ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾನಭಾಗ ವೃತ್ತವೇ? ರೋಟರಿ ವೃತ್ತವೇ...?

ಹೊಸಪೇಟೆ: ನಗರಸಭೆ ಸಾಮಾನ್ಯ ಸಭೆಯಲ್ಲಿ ಕೇಳಿಬಂದ ಪ್ರಶ್ನೆ
Last Updated 28 ಡಿಸೆಂಬರ್ 2016, 5:41 IST
ಅಕ್ಷರ ಗಾತ್ರ

ಹೊಸಪೇಟೆ: ‘ನಗರದ ಬಸ್‌ ನಿಲ್ದಾಣ ಬಳಿ ಇರುವ ವೃತ್ತ ಶಾನಭಾಗ? ಅಥವಾ ರೋಟರಿನಾ? ಎರಡರಲ್ಲಿ ಯಾವುದು ಸತ್ಯ...?  ಮಂಗಳವಾರ ನಗರದಲ್ಲಿ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಕೇಳಿ ಬಂದ ಪ್ರಶ್ನೆ ಇದು.

‘ಇಷ್ಟು ದಿನಗಳ ವರೆಗೆ ಆ ವೃತ್ತವನ್ನು ಶಾನಬಾಗ ಹೆಸರಿನಿಂದ ಕರೆಯಲಾಗುತ್ತಿತ್ತು. ಈಗ ಏಕಾಏಕಿ ರೋಟರಿ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಜತೆಗೇ ಆ ವೃತ್ತದಲ್ಲಿ ಕೆಲವು ದಿನಗಳ ಹಿಂದೆ ರೋಟರಿ ಹೆಸರಿನ ಕಲ್ಲು ಇಡಲಾಗಿತ್ತು. ನಗರದಲ್ಲಿ ಏನು ನಡೆಯುತ್ತಿದೆ ಗೊತ್ತಾಗುತ್ತಿಲ್ಲ’ ಎಂದು ಸದಸ್ಯ ಕೆ. ಬಡಾವಲಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಸೈಯದ್‌ ಮನ್ಸೂರ್‌ ಅಹಮ್ಮದ್‌, ‘1980ರಲ್ಲಿ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ಫ್ಲೆಕ್ಸ್‌ ಹಾಕಲು ಶಾನಭಾಗ ಹೋಟೆಲ್‌ನವರಿಗೆ ಅವಕಾಶ ಕೊಡ ಲಾಗಿತ್ತು. ಆದರೆ, ಅವರು ಅದರಲ್ಲಿ ಶಾನಬಾಗ ವೃತ್ತ ಎಂದು ಹೆಸರು ನಮೂದಿಸಿದ್ದರು. ಅದು ಹಾಗೆಯೇ ಜನರ ನಡುವೆ ಚಾಲ್ತಿಗೆ ಬಂದಿದೆ’ ಎಂದು ಹೇಳಿದರು.

‘ಈಗ ಅದಕ್ಕೆ ರೋಟರಿ ಎಂದು ಹೆಸರಿಡಲು ಅವರಿಗೆ ಅನುಮತಿ ಕೊಟ್ಟಿದ್ದು ಯಾರು?’ ಎಂದು ಸದಸ್ಯ ಎಂ.ಎಸ್‌. ರಘು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಲು ತಡಬಡಾಯಿಸಿದ ಮನ್ಸೂರ್‌ ಅಹ ಮ್ಮದ್‌ ಅವರು, ಈ ವಿಷಯದಲ್ಲಿ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಮುಂದುವರೆಯಲಾಗುವುದು ಎಂದು ಹೇಳಿದರು. ಇದಕ್ಕೆ ಆಕ್ಷೇಪ ಎತ್ತಿದ ರಘು, ಇದು ಸರಿಯಲ್ಲ.

ಕೌನ್ಸಿಲ್‌ ಸಭೆಯಲ್ಲಿ ಕೈಗೊಂಡ ನಿರ್ಣಯ ಮುಖ್ಯವೋ? ಶಾಸಕರು ಹೇಳುವುದು ಮುಖ್ಯವೋ? ಹಾಗಾದರೆ ನಗರಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಯಾವುದೇ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದರು. ‘ಸಭೆಯಲ್ಲಿ ಸದಸ್ಯರೆಲ್ಲ ಏನು ನಿರ್ಣಯ ಕೈಗೊಳ್ಳು ತ್ತೀರಿ ಅದರಂತೆ ಮುಂದುವರೆಯಲಾಗುವುದು’ ಎಂದು ಅಹಮ್ಮದ್‌ ತಿಳಿಸಿದರು.

ಫ್ಲೆಕ್ಸ್‌ಗೆ ಪೊಲೀಸರ ಅನುಮತಿ ಕಡ್ಡಾಯ: ‘ನಗರದ ವೃತ್ತಗಳಲ್ಲಿ ಫ್ಲೆಕ್ಸ್‌ ಹಾಕಲು ಅವಕಾಶ ಕೊಡುತ್ತಿಲ್ಲ. ಒಂದುವೇಳೆ ಹಾಕಿದರೂ ಅವುಗಳನ್ನು ತೆರವುಗೊಳಿಸಲಾಗುತ್ತಿದೆ. ಇದಕ್ಕೆ ಕಾರಣವೇನು?’ ಎಂದು ಸದಸ್ಯ ಗೌಸ್‌ ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಸದಸ್ಯ ರಘು, ಕೆಲವರು ಫ್ಲೆಕ್ಸ್‌ ಹಾಕಿದರೆ ವರ್ಷಗಟ್ಟಲೆ ಹಾಗೆಯೇ ಇರುತ್ತದೆ. ನಗರಸಭೆ ಸದಸ್ಯರು ಹಾಕಿದರೆ ತಕ್ಷಣವೇ ತೆಗೆಸುತ್ತೀರಿ ಎಂದರು.

ಯಾವುದೇ ವೃತ್ತದಲ್ಲಿ ಫ್ಲೆಕ್ಸ್‌ ಹಾಕಬೇಕಾದರೆ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಯ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ ಎಂದು ಸೈಯದ್‌ ಮನ್ಸೂರ್‌ ಅಹಮ್ಮದ್‌ ತಿಳಿಸಿದರು.

ಫ್ಲೆಕ್ಸ್‌ ತೆರವಿಗೆ ಡಿ. 31ರ ವರೆಗೆ ಜಿಲ್ಲಾಧಿಕಾರಿ ಗಡುವು ವಿಧಿಸಿದ್ದರು. ಈಗ ಅದನ್ನು ಜ. 15ರವರೆಗೆ ವಿಸ್ತರಿಸಲಾಗಿದೆ. ಎಲ್ಲರೂ ಈ ನಿಯಮ ಪಾಲಿಸುವುದು ಕಡ್ಡಾಯ ಎಂದು ವಿವರಿಸಿದರು.

ಪೌರಕಾರ್ಮಿಕರ ಸಮಸ್ಯೆ: ‘ನಗರಸಭೆಯಲ್ಲಿ ಅಧಿಕೃತವಾಗಿ 137 ಪೌರ ಕಾರ್ಮಿಕರು ಇದ್ದಾರೆ. ಆದರೆ, ಅಷ್ಟು ಜನ ಒಮ್ಮೆಯೂ ಕೆಲಸಕ್ಕೆ ಬಂದಿದ್ದು ನೋಡಿಲ್ಲ’ ಎಂದು ಸದಸ್ಯ ವೇಣುಗೋಪಾಲ್‌ ಹೇಳಿದರು.

ಯಾವ ಕಾಂಟ್ರ್ಯಾಕ್ಟರ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪೌರ ಕಾರ್ಮಿಕರು ಒಂದು ದಿನವೂ ಸಮವಸ್ತ್ರ ಧರಿಸುವುದಿಲ್ಲ. ಗುರುತಿನ ಕಾರ್ಡ್‌ ಇರುವುದಿಲ್ಲ. ಕೈ ಗವಸು ಹಾಕಿಕೊಳ್ಳುವುದಿಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂ.ಎಸ್‌. ರಘು, 100 ಜನವೂ ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ. ಆದರೆ, 137 ಜನರಿಗೆ ಕಾಲಕಾಲಕ್ಕೆ ಸಂಬಳ ಕೊಡುತ್ತೀರಿ ಎಂದರು.

ಎಲ್ಲ ಕಾರ್ಮಿಕರು ಕೇವಲ ಬಯೊಮೆಟ್ರಿಕ್‌ಗೆ ಸೀಮಿತವಾಗಿದ್ದಾರೆ. ಬೆಳಿಗ್ಗೆ ಬಯೊಮೆಟ್ರಿಕ್‌ನಲ್ಲಿ ಹೆಬ್ಬೆರಳಿನ ಗುರುತು ಒತ್ತಿ ಹೋದವರು ಎಲ್ಲಿಗೆ ಹೋಗುತ್ತಾರೆ ಗೊತ್ತಾಗುವುದಿಲ್ಲ. ಅವರು ಕೆಲಸ ಮಾಡಿದ್ದು ಒಮ್ಮೆಯೂ ನೋಡಿಲ್ಲ ಎಂದು ಸದಸ್ಯ ಗುಡಿಗುಂಟಿ ಮಲ್ಲಿಕಾರ್ಜುನ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮನ್ಸೂರ್‌ ಅಹಮ್ಮದ್‌, ‘ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸ್ವತಃ ನಾನೇ ಖುದ್ದಾಗಿ ಇದನ್ನು ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಅಗತ್ಯ ವಿಷಯಗಳ ಬಿಟ್ಟು ಅನಗತ್ಯ  ಚರ್ಚೆಗೆ ವೇದಿಕೆಯಾದ ಸಭೆ
ನಗರದ ಎಲ್ಲ ವಾರ್ಡುಗಳಲ್ಲಿ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಲು ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ಮಂಜೂರು ಮಾಡಿಸಿಕೊಳ್ಳಲು ಹಾಗೂ ಬಡಜನರಿಗೆ ಆಶ್ರಯ ಮನೆ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುವ ಸಂಬಂಧ ಸಭೆ ಕರೆಯಲಾಗಿತ್ತು. ಆದರೆ, ಈ ಎರಡು ವಿಷಯಗಳಿಗಿಂತ ಅನ್ಯ ವಿಷಯಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಿತು.

ಸದಸ್ಯ ಚಂದ್ರಕಾಂತ ಕಾಮತ್‌ ಮಾತನಾಡಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಆಶ್ರಯ ಮನೆಗಳನ್ನು ಹಂಚಿಕೆ ಮಾಡಿದ ಬಳಿಕ ಮಿಕ್ಕುಳಿದ ಮನೆಗಳನ್ನು ಸಾಮಾನ್ಯ ವರ್ಗದವರಿಗೆ ನೀಡಬೇಕು ಎಂದರು.

ಆಶ್ರಯ ಕಾಲೊನಿಯಲ್ಲಿ ವಾಸಿಸುತ್ತಿರುವವರಿಗೆ ಇಲ್ಲಿಯವರೆಗೆ ಪಟ್ಟಾ ನೀಡಿಲ್ಲ. ಅವರಿಗೆ ಯಾವಾಗ ಪಟ್ಟಾ ಕೊಡುವಿರಿ? ಎಂದು ಪ್ರಶ್ನಿಸಿದರು.
‘ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಸೈಯದ್‌ ಮನ್ಸೂರ್‌ ಅಹಮ್ಮದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT