ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯೋಗದ ವರದಿ ತಿರಸ್ಕರಿಸಲು ಆಗ್ರಹ

ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆಯಿಂದ ಪ್ರತಿಭಟನೆ, ಸರ್ಕಾರಕ್ಕೆ ಮನವಿ
Last Updated 28 ಡಿಸೆಂಬರ್ 2016, 5:27 IST
ಅಕ್ಷರ ಗಾತ್ರ

ಬೆಳಗಾವಿ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಮರು ವರ್ಗೀಕರಣದ ಶಿಫಾರಸು ಮಾಡಿರುವ ನಿವೃತ್ತ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಡಾ.ಬಿ.ಆರ್‌. ಅಂಬೇಡ್ಕರ್‌ ಉದ್ಯಾನದಿಂದ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಾಜದವರು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

‘ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಉದ್ಯೋಗ, ಶೈಕ್ಷಣಿಕ ಹಾಗೂ ಸರ್ಕಾರಿ ಸೌಲಭ್ಯಗಳಲ್ಲಿ ಶೇ 15ರಷ್ಟು ಮೀಸಲಾತಿಯಲ್ಲಿ ಎಡಗೈ ಸಮುದಾಯಕ್ಕೆ (ಮಾದಿಗ) ಶೇ 6, ಬಲಗೈಗೆ (ಚಲವಾದಿ) ಶೇ 5ರಷ್ಟು ಹಾಗೂ ಸ್ಪೃಶ್ಯರಿಗೆ (ಭೋವಿ, ಲಮಾಣಿ, ಕೊರಚ, ಕೊರಮ) ಶೇ 3ರಷ್ಟು ಹಾಗೂ ಉಳಿದ ಇತರರಿಗೆ ಶೇ 1ರಷ್ಟು ವರ್ಗೀಕರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿರುವ ಎ.ಜೆ. ಸದಾಶಿವ ಆಯೋಗದ ವರದಿಯು ಅವೈಜ್ಞಾನಿಕ, ಸಂವಿಧಾನವಿರೋಧಿ ಹಾಗೂ ಅಸಂಬದ್ಧವಾಗಿದೆ. ದಲಿತರನ್ನು ವಿಭಜಿಸುವ ಹಾಗೂ (ಭೋವಿ, ಲಮಾಣಿ, ಕೊರಚ, ಕೊರಮ ಸಮಾಜದವರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಹೊರಹಾಕುವ ಹುನ್ನಾರ ಅಡಗಿದೆ’ ಎಂದು ಅರೋಪಿಸಿದರು.

ಹೇಳಿ ಬರೆಸಿದಂತಿದೆ: ‘ಆಯೋಗವು ಕೆಲವೇ ಅಂಶಗಳನ್ನು ಮುಂದಿಟ್ಟುಕೊಂಡು ಸಮೀಕ್ಷೆ ನಡೆಸಿರುವ ವಿಧಾನವೂ ಸರಿಯಲ್ಲ. ಮಾದಿಗ ಸಮಾಜದಕ್ಕೆ ಮಹತ್ವ ನೀಡಲಾಗಿದೆ. ಉಳಿದ 99 ಜಾತಿಗಳಿಗೆ ಅನ್ಯಾಯ ಮಾಡುವ ಹಾಗೂ ವಂಚಿಸುವ ತಂತ್ರ ಮಾಡಲಾಗಿದೆ. ನೈಜ ಹಾಗೂ ವಾಸ್ತವ ವರದಿ ನೀಡುವಲ್ಲಿ ಈ ಆಯೋಗ ವಿಫಲವಾಗಿದೆ. ಮಾದಿಗ ಸಮಾಜದ ಕೆಲವು ಶಕ್ತಿಗಳು ಹೇಳಿ ಬರೆಸಿದಂತೆ ಇದೆ’ ಎಂದು ಅವರು ದೂರಿದರು.

‘ಭೋವಿ ಸಮಾಜ ಶೇ 90ರಷ್ಟು ಮಂದಿ ಕಡಬಡವರಾಗಿದ್ದಾರೆ. ಬಂಡೆ ಹೊಡೆಯುವುದು, ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ನಾವು ಹಿಂದುಳಿದಿದ್ದೇವೆ. ಹೀಗಾಗಿ, ಈ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು’ ಎಂದು ಆಗ್ರಹಿಸಿದರು. ‘ಇಲ್ಲವಾದಲ್ಲಿ ರಾಜ್ಯದಾದ್ಯಂತ ಸಮಾಜದಿಂದ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರು ಜಾತಿ–ಜಾತಿಯ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ವಜಾಗೊಳಿಸಬೇಕು. ಭೋವಿ ಸಮಾಜದ ಶಾಸಕರಾದ ಶಿವರಾಜ ತಂಗಡಗಿ, ಮಾನಪ್ಪ ವಜ್ಜಲ ಅವರಿಗೆ ಜೀವಬೆದರಿಕೆ ಇದ್ದು, ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.

ವೇದಿಕೆ ರಾಜ್ಯಾಧ್ಯಕ್ಷ ಕೊಟ್ರೇಶ್‌, ಕಾರ್ಯಾಧ್ಯಕ್ಷ ಜಯಕುಮಾರ, ಜಿಲ್ಲಾಧ್ಯಕ್ಷ ಸಿದ್ದು, ಜಿಲ್ಲಾ ಕಾರ್ಯಾಧ್ಯಕ್ಷ ಸುನೀಲ ದೋತ್ರೆ, ಮುಖಂಡರಾದ ಕೆ.ಎಸ್‌. ಮಮದಾಪುರ, ರವಿ ದೋತ್ರೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT