ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಗುಡ್ಡ ರಕ್ಷಣೆಗೆ ಸರ್ಕಾರ ಬದ್ಧತೆ ಪ್ರದರ್ಶಿಸಲಿ

Last Updated 28 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅಮೂಲ್ಯ ಔಷಧೀಯ ಸಸ್ಯಗಳು, ಅಪಾರ ಖನಿಜ ಸಂಪತ್ತನ್ನು ಒಡಲಲ್ಲಿ ಇರಿಸಿಕೊಂಡಿರುವ ಗದಗ ಜಿಲ್ಲೆಯ ಕಪ್ಪತಗುಡ್ಡಕ್ಕೆ ನೀಡಿದ್ದ ಸಂರಕ್ಷಿತ ಪ್ರದೇಶ ಸ್ಥಾನವನ್ನು ರಾಜ್ಯದ ಅರಣ್ಯ, ಪರಿಸರ ಮತ್ತು ಜೀವವಿಜ್ಞಾನ ಇಲಾಖೆ ಹಿಂಪಡೆದಿದೆ. ಇದೇ ಇಲಾಖೆ, ವರ್ಷದ ಹಿಂದಷ್ಟೇ ಕಪ್ಪತಗುಡ್ಡವನ್ನು ‘ಸಂರಕ್ಷಿತ ಅರಣ್ಯ’ ಎಂದು ಘೋಷಿಸಿತ್ತು.

ವರ್ಷ ಕಳೆಯುವಷ್ಟರಲ್ಲಿಯೇ ನಿಲುವು ಬದಲಿಸಿದ್ದು ಏಕೆ ಎಂಬುದು ಸ್ಪಷ್ಟವಾಗುತ್ತಿಲ್ಲ.  ಇದಕ್ಕೆ  ಕಾರಣ ಎಂಬಂತೆ  ‘ಈ ಪ್ರದೇಶ ರಾಷ್ಟ್ರೀಯ ಉದ್ಯಾನಗಳ ಪಕ್ಕದಲ್ಲಿ ಇಲ್ಲ’ ಎಂದು ಹೇಳಿರುವುದು  ಬಾಲಿಶ.

ಜೀವವೈವಿಧ್ಯದ ಸಂರಕ್ಷಣೆಯ ಕಾಳಜಿ ಹೊಂದಿರಬೇಕಾದ ಇಲಾಖೆಯೇ ತರಾತುರಿಯಲ್ಲಿ ನಿಲುವು ಬದಲಿಸಿರುವುದನ್ನು ನೋಡಿದರೆ ಯಾವುದೋ  ಪ್ರಬಲ ಲಾಬಿ ಇದರ ಹಿಂದೆ ಕೆಲಸ ಮಾಡಿರುವ ಸಂಶಯ ಮೂಡುತ್ತದೆ. ಕಪ್ಪತಗುಡ್ಡದಲ್ಲಿ ಅಡಕವಾಗಿರುವ ಉತ್ತಮ ದರ್ಜೆಯ ಕಬ್ಬಿಣದ ಅದಿರು ಹಾಗೂ ಬಂಗಾರದ ನಿಕ್ಷೇಪದ ಮೇಲೆ ಬಹಳ ಹಿಂದೆಯೇ ಗಣಿ ಉದ್ಯಮಿಗಳ ಕಣ್ಣು ಬಿದ್ದಿತ್ತು. ಈಗಿನ ತೀರ್ಮಾನದ ಹಿಂದೆ ಇವರ ಕೈವಾಡ ಇದ್ದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಕಪ್ಪತಗುಡ್ಡವನ್ನು ಉಳಿಸಿಕೊಳ್ಳಲು ಪರಿಸರವಾದಿಗಳು ನಡೆಸಿದ ಹೋರಾಟದ ಫಲವಾಗಿ ಸರ್ಕಾರ ಇದನ್ನು ‘ಸಂರಕ್ಷಿತ ಪ್ರದೇಶ’ ಎಂದು ಘೋಷಿಸಿತ್ತು. ಆರು ತಿಂಗಳ ಹಿಂದೆ ರಾಜ್ಯ ಅರಣ್ಯ ಕೈಗಾರಿಕಾ ನಿಗಮ  ಅಲ್ಲಿನ ಔಷಧೀಯ ಸಸ್ಯಗಳ ಸಮೀಕ್ಷೆ ನಡೆಸಿ, ಸಂಸ್ಕರಣಾ ಘಟಕ ಸ್ಥಾಪನೆಗೆ ಶಿಫಾರಸು ಮಾಡಿತ್ತು. 300ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿವೆ ಎಂಬ ಮಾಹಿತಿಯನ್ನು ನಿಗಮ  ಆ ಸಂದರ್ಭದಲ್ಲಿ ನೀಡಿತ್ತು.

ಕಪ್ಪತಗುಡ್ಡಕ್ಕೆ ಸಂರಕ್ಷಿತ ಪ್ರದೇಶದ ಸ್ಥಾನ ಇಲ್ಲದಿದ್ದರೆ ಇಂಥ ಔಷಧೀಯ ಸಸ್ಯಗಳು ಆಪತ್ತಿಗೆ ಒಳಗಾಗುತ್ತವೆ. ರಾಜ್ಯದಲ್ಲಿ  ಅರಣ್ಯ ಪ್ರದೇಶದ ಪ್ರಮಾಣ  ಕುಸಿದಿದೆ. ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ನಗರಗಳಲ್ಲೂ ಮರಗಳ ಮಾರಣಹೋಮ ನಡೆದಿದೆ. ಇವೆಲ್ಲದರ ಪರಿಣಾಮಗಳು ಪರಿಸರದ ಮೇಲೆ ಆಗುತ್ತಿವೆ. ಅವು ಈಗಾಗಲೇ ಅನುಭವಕ್ಕೆ ಬಂದಿವೆ. ಗದಗ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚೇನೂ ಇಲ್ಲ. ಕಪ್ಪತಗುಡ್ಡ ನಾಶವಾದರೆ ಮಳೆ ಪ್ರಮಾಣ ಮತ್ತಷ್ಟು ಕ್ಷೀಣಿಸುವ ಅಪಾಯ ಇದೆ.

ಇದರಿಂದ ನೇರವಾಗಿ ತೊಂದರೆಗೆ ಒಳಗಾಗುವವರು ಸ್ಥಳೀಯರು. ಇಂಥ ದೂರಗಾಮಿ ಪರಿಣಾಮ ಬೀರುವ ನಿರ್ಧಾರ ಕೈಗೊಳ್ಳುವ ಮುನ್ನ ಅಧಿಕಾರಿಗಳು ಸ್ಥಳೀಯರೊಂದಿಗೆ ಚರ್ಚಿಸಬೇಕು. ಅಲ್ಲಿನ ಪರಿಸ್ಥಿತಿ ಅವಲೋಕಿಸಬೇಕು. ಇದಾವುದನ್ನೂ ಮಾಡದೆ, ಪರಿಸರ ವಿರೋಧಿ ನಿರ್ಧಾರ ಕೈಗೊಂಡರೆ ಜನ ಬೀದಿಗಿಳಿಯುವುದು ಅನಿವಾರ್ಯ ಆಗುತ್ತದೆ.

ಕಪ್ಪತಗುಡ್ಡದ ಸಂರಕ್ಷಣೆ ಸಂಬಂಧ ಧಾರ್ಮಿಕ ಮುಖಂಡರು, ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ  ಮುಖ್ಯಮಂತ್ರಿಯವರನ್ನು ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದಾಗ ಭೇಟಿ ಮಾಡಿ ಚರ್ಚಿಸಿದ್ದರು. ಕಪ್ಪತಗುಡ್ಡದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೂ ಸರ್ಕಾರದಿಂದ ಸ್ಪಂದನೆ ವ್ಯಕ್ತವಾಗಿಲ್ಲ. ಮುಖ್ಯಮಂತ್ರಿಯವರ ಗಮನಕ್ಕೆ ತಂದರೂ ಕೆಲಸವಾಗದು ಎಂದಾದರೆ ಜನ ಇನ್ಯಾರ ಬಳಿ ಹೋಗಬೇಕು.

ಈಗ ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಉಳಿದಿರುವುದು ಅದೊಂದು ಮಾರ್ಗ ಮಾತ್ರ. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು. ಪರಿಸರ ಸಂರಕ್ಷಣೆ ಸರ್ಕಾರದ ಆದ್ಯತೆ ಆಗಬೇಕು. 17,872 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿರುವ ಕಪ್ಪತಗುಡ್ಡದಿಂದ ಗದಗ ಭಾಗದಲ್ಲಿ ಚೂರುಪಾರು ಹಸಿರು ಕಾಣುತ್ತಿದೆ. ಜೀವವೈವಿಧ್ಯದ ಈ ತಾಣವನ್ನು ಉಳಿಸುವ, ಬೆಳೆಸುವ ಬದ್ಧತೆಯನ್ನು ಸರ್ಕಾರ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT