ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಾವ್ಲರ್‌ ಗಿಯರ್‌ ಇಲ್ಲದಿದ್ದರೂ ಶಕ್ತ ‘ಹೆಕ್ಸಾ’

Last Updated 28 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಟಾಟಾ ಮೋಟಾರ್ಸ್‌ ತನ್ನ ಹೊಸ ಎಂಯುವಿ ಕಂ ಎಸ್‌ಯುವಿ ಹೆಕ್ಸಾವನ್ನು ಪ್ರಮೋಟ್‌ ಮಾಡಲು ಭಾರಿ ಪ್ರಯತ್ನ ನಡೆಸುತ್ತಿದೆ. ಜನರ ಮನದಲ್ಲಿರುವ ಟ್ಯಾಕ್ಸಿ ಇಮೇಜ್‌ ಅನ್ನು ಕಳಚಲು ಕಂಪೆನಿ ಪ್ರಯತ್ನಿಸುತ್ತಿದೆ. ಹೀಗಾಗಿ ಗ್ರಾಹಕಸ್ನೇಹಿ, ಅತ್ಯಾಕರ್ಷಕ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ತನ್ನ ವಾಹನಗಳಲ್ಲಿ ಅಳವಡಿಸುತ್ತಿದೆ. ಕಂಪೆನಿಯ ಪ್ರಯತ್ನ ಟಿಯಾಗೊದಲ್ಲಿ ಕಾಣುತ್ತಿತ್ತು. ಅದರ ಒತ್ತಾಸೆ ಹೆಕ್ಸಾ ಅಭಿವೃದ್ಧಿ ಮತ್ತು ಮಾರಾಟ ತಂತ್ರದಲ್ಲೂ ಕಾಣುತ್ತಿದೆ.

ತನ್ನ ವಾಹನಗಳ ಬಗ್ಗೆ ಗ್ರಾಹಕರು ಕಳೆದುಕೊಂಡಿರುವ ವಿಶ್ವಾಸವನ್ನು ಮರಳಿ ಗಳಿಸುವುದು ಕಂಪೆನಿಗೆ ಅತ್ಯಗತ್ಯವಾಗಿದೆ. ಹೀಗಾಗಿ ಬಿಡುಗಡೆಗೂ ಮುನ್ನವೇ ಹೆಕ್ಸಾವನ್ನು ಜನರಿಗೆ ಪರಿಚಯಿಸುವ ಸಲುವಾಗಿ ದೇಶದಾದ್ಯಂತ ‘ಹೆಕ್ಸಾ ಎಕ್ಸ್‌ಪೀರಿಯೆನ್ಸ್‌’ ಅನ್ನು ಆಯೋಜಿಸಿತ್ತು. ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನಲ್ಲೂ ಈ ಚಟುವಟಿಕೆ ನಡೆಯಿತು. ಕಂಪೆನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ಸಹ ಚಟುವಟಿಕೆಯಲ್ಲಿ ಭಾಗವಹಿಸಿತ್ತು.

ಚಟುವಟಿಕೆಯಲ್ಲಿ ಆಫ್‌ರೋಡ್‌ ಟ್ರ್ಯಾಕ್‌ನಲ್ಲಿ ವಾಹನವನ್ನು ಚಲಾಯಿಸಬೇಕಿತ್ತು. ಜತೆಗೆ ರಸ್ತೆಯಲ್ಲೂ ಚಲಾಯಿಸಿ ಅದರ ಸಾಮರ್ಥ್ಯವನ್ನು ಪರೀಕ್ಷಿಸಬಹುದಿತ್ತು. ಆಫ್‌ರೋಡ್‌ನಲ್ಲಿ ಹೆಕ್ಸಾ ಚಲಾಯಿಸಲು ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿತ್ತು. ಸಾರ್ವಜನಿಕರು ಪರಿಣತ ಚಾಲಕರ ಜತೆಯಲ್ಲಿ ಕುಳಿತು, ಆಫ್‌ರೋಡಿಂಗ್‌ ಅನ್ನು ಅನುಭವಿಸಬಹುದಿತ್ತು.

ಹೆಕ್ಸಾದಲ್ಲಿ ಸದ್ಯಕ್ಕೆ ಆಲ್‌ವ್ಹೀಲ್‌ ಡ್ರೈವ್‌ ಸವಲತ್ತು ಇರುವುದು ಮ್ಯಾನ್ಯುಯಲ್‌ ಟ್ರಾನ್ಸ್‌ಮಿಷನ್‌ ಅವತರಣಿಕೆಯಲ್ಲಿ ಮಾತ್ರ. ಆಲ್‌ವ್ಹೀಲ್‌ ಡ್ರೈವ್‌ನಲ್ಲಿ ಲೋ ಗಿಯರ್‌ ಮತ್ತು ಕ್ರಾವ್ಲರ್‌ ಗಿಯರ್‌ಗಳು ಇರುವುದಿಲ್ಲ. ಹೀಗಾಗಿ ವಾಹನಕ್ಕೆ ಕಡಿಮೆ ವೇಗದಲ್ಲೂ ಹೆಚ್ಚು ಶಕ್ತಿ ಅಗತ್ಯವಿರುತ್ತದೆ, ಆಫ್‌ರೋಡಿಂಗ್‌ನಲ್ಲಿ.

ಈ ಟ್ರ್ಯಾಕ್‌ನಲ್ಲಿ ಮೊದಲಿಗೆ ಆಕ್ಸೆಲ್‌ ಟ್ವಿಸ್ಟರ್‌ಗಳನ್ನು ಹಾದುಹೋಗಬೇಕಿತ್ತು. ಇಲ್ಲಿ ಎರಡು ಬೆಂಚುಗಳಿರುತ್ತವೆ, ಅವು ಸುಮಾರು 20 ಇಂಚಿನಷ್ಟು ಎತ್ತರದವು. ಆದರೆ ಇವನ್ನು ಸಮಾನಾಂತರವಾಗಿ ಜೋಡಿಸಿರುವುದಿಲ್ಲ. ಬದಲಿಗೆ ಮೊದಲಿಗೆ ಒಂದು ಬೆಂಚು ಹತ್ತಿದರೆ, ಅದಾಗಿ ಒಂದೆರಡು ಅಡಿ ಕ್ರಮಿಸಿದ ನಂತರ ಮತ್ತೊಂದು ಬೆಂಚು ಎದುರಾಗುತ್ತದೆ. ಇಲ್ಲಿ ವಾಹನದ ಆಕ್ಸೆಲ್‌ ಎಷ್ಟು ಫ್ಲೆಕ್ಸಿಬಲ್‌ ಇದೆ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಹೀಗೆ ಒಂದು ಬೆಂಚನ್ನು ಏರಿದಾಗ, ಹೆಕ್ಸಾದ ಮುಂಬದಿಯ ಒಂದು ಚಕ್ರ ನೆಲದಿಂದ 20 ಇಂಚು ಮೇಲಿದ್ದರೆ, ಮತ್ತೊಂದು ಚಕ್ರ ನೆಲಕ್ಕೆ ಅಂಟಿಕೊಂಡಿರುತ್ತದೆ. ಹಿಂಬದಿಯ ಒಂದು ಚಕ್ರ ಸಂಪೂರ್ಣ, ಗಾಳಿಯಲ್ಲಿ ತೇಲುತ್ತಿರುತ್ತದೆ. ಇದೇ ಸ್ಥಿತಿಯಲ್ಲಿ ಹೆಕ್ಸಾದ ಮುಂಬದಿಯ ಮತ್ತೊಂದು ಚಕ್ರವನ್ನು ಇನ್ನೊಂದು ಬೆಂಚಿನ ಮೇಲೆ ಏರಿಸಬೇಕು.

ಆ ಚಕ್ರವನ್ನು ಏರಿಸಿದ ನಂತರ ಮುಂಬದಿಯ ಒಂದು ಚಕ್ರ (ಬಲ), ಹಿಂಬದಿಯಲ್ಲಿ ಅದರ ವಿರುದ್ಧದ ಚಕ್ರ (ಎಡ) ಗಾಳಿಯಲ್ಲಿ ತೇಲುತ್ತಿತ್ತು. ಉಳಿದ ಇನ್ನೆರಡು ಚಕ್ರಗಳು ಮಾತ್ರ 20 ಇಂಚಿನ ಎರಡು ಬೆಂಚ್‌ಗಳ ಮೇಲಿದ್ದವು. ಆ ಎರಡು ಚಕ್ರಗಳಲ್ಲೇ ವಾಹನ ಮುಂದುವರಿಯಬೇಕು. ಇಲ್ಲಿ ಉಪಯೋಗಕ್ಕೆ ಬರುವುದು ಟ್ರ್ಯಾಕ್ಷನ್‌ ಕಂಟ್ರೋಲ್.

ಗಾಳಿಯಲ್ಲಿರುವ ಎರಡು ಚಕ್ರಗಳು ತಿರುಗುವುದನ್ನು ತಡೆದು, ಉಳಿದೆರಡು ಚಕ್ರಗಳಿಗೆ ಸಂಪೂರ್ಣ ಶಕ್ತಿಯನ್ನು ಟ್ರ್ಯಾಕ್ಷನ್‌ ಕಂಟ್ರೋಲ್‌ ವರ್ಗಾಯಿಸುತ್ತದೆ. ಹೆಕ್ಸಾ ಬರೋಬ್ಬರಿ 2,200 ಕೆ.ಜಿ ತೂಗುತ್ತದೆ. ಅಷ್ಟು ತೂಕದ ವಾಹನ ಕೇವಲ ಎರಡು ಚಕ್ರಗಳಲ್ಲಿ ಈ ಅಡೆತಡೆಗಳನ್ನು ಸುಲಭವಾಗಿ, ಒಂದಿನಿತೂ ಜರ್ಕ್‌ ಹೊಡೆಯದೆ ಹಾದುಬಂದಿತು. ಲೋ ಗಿಯರ್‌ ಇದ್ದಿದ್ದರೆ, ಇದನ್ನು ಇನ್ನಷ್ಟು ಸುಲಭವಾಗಿಸುತ್ತಿತ್ತು. ಆದರೆ ಇಂತಹ ಹಳ್ಳಕೊಳ್ಳಗಳನ್ನು ಹಾದುಹೋಗಲು ಹೆಕ್ಸಾ ಸಮರ್ಥವಾಗಿದೆ.

ಇನ್ನು ಎರಡು ಮೂರು ಸಾಮಾನ್ಯ ಟ್ರ್ಯಾಕ್‌ಗಳನ್ನು ಹೆಕ್ಸಾ ಸುಲಭವಾಗಿ ದಾಟಿತು. ನಂತರದ ಅಡೆತಡೆ ಇದ್ದದ್ದು, 25 ಡಿಗ್ರಿಯಷ್ಟು ಕಡಿದಾದ ಏರನ್ನು ಏರಬೇಕಿತ್ತು. ಲೋ ಗಿಯರ್‌ ಇದ್ದರೆ, ಅದನ್ನು ನಿಧಾನವಾಗಿ ಏರಬಹುದು. ಲೋ ಗಿಯರ್‌ ಇಲ್ಲದಿದ್ದರೆ, ದೂರದಿಂದ ವೇಗವಾಗಿ ಬಂದು ಹತ್ತಿಸಬೇಕು. ಈ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಹೆಕ್ಸಾದ ಎಂಜಿನ್‌ ಮ್ಯಾಪಿಂಗ್‌ ಬದಲಾವಣೆ ಮಾಡಲಾಗಿದೆ.

ಹೆಕ್ಸಾದಲ್ಲಿ ಸೂಪರ್‌ ಡ್ರೈವ್‌ ಮೋಡ್‌ಗಳಿವೆ. ಇದರಲ್ಲಿ ನಾಲ್ಕು ಆಯ್ಕೆಗಳಿವೆ. ಒಂದು ಆಟೊ, ಇದು ಆಲ್‌ವ್ಹೀಲ್‌ ಡ್ರೈವ್‌ ಆಗಿದ್ದು, ಶಕ್ತಿ ಸಾಧಾರಣವಾಗಿರುತ್ತದೆ. ಮತ್ತೊಂದು ಕಂಫರ್ಟ್‌, ಇದು ರೇರ್‌ ವ್ಹೀಲ್‌ ಡ್ರೈವ್‌ ಆಗಿದ್ದು, ಶಕ್ತಿ ಸಾಧಾರಣವಾಗಿರುತ್ತದೆ. ಮೂರನೆಯದ್ದು ಡೈನಮಿಕ್, ಇದೂ ರೇರ್‌ ವ್ಹೀಲ್‌ ಡ್ರೈವ್‌ ಆಗಿದ್ದು, ಎಂಜಿನ್‌ ರಕ್ಕಸ ಶಕ್ತಿ ಒದಗಿಸುತ್ತದೆ. ಕೊನೆಯದ್ದು ರಫ್‌ ರೋಡ್‌. ಇದರಲ್ಲಿ ಐಡಲ್‌ ಸ್ಪೀಡ್‌ನಲ್ಲೇ ಎಂಜಿನ್‌ ಗರಿಷ್ಠ ಶಕ್ತಿ ಒದಗಿಸುತ್ತದೆ.

ಜತೆಗೆ ಇದು ಆಲ್‌ವ್ಹೀಲ್‌ ಡ್ರೈವ್. ರಫ್‌ರೋಡ್‌ ಮೋಡ್‌ನಲ್ಲಿ ಇದ್ದುದ್ದರಿಂದ 25 ಡಿಗ್ರಿಯಷ್ಟು ಕಡಿದಾದ ದಿಬ್ಬವನ್ನು ಅದರ ಬುಡದಲ್ಲೇ ನಿಂತುಕೊಂಡು ಚಾಲನೆ ಆರಂಭಿಸಿದರೂ ಸುಲಭವಾಗಿ ಹತ್ತಿತು. ರಫ್‌ರೋಡ್‌ ಇಲ್ಲಿ ನಿಜಕ್ಕೂ ಉಪಯೋಗಕ್ಕೆ ಬಂದಿತು. ಪಾರ್ಕಿಂಗ್‌ ಲಾಟ್‌ನಲ್ಲಿ ತೀರಾ ಕಡಿದಾಗಿರುವ ರ್‍್ಯಾಂಪ್‌ಗಳನ್ನು ಒಂದಿನಿತೂ ಕೊಸರಾಡದೆ ಹತ್ತಲು ಈ ಸವಲತ್ತು ಉಪಯೋಗಕ್ಕೆ ಬರುತ್ತದೆ.

ಮುಂದಿನದ್ದು, ಮುಕ್ಕಾಲು ಅಡಿ ಎತ್ತರದ ಮೆಟ್ಟಿಲುಗಳಿರುವ ರ್‍್ಯಾಂಪ್‌ ಅನ್ನು ಏರಬೇಕಿತ್ತು. 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ ಇರುವುದರಿಂದ ಹಾಗೂ ಆಲ್‌ವ್ಹೀಲ್‌ ಡ್ರೈವ್‌ ಇದ್ದುದ್ದರಿಂದ ಹೆಕ್ಸಾ ಅದನ್ನು ಸುಲಭವಾಗಿ ಹತ್ತಿತು. ಇದೇ ವರ್ಗದ ಎಸ್‌ಯುವಿಗಳು ಅದನ್ನು ಸುಲಭವಾಗಿ ಹತ್ತುತ್ತವೆ. ಆದರೆ, ಎಂಯುವಿಗಳು ಅವುಗಳನ್ನು ಹತ್ತುವುದು ಕಷ್ಟ. ಹೆಕ್ಸಾ ಈ ವಿಭಾಗದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಮುಂದಿದೆ.

ಮುಂದಿನ ತಡೆ ಇದ್ದದ್ದು 40 ಡಿಗ್ರಿಯಷ್ಟು ಕಡಿದಾದ ದಿಬ್ಬವನ್ನು ಅಡ್ಡವಾಗಿ ಹಾದುಬರಬೇಕಿದ್ದಿದ್ದು. ಇದರಲ್ಲಿ ಹೆಕ್ಸಾದ ಒಂಬದಿಯ (ಬಲಬದಿ) ಎರಡೂ ಚಕ್ರಗಳು ನೆಲದಿಂದ ನಾಲ್ಕು ಅಡಿ ಎತ್ತರದ ದಿಬ್ಬದ ಮೇಲೆ ಇದ್ದರೆ, ಇನ್ನೊಂದು ಬದಿಯ ಚಕ್ರಗಳು ನೆಲದ ಮೇಲಿರುತ್ತವೆ. ಅಭ್ಯಾಸವಿಲ್ಲದವರು ಇದನ್ನು ಮಾಡುವುದು ಕಷ್ಟ. ಒಳಗೆ ಕುಳಿತುಕೊಂಡರೂ ಹಲವರಿಗೆ ಹೊಟ್ಟೆ ತೊಳಸಿದಂತಾಗುತ್ತದೆ.

40 ಲಕ್ಷದ ಎಸ್‌ಯುವಿಗಳಲ್ಲೂ ಇಂತಹ ಅನುಭವ ಆಗುತ್ತದೆ. ಹೆಕ್ಸಾದಲ್ಲಿ ಇಂತಹ ಅನುಭವದ ಪ್ರಮಾಣ ಕಡಿಮೆ ಇತ್ತು. ಬಹುಶಃ ಹೆಕ್ಸಾದ ಎತ್ತರ ಕಡಿಮೆ ಇದ್ದುದ್ದರಿಂದ ಹೊಟ್ಟೆ ತೊಳಸಿದ ಅನುಭವ ಆಗಲಿಲ್ಲ. ಜತೆಗೆ ಹೆಕ್ಸಾ ಸುಲಭವಾಗಿ ಈ ದಿಬ್ಬವನ್ನು ದಾಟಿಬಂದಿತು. ಇಲ್ಲೂ ರಫ್‌ರೋಡ್‌ ಮೋಡ್‌ ಉಪಯೋಗಕ್ಕೆ ಬಂದಿತು. ಆದರೆ ಲೋ ಗಿಯರ್‌ ಇದ್ದರೆ ಇವೆಲ್ಲವನ್ನೂ ಇನ್ನಷ್ಟು ತಾಳ್ಮೆಯಿಂದ, ನಿಧಾನವಾಗಿ (ಕಡಿಮೆ ವೇಗದಲ್ಲಿ) ಮಾಡಬಹುದು. ಆದರೂ ರಫ್‌ರೋಡ್‌ ಮೋಡ್‌ ಹೆಕ್ಸಾಗೆ ಅಗತ್ಯ ಶಕ್ತಿಯನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT