ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿರಲಿ, ನಾನು ವರ್ಷಾ

Last Updated 28 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಓದುವಾಗಲೇ ನಿರೂಪಣೆ, ನಟನೆ, ರೇಡಿಯೊ ಹೀಗೆ ಬಹುಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಮನ ಸೆಳೆದವರು ಸಿಂಧೂ ವರ್ಷಾ. ಕನ್ನಡದ ಬಹಳ ಎತ್ತರದ ನಟಿ ಎನಿಸಿಕೊಂಡವರು ಇವರು. ಸದ್ಯ ಪರದೆ ಹಿಂದೆ ಸಕ್ರಿಯವಾಗಿರುವ ಇವರು, ‘ಕಾಮನಬಿಲ್ಲು’ ಜೊತೆಗೆ ಮಾತಿಗೆ ಸಿಕ್ಕರು...

*ಪರದೆಯಲ್ಲಿ ಕಾಣಿಸಿಕೊಂಡು ತುಂಬಾ ದಿನಗಳಾದವಲ್ಲ, ಎಲ್ಲಿ ಮರೆಯಾಗಿಬಿಟ್ಟಿದ್ದಿರಿ?
ಮದುವೆ, ಮಕ್ಕಳು ಎಂದು ಸ್ವಲ್ಪ ಬ್ಯುಸಿಯಾಗಿಬಿಟ್ಟಿದ್ದೆ. ಅವರ ನಡುವೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಈಗ ಮತ್ತೆ ಬಂದಿದ್ದೇನೆ. ತೆರೆಯ ಹಿಂದಿನ ಕೆಲಸಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದೇನೆ.

*ಮೈಸೂರು ಎಂದರೆ ತುಂಬಾ ಇಷ್ಟವಂತೆ ನಿಮಗೆ?
ನಮ್ಮೂರೇ ಮೈಸೂರು. ನನ್ನ ಶಾಲೆ ಅಲ್ಲೇ. ಮೈಸೂರೆಂದರೆ ನನಗೆ ತುಂಬಾ ಪ್ರೀತಿ. ಅಪ್ಪ ಬ್ಯಾಂಕ್‌ ನೌಕರ. ಹಾಗಾಗಿ ಬೆಂಗಳೂರಿಗೆ ವರ್ಗವಾಯಿತು. ಆಮೇಲೆ ಬೆಂಗಳೂರಿನಲ್ಲಿಯೇ ನೆಲೆಸಿದೆವು. ಆದರೆ, ಇಂದಿಗೂ ನಾನು ಮೈಸೂರಿನವಳೆಂದು ಹೇಳಿಕೊಳ್ಳಲು ಇಷ್ಟಪಡುತ್ತೇನೆ.

*ಚಿಕ್ಕಂದಿನಲ್ಲಿ ಆಟದ ಗೀಳು ಹೆಚ್ಚೇ ಇತ್ತಂತೆ?
ಬಾಲ್ಯ ಎಂದಾಕ್ಷಣವೇ ನನ್ನ ನೆನಪುಗಳಲ್ಲೆಲ್ಲಾ ಬರೀ ಆಟಗಳೇ ತುಂಬಿಕೊಳ್ಳುತ್ತವೆ. ಸ್ಕೂಲ್‌ನಿಂದ ಸಂಜೆ ನಾಲ್ಕು ಗಂಟೆಗೆ ಬಂದು ಬ್ಯಾಗ್‌ ಬಿಸಾಡಿದರೆ, ರಾತ್ರಿ ಒಂಬತ್ತರ ತನಕ ಮನೆ ಸೇರುತ್ತಿರಲಿಲ್ಲ. ಲಗೋರಿ, ಕ್ರಿಕೆಟ್, ಚಿನ್ನಿದಾಂಡು ಇವೇ ನನ್ನ ನೆಚ್ಚಿನ ಆಟಗಳು. ಹುಡುಗರ ಜೊತೆ ಆಡಲು ಹೋಗುತ್ತಿದ್ದೆ. ಅಮ್ಮ ಅದೆಷ್ಟು ಬೈದಳೋ... ಉಪದೇಶ ನೀಡಿದಳೋ... ಆದರೆ ಓದಿನಲ್ಲೂ ಮುಂದಿದ್ದೆ. ಹಾಗಾಗಿ ಆಡಲಿಕ್ಕೆ ಅಷ್ಟೇನೂ ತೊಂದರೆ ಆಗಲಿಲ್ಲ.
ಆದರೆ, ಒಮ್ಮೆ ಆಟದಲ್ಲಿ ಮೋಸ ಮಾಡಿದ ಕಾರಣಕ್ಕೆ ಒಬ್ಬ ಹುಡುಗನ ಕಪಾಳಕ್ಕೆ ಹೊಡೆದಿದ್ದೆ. ಅಷ್ಟರ ಮಟ್ಟಿಗಿತ್ತು ನನ್ನ ಆಟದ ಗೀಳು. ಬೆಂಗಳೂರಿನ ವಿಜಯ ಶಾಲೆಯಲ್ಲಿ ನಾನು ಓದಿದ್ದು. ಅಲ್ಲಿಯೇ ಹೆಚ್ಚು ಅವಕಾಶಗಳು ಸಿಕ್ಕಿದ್ದು. ಹಾಡು, ನೃತ್ಯ, ಏಕಪಾತ್ರಾಭಿನಯ ಹೀಗೆ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ.

*ಕಾಲೇಜು ಓದುತ್ತಿರುವಾಗಲೇ ‘ಹೃದಯದಿಂದ’ ಆರಂಭಿಸಿದ್ದಿರಲ್ಲಾ...
ಕಾಲೇಜಿನ ಬಹುತೇಕ ಸಮಯವನ್ನು ಶೂಟಿಂಗ್‌ನಲ್ಲಿಯೇ ಕಳೆದೆ. ಪಿಯುಸಿ ಓದುವಾಗ ‘ಹೃದಯದಿಂದ’ ಕಾರ್ಯಕ್ರಮ ನಿರೂಪಣೆಗೆ ಅವಕಾಶ ಸಿಕ್ಕಿತು. ಒಂದು ಎಪಿಸೋಡಿಗೆ 250 ರೂಪಾಯಿ ಕೊಡ್ತಿದ್ರು. ಆ ದುಡ್ಡಿನಲ್ಲಿ ಜೀನ್ಸ್‌, ಟಾಪ್ಸ್‌್ ಖರೀದಿಸಿ, ಮುಂದಿನ ಎಪಿಸೋಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೆ.

*ಸಿನಿಮಾ ಯಾನ ಶುರುವಾಗಿದ್ದೆಲ್ಲಿ?
ಎಂಜಿನಿಯರಿಂಗ್‌ ಓದುವಾಗ ಸಿನಿಮಾಗಳಿಗೆ ಅವಕಾಶ ಸಿಕ್ಕಿದ್ದು. ‘ನೆನಪಿರಲಿ’, ‘ನವಗ್ರಹ’ ಸಿನಿಮಾಗಳಲ್ಲಿ ನಟಿಸಿದೆ. ನಟನೆ ಎಂದರೆ ನನಗೆ ಸ್ವಲ್ಪ ಕಷ್ಟವೇ. ಯಾಕೆಂದರೆ, ನಾವು ಅಲ್ಲಿ ಬೇರೆ ಯಾರೋ ಆಗಿ ಕಾಣಿಸಿಕೊಳ್ಳುವ ಸವಾಲಿರುತ್ತದೆ.
ಆರಂಭದ ನಾಲ್ಕು ವರ್ಷಗಳು ನಿರೂಪಕಿ, ನಟಿ,   ರೇಡಿಯೊ ಜಾಕಿ ಎಲ್ಲವೂ ಆಗಿ ದುಡಿದೆ. ನಟನೆಗಿಂತ ನಿರೂಪಣೆ ಕಡೆಗೆ ಒಲವಿತ್ತು. ಸದ್ಯ, ಜೀ ಕನ್ನಡದಲ್ಲಿ ಕಾರ್ಯಕ್ರಮ ಮುಖ್ಯಸ್ಥೆಯಾಗಿದ್ದೇನೆ. ಈ ಕೆಲಸ ನನಗಿಷ್ಟ.

*ಅಮ್ಮನಿಂದ ಏಟು ತಿಂದ ಪ್ರಸಂಗಗಳಿವೆಯಾ?
ಅಮ್ಮ ಬಾಸುಂಡೆ ಬರೋ ಹಾಗೆ ಹೊಡೆದಿದ್ದಳು. ಕಾಲೇಜಿಗೆ ಹೋಗುತ್ತೇನೆಂದು ಹೇಳಿ, ಗೆಳತಿ ನೋಡಲು ಆಸ್ಪತ್ರೆಗೆ ಹೋಗಿದ್ದೆ. ಅವಳಿಗೆ ಅಪಘಾತವಾಗಿ ಆಸ್ಪತ್ರೆ ಸೇರಿದ್ದಳು. ಯಾವುದೋ ಟಿ.ವಿ. ಕಾರ್ಯಕ್ರಮ ನಿರೂಪಣೆಗೆ ಮನೆಗೆ ಕರೆ ಬಂದಿತ್ತು. ಆಗ ನನ್ನ ಬಳಿ ಮೊಬೈಲ್‌ ಇರಲಿಲ್ಲ. ಅಮ್ಮ ಸುದ್ದಿ ತಿಳಿಸಲು ಕಾಲೇಜಿಗೇ ಬಂದರು. ಅಲ್ಲಿ ನಾನಿಲ್ಲ.  ‘ನಿಮ್ಮ ಮಗಳು ಕಾಲೇಜಿಗೆ ಬರುವುದೇ ಇಲ್ಲ’ ಎಂದು ಪ್ರಾಂಶುಪಾಲರು ಅಮ್ಮನಿಗೆ  ಹೇಳಿದ್ದರು. ಸಂಜೆ ಮನೆಗೆ ಹೋದೆ. ಕಾದಿತ್ತು. ಬಾಸುಂಡೆ ಬರುವ ಹಾಗೆ ಅಮ್ಮ ಹೊಡೆದಳು. ಅಂದಿನಿಂದ ಬೈದರೂ ಸರಿ, ಎಲ್ಲೇ ಹೋದರೂ ಮನೆಯಲ್ಲಿ ಹೇಳಿಯೇ ಹೋಗುತ್ತಿದ್ದೆ. ಉಳಿದಂತೆ, ಸಿನಿಮಾ ಶೂಟಿಂಗ್‌ ವೇಳೆ ಅಪ್ಪ ಸದಾ ಜೊತೆಗಿರುತ್ತಿದ್ದರು.

*ಮದುವೆ, ಮಕ್ಕಳು ಹೇಗಿದೆ ಜೀವನ?
ಶಾಲೆಯಲ್ಲಿ ನನ್ನ ಸೀನಿಯರ್‌ ಆಗಿದ್ದ ಹುಡುಗನನ್ನೇ ಕೈಹಿಡಿದದ್ದು. ಹಾಗೆಂದು ಲವ್‌ ಮ್ಯಾರೇಜ್ ಅಂದುಕೊಳ್ಳಬೇಡಿ. ಅಪ್ಪಟ ಅರೇಂಜ್‌ ಮ್ಯಾರೇಜ್‌ ನಮ್ಮದು. ನನ್ನ ಗಂಡ ಕಾಮೇಶ್‌ ರಾಘವೇಂದ್ರ. ಚೆನ್ನಾಗಿ ಓದಿದ್ದಾರೆ. ಶಾಲೆಯಲ್ಲಿ ಅವರ ಉತ್ತರ ಪತ್ರಿಕೆಯನ್ನು ನೋಟಿಸ್‌ ಬೋರ್ಡ್‌ನಲ್ಲಿ ಹಾಕುತ್ತಿದ್ದರು. ಬರೆದರೆ ರಾಘವೇಂದ್ರನ ಹಾಗೆ ಉತ್ತರ ಬರೆಯಬೇಕೆಂದು ಹೇಳುತ್ತಿದ್ದರು.

ಆಗೆಲ್ಲಾ, ‘ಯಾವನೇ ಇವನು? ಭಯಂಕರ ಉಪದೇಶ ಕೊಡ್ತಾನೆ. ಇವನ್ನ ಮದುವೆ ಆದವಳು ಸತ್ತಳು’ ಎಂದು ಸ್ನೇಹಿತೆಗೆ ಹೇಳುತ್ತಿದ್ದೆ. ಆಶ್ಚರ್ಯ ಅಂದರೆ, ಅವರನ್ನೇ ಮದುವೆ ಮಾಡಿಕೊಂಡೆ. ನನ್ನ ಸ್ನೇಹಿತರು ಈಗಲೂ ರೇಗಿಸುತ್ತಾರೆ, ‘ಬೇರೆಯವರಿಗೆ ಏನೂ ಹೇಳ ಬೇಡ, ಅದು ನಿನಗೇ ಆಗುತ್ತೆ’ ಅಂತ.

ಅವರು ಮಿತಭಾಷಿ. ಫನ್‌ ಲವಿಂಗ್‌. ಹೆಚ್ಚು ಮಾತಾಡಿದ್ದರೆ, ಅದು ನನ್ನೊಂದಿಗೆ ಮಾತ್ರ. ಅವರ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್‌. ನಾನೇ ಮೊದಲ ಆದ್ಯತೆ ಆಗಬೇಕು. ನಂತರದ ಆದ್ಯತೆ ಮಕ್ಕಳಿಗೆ. ಅವರು ನನ್ನ ಜತೆ ಮಾತ್ರ ಸಿನಿಮಾ ನೋಡಬೇಕು, ಎಂಥದೇ ಮುಖ್ಯ ಮೀಟಿಂಗ್‌ ಇದ್ದರೂ ನಾನು ಕರೆ ಮಾಡಿದಾಗ ಮಾತಾಡಬೇಕು. ಹೀಗೆ ಒಂದಷ್ಟು ಪಟ್ಟಿ ಕೊಟ್ಟಿದ್ದೀನಿ. ಎಲ್ಲಕ್ಕೂ ಹೂ ಎನ್ನುತ್ತಾರೆ. ಮದುವೆಗೆ ಮೊದಲು ಅಪ್ಪ ಜೊತೆಗಿದ್ದರು. ಈಗ ಭಾವನಾತ್ಮಕವಾಗಿ ಗಂಡನನ್ನು ಅವಲಂಬಿಸಿದ್ದೇನೆ.  ಖುಷಿಯಾಗಲಿ, ದುಃಖ ಆಗಲಿ, ಅವರೊಟ್ಟಿಗೆ ಹಂಚಿಕೊಳ್ಳುತ್ತೇನೆ.

* ನೀವು ಬಲು ಘಾಟಿ. ಗಂಡನ ಮನೆಯವರ ಜೊತೆಗೆ ಹೊಂದಾಣಿಕೆ ಆಯ್ತ?
ಬಹುಶಃ ನಮ್ಮ ತದ್ವಿರುದ್ಧ ಸ್ವಭಾವಗಳೇ ನಮ್ಮ ಬಾಂಧವ್ಯವನ್ನು ಗಟ್ಟಿ ಮಾಡಿದ್ದು. ಆರಂಭದಲ್ಲಿ ನಾನು ನಕ್ಕರೆ ಮನೆಯವರೆಲ್ಲರೂ ಗಾಬರಿ ಬೀಳುತ್ತಿದ್ದರು. ನನ್ನದು ಸದಾ ಮಾತು, ಜೋರು ನಗು. ಅವರದು ಕಡಿಮೆ ಮಾತು, ಮೆಲ್ಲನೆ ನಗು. ಬರಬರುತ್ತಾ ಎಲ್ಲವೂ ಬೆರೆಯಿತು.

*ಅತ್ತೆ–ಸೊಸೆ ಕಾಂಬಿನೇಷನ್ ಹೇಗಿದೆ?
ಅತ್ತೆ ನನಗೆ ಎರಡನೇ ದೇವರಿದ್ದಂತೆ.

*ಡಬಲ್ ಧಮಾಕಾದಂತೆ ಅವಳಿ ಮಕ್ಕಳು ನಿಮಗೆ?
ಹೌದು. ಅವಳಿ ಗಂಡು ಮಕ್ಕಳು. ಯಶ್‌ ಮತ್ತು ರಾಘವೇಂದ್ರ. ಒಬ್ಬ ನೋಡಲು ನನ್ನ ಹಾಗೇ ಇದ್ದಾನೆ. ಆದರೆ ಅವರಪ್ಪನ ಸ್ವಭಾವ. ಮತ್ತೊಬ್ಬ ನೋಡಲು ಅವರಪ್ಪನ ಹಾಗೆ, ಆದರೆ ನನ್ನ ಹಾಗೆ ತುಂಟ. ಸದ್ಯ ಇಬ್ಬರೂ ತುಂಟರೇ. ಅವರಿಂದ ನಮ್ಮ ಬದುಕು ಸಂಪೂರ್ಣ ಅನಿಸುತ್ತೆ.

*ಮೊದಲ ಕ್ರಶ್‌?
ಸುದೀಪ್ ನಟನೆಯ ‘ಹುಚ್ಚ’ ಸಿನಿಮಾ ಬಂದಾಗ 44 ಬಾರಿ ನೋಡಿದ್ದೇನೆ. ಅವರೇ ನನ್ನ ಮೊದಲ ಕ್ರಷ್.

*ಬಹುಶಃ ನೀವು ಕನ್ನಡ ಚಿತ್ರರಂಗದ ಅತಿ ಎತ್ತರದ ನಟಿ. ಇದರಿಂದ ಸಮಸ್ಯೆ ಆಗಿದೆಯೇ?
ಇಲ್ಲ, ನನ್ನ ಎತ್ತರದ ಬಗ್ಗೆ ಖುಷಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT