ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳಲ್ಲಿ ನೀನಿರು ಗೆಳೆಯ ಅಷ್ಟೇ ಸಾಕು

ಒಡಲಾಳ
Last Updated 28 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ದಯವಿಟ್ಟು ನೆನಪಾಗದಿರು ಹುಡುಗಾ, ಆಗಲೇ ಬಾನಂಗಳದ ನಕ್ಷತ್ರಗಳೆಲ್ಲಾ ಖಾಲಿಯಾಗಿಬಿಟ್ಟಿವೆ. ಗಂಟೆಗಳ ಹುಸಿಮುನಿಸು ತಿಂಗಳುಗಳಿಗೆ ಹರಡಿ, ತುಟಿಯ ಮುಗುಳ್ನಗು ಗಂಟುಮೂಟೆ ಕಟ್ಟಿಕೊಂಡು ಅದೆಲ್ಲಿಗೋ ಹೋಗಿಬಿಟ್ಟಿದೆ. ಬಿಸಿಯುಸಿರ ಆಪ್ಯಾಯಮಾನ ಸ್ಪರ್ಶಗಳೆಲ್ಲಾ ಬೆನ್ನುಹಾಕಿಯಾಗಿ ದೂರವಾದಂತಿದೆ ತಿರುಗಿ ಬರದಂತೆ.

ಕಿರಿಕಿರಿಯಾಗುವಷ್ಟು ಸಿಡಿದು ಬಿಟ್ಟ ಸರಪಟಾಕಿ ಒಮ್ಮೆಲೇ ಸುಮ್ಮನಾದಾಗ ಆಗೋ ನೀರವತೆಯ ಕ್ಷಣವದು. ನಾನೇ ಬಯಸಿ ಬಂದ ಬಣ್ಣದ ಲೋಕದಲ್ಲಿ ತೇಲುತ್ತಾ ಅದ್ಯಾವುದೋ ಕ್ಷಣದಲ್ಲಿ ಒಮ್ಮೆಲೇ ನಿಂತು ಸುಮ್ಮನೆ ಹಿಂದೆ ತಿರುಗಿದಾಗ ಅಲ್ಲಿ ಕಾಣಿಸುವುದೇನು....

ಬದುಕು ಅದರಷ್ಟಕ್ಕೇ ಯಾಂತ್ರಿಕವಾಗಿ ಕಳೆಯುತ್ತಿತ್ತು... ಒಂದು ದಿನ ತಂಪುಕಂಗಳ, ತಣ್ಣನೆಯ ಕನಸುಗಳ ಹುಡುಗ ಎಲ್ಲಿಂದಲೋ ಬಂದು ಬದುಕ ಮರಳುಗಾಡ ಎರಡೂ ಕಡೆ ಬಣ್ಣದಂಗಡಿಗಳ ತೆರೆಸಿಬಿಟ್ಟ. ಕಳೆದವರ ನೆನಪುಗಳ ಬಿರುಬಿಸಿಲಲ್ಲಿ ನಡೆಯುತ್ತಿದ್ದವಳಿಗೆ ಪ್ರೀತಿ ಅರಳಿಸಿ ನಗುವಿನ ಹೂಹಾಸೋ ಶ್ರಮಪಟ್ಟ. ನಂದೇ ಸರಿ ಅನ್ನೋ ನನ್ನತನಕ್ಕೆ ಎಲ್ಲವನ್ನೂ ಎಲ್ಲರನ್ನೂ ಹಾಸ್ಯದಷ್ಟೇ ಹಗುರವಾಗಿಸಿ ಅಹಂಗೊಂದು ಮೃದು ಪೆಟ್ಟುಕೊಟ್ಟ. ಅರ್ಥವಿಲ್ಲದ ಭಾವುಕತೆಯ ಕಳೆಯ ಗೀಳಾಗಿಸಿಕೊಂಡ ನೆಲದಲ್ಲಿ ತುಂಟಮಾತುಗಳ ಗಿಡ ನೆಟ್ಟ. ಪ್ರತೀ ನೋವನ್ನೂ ನಗುವಾಗಿಸಿ ಅವಷ್ಟೂ ಪಲುಕುಗಳಿಗೆ ಅಂದದ ಹೆಸರುಗಳನಿಟ್ಟ. ಬದುಕನ್ನು ಹೀಗೂ ಬದುಕಬಹುದೆಂದು ಹೇಳಿಕೊಟ್ಟ ತುಂಬು ಕೆನ್ನೆಯ ಹುಡುಗ ಆವತ್ತು ಪಿಸುಗುಟ್ಟಿದರೂ ಕೇಳಿಸುವಷ್ಟು ಹತ್ತಿರವಿದ್ದ! ನಾನೇ ಭ್ರಮೆಗೂ ವಾಸ್ತವಕ್ಕೂ ತಾಳೆಯಾಗದೇ ಎಲ್ಲದರಿಂದ ಮೈಲಿ ದೂರ ಹೋಗೋ ಹಪಹಪಿಯಲ್ಲಿ ಎದ್ದುಬಂದು ರಸ್ತೆಗಿಳಿದು ಬಂದಿದ್ದೆ.

ಈ ನೆನಪುಗಳ ಹಂಗೇ ಬೇಡ ಅನ್ನೋದು ಆ ಹೊತ್ತಿನ ನಿರ್ಲಿಪ್ತತೆಗಷ್ಟೇ. ಆದರೆ ತಲೆಯಲ್ಲಿ ಮಾತ್ರ ಕತ್ತಲ ಮೂಟೆಯನ್ನು ಹೊತ್ತೇ ತಿರುಗುತ್ತೇವೆ. ವರ್ಷಗಳ ಹಿಂದೆ ಹೆಗಲಿಗೊರಗಿ ಹಗಲ ಮರೆತ ಕಥೆಗಳು. ನನ್ನ ಪ್ರತೀ ಮುನಿಸೂ ಅವನ ಕಣ್ಣ ತೋಯಿಸಿದ ಕಥೆಗಳು, ಗೊತ್ತೇ ಇರದ ಟಾರು ರೋಡ ಮೇಲೆ ಅವನ ಬೈಕ್ ಚಕ್ರ ಉರುಳಿದ ಸಾವಿರದ ದಿನಗಳು, ನಂಗೊಂದು ಗೌರವವಿಟ್ಟು ಅರ್ಧಕ್ಕೆ ಸುಟ್ಟುಹೋಗಿ ನೆಲ ಕಂಡ ಲೆಕ್ಕವಿಡಲಾರದ ಸಿಗರೇಟ್‌ಗಳು, ಬರ್ತ್‌ಡೇ ದಿನ ಮುತ್ತಿಕೊಂಡಿದ್ದ ಅವನ ಪ್ರಾಣಗೆಳೆಯರ ಗುಂಡಿನ ಆಹ್ವಾನಕ್ಕೆ ಅಸಹಾಯಕತೆಯಿಂದ ನನ್ನತ್ತ ನೋಡಿದ ನೆನಪುಗಳು ಇನ್ನೂ...

ದಿನ, ವಾರ, ತಿಂಗಳು, ವರ್ಷಗಳೇ ಓಡಿದವು! ಆದರೆ ಅವ ಕೊಟ್ಟ ಮೊತ್ತಮೊದಲ ಗ್ರೀಟಿಂಗಿನೊಳಗಿನ ಘಮ ಬದಲಾಗಿಲ್ಲ. ದಿನಕ್ಕೊಮ್ಮೆ ಕೇಳುವ ಹಾಡಿದ ಘಜಲಿನ ಆ ಲಯ ಬದಲಾಗಿಲ್ಲ, ಬರಿದೇ ಬರೆಯುವ ನನ್ನ ಹವ್ಯಾಸಕ್ಕೆ ರಾಶಿಹಾಕಿದ್ದ ಪೆನ್ನುಗಳ ಶಾಯಿ ಇನ್ನೂ ಖಾಲಿಯಾಗಿಲ್ಲ, ಅದೊಂದು ತುಂಬಾ ಹೊತ್ತು ಬಿಡದೆ ಸುರಿದ ಮಳೆಯ ದಿನ ಕೊಡಿಸಿದ್ದ ಆಕಾಶನೀಲಿ ಬಣ್ಣದ ಸೀರೆಯ ಝರಿಯಂಚು ಮಾಸಿಲ್ಲ, ಬೊಳ್ಳನೇ ತಲೆಯಲುಗಿಸಿ ನಗುವ ಸ್ಪ್ರಿಂಗ್ ನಾಯಿ ಸೋತು ಮಲಗಿಲ್ಲ ಮತ್ತು ನೀಲಿ ಗುಲಾಬಿ ಬಣ್ಣಗಳ ಅಂಗಿಯಿರುವ ಮುದ್ದುಗೊಂಬೆಗಳಿಗಿನ್ನೂ ಹೆಸರು ಸಿಕ್ಕಿಲ್ಲ !

ಎಲ್ಲವೂ ಸರಿಯಿತ್ತೇನೋ... ಆದರೆ, ದಿನಕಳೆದಂತೆ ಒಂಟಿತನ ಅಪರಿಚಿತವಾಗುತ್ತಾ ಹೋದಂತೆ ಕಳೆದ ‘ನಿನ್ನೆ’ ಅನ್ನೋದು ಧುತ್ತನೆ ಎದುರಿಗೆ ಬಂದು ‘ಆರಾಮಾ?!’ ಅಂತ ಕೇಳೋ ತನಕ. ನನ್ನ ಇಂದಿನ ದಿನಗಳ ಸಜ್ಜಾಗಿಸಲು ಹೊರಟ ನಗೆ ನಿಂಗೂ ನಿನ್ನೆಗಳಿದ್ದವು ಅನ್ನೋದು ಹೊಳೆಯಲೇ ಇಲ್ಲ. ಹಳೇ ಗಾಯ ಮತ್ತದರ ನೋವು ಪೂರ್ತಿಯಾಗಿ ಮರೆತಿದ್ದರೂ ಗೀರು ಗಾಯದ ಮಚ್ಚೆ ಮೈಗಂಟಿಕೊಂಡೇ ಇರುತ್ತೆ, ಸಾಯೋತನಕ. ಆ ನಿನ್ನ ಮೈ ಮಚ್ಚೆ ಹುಡುಕುತ್ತಾ

ಬದುಕ ಸವೆಯಿಸಿಬಿಟ್ಟರೆ ಕ್ಷಮೆ ಅನ್ನೋದು ಹಾದರವಾಗಿಬಿಡುತ್ತೆ ಅಷ್ಟೇ... ಈ ಬದುಕು ಹೀಗೇ ಸಾಗಿಬಿಡಲಿ. ಯಾವ ಪರಿವೆಯೂ ನಂಗಿಲ್ಲ, ಯಾರ ತ್ಯಾಗದ್ದೂ ಹಂಗಿಲ್ಲ. ಹೊಸ ಸಂಬಂಧದ ಮೆರವಣಿಗೇಲಿ ಹೋಗೋ ಮುನ್ನ ಒಂದೇ ಒಂದು ತಣ್ಣನೆಯ ಕನಸಿದೆ. ನಿರುಪದ್ರವಿ ದುರಾಸೆ ಅಂತಾರಲ್ಲ, ಅಂಥದ್ದು! ಅದೇನ್  ಗೊತ್ತಾ? ಕೈಯ ಮೇಲಿನ ಮೂರು ವರ್ಷ ಹಳೆಯ ಹಚ್ಚೆಯೂ, ಬೈಕ್ ಮೇಲಿರೋ ನನ್ನ  ಸಹಿಯೂ, ಪಾಸ್ವರ್ಡಿನಲ್ಲಿರೋ ನನ್ನ ಹೆಸರೂ ಬದಲಾದ ದಿನ ಮತ್ತೆ ಸಿಗಬೇಕು. ಇದೇ ಬತ್ತಿದ ನದಿಯ ಸೇತುವೆಯ ಬಳಿ ಮತ್ತೆರಡು ತೆಂಗಿನಗಿಡ ನೆಡಬೇಕು. ಇದಿಷ್ಟು ಮನದಟ್ಟುಮಾಡಿಕೊಡಲು... ಪ್ರೀತಿ ಅನ್ನೋದು ಬರೀ ಇಬ್ಬರಿಗಲ್ಲ, ಸಲಹಿದವರ ನಗುವ ಸಾರ್ಥಕತೆಗೆ ಮತ್ತು ಕಾರಣವಿದ್ದೇ ಬೇರೆಯಾಗಿ ಬದುಕ ಬದಲಾಯಿಸಿಕೊಂಡು ತಿರುವಿನಲ್ಲೊಮ್ಮೆ ಹಿಂತಿರುಗಿ ನೋಡಿ ಮುಖದಲ್ಲಿ ಮೂಡಿಸಿಕೊಂಡ ಮುಗುಳ್ನಗೆಗೆ!
ಆದರೂ ಮತ್ತೆ ಮತ್ತೆ ನೆನಪಾಗದಿರು ಹುಡುಗಾ... ಬಾನಂಗಳದ ನಕ್ಷತ್ರಗಳೆಲ್ಲಾ ಖಾಲಿಯಾಗಿಬಿಟ್ಟಿವೆ !!
–ವಾಣಿ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT