ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಖಂಡನೆ

Last Updated 28 ಡಿಸೆಂಬರ್ 2016, 4:57 IST
ಅಕ್ಷರ ಗಾತ್ರ

ಮದ್ದೂರು: ತಾಲ್ಲೂಕು ಪಂಚಾಯಿತಿ ಯಲ್ಲಿ ಮಂಗಳವಾರ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ ಖಂಡಿಸಿ ಜೆಡಿಎಸ್‌ ತಾಲ್ಲೂಕು ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. 

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಭೆಯಲ್ಲಿ ಮೊದಲು ಸದಸ್ಯರ ಕೋರಂ ಕೊರತೆಯ ನಡುವೆಯೂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಆಶಾ ಗೋಪಿ ಅವರನ್ನು ಆಯ್ಕೆ ಮಾಡಲಾಯಿತು.

ಇದನ್ನು ಪ್ರತಿಭಟಿಸಿ ಸಭೆ ಬಹಿಷ್ಕರಿಸಿ ಹೊರಬಂದ ಜೆಡಿಎಸ್‌ ತಾ.ಪಂ ಸದಸ್ಯರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಮ್ಮ ಗಮನಕ್ಕೆ ತಂದಿಲ್ಲ ಎಂದು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ತಾ.ಪಂ ಇಒ ವಿರುದ್ಧ ಹರಿಹಾಯ್ದರು.

ಸೋಮನಹಳ್ಳಿ ಕ್ಷೇತ್ರ ತಾ.ಪಂ ಸದಸ್ಯ ಸತೀಶ್‌ ಮಾತನಾಡಿ, ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಯನ್ನು ಸದಸ್ಯರ ಕೋರಂ ಇಲ್ಲದೆ ಮಾಡಲಾಗಿದೆ. ಸದಸ್ಯರ ಗಮನಕ್ಕೂ ತಾರದೆ ಸರ್ವಾಧಿಕಾರಿ ಧೋರಣೆಯಿಂದ ಈ ಆಯ್ಕೆಮಾಡಿರುವುದು ಅಸಿಂಧು. ಈ ಆಯ್ಕೆಯನ್ನು ನಾವು ತಿರಸ್ಕರಿಸುತ್ತೇವೆ.  ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡುತ್ತೇವೆ ಎಂದರು. 

ಹಿಂದಿನ 4 ಸಭೆಗಳಿಂದಲೂ ಈ ಆಯ್ಕೆಯ ವಿಚಾರ ನಮ್ಮ ಗಮನಕ್ಕೆ ತಂದಿಲ್ಲ.  ಅಧ್ಯಕ್ಷರ ಆಯ್ಕೆ ಸಂಬಂಧ ಯಾವುದೇ ವಿಷಯ ಪ್ರಸ್ತಾವಕ್ಕೂ ನಾವು ಸಹಿ ಮಾಡಿಲ್ಲ.  ಸದಸ್ಯರ ಕೋರಂ ಕೊರತೆ ನಡುವೆಯೂ ಏಕಪಕ್ಷೀಯವಾಗಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮಾಡಿರುವುದು ನಿಯಮಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟರಲ್ಲಿ ಸ್ಥಳಕ್ಕೆ ಬಂದ ತಾ.ಪಂ ಇಒ ಕೃಷ್ಣಮೂರ್ತಿ, ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ರಘು ಅವರೊಡನೆ ಸದಸ್ಯರು ಮಾತಿನ ಚಕಮಕಿ ನಡೆಸಿದರು.

‘ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ ಇದುವರೆಗೂ ನಮ್ಮ ತಾ.ಪಂ ಕಚೇರಿಯಲ್ಲಿ ಇದನ್ನು ಅಳವಡಿಸಿಲ್ಲವೇಕೆ?. ತಾ.ಪಂ ಆವರಣದಲ್ಲಿ ಸುಸಜ್ಜಿತ ಶೌಚಾಲಯವಿಲ್ಲ. 8 ತಿಂಗಳಿಂದ ಯಾವುದೇ ಅನುದಾನಕ್ಕೆ ಜಿ.ಪಂ.ನಿಂದ ಅನುಮೋದನೆ ಪಡೆದಿ ಲ್ಲವೇಕೆ ?’ ಎಂದು ಕೆಲವು ಮಹಿಳಾ ತಾ.ಪಂ ಸದಸ್ಯರು ಅಧ್ಯಕ್ಷ, ಉಪಾ ಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯರ ಆರೋಪಕ್ಕೆ  ಪ್ರತಿಕ್ರಿಯಿಸಿದ ತಾ.ಪಂ ಉಪಾಧ್ಯಕ್ಷ ರಘು, ಮೊದಲ ಸಭೆಯಲ್ಲೇ ಸದಸ್ಯರೆಲ್ಲರೂ ಸ್ಥಾಯಿ ಸಮಿತಿ ಆಯ್ಕೆ ಮಾಡುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡುವ ಕುರಿತು ಸರ್ವನಾನುಮತದಿಂದ ಒಪ್ಪಿ ಸಹಿ ಮಾಡಿದ್ದೀರಿ. ಕಳೆದ ಸಭೆಯಲ್ಲೂ ಈ ವಿಚಾರವಾಗಿ ಯಾರು ಯಾವುದೇ ರೀತಿಯಲ್ಲಿ ಪ್ರಶ್ನಿಸಿಲ್ಲ. ಹೀಗಾಗಿ, ಈ ಸಭೆಯಲ್ಲಿ ಎಲ್ಲರ ಒಪ್ಪಿಗೆ ಪಡೆದೇ ಆಶಾ ಗೋಪಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದರು. 

ಬಳಿಕ ಸದಸ್ಯರು ಉಪಾಧ್ಯಕ್ಷರ ಸ್ಪಷ್ಟನೆಗೆ ತೃಪ್ತರಾಗದೆ ಅಲ್ಲಿಂದ ತೆರಳಿದರು.  ತಾ.ಪಂ ಸದಸ್ಯರಾದ ಪವಿತ್ರಾ ಸಿ.ಟಿ.ಶಂಕರ್, ಮಂಜುಳಾ, ಸವಿತಾ, ಅರುಣಾ, ಶಾಂತಾ, ಲೀಲಾವತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT