲ್ಲಿ ಭಾರಿ ಬೇಡಿಕೆ (ಶೇ 34.79) ಇದೆ.  ಹೀಗಾಗಿ ಕಂಪೆನಿ ಕರ್ನಾಟಕ ಮಾರುಕಟ್ಟೆ ವಿಸ್ತರಣೆಗೆ ಗಮನ ಕೇಂದ್ರಿಕರಿಸಿದೆ.

2015–16ರಲ್ಲಿ ಮಾರಾಟ ಅಂಕಿ–ಸಂಖ್ಯೆ ಪ್ರಕಾರ ವಿ–ಗಾರ್ಡ್‌ ಸೋಲಾರ್‌ ವಾಟರ್ ಹೀಟರ್‌ ಗೃಹ ಬಳಕೆ ಮಾರಾಟ ಶೇ 80.49ರಷ್ಟಿದ್ದರೆ, ಕೈಗಾರಿಕಾ ಮಾರಾಟ ಕೇವಲ ಶೇ 19.51ರಷ್ಟಿದೆ.

ಉತ್ತಮ ಲೇಖಕ
ಕೇರಳದ ಅತ್ಯಂತ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ ಕೊಚುಸೆಫ್ ಚಿಟ್ಟಿಲಪಿಲ್ಲಿ ಉತ್ತಮ ಲೇಖಕರೂ ಹೌದು.  ಜೀವನ ಅನುಭವಗಳನ್ನು ಅವರು ‘Practical Wisdom. In real life & management’ ಹೆಸರಿನ ಪುಸ್ತಕದಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಯುವ ಉದ್ಯಮಿಗಳಿಗೆ ಈ ಕೃತಿ   ಮಾರ್ಗದರ್ಶಿಯಾಗಿದೆ.

ಉದ್ಯಮ ಕುಟುಂಬ
ಚಿಟ್ಟಿಲಪಿಲ್ಲಿ  ಅವರ ಪತ್ನಿ ಸೇರಿದಂತೆ ಇಡೀ ಕುಟುಂಬ ಉದ್ಯಮದಲ್ಲಿ ತೊಡಗಿಸಿಕೊಂಡಿದೆ. ಕಿರಿಯ ಪುತ್ರ ಮತ್ತು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ  ಮಿಥುನ್‌ ಚಿಟ್ಟಿಲಪಿಲ್ಲಿ  ವಿ-ಗಾರ್ಡ್ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಹೊಣೆ ಹೊತ್ತಿದ್ದಾರೆ. ಇದರಿಂದ ಕಂಪೆನಿಯಲ್ಲಿ ಹೊಸತನದ ಗಾಳಿ ಬೀಸುತ್ತಿದೆ.

ಡಿಜಿಟಲ್‌ ಮತ್ತು ರಿಮೋಟ್‌ ತಂತ್ರಜ್ಞಾನದ ವಿ–ಗಾರ್ಡ್‌ ಸ್ಮಾರ್ಟ್‌ ಸೋಲಾರ್‌ ವಾಟರ್‌ ಹೀಟರ್‌ ಮಾರುಕಟ್ಟೆ ಪ್ರವೇಶಿಸುವ ದಿನಗಳು ದೂರ ಇಲ್ಲ. ದಕ್ಷಿಣ ಭಾರತಕ್ಕೆ ಸೀಮಿತವಾಗಿದ್ದ ಕಂಪೆನಿಯನ್ನು ದೇಶ, ವಿದೇಶಗಳಿಗೆ  ವಿಸ್ತರಿಸುವ ಸಾಹಸಕ್ಕೂ ಕೈಹಾಕಿದ್ದಾರೆ. ಆಫ್ರಿಕಾ, ಮಧ್ಯಪ್ರಾಚ್ಯ, ಕೊಲ್ಲಿ ರಾಷ್ಟ್ರಗಳಲ್ಲಿಯೂ ಮಾರುಕಟ್ಟೆ ಹೊಂದಿರುವ ‘ವಿ–ಗಾರ್ಡ್‌’  ನೆಲೆಯನ್ನು ಅಲ್ಲಿಗೂ ಸ್ಥಾಪಿಸುವ ಯೋಚನೆಯಲ್ಲಿದ್ದಾರೆ.

ಬದಲಾಗುತ್ತಿದೆ ಕಾಂಗೂರು!
ಕಲಾವಿದ ವಿ.ಎ. ಶ್ರೀಕಂಠನ್‌ ಮಣಿ ರೂಪಿಸಿದ್ದ ಕಂಪೆನಿಯ ಲಾಂಛನ ‘ಕಾಂಗರೂ’ಗೆ ಹೊಸದಾಗಿ  ಕಾರ್ಪೊರೇಟ್‌ ಸ್ಪರ್ಶ ನೀಡಲಾಗುತ್ತಿದೆ.
ಮಗುವನ್ನು ಹೊಟ್ಟೆಯ ಚೀಲದಲ್ಲಿಟ್ಟುಕೊಂಡು ಹಿಂಗಾಲುಗಳ ಮೇಲೆ ಕುಳಿತ ಕಾಂಗೂರು ಬದಲು ಓಡುವ ಕಾಂಗೂರು ಲಾಂಛನ ಬರಲಿದೆ.
ಬೆಂಗಳೂರು ಮತ್ತು ಕೊಚ್ಚಿಯಲ್ಲಿ ರುವ ದೇಶದ ಅತಿದೊಡ್ಡ ಮನೋರಂಜನಾ ಪಾರ್ಕ್‌ ಎಂಬ ಹೆಗ್ಗಳಿಕೆ ಪಡೆದ ‘ವಂಡರ್-ಲಾ’ ಕೂಡ ಇದೇ ವಿ–ಗಾರ್ಡ್ ಸಮೂಹ ಸಂಸ್ಥೆಗಳಿಗೆ ಸೇರಿವೆ.

ಲಾಭಗಳೇನು?
* ಸೋಲಾರ್‌ ವಾಟರ್‌ ಹೀಟರ್‌  ಬಳಕೆಯಿಂದ ವರ್ಷಕ್ಕೆ ಕನಿಷ್ಠವೆಂದರೂ  ಮೂರು ಸಾವಿರಕ್ಕೂ ಹೆಚ್ಚು ಯೂನಿಟ್‌ ವಿದ್ಯುತ್‌ ಉಳಿತಾಯ ಮಾಡಬಹುದು.

* ಪರಿಸರ ಸ್ನೇಹಿಯಾಗಿದ್ದು ಇಂಗಾಲ  ಹೊರಸೂಸುವಿಕೆ ತಡೆಗಟ್ಟಿ ಪರಿಸರ ರಕ್ಷಿಸುತ್ತದೆ.

* ವಸತಿ, ವಾಣಿಜ್ಯ,ವಿದ್ಯಾರ್ಥಿ ನಿಲಯ, ಹೋಟೆಲ್‌,ಅಪಾರ್ಟ್‌ಮೆಂಟ್, ಡೈರಿ, ಆರೋಗ್ಯ ಮತ್ತು ಆತಿಥ್ಯ ಕ್ಷೇತ್ರಗಳ ಬಳಕೆಗೆ  ಅನುಕೂಲಕರ .

* 1996ರಲ್ಲಿ  ‘ವಿ-ಗಾರ್ಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್’ ಎಂದು ಬದಲಾದ ಕಂಪೆನಿಯು 2007ರಲ್ಲಿ  ಸಾರ್ವಜನಿಕ ಉದ್ದಿಮೆಯ ರೂಪ ತಾಳಿತು. 

* 2008ರಲ್ಲಿ ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಹೆಸರು ನೋಂದಾಯಿಸಿಕೊಂಡಿತು.  ಸಾರ್ವಜನಿಕ ಆರಂಭಿಕ ಹೂಡಿಕೆ( ಐಪಿಒ) ಮೂಲಕ ಬಂಡವಾಳ ಸಂಗ್ರಹಿಸುವುದರೊಂದಿಗೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿತು.

(ಲೇಖಕ, ಸಂಸ್ಥೆಯ ಆಹ್ವಾನದ ಮೇರೆಗೆ ಪೆರುಂದುರೈಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT