ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿನಲ್ಲೇ ರೈತ ಆತ್ಮಹತ್ಯೆಗೆ ಯತ್ನ

Last Updated 28 ಡಿಸೆಂಬರ್ 2016, 5:12 IST
ಅಕ್ಷರ ಗಾತ್ರ

ಹೊಳೆಆಲೂರ(ರೋಣ): ಅಡವಿಟ್ಟ ಬಂಗಾರವನ್ನು ಬ್ಯಾಂಕ್ ಅಧಿಕಾರಿಗಳು ಹರಾಜು ಮಾಡಿದ್ದರಿಂದ ನೊಂದ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ತಾಲ್ಲೂಕಿನ ಹೊಳೆಆಲೂರಿನ ಕೆ.ವಿ.ಜಿ. ಬ್ಯಾಂಕಿನಲ್ಲಿ ನಡೆದಿದೆ.

ರೋಣ ತಾಲ್ಲೂಕಿನ ಬಿ.ಎಸ್. ಬೇಲೇರಿ ಗ್ರಾಮದ ರೈತ ಮಲ್ಲಪ್ಪ ಸೂಳಿಕೇರಿ ಅವರು ಬ್ಯಾಂಕ್‌ ವ್ಯವಸ್ಥಾಪಕರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾಗ, ಬ್ಯಾಂಕಿನಲ್ಲಿದ್ದ ರೈತರು, ಇತರ ಗ್ರಾಹಕರು ತಡೆದಿದ್ದಾರೆ.

ಮಲ್ಲಪ್ಪ ಅವರು ಕೆ.ವಿ.ಜಿ ಬ್ಯಾಂಕಿನಲ್ಲಿ ಬಂಗಾರ ಅಡವಿಟ್ಟು ಸಾಲ ಪಡೆದಿದ್ದರು. ಆದರೆ ಈ ಬಾರಿ ಬೆಳೆ ಬಾರದ್ದರಿಂದ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಆದರೆ ಬ್ಯಾಂಕ್ ವ್ಯವಸ್ಥಾಪಕರು ತಮಗೆ ತಿಳಿಸದೇ, ನೋಟಿಸ್‌ ಸಹ ನೀಡದೇ ಬಂಗಾರ ಹರಾಜು ಮಾಡಿದ್ದಾರೆ ಎಂದು ಆರೋಪಿಸಿದ ರೈತ ಮಲ್ಲಪ್ಪ ಅವರು ವಿಷ ಸೇವಿಸಲು ಮುಂದಾದರು. ಆಗ ಅಲ್ಲಿದ್ದವರು ವಿಷದ ಬಾಟಲಿಯನ್ನು ಅವರಿಂದ ಕಸಿದುಕೊಂಡಿದ್ದಾರೆ.

‘ನನ್ನ ಬಂಗಾರಾ ನನಗ್‌ ಗೊತ್ತಾಗದ್ಹಾಂಗ ಹರಾಜ್‌ ಮಾಡ್ಯಾರ. ನಮ್ಮ ಕುಟುಂಬದೋರಿಗೆ ಏನಂತಾ ಹೇಳಲಿ...’ ಎಂದು ಮಲ್ಲಪ್ಪ ಪ್ರಶ್ನಿಸಿದರು.

ಆರೋಪ ನಿರಾಕರಣೆ:  ಆದರೆ ಈ ಆರೋಪ ತಳ್ಳಿ ಹಾಕಿರುವ ಬ್ಯಾಂಕಿನ ವ್ಯವಸ್ಥಾಪಕ ವಿ.ಪಿ. ಸೌದಗಾರ್‌, ‘ಮಲ್ಲಪ್ಪ ಅವರಿಗೆ ಆರಕ್ಕೂ ಹೆಚ್ಚು ಬಾರಿ ಲಿಖಿತ ನೋಟಿಸ್ ನೀಡಲಾಗಿದೆ. ಅವರ ಮನೆಗೆ ತೆರಳಿ ಬ್ಯಾಂಕಿನ ಸಿಬ್ಬಂದಿ ಸಾಲ ಮರು ಪಾವತಿಸುವಂತೆ ಕೋರಿದ್ದಾರೆ.

ಬ್ಯಾಂಕಿಗೆ ಬಂದು ಭೇಟಿಯಾಗುವಂತೆ ಹೇಳಿದ್ದರೂ ಒಮ್ಮೆಯೂ ಅವರು ಬ್ಯಾಂಕಿಗೆ ಬಂದಿಲ್ಲ. ಗ್ರಾಮದ ಜನರ ಸಮ್ಮುಖದಲ್ಲಿಯೇ ತಿಳಿ ಹೇಳಿ ಬ್ಯಾಂಕಿಗೆ ಬಂದು ಭೇಟಿಯಾಗಿ ಬಂಗಾರ ಬಿಡಿಸಿಕೊಂಡು ಹೋಗುವಂತೆ ಮನವಿ ಮಾಡಲಾಗಿತ್ತು. ಇದು ರೈತ ಕೃಷಿಗಾಗಿ ಪಡೆದ ಸಾಲವಲ್ಲ, ಸಾಮಾನ್ಯ ಸಾಲವಾಗಿದ್ದರಿಂದ ಬ್ಯಾಂಕಿನ ಕೇಂದ್ರ ಕಚೇರಿಯ ಸೂಚನೆಯ ಮೆರೆಗೆ ಅಡವಿಟ್ಟ ಬಂಗಾರವನ್ನು ಹರಾಜು ಮಾಡಬೇಕಾಯಿತು’ ಎಂದು ಅವರು ಸ್ಪಷ್ಟಪಡಿಸಿದರು.

ಬಂಗಾರದ ಬೆಲೆ ಕುಸಿತವಾಗಿರುವ ಕಾರಣ ಬಂಗಾರದ ಮೇಲೆ ಸಾಲ ಪಡೆದವರಿಗೆ ಕಾಲ ಕಾಲಕ್ಕೆ ತಿಳಿವಳಿಕೆ ನೋಟಿಸ್ ನೀಡಿ ಸಾಲ ಇಲ್ಲವೇ ಬಡ್ಡಿ ಭರಿಸುವಂತೆ ತಿಳಿಸಲಾಗುತ್ತಿದೆ.

ಎಲ್ಲ ರೀತಿಯ ಕಾನೂನು ಕ್ರಮ ತೆಗೆದುಕೊಂಡು ಇದೇ 6ರಂದು ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿದೆ. ಜಾಹೀರಾತು ಪ್ರಕಟಗೊಂಡ ನಂತರ ಶೇ 85ರಷ್ಟು ಜನ ಬಡ್ಡಿ ತುಂಬಿದ್ದಾರೆ. ಜಾಹೀರಾತು ನೀಡಿದ ನಂತರವೂ ನಿರ್ಲಕ್ಷ್ಯ ಮಾಡಿದವರ ಬಂಗಾರವನ್ನು ಹರಾಜು ಮಾಡಲಾಗಿದೆ’ ಎಂದು ಕೆ.ವಿ.ಜಿ. ಬ್ಯಾಂಕಿನ ಪ್ರಾದೇಶಿಕ ಅಧಿಕಾರಿ ಶೇಖರ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT