ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಲಾನುಭವಿಗಳ ಆಯ್ಕೆ ಪಕ್ಷಾತೀತವಾಗಿರಲಿ’

ಕೇಂದ್ರದ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ: ಸಂಸದ ಶಿವಕುಮಾರ ಉದಾಸಿ ಸಲಹೆ
Last Updated 28 ಡಿಸೆಂಬರ್ 2016, 5:16 IST
ಅಕ್ಷರ ಗಾತ್ರ

ಗದಗ: ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುವ ಬದಲಿಗೆ, ಜನರಿಗೆ ಉತ್ತಮ ಸೇವೆ ಹಾಗೂ ಅರ್ಹರಿಗೆ ಸರ್ಕಾರದ ಯೋಜನೆಗಳು ಸಿಗುವಂತಾಗಲು ಪಕ್ಷಾತೀತವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ನಗರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ಅಮೃತ ನಗರ, ನಿವೇಶನ ಸೇರಿದಂತೆ ಕೇಂದ್ರದ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅರ್ಹರಿಗೆ ಮಾತ್ರ ಈ ಯೋಜನೆಗಳು ತಲುಪಿಸುವ ಉದ್ದೇಶದಿಂದ ಸರ್ಕಾರ ‘ಆಧಾರ್‌’ ಕಡ್ಡಾಯ ಮಾಡುತ್ತಿದೆ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ತರಲು ಸಾಧ್ಯವಾಗುತ್ತದೆ. ನಿವೇಶನ, ಸೂರು ಒದಗಿಸುವ ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಚರ್ಚೆ ವೇಳೆ ನಗರಸಭೆ ಸದಸ್ಯ ಮಂಜುನಾಥ ಮುಳಗುಂದ ಮಾತನಾಡಿ, ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ ಹಾಗೂ ರಾಜಕಾರಣ ಮಾಡಲಾಗುತ್ತಿದೆ.

ನಿನ್ನೆ- ಮೊನ್ನೆ ಅರ್ಜಿ ನೀಡಿದವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದ್ದರೆ, 2 ವರ್ಷಗಳ ಹಿಂದೆ ಅರ್ಜಿ ನೀಡಿದ ಅರ್ಹರು ದೂರ ಉಳಿದಿದ್ದಾರೆ ಎಂದು ಆರೋಪಿಸಿದರು. ಅವರೊಂದಿಗೆ ಸಂತೋಷ ಮೇಲಗಿರಿ ಧ್ವನಿಗೂಡಿಸಿದರು.

ಅಧಿಕಾರಿಗಳ ತರಾಟೆ: ನಿವೇಶನ, ಸೂರು ಹಾಗೂ ನಿರಂತರ ನೀರು ಪೂರೈಕೆ ಯೋಜನೆಗೆ ಸಂಬಂಧಿಸಿದಂತೆ ಸಂಸದ ಶಿವಕುಮಾರ ಉದಾಸಿ ಹಾಗೂ ನಗರಸಭೆ ಸದಸ್ಯರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

2,500 ಫಲಾನುಭವಿಗಳು ಅರ್ಹತೆ ಇದ್ದು, ಈ ಪೈಕಿ 1,300 ಜನರನ್ನು ಆಯ್ಕೆ ಮಾಡಿರುವ ಬಗ್ಗೆ ಯೋಜನಾಧಿಕಾರಿ ಡಿ.ಟಿ.ದೊಡ್ಡಮನಿ ಅವರು ಹೇಳುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಸಂಸದ ಶಿವಕುಮಾರ ಉದಾಸಿ ಅವರು, ಆಯ್ಕೆ ಮಾನದಂಡದ ಬಗ್ಗೆ ಕೇಳಿದಾಗ ದೊಡ್ಡಮನಿ, ಆಶ್ರಯ ಸಮಿತಿಯಲ್ಲಿ ಆಯ್ಕೆಯಾಗಿದೆ ಎಂದು ಉತ್ತರಿಸಿದರು. ಇದಕ್ಕೆ ಸುಮ್ಮನಾಗದ ಸದಸ್ಯ ನಾಗಲಿಂಗ ಐಲಿ, ಈ ಪಟ್ಟಿಯಲ್ಲಿ ಶೇ 15- ರಿಂದ ಶೇ 20 ರಷ್ಟು ಫಲಾನುಭವಿಗಳು ಖೊಟ್ಟಿ ಇದ್ದಾರೆ ಎಂದು ಆರೋಪಿಸಿದರು.

ಅವಳಿ ನಗರದಲ್ಲಿ ಈಗಾಗಲೇ 11 ಸಾವಿರ ಮನೆಗಳಿಗೆ ನಿರಂತರ ನೀರು ಯೋಜನೆ ಅಡಿ ನಳದ ಸಂಪರ್ಕ ಕಲ್ಪಿಸಲಾಗಿದೆ. 2017ರ ಜನವರಿ ಅಂತ್ಯದ ವೇಳೆಗೆ ವಲಯ 2 ಹಾಗೂ ವಲಯ 10 ರಲ್ಲಿ ಪ್ರಾಯೋಗಿಕ  ಕೆಲಸ ಆರಂಭವಾಗಲಿದೆ. ಬಳಿಕ ಮಾರ್ಚ್ ಅಂತ್ಯಕ್ಕೆ 22 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ನಿರಂತರ ನೀರು ಪೂರೈಸುವ ಕುರಿತು ಬಿಂಕದಕಟ್ಟಿ ತಿಳಿಸಿದರು.

ಈವರೆಗೆ ಕೇವಲ ಶೇ 38 ರಷ್ಟು ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಇದು ಇಲಾಖೆ ಅಧಿಕಾರಿಗಳೇ ನೀಡಿದ ಮಾಹಿತಿ. ಗುತ್ತಿಗೆದಾರ ಉಪಗುತ್ತಿಗೆ ನೀಡುತ್ತಿರುವುದೇ ಮೂಲ ಕಾರಣವಾಗಿದೆ ಎಂದು ನಗರಸಭೆ ವಿರೋಧ ಪಕ್ಷದ ನಾಯಕ ಸದಾನಂದ ಪಿಳ್ಳಿ ತಿಳಿಸಿದರು.

ಎಸ್‌ಸಿ, -ಎಸ್‌ಟಿ ಸಮುದಾಯದವರು ಹೆಚ್ಚು ವಾಸಿಸುವ ಪ್ರದೇಶದಲ್ಲಿ ಅಧಿಕಾರಿಗಳು ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಕುರಿತು ಸದಸ್ಯರಿಗೆ ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ ಎಂದು ಸದಸ್ಯೆ ಕಮಲಾ ಹಾದಿಮನಿ ದೂರಿದರು.

ನಗರಸಭೆ ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಮೇಶ ದೇಸಾಯಿ ಇದ್ದರು.

ನೀರಿನ ಕರ ಏರಿಕೆ ಏಕೆ?
ಮೊದಲೇ ನಿಗದಿತ ಸಮಯದಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಹೀಗಿದ್ದಾಗ ಕುಡಿಯುವ ನೀರಿನ ಕರ ದುಪ್ಪಟ್ಟಾಗಿಸಿರುವುದು ಏಕೆ? ಯಾವಾಗ ನೀರು ಬರುತ್ತದೆ. ಎಷ್ಟು ಕುಟುಂಬಗಳಿಗೆ ನೀರು ಪೂರೈಕೆ ಆಗುತ್ತದೆ. ಅಷ್ಟು ಕುಟುಂಬಗಳಿಗೆ ಮಾತ್ರ ನೀರಿನ ಕರ ವಸೂಲಿ ಮಾಡಬೇಕು ಎಂದು ಸಂಸದ ಶಿವಕುಮಾರ ಉದಾಸಿ ಕಿಡಿಕಾರಿದರು.

*
ನಿರಂತರ ನೀರು ಯೋಜನೆ ವಿಳಂಬಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮಧ್ಯೆ ಹೊಂದಾಣಿಕೆ ಕೊರತೆಯಿದೆ. ಸಭೆಗೆ ಗುತ್ತಿಗೆದಾರರನ್ನೂ ಕರೆದಾಗ ಮಾತ್ರ ಸತ್ಯ ಗೊತ್ತಾಗಲಿದೆ.
-ಎಂ.ಸಿ.ಶೇಖ,
ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT