ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಜೀವಿಗಳ ಉಳಿವೂ ಪರಿಸರದ ಕಾಳಜಿಯೂ

ಅರಣ್ಯ ಸಂಪತ್ತನ್ನು ಸುಸ್ಥಿರ ರೀತಿಯಲ್ಲಿ ಉಪಯೋಗಿಸದಿದ್ದರೆ ಕಾಡು ಉಳಿಯದು
Last Updated 27 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಜನರ ಭಾಗವಹಿಸುವಿಕೆಯಿಂದಲೇ ಅಲ್ಲಿನ ಸಂಪತ್ತಿನ ನಿರ್ವಹಣೆಯಾದಾಗ ಮಾತ್ರ ಕಾಡು ಉಳಿದೀತು, ಕಾಡನ್ನು ನಂಬಿಕೊಂಡು ಬಂದ ಬುಡಕಟ್ಟು ಸಮುದಾಯಗಳ ಜನರೂ  ಬದುಕಿಯಾರು’  ಎಂದಿತ್ತು ಪ್ರೊ. ಮಾಧವ ಗಾಡ್ಗೀಳರ ವರದಿ.

ಇತ್ತೀಚೆಗೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಾಡಿನಲ್ಲಿರುವ ಬುಡಕಟ್ಟು ಸಮುದಾಯದವರ ಮೇಲೆ ಅರಣ್ಯ ಸಂರಕ್ಷಕರು ನಡೆಸಿದ ಹಲ್ಲೆ ಮತ್ತು ಅರಣ್ಯದಿಂದ ಅವರನ್ನು ಹೊರಹಾಕಿದ ವಿಷಯವು ದೊಡ್ಡ ಸುದ್ದಿ ಮಾಡಿದೆ. ಅರಣ್ಯ ಇಲಾಖೆಯು ಪೊಲೀಸರು ಹಾಗೂ ಯಂತ್ರಗಳ ಸಹಾಯದಿಂದ ಬುಡಕಟ್ಟು ಸಮುದಾಯದವರ ಗುಡಿಸಲುಗಳನ್ನು ಧ್ವಂಸಗೊಳಿಸಿದೆ. ಸುಮಾರು 3000 ಜನರು ಅರಣ್ಯ ಇಲಾಖೆಯ ಈ ಕೃತ್ಯದಿಂದ ಬೀದಿ ಪಾಲಾದರು ಎನ್ನುವುದು ಸುದ್ದಿ. 

ಅರಣ್ಯಾವಲಂಬಿಗಳ ಮೇಲೆ ಅರಣ್ಯ ಇಲಾಖೆಯ ಪ್ರಹಾರ, ಮತ್ತವರ ಅರಣ್ಯ ರೋದನ ಇಂದು ನಿನ್ನೆಯದಲ್ಲ. ಭಾರತದಲ್ಲಿನ ಅಪಾರವಾದ ವನ ಸಂಪತ್ತಿನಿಂದ ಮೋಹಿತರಾದ ಬ್ರಿಟಿಷರು ಅದನ್ನು ತಮ್ಮ ಸ್ವಾಧೀನದಲ್ಲಿಟ್ಟುಕೊಳ್ಳಲು ಅರಣ್ಯ ಮತ್ತು ಜನರ ನಡುವೆ ಬೇಲಿ ಹಾಕಿದಂದಿನಿಂದಲೇ ಈ ಕದನ ಜಾರಿಯಲ್ಲಿದೆ. ಆದರೂ ಬ್ರಿಟಿಷರು ಹೋಗಿ ಭಾರತ ಸರ್ಕಾರವು ಅರಣ್ಯ ಇಲಾಖೆಯನ್ನು ಭದ್ರಪಡಿಸುವವರೆಗೂ ಕಾಡು, ಜನಸಮುದಾಯಕ್ಕೆ ಸಿಗುವಂತಿತ್ತು.

ಕಾಡಿನಲ್ಲಿಯೇ ವಾಸಿಸುವ ಬುಡಕಟ್ಟು ಜನರು, ಕಾಡಿನಂಚಿನಲ್ಲಿ ಬದುಕುತ್ತಿರುವ ಅರಣ್ಯಾವಲಂಬಿ ಕೃಷಿಕರು ಕಾಡಿನೊಂದಿಗೆ, ಕಾಡಿನ ಪ್ರಾಣಿ, ಸಸ್ಯ ಸಂಕುಲದೊಂದಿಗೆ ಒಡನಾಡಿಯಾಗಿ ಸೌಹಾರ್ದದಿಂದ ಮಾಡುತ್ತಿದ್ದ ಸಹಬಾಳ್ವೆಗೆ ಎರವಾದದ್ದು ಭಾರತ ಸರ್ಕಾರದ ಅರಣ್ಯ ಇಲಾಖೆ. ಇಲಾಖೆಯನ್ನು ರಚಿಸಿದಾಗಿನಿಂದ ಅದಕ್ಕೆ ಅರಣ್ಯದ ಮೇಲೆ ಸರ್ವಾಧಿಕಾರ. ಅದರ ಕಣ್ಣಿನಲ್ಲಿ, ಅರಣ್ಯದೊಳಗಿದ್ದುಕೊಂಡು ತುಮರಿ ಕೃಷಿ ಮಾಡಿಕೊಂಡು ಬದುಕುತ್ತಿದ್ದ ಬುಡಕಟ್ಟು ಜನರು  ಅರಣ್ಯ ಧ್ವಂಸಕರೆನಿಸಿದರು.

ಹೊರಗಿದ್ದುಕೊಂಡು ಕಾಡಿನೊಳಗಿಂದ ಹಣ್ಣು, ಬೀಜ, ದರಕು ಮುಂತಾದ ಕಿರು ಅರಣ್ಯ ಉತ್ಪನ್ನಗಳನ್ನು ತಂದು ತಮ್ಮ ಜೀವನವನ್ನು ಪೋಷಿಸಿಕೊಂಡು ಬರುತ್ತಿದ್ದವರು ಅರಣ್ಯ ನಾಶಕರೆನಿಸಿದರು.

ಇಲಾಖೆಯ ದೃಷ್ಟಿಯಲ್ಲಿ ಕಾಡಿಗೆ ಬೆಂಕಿ ಬೀಳಲೂ ಅವರೇ ಕಾರಣ, ಕಾಡು ಪ್ರಾಣಿಗಳ ಅಳಿವಿಗೂ ಅವರೇ ಕಾರಣ. ಸ್ಥಳೀಯ ಜನರಿಗೆ ಸುಲಭವಾಗಿ ಲಭ್ಯವಾಗಿದ್ದ ಅರಣ್ಯ ಸಂಪನ್ಮೂಲ ಅವರಿಗೆ ದಕ್ಕದಂತೆ ಮಾಡಿ, ಬದಲಿಗೆ ಹೊರಗಿನ ಕೈಗಾರಿಕೆಗಳಿಗೆ ಬೃಹತ್‌ ಪ್ರಮಾಣದಲ್ಲಿ ಮರಮಟ್ಟುಗಳನ್ನು ಒದಗಿಸಲೆಂದೇ ಇಲಾಖೆಯು ರಚನೆಯಾದಂತಿದೆ.

1961- 62ರಲ್ಲಿ ರಾಷ್ಟ್ರೀಯ ಕೃಷಿ ಆಯೋಗವು ಅರಣ್ಯವನ್ನು ಒಂದು ಉದ್ಯೋಗಾಧಾರ ಎಂದು ನಿರ್ಣಯಿಸಿತು. ಕಾಫಿ, ಟೀ ತೋಟಗಳನ್ನಾಗಿ ಪರಿವರ್ತಿಸಿ ಅರಣ್ಯಗಳನ್ನು ಲಾಭದಾಯಕ ಆಸ್ತಿಯನ್ನಾಗಿ ಮಾಡಲಾಯಿತು. ತುಮರಿ ಕೃಷಿಯನ್ನು ಮಾಡುತ್ತಿದ್ದ ಬುಡಕಟ್ಟು ಜನರನ್ನು  ದೂಷಿಸುತ್ತಲೇ ಆ ಭೂಮಿಯಲ್ಲೆಲ್ಲ ಎಸ್ಟೇಟುಗಳನ್ನು ಎಬ್ಬಿಸಲಾಯಿತು. ಅದೇ ಎಸ್ಟೇಟುಗಳಲ್ಲಿ ಅಲ್ಲಿನ ಮೂಲ ನಿವಾಸಿಗಳು ಜೀತದಾಳುಗಳಾದರು.

ಡಾ. ಮಾಧವ ಗಾಡ್ಗೀಳ್‌ ಹಾಗೂ ರಾಮಚಂದ್ರ ಗುಹಾ ಅವರು ಕೂಡಿ ಬರೆದಿರುವ ‘ಇಕಾಲಜಿ ಅಂಡ್ ಈಕ್ವಿಟಿ’ ಪುಸ್ತಕದಲ್ಲಿ ಕಾಡಿನ ಮೂಲ ನಿವಾಸಿಗಳ ಕಷ್ಟವನ್ನು ಹೀಗೆ ವಿವರಿಸಲಾಗಿದೆ: ‘ಸರ್ಕಾರವು ಕಾಡನ್ನು ತನ್ನದಾಗಿಸಿಕೊಂಡಿದ್ದರ ಪರಿಣಾಮ ಗಿರಿಜನರ ಮೇಲೆ ತೀವ್ರತರದ್ದಾಗಿದೆ. ಅವರ ಮೂಲ ಜೀವನ ಪದ್ಧತಿಯಾಗಿದ್ದ ತುಮರಿ ಕೃಷಿಯನ್ನು ಮಾಡುವಂತಿಲ್ಲ. ಅವರು ಒಂದೇ ಹಳ್ಳಿಯಲ್ಲಿರಬೇಕು.

ಆ ಹಳ್ಳಿ ಬಿಟ್ಟು ಇನ್ನೊಂದು ಕಡೆ ಹೋಗುವಂತಿಲ್ಲ. ಅವರ ಬಳಿ ದನ, ಎಮ್ಮೆಗಳಿದ್ದರಂತೂ ಕಟ್ಟೆಚ್ಚರದಿಂದ ಕಾಯ್ದುಕೊಂಡಿರಬೇಕು. ಕಾಡಿನೊಳಗೆ ಅವು ಹೋದವೆಂದರೆ ಭರಿಸಲಾಗದಷ್ಟು ದಂಡ. ಇಲಾಖೆಯವರು ಕರೆದಾಗ ಅವರು ಕೊಟ್ಟ ಕೂಲಿಗೆ– ಕೂಲಿ ಕೊಡದಿದ್ದರೂ– ಕೆಲಸಕ್ಕೆ ಹಾಜರಾಗಬೇಕು. ಕಾಡಿನ ಹೊರಗಿದ್ದವರಿದ್ದರೆ ಒಳಗಿನ ಯಾವೊಂದು ವಸ್ತುವನ್ನು ಮುಟ್ಟಲಿಕ್ಕೂ ಲೈಸೆನ್ಸ್ ಪಡೆದಿರಬೇಕು.

ಅಲ್ಲಿನದೇ ಜನ ಅಲ್ಲಿನದೇ ವಸ್ತುಗಳನ್ನು ಜೀವನದ ಅಗತ್ಯಕ್ಕೆ  ತೆಗೆದುಕೊಳ್ಳಲಿಕ್ಕೂ ಅರಣ್ಯ ಇಲಾಖೆಯ ನಿಯಮಗಳು ಅಡ್ಡಿ ಮಾಡುತ್ತವೆ. ಇಲಾಖೆಯ ನಿಯಮಗಳು ಹೇಗಿವೆಯೆಂದರೆ, ‘ಪ್ರತಿಯೊಬ್ಬ ಹಳ್ಳಿಯವನೂ ತನ್ನ ಜೀವನದ ಪ್ರತಿ ದಿನದಲ್ಲೂ ಒಂದಲ್ಲಾ ಒಂದು ಅರಣ್ಯ ನಿಯಮವನ್ನು ಮುರಿದೇ ಮುರಿಯುತ್ತಾನೆ’.

ಒಂದೋ ಬುಡಕಟ್ಟು ಜನರು ಕಾಡನ್ನು, ತಮ್ಮ ಪರಿಸರವನ್ನು ಬಿಟ್ಟು ಹೊರಗೆ ಬರಬೇಕು, ಇಲ್ಲವೇ ಸುತ್ತಲಿನ ಒಂದು ವಸ್ತುವನ್ನೂ ಮುಟ್ಟದೆ, ಹೊರಕ್ಕೆ ಬರದೆ ‘ಮುಟ್ಟಾದವರಂತಿರಬೇಕು’.

ಆದರೆ ದೂರದ ನಗರದಲ್ಲಿರುವ ಬಂಡವಾಳಶಾಹಿ ಕೈಗಾರಿಕೆಗಳಿಗೆ ಮಾತ್ರ ಕಾಡಿನೊಳಗಿರುವ ಮತ್ತು ಕಾಡಿನ ಅಡಿ ಇರುವ ಎಲ್ಲಾ ಸಂಪತ್ತಿನ ಮೇಲೂ ಸಂಪೂರ್ಣ ಹಕ್ಕು. ಯಾಕೆಂದರೆ ಅರಣ್ಯ ಇಲಾಖೆಯನ್ನು ನಿರ್ಮಿಸಿಕೊಂಡಿದ್ದೇ  ಇವರು, ಇವರಿಂದ, ಇವರಿಗಾಗಿ. ಕಾಡಿನೊಳಗಿನ ಅದಿರೇನು, ನೆಲದ ಮೇಲಿನ ಮರಮಟ್ಟುಗಳೇನು, ಆನೆಯ ದಂತಗಳೇನು, ಹುಲಿಯ ಚರ್ಮವೇನು, ಜಿಂಕೆಯ ಕೋಡುಗಳೇನು, ನದಿಯೊಳಗಿನ ಜಲರಾಶಿಯೇನು, ಅದರೊಳಗಿನ ವಿದ್ಯುತ್ತೇನು ಎಲ್ಲವೂ ಈ ನಾಡಿನ ದೊರೆಗಳದ್ದೆ. ನಮ್ಮ ಅರಣ್ಯ ಸಂಪತ್ತು ಇಂದು ಕೈಗಾರಿಕಾಧಿಪತಿಗಳು, ಗಣಿ ದೊರೆಗಳು, ಕಳ್ಳಸಾಗಾಣಿಕೆಯಲ್ಲಿ ನಿರತರಾದ ರಾಜಕಾರಣಿಗಳು, ಅವರನ್ನೆಲ್ಲ ಪೋಷಿಸುವ ಅಧಿಕಾರಿಗಳ ಸ್ವಯಾರ್ಜಿತ ಸಂಪತ್ತಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕೆಲವರ ವೈಭವೋಪೇತ ಜೀವನಕ್ಕೆ ಕಚ್ಚಾವಸ್ತುವಾಗಿದೆ.

ಬ್ರಿಟಿಷರಿದ್ದಾಗಲೇ ಇಲಾಖೆಗೂ ಜನರಿಗೂ ವೈಷಮ್ಯವಿತ್ತು ನಿಜ, ಈಗಲೂ ಇದೆ. ಆಗ ಜನಸಂಖ್ಯೆ ಕಡಿಮೆ ಇತ್ತು, ಅರಣ್ಯ ಜಾಸ್ತಿ ಇತ್ತು. ಈಗ ಅರಣ್ಯ ಸಂಪತ್ತು ಒಟ್ಟು ಭೂಮಿಯ ಶೇಕಡ 7ಕ್ಕಿಳಿದಿದೆ. ಅವಲಂಬಿತರು ಜಾಸ್ತಿಯಾಗಿದ್ದಾರೆ, ಬೇಡಿಕೆಗಳು ಹೆಚ್ಚಾಗಿವೆ. ಇವೆಲ್ಲದರ ಜೊತೆಗೆ ಜನಸಾಮಾನ್ಯರಲ್ಲಿ ಪರಿಸರ ಪ್ರಜ್ಞೆಯೂ ಬೆಳೆದಿದೆ.

ಅರಣ್ಯ ಮತ್ತು ಅರಣ್ಯ ಜೀವಿಗಳಿಗಾಗಿ ನಡೆಯುತ್ತಿರುವ ಸಾಮಾಜಿಕ ಹೋರಾಟದ ನೈತಿಕ, ರಾಜಕೀಯ, ಆರ್ಥಿಕ ಪ್ರಶ್ನೆಗಳೊಂದಿಗೆ ಪರಿಸರ ಪ್ರಜ್ಞೆಯೂ ಸೇರಿಕೊಂಡಿದೆ.ಸರ್ಕಾರ ‘ಅಭಿವೃದ್ಧಿ’ ಎನ್ನುವಾಗ ಕೈಗಾರಿಕೆ ಮತ್ತು ಉಳ್ಳವರ ಅಭಿವೃದ್ಧಿಯ ಕುರಿತು ಮಾತಾಡಿದರೆ, ಜನರು ಅರಣ್ಯ ಜೀವಿಗಳ ಉಳಿವಿನ ಪ್ರಶ್ನೆಯ ಜೊತೆಗೆ ಪರಿಸರದ ಕಾಳಜಿಯನ್ನೂ ಸೇರಿಸಿ ಅದನ್ನು ಪ್ರಶ್ನಿಸುತ್ತಾರೆ.

ಈ ‘ಅಭಿವೃದ್ಧಿ ಮತ್ತು ಪರಿಸರ’ದ ಜಟಿಲ ಪ್ರಶ್ನೆಗೆ ಪರಿಹಾರ ತೋರಿಸಿ ಎಂದು 2010ರಲ್ಲಿ ಯುಪಿಎ ಸರ್ಕಾರದ ಪರಿಸರ ಸಚಿವ ಜೈರಾಮ್ ರಮೇಶ್‌ ಅವರು ಪಶ್ಚಿಮಘಟ್ಟದ ಜೀವಜಾಲ ತಜ್ಞರ ಸಮಿತಿಯೊಂದನ್ನು ನೇಮಿಸಿ, ಅದಕ್ಕೆ ಪರಿಸರತಜ್ಞ ಮಾಧವ ಗಾಡ್ಗೀಳರನ್ನು ಅಧ್ಯಕ್ಷರನ್ನಾಗಿ ಮಾಡಿದರು. 6 ರಾಜ್ಯಗಳಲ್ಲಿ ಹರಡಿಕೊಂಡಿರುವ ಪಶ್ಚಿಮಘಟ್ಟದ ಮೂಲೆ ಮೂಲೆಯಲ್ಲೂ 18 ತಿಂಗಳ ಕಾಲ ಅಡ್ಡಾಡಿ ಅರಣ್ಯ ಅಧಿಕಾರಿಗಳು, ಪರಿಸರವಾದಿಗಳು, ಹಳ್ಳಿಗರು, ಕೃಷಿ ತಜ್ಞರು ಎಲ್ಲರೊಂದಿಗೆ ಚರ್ಚಿಸಿ ಗಾಡ್ಗೀಳರು ತಮ್ಮ ವರದಿಯನ್ನು ಸರ್ಕಾರಕ್ಕೆ 2012ರಲ್ಲಿ ಸಲ್ಲಿಸಿದರು. ಆದರದು ಸರ್ಕಾರಕ್ಕೆ ಸಮ್ಮತವಾಗಲಿಲ್ಲ.

‘ವೈಜ್ಞಾನಿಕ ಮತ್ತು ಆರ್ಥಿಕ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ’ ಆ ವರದಿಯ ಮೌಲ್ಯಮಾಪನ ಮಾಡಿ ಇನ್ನೊಂದು ವರದಿಯನ್ನು ತಯಾರಿಸಿ ಕೊಡಲು ಬಾಹ್ಯಾಕಾಶ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಅವರಿಗೆ ಪರಿಸರ ಇಲಾಖೆಯು ಕೇಳಿಕೊಂಡಿತು. ಸರ್ಕಾರ ಕೇಳಿದಂಥ ವರದಿ ಬಂದಾಗ ಅತಿ ವಿಜೃಂಭಣೆಯಿಂದ ಆ ವರದಿಯ ಬಿಡುಗಡೆ ಮಾಡಿ ಸರ್ಕಾರ ಅದನ್ನು ಸ್ವೀಕರಿಸಿತು.

ಸ್ಥಳೀಯರಿಗೆ ಮನ್ನಣೆ ಕೊಡಬೇಕು, ಸೂಕ್ಷ್ಮ ಜೀವಿ ಪರಿಸರವಿದ್ದಲ್ಲಿ ಯಾವುದೇ ಕೈಗಾರಿಕೆಗೆ ಆಸ್ಪದ ಕೊಡಬಾರದು ಎಂಬ ಸಲಹೆಗಳಿದ್ದುದರಿಂದ ಗಾಡ್ಗೀಳರ ವರದಿ ಸ್ವೀಕಾರಾರ್ಹವಾಗಲಿಲ್ಲ. ಯೋಜನಾ ತಂತ್ರಜ್ಞರು, ರಾಜಕಾರಣಿಗಳು, ಉದ್ದಿಮೆಪತಿಗಳ ಸಲಹೆಗನುಗುಣವಾಗಿ ಬರೆದ ವರದಿ ಸರ್ಕಾರದ ಮಾನ್ಯತೆ ಪಡೆಯಿತು.

ಅರಣ್ಯದೊಳಗಡೆ ಇರುವ ಬುಡಕಟ್ಟು ಸಮುದಾಯದವರನ್ನು ಹೇಗೆ ರಕ್ಷಿಸಬೇಕು, ಅವರನ್ನೊಳಗೊಂಡು ಅರಣ್ಯದ ಅಭಿವೃದ್ಧಿ ಹೇಗೆ ಆಗಬೇಕು ಎಂದು ಗಾಡ್ಗೀಳರು ಬಹಳ ಸ್ಪಷ್ಟವಾಗಿ ಹೇಳಿದ್ದರು. ಸೂಕ್ಷ್ಮ ಪ್ರದೇಶದಲ್ಲಿ ಇರುವ ಕೈಗಾರಿಕೆಗಳಿಗೆ ಪರವಾನಗಿ ಮತ್ತೆ ನವೀಕರಿಸಬಾರದು ಎಂದು ಸಲಹೆ ನೀಡಿದ್ದರು. ಒಂದು ಹಳ್ಳಿ ಸೂಕ್ಷ್ಮ ಪ್ರದೇಶ ಎಂದಾದರೆ ಅದರ ಸುತ್ತಮುತ್ತ ಕೈಗಾರಿಕೆಗಳು ಬರಬಾರದು ಎಂದು ಹೇಳಿದ್ದರು.

ಕಸ್ತೂರಿ ರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶವನ್ನು ಮೊಟಕುಗೊಳಿಸಿದ್ದಲ್ಲದೆ ಅದರ ನಿಭಾಯಿಸುವಿಕೆಯ ನಿಯಮವನ್ನೂ ಸಡಿಲಗೊಳಿಸಲಾಗಿತ್ತು. ಈಗಾಗಲೇ ಸಂರಕ್ಷಿತವೆಂದು ಘೋಷಿತವಾದ ವನ್ಯಧಾಮ, ಅಭಯಾರಣ್ಯಗಳಂಥ ಅತಿ ಸೂಕ್ಷ್ಮ ಪ್ರದೇಶಗಳಿಗೆ ಇನ್ನೂ ಬಿಗಿಯಾದ ಕಾವಲು ಹಾಕಬೇಕೆಂದು ಹೇಳಿತು. ಅದನ್ನು ಬಿಟ್ಟರೆ ಇನ್ನುಳಿದ ಭಾಗದಲ್ಲಿ ಅಭಿವೃದ್ಧಿ ಯೋಜನೆಗಳು ಬರಬಹುದು ಎಂದು ಶಿಫಾರಸು ಮಾಡಿತು. ಗಣಿಗಾರಿಕೆಗೆ ನೈಸರ್ಗಿಕ ಸಂಪತ್ತು ಬಳಸುವ ಬಂಡವಾಳಶಾಹಿಗಳ ಶಾಸನಬದ್ಧ ಹಕ್ಕಿಗೆ ಚ್ಯುತಿಯಾಗಬಾರದು ಎಂಬ ಕಸ್ತೂರಿ ರಂಗನ್ ವರದಿಯ ಪ್ರಕಾರ ಅರಣ್ಯ ಇಲಾಖೆಯು ಇಂದು ತನ್ನ ಕಾರ್ಯಾಚರಣೆಯನ್ನು ನಡೆಸಿದೆ.

ಕಾಡನ್ನು ನಂಬಿಕೊಂಡಿದ್ದ ಎಲ್ಲ ಬುಡಕಟ್ಟು ಸಮುದಾಯಗಳ ಕತೆಯೂ ಒಂದೇ. ಅವಸಾನದ ಅಂಚಿನಲ್ಲಿರುವ ಬದುಕು ಅವರದು. ಹೊಸ ಜೀವನ ರೀತಿಯ ಪ್ರವಾಹದಲ್ಲಿ ಅವರು ಬಾಳಿಬಂದ ಜೀವನ ಪದ್ಧತಿ ಕೊಚ್ಚಿಹೋಗಿದೆ.

ಬದುಕು ಮಾಡುವುದೇ ಕಷ್ಟ. ಒಂದು ಕಡೆ ಕಟ್ಟಿ ಹಾಕುವ ಅರಣ್ಯ ಇಲಾಖೆಯ ನಿಯಮಗಳು, ಇನ್ನೊಂದೆಡೆ ತಮ್ಮಿಂದಲೇ ಕಾಡಿನಲ್ಲಿ ಕುಕೃತ್ಯ ಮಾಡಿಸುವ ಅಧಿಕಾರಸ್ಥರ ಆಮಿಷಗಳು. ಒಂದುಕಡೆ ಹೊರಲಾರದಂಥ ನಿಯಮಗಳಿದ್ದರೆ ಇನ್ನೊಂದೆಡೆ ಸರ್ಕಾರವೇ ನಿರ್ಮಿಸಿದಂಥ ಅಂಗನವಾಡಿ, ಶಾಲೆಗಳು ಹೊರಜಗತ್ತಿಗೆ ಕರೆಯುತ್ತವೆ. ಆ ಅಂಗನವಾಡಿ, ಆಶ್ರಮ ಶಾಲೆಗಳಾದರೂ ಎಂಥವು? ಅದರಲ್ಲಿರುವ ಸೌಲಭ್ಯಗಳು ಕಾಡಿನ ಹಂದಿಗಳೂ ತಿರಸ್ಕರಿಸುವಂಥ ಗುಣಮಟ್ಟದವು.

ತಮ್ಮದೇ ಕಾಡಿನಲ್ಲಿ ಬುಡಕಟ್ಟು ನಿವಾಸಿಗಳಿಂದು ಜೀತದಾಳುಗಳು. ರಾಜಕಾರಣಿಗಳ ನೂರಾರು ಎಕರೆ ಕಾಫಿ ಎಸ್ಟೇಟ್‌ಗಳಿವೆ ಇಲ್ಲಿ. ಎಸ್ಟೇಟ್ ಮಾಲೀಕರು ಕಟ್ಟಿಸಿದ ಲೈನ್ ಮನೆಗಳಲ್ಲಿ ಇವರಿರಬೇಕು. ಮಾಲೀಕ ಕರೆದಾಗ ಬರಬೇಕು. ಅಲ್ಲಿಂದ ಹೊರಹೋಗಿ ಸ್ವತಂತ್ರ ಜೀವನ ನಡೆಸಬಾರದು. ವಿದ್ಯೆ, ಮೂಲ ಸೌಕರ್ಯ, ವಿದ್ಯುತ್ ಇವೆಲ್ಲವೂ ಮಾಲೀಕರ ಮರ್ಜಿ. ಇತ್ತೀಚಿನ ವರ್ಷಗಳಲ್ಲಿ ಸಂಘಟನೆಗಳು ಈ ಜೀತದಾಳುಗಳನ್ನು ಸಂಘಟಿಸುತ್ತಿರುವುದು, ಅವರ ಮಕ್ಕಳಿಗೆ ಶಿಕ್ಷಣ ಕೊಡುತ್ತಿರುವುದು, ಅವರು ಮೂಲ ಸೌಕರ್ಯಗಳನ್ನು ಕೇಳುತ್ತಿರುವುದು ಎಸ್ಟೇಟ್ ಮಾಲೀಕರ ಕಣ್ಣನ್ನು ಕೆಂಪಾಗಿಸಿದೆ.

ಅರಣ್ಯ ಇಲಾಖೆಯು ಹೊರ ಹಾಕಿದ ಆ ಮೂಲ ನಿವಾಸಿಗಳೆಲ್ಲ ಮತ್ತೆ ಲೈನ್ ಮನೆಗಳನ್ನೇ ಸೇರಿಕೊಂಡು ಬದುಕಲಿ ಎಂಬ ರಾಜಕಾರಣಿಗಳ ಮಾತುಗಳು ಅವರನ್ನು ಮತ್ತೆ ಜೀತಕ್ಕೆ ತಳ್ಳುವ ಯೋಚನೆಯ ನುಡಿಗಳು. ದಿಡ್ಡಳ್ಳಿಯ ಬುಡಕಟ್ಟು ಜನರು ಇಂದು ಸರ್ಕಾರದ ಬಂಡವಾಳಶಾಹಿ ಧೋರಣೆ ವಿರುದ್ಧ ದನಿ ಮೊಳಗಿಸಿದ್ದಾರೆ.  ಇವರಿಗೆ ರಾಜ್ಯದ ಬೇರೆ ಬೇರೆ ಭಾಗದ ನೂರಾರು ಸಂಘಟನೆಗಳ ಬೆಂಬಲ ದೊರೆತಿದ್ದು ಮಹತ್ವದ ಸಂಗತಿ.   

ಕಾಡಿನ ನಿಯಮಗಳೇ ಬೇರೆ, ನಾಡಿನ ನಿಯಮಗಳೇ ಬೇರೆ. ನಾಡಿನ ನಿಯಮಗಳನ್ನು ಕಾಡಿನಲ್ಲಿ ತಂದು ತುರುಕುವುದು ತಪ್ಪು. ಕಟ್ಟಿಗೆ, ಹೂ ಹಣ್ಣು ಹೇಗೆ ಕಾಡಿನ ಸಂಪನ್ಮೂಲವೋ, ಅಲ್ಲಿಯೇ ಬದುಕಿ ಬಂದ ಗಿರಿಜನ ಕೂಡ ಕಾಡಿನ ಸಂಪನ್ಮೂಲವೇ. ಕಾಡೇ ಅವರ ಬದುಕು. ಆ ಜನರ ಭಾಗವಹಿಸುವಿಕೆಯಿಂದಲೇ ಅಲ್ಲಿನ ಸಂಪತ್ತಿನ ನಿರ್ವಹಣೆಯಾಗಬೇಕು. ಅಂದಾಗ ಮಾತ್ರ ಕಾಡನ್ನು ನಂಬಿರುವ ಬುಡಕಟ್ಟು ಸಮುದಾಯಗಳೂ  ಬದುಕುಳಿದಾವು. ಹೊರಗಿನ ಅರಣ್ಯ ಇಲಾಖೆಯು ತಾನೇ ಕಾಡಿನ ಯಜಮಾನ ಎಂದು ಘೋಷಿಸಿದಾಗ, ಸಂಪನ್ಮೂಲವನ್ನು ಸುಸ್ಥಿರ ರೀತಿಯಲ್ಲಿ ಉಪಯೋಗಿಸದಿದ್ದರೆ ಕಾಡು ಯಾರಿಗೂ ಉಳಿಯಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT