ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸವರ್ಷದ ವೆಲ್‌ಕಮ್ಮು ಅಂದ್ರೆ ಸುಮ್ನೆ ಅಲ್ಲ...

Last Updated 28 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅತ್ತ ಮೊನ್ನೆ ಬಿದ್ದ ಮಳೆಗೆ ಚಾವಣಿ ಸೋರಿ ಗೋಡೆ ಮೇಲಿನ ಕ್ಯಾಲೆಂಡರ್ ಅರ್ಧ ಒದ್ದೆಯಾಗಿ ಕೊನೆಯ ದಿನಗಳನ್ನು ಎಣಿಸುತ್ತ ಚಳಿಗೆ ನಡುಗುತ್ತಿದೆ... ಇತ್ತ ಹೊಸ ವರ್ಷ ಈಗಷ್ಟೇ ಎದ್ದು ಮೈಮುರಿದು ಆಕಳಿಸುವ ಸದ್ದೂ ಕೇಳುತ್ತಿದೆ. ಬೀಸುವ ಚಳಿಗಾಳಿಗೆ ತೂಗಾಡುತ್ತಿರುವ ಹಳದಿ ಎಲೆ ಕಳಚಿಬೀಳುವ ಭಯದಿಂದ ಉದ್ವಿಗ್ನಗೊಂಡಿರುವಾಗಲೇ ಎಳೆಬಿಸಿಲಿಗೆ ಮೈಯೊಡ್ಡಿ ಹೊಸ ಹೊಳಪನ್ನು ಗಳಿಸಿಕೊಂಡ ಹಿಗ್ಗಿನಲ್ಲಿದೆ ಚಿಗುರೆಲೆ... ದಟ್ಟ ಹಸಿರಿನ ಗಟ್ಟಿ ಎಲೆಗೋ ಹದವಾದ ತೂಗಾಟವೇ ಪರಮಸತ್ಯ... ಅದರ ಪಾಲಿಗೆ ಹಣ್ಣೆಲೆಯ ಜೀವಸಂಕಟ ಚಿಗುರೆಲೆಯ ಹಸಿತುಂಟತನ ಎರಡೂ ಮಿಥ್ಯೆ...

ಹೋಗ್ಲಿ ಬಿಡಿ, ಇನ್ನೆಷ್ಟು ಅಂತ ಹಿಂಗೆ ಹಳೆ ಸವಕಲು ರೂಪಕಗಳಿಗೆ ತಲೆ ಚಚ್ಚಿಕೊಳ್ಳುತ್ತಾ ಕೂಡುವುದು... ಇದ್ರಲ್ಲಿ ಹಣ್ಣೆಲೆ ಯಾರು, ಚಿಗುರೆಲೆ ಯಾರು... ಹಸಿರೆಲೆನೇ ತುಂಬಾ ಇಂಪಾರ್ಟೆಂಟಾ ಅಂತೆಲ್ಲ ಮೂರ್ ಮೂರು ಸಲ ತಿರುಗಾಮುರುಗಾ ಓದಿ ಇಲ್ಲದ ಸುಡುಗಾಡು ಶುಂಠಿಗಳನ್ನೆಲ್ಲ ಕಲ್ಪನೆ ಮಾಡ್ಕೊಂಡು ಅರ್ಥ ಮಾಡ್ಕೊಳ್ಳೋ ಸರ್ಕಸ್ಸೇ ಬೇಡ... ಗಡಿಯಾರದ ಮುಳ್ಳು, ಗಟ್ಟಿ ಕಾಳುಗಳ ಮಧ್ಯದ ಜೊಳ್ಳು, ಭವಿಷ್ಯವೆಂಬ ಗಾಂವ್ಟಿ ಕಳ್ಳು ಅಂತೆಲ್ಲ  ನವ್ಯಕಾವ್ಯದ ಭಾಷೆಯಲ್ಲಿ ಮಾತಾಡಿ ಇರುವೆ ಬಿಟ್ಟುಕೊಳ್ಳುವುದನ್ನು ಬಿಟ್ಟು ಡೈರೆಕ್ಟು ವಿಷಯಕ್ಕೆ ಬರೋಣ...

ಅಷ್ಟೇ ರೀ, ಇಪ್ಪತ್ತೊಂಬತ್ತು, ಮೂವತ್ತು, ಮೂವತ್ತೊಂದು... ಲೆಕ್ಕ ಹಾಕಿ ಮೂರನೇ ದಿನ ಮಕಾಡೆ ಮಲಗಿ ನಡುರಾತ್ರಿಯಾಗುವಷ್ಟರ ಹೊತ್ತಿಗೆ 2016ನೇ ವರ್ಷ ಹಳೆ ಐನೂರು ಸಾವಿರದ ನೋಟಿನ ಹಾಗೆ ರದ್ದಾಗಿರುತ್ತದೆ, ರದ್ದಿಯಾಗಿರುತ್ತದೆ. 2017ನೇ ವರ್ಷ ಸಕಲ ಸಂಭ್ರಮ ಸಡಗರ ಮತ್ತು ಗಮ್ಮತ್ತುಗಳೊಂದಿಗೆ ಬಂದು ಗುದ್ದಿಯೂ ಆಗಿರುತ್ತದೆ.

ಖರೆ ಅಂದ್ರೆ ವಿಷಯ ಇಷ್ಟೇ. ಒಂಚೂರು ಹೆಚ್ಚಿಲ್ಲ. ಕಮ್ಮಿಯೂ ಅಲ್ಲ. ಆದರೆ ನಾವಿದ್ದೀವಲ್ಲ, ಹಂಗೆಲ್ಲ ಹೆಚ್ಚು ಕಮ್ಮಿಯಾಗದೆ ಸುರಳೀತಗೊಳ್ಳಲು ಬಿಟ್ಟರೆ ನಮಗಷ್ಟೇ ಅಲ್ಲ, ಹೊಸವರ್ಷಕ್ಕೂ ಅವಮಾನ ಅಲ್ವಾ? ನಮ್ಮ ಒಣ ಒಣ ಬದುಕಿನಲ್ಲಿ ಹೀಗೆ ಖುಷಿಪಡಲಿಕ್ಕೆ, ಸಂಭ್ರಮವನ್ನು ಮನಃಪೂರ್ತಿ ಆಚರಿಸಲಿಕ್ಕೆ ಸಿಕ್ಕುವ ಅಪರೂಪದ ಕಾರಣಗಳನ್ನೂ ನಿರ್ಲಕ್ಷಿಸಿದರೆ ಏನು ಚಂದ ಹೇಳಿ?

ಅದರಲ್ಲಿಯೂ ಎಡ–ಬಲಗಳೆಂದು ಹೋಳಾಗಿ ಹೊಡೆದಾಡಿಕೊಳ್ಳುತ್ತಿರುವ ಇಂದಿನ ಪರಮ ಘೋರ ದುರ್ಬರ ಪರಿಸ್ಥಿತಿಯಲ್ಲಿ ಹೊಸ ವರ್ಷದ ವೆಲ್‌ಕಮ್ಮಿನ ನೆಪದಲ್ಲಿಯಾದರೂ ‘ಮದ್ಯ’ಮಮಾರ್ಗಿಗಳಾಗುವುದು ದೇಶಭಕ್ತ ಯುವ ಬ್ಯಾಚುಲರುಗಳೆಲ್ಲರ ಪರಮೋಚ್ಛ ಹಕ್ಕು ಮತ್ತು ಕರ್ತವ್ಯ ಎಂದು ನಾನಂತೂ ನಂಬಿದ್ದೇನೆ.

ನನ್ನ ಈ ನಂಬಿಕೆಯನ್ನು ಸಾಧ್ಯವಾದಷ್ಟೂ ‘ಮೇರೆ ಪ್ಯಾರೇ ದೇಶವಾಸಿಯೋ’ಗಳಿಗೆ ಮನದಟ್ಟು ಮಾಡಿ ಅವರನ್ನೂ ಈ ಕರ್ತವ್ಯಕ್ಕೆ ಅಣಿಗೊಳಿಸಬೇಕು ಎಂಬ ಗುರುತರ ಜಬಾವ್ದಾರಿಯಿಂದ ನಿನ್ನೆ ಮಾರುಕಟ್ಟೆಯಲ್ಲಿ ಸಿಕ್ಕ ನನ್ನ ಪರಮಾಪ್ತ ಸ್ನೇಹಿತನ ಬಳಿ ‘ಏನ್‌ ಮಚ್ಚಿ, ಇಯರೆಂಡ್‌ ಪ್ಲ್ಯಾನಿಂಗ್‌? ಕಳೆದ ವರ್ಷ ಮಾಡಿದ ಹಾಗೆನೇ ಮಾಡೋಣ್ವಾ?’ ಎಂದು ಕೇಳಿದೆ. ಕಳೆದ ಸಲದ ನಮ್ಮ ವರ್ಷಾಂತ್ಯದ ಕಾರ್ಯಕ್ರಮದ ನೆನಪಲ್ಲಿ ಒಮ್ಮಿಂದೊಮ್ಮೆಲೇ ಸರ್ಕಾರಿ ಸಿಸ್ಕಾ ಎಲ್‌ಇಡಿ ಬಲ್ಬ್‌ನಂತೇ ಬೆಳಗಿದ ಅವನ ಮುಖ ಅಷ್ಟೇ ಬೇಗ ಸರ್ಕಾರಿ ಬಲ್ಬಿನ ಹಾಕಿ ನಂದಿಹೋಯ್ತು.

‘ಅದು... ಅದು...’ ಎಂದು ತಡವರಿಸುತ್ತಾ ಕತ್ತು ಕೊಂಚ ಓರೆ ಮಾಡಿ ಅತ್ತ ನೋಡಿದ. ಅಲ್ಲಿ ಅವನ ಹೊಸ ಹೆಂಡ್ತಿ (ಹಳೆ ಹೆಂಡ್ತಿ ಬೇರೆ ಇರಲಿಲ್ಲ) ತರಕಾರಿ ಅಂಗಡಿಯಲ್ಲಿ ನಿಂತು ಕೊಳೆತು ಹೋಗದ ಟೊಮೆಟೊವನ್ನು ಆರಿಸಿ ಆರಿಸಿ ತಕ್ಕಡಿಯಲ್ಲಿ ತುಂಬುತ್ತಿದ್ದಳು. ಕಳೆದ ತಿಂಗಳಷ್ಟೇ ಮದುವೆಯಾಗಿದ್ದ ಅವನ ಪ್ರತಿಕೂಲ ಪರಿಸ್ಥಿತಿ ಅರ್ಥವಾಗಿ ನನಗೆ ನಗು ಉಕ್ಕಿತು. ಮದುವೆಯೆಂಬ ಹೊಸ ಸರ್ಕಾರ ಅವನ ‘ಕಪ್ಪು ಚಟ’ಗಳನ್ನೆಲ್ಲ ಜಪ್ತಿಮಾಡಿತ್ತು.

ಅದನ್ನು ನೋಡಿ ಥಟ್ಟನೇ ಸ್ವರ ಬದಲಾಯಿಸಿದ ಅವನು, ‘ಹೊಸ ವರ್ಷ ಅಂತೆಲ್ಲ ಯಾಕೋ ಆಚರಿಸಬೇಕು? ಪ್ರತಿ ದಿನ ಪ್ರತಿ ಕ್ಷಣವೂ ಹೊಸತೇ ಅಲ್ವಾ?’ ಎಂದು ವೇದಾಂತದ ಮುಖವಾಡ ತೊಟ್ಟುಕೊಳ್ಳಲು ಯತ್ನಿಸಿದ. ನಾನು ಸುಮ್ಮನೇ ಮುಖ ನೋಡಿದೆ. ಕಣ್ಣು ತಪ್ಪಿಸುತ್ತಾ ಎತ್ತೆತ್ತಲೋ ನೋಡುತ್ತಾ ‘ಸ್ವಲ್ಪ ಜವಾಬ್ದಾರಿ ಬೆಳೆಸಿಕೊಳ್ಳೋ... ಇಲ್ಲಾಂದ್ರೆ ಮುಂದೆ ಕಷ್ಟ ಆಗತ್ತೆ. ಹೊಸ ವರ್ಷವೇನು ಮತ್ತೆ ಮತ್ತೆ ಬರತ್ತೆ. ಆದ್ರೆ ನಾವು ಕಳೆದುಕೊಂಡ ಸಮಯ, ನಂಬಿಕೆ ಮತ್ತೆ ಗಳಿಸಿಕೊಳ್ಳಲಿಕ್ಕಾಗುವುದಿಲ್ಲ ಅಲ್ವಾ?’ ಎಂದು ಉಪದೇಶಾಮೃತವನ್ನೂ ನೀಡಿದ.

ಕೆಲವೇ ತಿಂಗಳ ಹಿಂದೆ ಜತೆ ಜತೆಯಾಗಿ ಅಪಾಪೋಲಿಯಾಗಿ ಅಲೆದಾಡುತ್ತಿದ್ದವ, ಬೆಂಗಳೂರಿನ ಎಲ್ಲ ಥಿಯೇಟರುಗಳಿಗೆ ಶಾರ್ಟ್‌ಕಟ್‌ ದಾರಿಗಳನ್ನು ಕಂಡುಕೊಂಡು ನೈಟ್‌ಷೋಗೆ ಹೋಗುವ ನಮ್ಮ ಇಂಗಿತವನ್ನು ಟ್ರಾಫಿಕ್ಕಿನ ಸಾಗರದ ನಡುವೆಯೂ ಗುರಿತಲುಪಿಸುತ್ತಿದ್ದ ಅಂಬಿಗನಂತಿದ್ದವ, ತಡರಾತ್ರಿ ತೀರ್ಥಸೇವನೆ ಮುಗಿಸಿ, ಹೆಲ್ಮೆಟ್ಟಿಲ್ಲದೇ ಮನೆಗೆ ಹೋಗುವಾಗ ಟ್ರಾಫಿಕ್‌ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಬಲ್ಲ ಚತುರ ಗೃಹಸ್ಥಾಶ್ರಮಕ್ಕೆ ಬಡ್ತಿ ಸಿಕ್ಕಿದ್ದೇ ಒಮ್ಮಿಂದೊಮ್ಮೆಲೇ ಶಸ್ತ್ರಸನ್ಯಾಸ ಸ್ವೀಕರಿಸಿ ಸದ್ಗುಣಸಂಪನ್ನ ಪರಮಪವಿತ್ರ ಜವಾಬ್ದಾರಿಯುತ ಪತಿಯಾಗಿ ರೂಪುಗೊಂಡಿದ್ದ.

ಹೊಸವರ್ಷ ಪಾರ್ಟಿ ಮಾಡುವುದಕ್ಕೂ ಜವಾಬ್ದಾರಿಗೂ ಏನು ಸಂಬಂಧ ನನಗೆ ಅರ್ಥವಾಗಲಿಲ್ಲ. ಆದರೆ ಹಂಗೆಲ್ಲ ಸಂಸಾರಿಗಳ ಮಾತುಗಳಲ್ಲಿ ಅರ್ಥ ಹುಡುಕುವ ಅಪಾಯಕಾರಿ ಕೆಲಸಕ್ಕಿಳಿಯುವುದು ಶೋಭಾಯಮಾನ ಸಂಗತಿ ಅಲ್ಲ ಎಂದು ಸುಮ್ಮನಾದೆ. ಆದರೆ ಮೊನ್ನೆ ಮೊನ್ನೆಯವರೆಗೂ ನಮ್ಮನ್ನೆಲ್ಲ ಬೇಜವಾಬ್ದಾರಿಗಳು ಎಂದು ಬೈಯುವ ದೊಡ್ಡವರನ್ನು ಅಪಹಾಸ್ಯ ಮಾಡುತ್ತಿದ್ದ ಗೆಳೆಯನೇ ಸಭ್ಯರ ಗುಂಪಿಗೆ ಪಕ್ಷಾಂತರ ಮಾಡಿದ್ದು ಮಜಾ ಅನ್ನಿಸಿತು.

ಪ್ರತಿಸಲದ ಹೊಸ ವರ್ಷವೂ ಇಂಥ ಹಲವು ಪಕ್ಷತ್ಯಾಗ, ಪಕ್ಷಾಂತರ, ಪಕ್ಷಪ್ರವೇಶಗಳಿಗೆ ಸಾಕ್ಷಿಯಾಗುತ್ತದೆ. ಈ ‘ದೊಡ್ಡವರ’ ಕ್ಯಾಟಗೆರಿಯವರಂತೂ ತಮ್ಮ ಪ್ರಾಯದ ಕಾಲದಲ್ಲಿ ಹೊಸ ವರ್ಷ ಹೇಗೆ ಕಳೆಯುತ್ತಿದ್ದೆವು, ಅದನ್ನು ಎಷ್ಟು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೆವು ಎಂದು ನೆನಪಿಸಿಕೊಳ್ಳುವುದು ಮತ್ತು ಈಗಿನ ಪೀಳಿಗೆಯ ಅಯೋಗ್ಯರು ಹೇಗೆ ಬರೀ ಮೋಜು ಮಸ್ತಿಗಳಿಗಷ್ಟೇ ಅದನ್ನು ಸೀಮಿತಗೊಳಿಸಿದ್ದಾರೆ, ಕಾಲ ಹೇಗೆ ಹಾಳಾಗಿ, ಜಗತ್ತು ಯೆಕ್ಕುಟ್ಟು ಹೋಗುತ್ತಿದೆ ಎನ್ನುವುದನ್ನು ಪರಿಪರಿಯಾಗಿ ವಿವರಿಸುವುದರಲ್ಲಿಯೇ ಕಳೆಯುತ್ತಾರೆ. ಅವರಿಗೆ ಪ್ರತಿ ಹೊಸ ವರ್ಷವೂ ಜಗತ್ತಿನ ಒಳ್ಳೆಯತನದ ವಿನಾಶದ ಪ್ರಪಾತದತ್ತ ಹಾಕಿದ ಮತ್ತೊಂದು ದಾಪುಗಾಲಾಗಿಯೇ ಕಾಣುತ್ತದೆ. ನ್ಯೂ ಇಯರ್‌ ಸೆಲೆಬ್ರೇಷನ್‌ ಅಂತೂ ಕೇಳಲೇಬೇಡಿ...

‘ಏನೋ ಆಗಿನ ಕಾಲದಲ್ಲಿ ಒಂದು ಸೆಲೆಬ್ರೇಷನ್‌ ಎನ್ನುವುದಕ್ಕೆ ಬೇರೆಯದೇ  ಅರ್ಥವಿತ್ತು... ಯುಗಾದಿ ಹಬ್ಬವನ್ನು ಎಷ್ಟು ಚಂದಗೆ ಆಚರಿಸುತ್ತಿದ್ದೆವು. ಈ ಇಂಗ್ಲಿಷರ ನ್ಯೂ ಇಯರ್ ಎಲ್ಲಾ ಇತ್ತೀಚೆಗೆ ಬಂದಿದ್ದು. ಅಲ್ಲಾ ಕುಡಿದು, ಕುಣಿದು ರಸ್ತೆ ಮೇಲೆ ಬಿದ್ಕೊಂಡ್ರೆ ಅದು ಸೆಲೆಬ್ರೇಷನ್ನಾ? ಇವರೆಲ್ಲ ನಮ್ಮ ದೇಶದ ಪ್ರಜೆಗಳು...’ ಹೀಗೆ ಪುಂಖಾನುಪುಂಖವಾಗಿ ಟೀಕಾಪ್ರವಾಹ ಹರಿಯುತ್ತಲೇ ಇರುತ್ತದೆ. ಹಾಗೆ ಜಗದೆಲ್ಲ ಆಗುಹೋಗುಗಳ ಜವಾಬ್ದಾರಿಗಳನ್ನು ದೇವರ ಕೈಯಿಂದ ಡೈರೆಕ್ಟು ನಮ್ಮ ಹೆಗಲಿಗೇ ವರ್ಗಾಯಿಸಿಕೊಂಡಂತಿರುವ ಇವರ ಮಾತನ್ನು ಗಂಭೀರವಾಗಿ ತೆಗೆದುಕೊಂಡರೆ ಜಗತ್ತೇನೂ ಬದಲಾಗುವುದಿಲ್ಲ. ಹೆಚ್ಚೆಂದರೆ ಇನ್ನು ಸ್ವಲ್ಪ ವರ್ಷಗಳ ನಂತರ ನಾವೂ ಅವರ ಹಾಗೆಯೇ ಮುದುಕರಾಗಬಹುದು ಅಷ್ಟೆ!

ಅಷ್ಟಕ್ಕೂ ಹೊಸ ವರ್ಷದ ಆಗಮನಕ್ಕೆ ಕುಡಿದು ಕುಣಿಯುವವರೇ ಮುಂದೆ ವರ್ಷವಿಡೀ ನೊಗ ಕಟ್ಟಿಕೊಂಡಂತೆ ಯಾವ್ಯಾವುದೋ ಕಂಪೆನಿಗಳಲ್ಲಿ, ಹೋಟೆಲು, ಥಿಯೇಟರುಗಳಲ್ಲಿ, ಆಸ್ಪತ್ರೆ, ಬಸ್‌ಸ್ಟ್ಯಾಂಡುಗಳಲ್ಲಿ ನೊಗ ಕಟ್ಟಿಕೊಂಡಂತೆ ದುಡಿಯುತ್ತಾರೆ, ಜೈಲುಕೋಣೆಯಂಥ ಕಾಲೇಜುಗಳಲ್ಲಿ ಅಂಕಗಳಿಕೆಯ ಗಾಣಕ್ಕೆ ಸಿಲುಕಿ ಪುಸ್ತಕಗಳ ಪುಟದೊಳಗಡೆಯೇ ಸುತ್ತುತ್ತಿರುತ್ತಾರೆ ಎನ್ನುವುದು ಅವರ ಗಮನಕ್ಕೆ ಬರುವುದೇ ಇಲ್ಲ. ಅಂಥವರ ಪಾಲಿಗೆ ಹೊಸ ವರ್ಷವೆಂಬುದು ಒಂದು ವರ್ಷದ ಸಂತೆಮಧ್ಯದ ಭೀಕರ ಏಕಾಂತದ ಚೌಕಟ್ಟನ್ನು ಮುರಿದು ಉತ್ಸಾಹದ ನಕ್ಷತ್ರಗಳನ್ನು ಬಾಚಿ ಮತ್ತೊಂದು ವರ್ಷಕ್ಕೆ  ಸಾಲುವಷ್ಟು ಜೀವನೋತ್ಸಾಹವನ್ನು ಎದೆಯೊಳಗೆ ತುಂಬಿಕೊಳ್ಳುವ ದಿವ್ಯಗಳಿಗೆ.

ಹಳೆ ಹುಡುಗಿಯನ್ನು ಕಳೆದುಕೊಂಡವರಿಗೆ ಆ ನೆನಪನ್ನು ಮರೆಯುವ ಶಪಥಗೈಯಲು, ಹೊಸಹುಡುಗಿಯನ್ನು ಬೀಳಿಸಿಕೊಳ್ಳಲು ತಿಪ್ಪರಲಾಗ ಹಾಕುತ್ತಿರುವವರಿಗೆ ‘ಏನೇ ಆದ್ರೂ ಕ್ಯಾಚ್‌ ಹಾಕ್ಕೊಂಡೇ ಹಾಕ್ಕೋತಿನಿ ಮಗಾ?’ ಎಂದು ಭೀಷ್ಮ ಪ್ರತಿಜ್ಞೆ ಮಾಡುವುದಕ್ಕೆ,  ತಿಂಗಳ ನಂತರ ಬರುವ ಪ್ರೇಮಿಗಳ ದಿನಾಚರಣೆಯ ಅಂತಿಮ ಸುತ್ತಿನ ಹಣಾಹಣಿಗೆ ಸಿದ್ಧತೆ ನಡೆಸಿಕೊಳ್ಳುವುದಕ್ಕೆ ಡಿಸೆಂಬರ್‌ 31ರ ರಾತ್ರಿಯಷ್ಟು ಶುಭ ಸಂದರ್ಭ ಇನ್ನೊಂದಿರಲು ಸಾಧ್ಯವೇ? ಅದೊಂದು ನಡುರಾತ್ರಿಗೆ ಮಾತ್ರ ಗಾಯಗೊಂಡ ಹೃದಯಗಳಿಗೆ ಮುಲಾಮಾಗುವ ಜತೆಜತೆಗೆ ಇನ್ನಷ್ಟು ಮಾನಸಿಕ ಅಪಘಾತಗಳಿಗೆ ರಸ್ತೆಯನ್ನು ಅಣಿಮಾಡುವ ಶಕ್ತಿ ಇರುವುದು.

ಹೊಸ ವರ್ಷಾಚರಣೆಯನ್ನು ಹಳಿಯುವವರ ರದ್ದಿ ಮನಸ್ಥಿತಿ ಹೊರತುಪಡಿಸಿ ಇನ್ನೊಂದು ವರ್ಗವೂ ಇದೆ. ಅವರು ಈಗಷ್ಟೇ ಹೊಸತನದ ಜಗತ್ತಿಗೆ ಇಣುಕುತ್ತಿರುವ ಹದಿಹರೆಯದ ಎಳೆನಿಂಬೇಕಾಯಿಗಳು. ಆಗಷ್ಟೇ ಹೈಸ್ಕೂಲು ಮುಗಿಸಿ ಕಾಲೇಜಿಗೆ ಬಂದವರು, ಸಣ್ಣ ಊರಿನಲ್ಲಿ ಪಿಯುಸಿ ಮುಗಿಸಿ ಡಿಗ್ರಿ ಗಳಿಕೆಗೆ ನಗರಕ್ಕೆ ಬಂದವರು, ಪಿಯುಸಿಯಲ್ಲಿ ಎರಡು ವಿಷಯದಲ್ಲಿ ಡುಮ್ಕಿ ಹೊಡೆದು ಮಾರ್ಕ್ಸ್‌  ಕಾರ್ಡಿನ ಬ್ಲಾಕ್‌ ಅಂಡ್‌ ವೈಟ್‌ ಅಕ್ಷರಗಳಿಗಿಂತ ಬದುಕಿನ ಪಾಠಶಾಲೆಯ ಕಲರ್‌ಫುಲ್‌ ಪಠ್ಯವೇ ಲೇಸು ಎಂದು ನಡುರಾತ್ರಿ ಹೊಗೆಯೆಬ್ಬಿಸಿ ಬರುವ ಲಾರಿಗಳನ್ನು ಹತ್ತಿ ಮಹಾನಗರದಲ್ಲಿ ತಮ್ಮನ್ನು ಬಿತ್ತಿಕೊಂಡವರು... ಇವರಿಗೆಲ್ಲ ಹೊಸ ವರ್ಷವೆಂಬುದು ಬೇರೆಯದೇ ಬೆರಗು.

ಅದು ಅವರಿಗೆ ತಮ್ಮ ಸ್ವಾತಂತ್ರ್ಯವನ್ನೂ– ಹಿರಿಯರ ಹಿಡಿತದಿಂದ ಸ್ವತಂತ್ರಗೊಳ್ಳುವ ಸಾಮರ್ಥ್ಯವನ್ನೂ ಸಾಬೀತುಮಾಡುವ ಅಖಾಡವೂ ಹೌದು. ಸ್ವಲ್ಪ ಆಸಕ್ತಿಯಿಂದ ಪ್ರಾರ್ಥಿಸಿದರೂ ಸಾಕು, ಹೊಸ ವರ್ಷದ ಆಚರಣೆಯ ಯುವ ಸಂಪ್ರದಾಯದ ಸಕಲ ಕೈಂಕರ್ಯಗಳನ್ನು ಬೋಧಿಸುವ, ತರಬೇತಿ ನೀಡಿ ಅಣಿಗೊಳಿಸುವ ಗುರುವೊಬ್ಬ ಅವರಿದ್ದಲ್ಲಿಯೇ ಸಿಕ್ಕುಬಿಡುತ್ತಾರೆ. ಬ್ಯಾಚುಲರ್‌ ಪಾರ್ಟಿಯನ್ನು ನೋಡಿದರೆ ಅದರಲ್ಲಿ ಒಬ್ಬನಾದರೂ ಹೊಸ ಹುಡುಗ ಇದ್ದೇ ಇರುತ್ತಾನೆ.

ಬಹುಶಃ ಇಂದಿಗೂ ಸಂಪ್ರದಾಯಬದ್ಧವಾಗಿ ಗುರುಮುಖೇನ ಕಲಿಯುವ ವಿದ್ಯೆ ಅಂದರೆ ಅದೊಂದೇ ಇರಬೇಕು. ಈ ಸತ್‌ಸಂಪ್ರದಾಯಕ್ಕೆ ಪಡ್ಡೆಗಳ ಅಡ್ಡಾದಲ್ಲಿ ‘ದೀಕ್ಷೆ ಕೊಡುವುದು’ ಎಂಬ ಹೆಸರೂ ಇದೆ. ರಾಜಕಾರಣಿಗಳು ಸಾಮೂಹಿಕ ವಿವಾಹ ಏರ್ಪಡಿಸುತ್ತಾರಲ್ಲಾ, ಹಾಗೆಯೇ ಹೊಸ ವರ್ಷ ಎನ್ನುವುದು ಇಂಥ ಹಲವು ಸಾಮೂಹಿಕ ದೀಕ್ಷಾ ಪ್ರದಾನಗಳಿಗೆ ನೆಪವಾಗುತ್ತದೆ ಎನ್ನುವುದು ಖಂಡಿತ ನಿರ್ಲಕ್ಷಿಸಬೇಕಾದ ಸಂಗತಿ ಅಲ್ಲವೇ ಅಲ್ಲ.

ಮತ್ತೆ ರೂಪಕದ ಚಾಳಿಗೇ ಮರಳುವುದಾದರೆ ಹೊಸ ವರ್ಷ ಎನ್ನುವುದು ಒಂದು ರೀತಿಯಲ್ಲಿ ಪೊರೆ ಕಳಚಿಕೊಳ್ಳುವ, ಹೊಸ ಚರ್ಮ ಗಳಿಸಿಕೊಳ್ಳುವ ಮುಹೂರ್ತ ಸಮಯ. ಜಗತ್ತು ಕೆಟ್ಟು ಕೆರ ಹಿಡಿದು ಸರ್ವನಾಶವಾಗಿ ಹೋಗುವುದೇ ಆಗಿದ್ದರೂ ಅಥವಾ ಸರ್ವತ್ರ ಸುಧಾರಣೆಯಾಗಿ ರಾಮರಾಜ್ಯ ಉದ್ಭವಿಸುವುದೇ ಆಗಿದ್ದರೂ ಅದು ಹೊಸವರ್ಷದ ಆಚರಣೆಯ ಒಂದು ರಾತ್ರಿಯಲ್ಲಿ ಆಗುವುದಲ್ಲ ಬಿಡಿ. ಸುಮ್ಮನೇ ಅವತ್ತೊಂದು ರಾತ್ರಿ ಮಾತ್ರೆ ತೆಗೆದುಕೊಂಡು ಹಾಸಿಗೆಯಲ್ಲಿ ಬಿದ್ದು ನಿದ್ದೆ ಬರದೇ ಒದ್ದಾಡುವ ಹಿರಿಯರೆಲ್ಲ ರಸ್ತೆಗಿಳಿಯಿರಿ. ಎಲ್ಲ ಪೂರ್ವಗ್ರಹಗಳ ಕಹಿಯನ್ನು ಮರೆತು, ಈಗಾಗಲೇ ಸೆಲೆಬ್ರೇಟ್‌ ಮಾಡುತ್ತಿರುವ ಬಿಸಿರಕ್ತದ ಹುಡುಗ/ಹುಡುಗಿಯರ ಸಂಭ್ರಮದಲ್ಲಿ ಭಾಗಿಯಾಗಿ.

ಅಲ್ಲಿ, ಈ ಝಗಮಗ ಜಗತ್ತನ್ನು ಬೆರಗುಮಿಶ್ರಿತ ಆತಂಕದಿಂದ ಅಷ್ಟು ದೂರದಿಂದಲೇ ನೋಡುತ್ತಿರುವ ಹದಿಹರೆಯದ ಆ ಹೋಟೆಲ್‌ ಮಾಣಿ, ಮಾಲ್‌ನಲ್ಲಿ ಕೆಲಸ ಮಾಡುವ ಚೀನಿ ಕಣ್ಣ ಸೇಲ್ಸ್‌ ಗರ್ಲ್‌ ಅನ್ನೂ ಜತೆಗೆ ಕರೆದುಕೊಳ್ಳಿ. ಫಳಫಳ ಮಿನುಗುವ ದೀಪಗಳು ನಿಮ್ಮೊಳಗೂ ಹೊತ್ತಿಕೊಳ್ಳಲಿ... ಹೊಸ ವರ್ಷದ ಜತೆ ಜೀವಂತಿಕೆಯ ಹೊಸ ಸೆಲೆಗಳು ನಿಮ್ಮೊಳಗೆ ಹುಟ್ಟಿಕೊಳ್ಳಲಿ... ಹೊರಗಿನ ಸಂಗೀತ ಸದ್ದು ನಿಲ್ಲಿಸಿದರೂ ನಿಮ್ಮೊಳಗೆ ಜೀವನೋತ್ಸಾಹದ ಗೀತೆ ಸದಾ ನುಡಿಯುತ್ತಿರಲಿ. ಎಲ್ಲ ರೂಪಕಗಳನ್ನೂ ಮೀರಿ 2017 ನಮ್ಮೆಲ್ಲರೊಳಗೂ ಹೊಸತನದ ಅನಂತ ರೂಪು ರೇಖೆಗಳನ್ನು ಚಿತ್ರಿಸಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT