ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ: ಕುಸಿಯುತ್ತಿದೆ ಕೂಲಿ!

ಸಾಲವೂ ಸಿಗದೇ ದುಸ್ತರವಾಗುತ್ತಿದೆ ಕಾರ್ಮಿಕರ ಬದುಕು, ದುಡಿಮೆಗೂ ಬೀಳುತ್ತಿದೆ ಕತ್ತರಿ
Last Updated 28 ಡಿಸೆಂಬರ್ 2016, 5:24 IST
ಅಕ್ಷರ ಗಾತ್ರ

ಹಾವೇರಿ: ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ಪರಿಣಾಮವು ‘ಕೂಲಿ’ ಮೇಲೆ ಬೀರುತ್ತಿದ್ದು, ಮಾರುಕಟ್ಟೆ, ಕೃಷಿ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ವಲಯಗಳಲ್ಲಿ ‘ಕೂಲಿ’ ಕಡಿತಗೊಳ್ಳುತ್ತಿವೆ.

ಇನ್ನೊಂದೆಡೆ, ಗ್ರಾಮೀಣ ಭಾಗದಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು (ಮೈಕ್ರೋ ಫೈನಾನ್ಸ್) ನೀಡುತ್ತಿರುವ ಸಾಲದ ಪ್ರಮಾಣವನ್ನೂ ಕಡಿತಗೊಳಿಸುತ್ತಿವೆ. ಹೀಗಾಗಿ ಅತ್ತ ಕೂಲಿ ಮತ್ತು ಇತ್ತ ತುರ್ತು ನೆರವಿಗೆ ಸಿಗುತ್ತಿದ್ದ ಹಣವೂ ಸಿಗದೇ ಕೂಲಿಕಾರರ ಬದುಕು ದಿನದಿಂದ ದಿನಕ್ಕೆ ಅಡಕತ್ತರಿಗೆ ಸಿಲುಕಿದಂತಾಗುತ್ತಿದೆ. ಇದರ ಪರಿಣಾಮ ಬ್ಯಾಡಗಿಯ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕೂಲಿ ಕಾರ್ಮಿಕರ, ಮಹಿಳೆಯರ ಪ್ರತಿಭಟನೆಗಳು ನಡೆದಿವೆ. 

ತುರ್ತು ಸಾಲ: ‘ಕೂಲಿ ಕಡಿಮೆಯಾದ ಕಾರಣ ಸಾಲದ ಕಂತು ಪಾವತಿಸಲು ಹಣ ಇಲ್ಲ ಎಂದು ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಇದರಿಂದ ಕೂಲಿಕಾರರ ತುರ್ತು ನೆರವಿಗೆ ಧಾವಿಸುತ್ತಿದ್ದ ಖಾಸಗಿ ಹಣಕಾಸು ಸಂಸ್ಥೆಗಳೂ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಅತ್ತ ಬ್ಯಾಂಕ್‌ಗಳೂ ಸಾಲ ನೀಡುತ್ತಿಲ್ಲ. ಇದರಿಂದ ಕೂಲಿಯೂ ಇಲ್ಲ, ಸಾಲವೂ ಇಲ್ಲದೇ ಕೂಲಿಕಾರರ ಜೀವನ ದುಸ್ತರವಾಗಿದೆ’ ಎನ್ನುತ್ತಾರೆ ಕಾರ್ಮಿಕ ಮುಖಂಡ ಹೊನ್ನಪ್ಪ ಮರೆಯಮ್ಮನವರ. 

‘ಕಟ್ಟಡ ಕಾರ್ಮಿಕರಿಗೂ ಕೆಲಸ ಇಲ್ಲದಾಗುತ್ತಿದೆ. ಜಿಲ್ಲೆಯ ಸವಣೂರು, ರಾಣೆಬೆನ್ನೂರು, ಶಿಗ್ಗಾವಿ ಮತ್ತಿತರೆಡೆಗಳಲ್ಲಿನ ಬೀಡಿ ಕಾರ್ಮಿಕರಿಗೂ ಕೆಲಸ ಕಡಿಮೆ ಆಗಿದೆ. ಕೆಲಸ ಸಿಕ್ಕಿದರೂ ಕೂಲಿ ಹಣ ಪಾವತಿ ವಿಳಂಬ ಆಗುತ್ತಿದೆ. ಅಲ್ಲದೇ, ಸಾಲ ಪಡೆದು ತರಕಾರಿ, ಮೀನು, ಬಾಂಡೇ ಸಾಮಾನು ಮಾರಾಟದಂತಹ ಸ್ವಯಂ ಉದ್ಯೋಗ ನಡೆಸುವವರಿಗೂ ಕಷ್ಟವಾಗಿದೆ’ ಎನ್ನುತ್ತಾರೆ ಅವರು.  

ಮನವಿ: ‘ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ಪರಿಣಾಮ ಸಾಲವನ್ನು ಸಕಾಲದಲ್ಲಿ ಮರು ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಸಾಲ ಮರುಪಾವತಿಸುವಂತೆ  ಸಹಕಾರಿ ಬ್ಯಾಂಕ್‌ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಒತ್ತಡ ಹೇರುತ್ತಿದ್ದು, ಸಾಲ ಮರುಪಾವತಿಗೆ ಕಾಲಾವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿ ಶಿಗ್ಗಾವಿ ಪೊಲೀಸ್ ಠಾಣೆ ಹಾಗೂ ತಹಶೀಲ್ದಾರ್ ಕಚೇರಿಗಳಿಗೆ ಮಹಿಳಾ ಕಾರ್ಮಿಕರು ಈಚೆಗೆ ಮನವಿ ಸಲ್ಲಿಸಿದ್ದರು.

‘ನಾವು ಸಾಲ ಮರುಪಾವತಿಸುತ್ತೇವೆ. ಆದರೆ, ‘ನೋಟು ರದ್ದತಿ’ ಬಳಿಕ ಕೆಲಸ ಕಡಿಮೆಯಾಗಿದೆ. ಕೆಲಸ ಸಿಕ್ಕಿದರೂ, ಕೂಲಿಯ ಪೂರ್ತಿ ಹಣವನ್ನು ಪಾವತಿ ಮಾಡುತ್ತಿಲ್ಲ. ಹೀಗಾಗಿ ಸಾಲ ಮರುಪಾವತಿ ವಿಳಂಬವಾಗುತ್ತಿದೆ’ ಎಂದು ಪ್ರತಿಭಟನಾ ನಿರತ ಬಸವನಾಳದ ನೀಲಮ್ಮ ಚಾಲಕಲಬ್ಬಿ ದೂರಿದ್ದರು.

ಬ್ಯಾಡಗಿ ಎಪಿಎಂಸಿ: ‘ನೋಟಿನ ಮೇಲಿನ ನಿರ್ಬಂಧದ ಬಳಿಕ ವ್ಯವಹಾರ ಕ್ಲಿಷ್ಟಕರವಾಗಿದೆ. ದೂರದ ಊರುಗಳಿಂದ ಒಣ ಮೆಣಸಿನಕಾಯಿ ತಂದ ರೈತರಿಗೆ ಚೆಕ್ ನೀಡುತ್ತಿದ್ದೇವೆ. ಆದರೆ, ಬಾಡಿಗೆ, ಡೀಸೆಲ್‌, ಕೂಲಿ, ಊಟದ ಖರ್ಚಿಗೆ ನಗದು ರೂಪದಲ್ಲಿ ಸ್ವಲ್ಪ ಹಣ ನೀಡಿ ಎಂದು ಕೇಳುತ್ತಾರೆ. ಇದನ್ನು ಪಾವತಿಸಲು ವರ್ತಕರಿಗೆ ಕಷ್ಟವಾಗುತ್ತಿದೆ. ಇದು ವ್ಯವಹಾರಕ್ಕೆ ಹಿನ್ನಡೆ ಉಂಟು ಮಾಡಿದೆ’ ಎನ್ನುತ್ತಾರೆ ಅಸಂಘಟಿತ ಕಾರ್ಮಿಕರ ಪರ ಹೋರಾಟಗಾರ ಮೋಹನ ಬಿನ್ನಾಳೆ.

‘ವಿವಿಧ ವಲಯಗಳಲ್ಲಿ ಕೂಲಿ ಕೆಲಸ ಕಡಿಮೆಯಾದ ಕಾರಣ ಬಹುತೇಕರು ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಿದ್ದಾರೆ. ಇದರಿಂದ ಇಲ್ಲಿಯೂ ಕೂಲಿ ಹಣ ಕಡಿಮೆಯಾಗುತ್ತಿದೆ. ಇನ್ನೊಂದೆಡೆ, ದಿನಕ್ಕೆ ₹200ರಿಂದ ₹300 ದುಡಿಯುವ ಕೂಲಿಕಾರರಿಗೆ ಚೆಕ್ ನೀಡಿದರೆ ಏನು ಮಾಡಲು ಸಾಧ್ಯ? ಚೆಕ್‌ ಹಿಡಿದುಕೊಂಡು ಒಂದು ದಿನ  ಬ್ಯಾಂಕ್‌ನಲ್ಲಿ ಸರದಿ ನಿಲ್ಲಬೇಕು’ ಎನ್ನುತ್ತಾರೆ ಬಿನ್ನಾಳೆ. ‘ಇಂತಹ ಹಲವಾರು ಕಾರಣಗಳಿಂದ ಸಿಟ್ಟಿಗೆದ್ದ ಕೂಲಿಕಾರ ಮಹಿಳೆಯರು ಈಚೆಗೆ ಪ್ರತಿಭಟನೆ ನಡೆಸಿದ್ದಾರೆ’ ಎನ್ನುತ್ತಾರೆ ಅವರು.

‘ಕೆಲಸ ಕಡಿತ: ನಿರಾಕರಿಸುವಂತಿಲ್ಲ’
‘ಒಕ್ಕೂಟ ರಚಿಸಿಕೊಂಡು, ಸ್ವಯಂ ಜವಾಬ್ದಾರಿ ವಹಿಸಿಕೊಂಡ ಆರ್ಥಿಕ ವ್ಯವಹಾರ ನಡೆಸುವ ವ್ಯವಸ್ಥೆ ಯನ್ನು ನಮ್ಮ ಸ್ವಸಹಾಯ ಸಂಘ ಗಳಲ್ಲಿ ಪ್ರೇರೇಪಿಸುತ್ತಿದ್ದೇವೆ. ಇಲ್ಲಿ ಪಡೆದ ಸಾಲವನ್ನು ವಾರ ಕ್ಕೊಂದು ಕಂತಿನಂತೆ ಪಾವತಿಸು ತ್ತಾರೆ. ಈ ಕಂತಿನ ಮೊತ್ತವು ವಾರಕ್ಕೆ ₹100 ರಿಂದ ₹350 ಇರುತ್ತದೆ.

ಇದು ಹೊರೆಯಾಗದ ಕಾರಣ, ಯಾವುದೇ ದೂರುಗಳು ಬಂದಿಲ್ಲ. ಆದರೆ, ಮಾರುಕಟ್ಟೆ, ಹೊಲ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಕಡಿಮೆ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಕೆಲಸ ಕಡಿತ ಗೊಳ್ಳುವ ಅಪಾಯವನ್ನು ನಿರಾಕರಿ ಸುವಂತಿಲ್ಲ’ ಎನ್ನುತ್ತಾರೆ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ ವಸಂತ ಸಾಲಿಯಾನ್.

‘ತೆರಿಗೆದಾರರನ್ನು ಗೌರವಿಸಿ’
‘ಜಿಲ್ಲೆಯ 16 ಲಕ್ಷ ಜನಸಂಖ್ಯೆಯ ಪೈಕಿ ಸುಮಾರು 80 ಸಾವಿರ ಮಂದಿ ‘ಪಾನ್‌ ಕಾರ್ಡ್’ ಹೊಂದಿದ್ದಾರೆ. ಸಮಾರು 18 ಸಾವಿರ ಮಂದಿ ಟ್ಯಾಕ್ಸ್‌ ರಿಟರ್ನ್ ಫೈಲ್‌ ಮಾಡುತ್ತಾರೆ. ಇವರಿಗೆ ಸರ್ಕಾರ ಏನು ಸೌಲಭ್ಯ ನೀಡಿದೆ?’ ಎಂದು ಉದ್ಯಮಿ, ಆರ್ಥಿಕ ಸಲಹೆಗಾರ ಎನ್‌.ಬಿ. ತಾಂಡೂರ ಪ್ರಶ್ನಿಸುತ್ತಾರೆ.

‘ಪಾನ್ ಕಾರ್ಡ್’ (ತೆರಿಗೆ ದಾರರು) ಹೊಂದಿದವರಿಗೆ ಟೋಲ್‌ಗಳಲ್ಲಿ ಪ್ರತ್ಯೇಕ ಪಥ, ವಿಮಾನ, ರೈಲು, ಬಸ್‌ ಟಿಕೆಟ್‌ ಬುಕಿಂಗ್‌ಗಳಲ್ಲಿ ವಿಶೇಷ ಮೀಸಲು ಮತ್ತಿತರ ಸೌಲಭ್ಯಗಳನ್ನು ನೀಡಬೇಕು. ಸಹಜವಾಗಿಯೇ ತೆರಿಗೆ ಪಾವತಿಗೆ ಆಸಕ್ತಿ ತೋರುತ್ತಾರೆ. ಆಗ ಉದ್ಯಮ ಮತ್ತು ಉದ್ಯೋಗ ಚೇತರಿಸಿಕೊಳ್ಳುತ್ತದೆ’ ಎನ್ನುತ್ತಾರೆ ಅವರು.

‘ತೆರಿಗೆ ಕಡಿಮೆ ಮಾಡಿ, ವ್ಯಾಪ್ತಿಯನ್ನು ಹೆಚ್ಚಿಸಬೇಕು. ಆಗ ತೆರಿಗೆ ಹೆಚ್ಚಳವಾಗುತ್ತದೆ. ಅಲ್ಲದೇ, ಉದ್ಯೋಗ ಸೃಷ್ಟಿಯೂ ಹೆಚ್ಚುತ್ತದೆ’ ಎನ್ನುತ್ತಾರೆ ತೆರಿಗೆ ಸಲಹೆಗಾರ ರವಿ ಮೆಣಸಿನಕಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT