ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮತ್ತೆ ಸೋಲುವ ತಯಾರಿ

ಸೋಲಿನ ತಮಾಷೆ
Last Updated 28 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅಬ್ಬಾ ಅಂತೂ ಇಂಟರ್ನಲ್‌ ಪರೀಕ್ಷೆಗಳು ಮುಗಿದವು. ಮುಗಿದದ್ದು ಸೆಮಿಸ್ಟರ್‌ ಪರೀಕ್ಷೆ ಅಲ್ಲ, ಆದ್ರೂ ಎಂಥಾ ಖುಷಿ. ತಲೆ ಮೇಲಿದ್ದ ಒಂದು ದೊಡ್ಡ ಭಾರ ಇಳಿದಂತೆ. ಕಾಲೇಜಿಗೆ ಸೇರಿದಾಗ ಇನ್ನು ಸೀರಿಯಸ್‌ ಆಗಿ ಓದಬೇಕು, ಅವತ್ತಿನದನ್ನು ಅವತ್ತಿಗೇ ಓದಿ ಮುಗಿಸಬೇಕು, ಒಳ್ಳೆ ರ್‍ಯಾಂಕ್‌ ಪಡೆಯಬೇಕು, ಸುಮ್ಮನೆ ಕಾಲಹರಣ ಮಾಡಬಾರದು... ಹೀಗೆ ಸಾವಿರ ಆಲೋಚನೆಗಳು, ಕನಸುಗಳು, ಗಟ್ಟಿ ನಿರ್ಧಾರಗಳು.

ಮೊದಲ ಒಂದು ವಾರ, ಹೆಚ್ಚೂ ಅಂದ್ರೆ ಒಂದು ತಿಂಗಳು. ಅದೂ ಜಾಸ್ತೀನೆ. ಆದ್ರೂ ಇರಲಿ, ಅವತ್ತಿನದು ಅವತ್ತಿಗೇ ಓದೋದು, ಗ್ರಂಥಾಲಯಕ್ಕೆ ಹೋಗಿ ಓದೋದು. ಕಾಲಕ್ರಮೇಣ ಮತ್ತೆ ಅದೇ ರಾಗ. ಇಂಟರ್ನಲ್ಸ್‌ಗೆ ಇನ್ನು ಸುಮಾರು ದಿನ ಇದೆ, ಓದಿದರಾಯ್ತು ಎಂದು. ಮತ್ತೆ ಎಚ್ಚರವಾಗೋದು ಇಂಟರ್ನಲ್ಸ್‌ಗೆ ಒಂದು ವಾರವಿರುವಾಗ, ಅದಿನ್ನೂ ಮೊದಲನೆಯದಲ್ವಾ ಅದಕ್ಕೆ ಸ್ವಲ್ಪ ಬೇಗ ಮನವರಿಕೆಯಾಯ್ತು. ಒಳ್ಳೆ ಅಂಕ ಬರಲೇಬೇಕು. ಇದರಿಂದಲೇ ಎಲ್ಲರೂ ನಮ್ಮನ್ನು ಅಳೆಯೋದು ಅಂತ ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ಓದು ಮುಂದುವರೆಯುತ್ತದೆ.

ಇಂಟರ್ನಲ್ ಪರೀಕ್ಷೆ ಆಗಿದ್ದು ಅಷ್ಟೆ. ಸ್ವಲ್ಪ ವಿರಾಮ ಪಡೆಯೋಣ ಎಂದು ಪುಸ್ತಕಗಳೆಲ್ಲ ಬದಿ ಸೇರುತ್ತವೆ. ಆಗಲೇ ಒಂದು ತಿಂಗಳು ಹೇಗೆ ಕಳೀತು ಅಂತಾನೆ ತಿಳಿಯೋದಿಲ್ಲ. ಶನಿವಾರ, ಭಾನುವಾರ ಹೀಗೆ ವಾರದ ಎಲ್ಲಾ ದಿನಗಳೂ ಕ್ಲಾಸ್‌ ಕೇಳಿ ಸುಸ್ತಾಗಿರುತ್ತೆ, ಹಾಗಾಗಿ ಓದಕಾಗಿಲ್ಲ ಅನ್ನೋದು ಒಂದು ನೆಪ. ಆದರೆ ಪುಸ್ತಕ ತೆಗೆದರೆ ಓದೋಕೆ ಮನಸ್ಸೇ ಬರಲ್ಲ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌, ಹೈಕ್‌... ಹೀಗೆ ಹಲವಾರು, ‘ನೋಡಿಲ್ಲಿ ನೋಡಿಲ್ಲಿ’ ಅಂತ ಕರೀತಿರುತ್ತೆ. ಹೀಗಿರುವಾಗ ಎರಡನೇ ಇಂಟರ್ನಲ್‌ ಪರೀಕ್ಷೆಯ ವೇಳಾಪಟ್ಟಿಯನ್ನು ಬೋರ್ಡಿನ ಮೇಲೆ ನೋಡಿ ಆಶ್ಚರ್ಯ. ಅರೆ ಇಷ್ಟು ಬೇಗಾನಾ? ಇವತ್ತಿನಿಂದಲೇ ಓದಬೇಕು, ಇನ್ನು ಒಂದೇ ವಾರವಿರೋದು ಹೀಗೆಲ್ಲಾ ಯೋಚನೆ. ಮನೆಗೆ ಬಂದ ಮೇಲೆ ಯೋಚನೆಯೆಲ್ಲಾ ಬುಡಮೇಲು. ನಾಳೆ ಓದೋಣ. ಇನ್ನೂ ಒಂದು ವಾರವಿದೆಯಲ್ಲಾ, ಹೀಗೆ ದಿನ ಕಳೆದು ಇಂಟರ್ನಲ್ಸ್‌ ಹಿಂದಿನ ದಿನ ಎದ್ದು ಬಿದ್ದು ಓದೋದು. ಕೆಲವೊಂದು ವಿಷಯಗಳನ್ನು ನೋಡಿದ ಕೂಡಲೇ, ಅರೆ! ಇದು ಯಾವಾಗ ಮಾಡಿದ್ರು ಅಂತ ಆಶ್ಚರ್ಯ. ಇನ್ನೂ ಅದ್ಭುತವೆಂದರೆ, ಕೆಲವೊಂದು ಪದಗಳನ್ನು ನಾವು ಇಲ್ಲಿಯವರೆಗೂ ಕೇಳಿರುವುದೇ ಇಲ್ಲ.

ಹೇಗೋ ಓದಿ ಮರುದಿನ ಬಿಳಿ ಹಾಳೆಯಲ್ಲಿ ತೋಚಿದ್ದನ್ನೆಲ್ಲ ಗೀಚೋದು. ಯಾವತ್ತೂ ಇರದ ದೇವರ ಮೇಲಿನ ಭಕ್ತಿ ಅವತ್ತು ಬಂದಿರುತ್ತೆ. ಹಣೆಯ ಮೇಲೆ ಕುಂಕುಮ, ವಿಭೂತಿ, ಗಂಧ ರಾರಾಜಿಸುತ್ತಿರುತ್ತೆ. ಪರೀಕ್ಷಾ ಕೊಠಡಿಯಲ್ಲಿ ಒಮ್ಮೆ ದೇವರೇ ನೀನೇ ಗತಿ (ನಮಗೋ, ಮೌಲ್ಯಮಾಪನ ಮಾಡುವವರಿಗೋ) ಎಂದು ಪ್ರಶ್ನೆಪತ್ರಿಕೆಗೆ ಉತ್ತರಿಸೋದು.

ಆಯ್ಕೆಗಳಲ್ಲಿ ಯಾವುದಾದರೊಂದನ್ನು ಆರಿಸಿ ಎಂದಿದ್ದರೆ, ಯಾವುದನ್ನು ಆರಿಸುವುದು ಎಂಬ ಸಂದೇಹ. ಆ ಕ್ಷಣಕ್ಕೆ ದೇವರ ಹೆಸರು, ಶ್ಲೋಕ, ಅಂಚಿಮಿಂಚಿ ಎಲ್ಲಾ ನೆನಪಾಗುತ್ತೆ. ಪಾಪ, ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡುವವರಿಗೆ, ನಾನು ಹೀಗೆಲ್ಲ ಪಾಠ ಮಾಡಿದ್ದೀನಾ ಅನ್ನಿಸಬೇಕು, ಆ ತರಹದ ಉತ್ತರಗಳು. ಕನ್ನಡ ಮತ್ತು ಇಂಗ್ಲಿಷ್‌ ಅಂತೂ ಕೇಳೋದೇ ಬೇಡ. ನಾಟಕದ ಪಾತ್ರಧಾರಿ ಕವಿಯೂ ಆಗಿ ವಿದ್ಯಾರ್ಥಿಗಳಿಂದ ಪ್ರಶಸ್ತಿಗಳನ್ನೂ ಪಡೆದುಕೊಳ್ಳುತ್ತಾನೆ. ತಾನು ಬರೆಯದ ಕೃತಿಗಳನ್ನೂ ಬರೆಯುತ್ತಾನೆ. ನಿದ್ದೆ ಬಿಟ್ಟು ಓದಿದ ಕ್ಷಣಕ್ಕೆ ಅನ್ನಿಸುತ್ತೆ ‘ಓ ಇನ್ನು ಮುಂದೆ ಹೀಗೆ ಮಾಡಬಾರದು. ಸೆಮಿಸ್ಟರ್‌ ಪರೀಕ್ಷೆ ತುಂಬಾ ಮುಖ್ಯ. ಅದಕ್ಕೆ  ಈ ವರ್ಷದಿಂದ ಸರಿಯಾಗಿ ಓದಬೇಕು’ ಎಂದು. ಆದರೆ ಕಥೆ ಮಾತ್ರ ಹಾಗೇ ಮುಂದುವರೆದಿದೆ.

ಕಾಲ ಕಳೆದಂತೆ ಪುಸ್ತಕಗಳು ಬದಲಾದವು. ಪ್ರಾಧ್ಯಾಪಕರೂ ಬದಲಾದರು. ವಿದ್ಯಾರ್ಥಿಗಳೂ ಬದಲಾದರು. ಎಲ್ಲಾ ರೀತಿಯಲ್ಲಿಯೂ ಬದಲಾವಣೆ ಬಂದರೂ, ಆಗಿಂದಾಗ್ಗೆ ಓದಬೇಕು ಎಂದು ನಿರ್ಧಾರ ಮಾಡಿಅದನ್ನು ಮುರಿಯುವ ರೂಢಿ ಮಾತ್ರ ಬದಲಾಗಿಲ್ಲ. ಅದೊಂದು ನಿರ್ಧಾರ ವರ್ಷದಿಂದ ವರ್ಷಕ್ಕೆ ಸೋಲುತ್ತಲೇ ಮುಂದುವರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT