ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿತಪ್ಪಿದ ಅಜ್ಮೇರ್–ಸಿಯಾಲ್‌ದಹ್ ರೈಲು

Last Updated 28 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕಾನ್ಪುರ : ಅಜ್ಮೇರ್ – ಸಿಯಾಲ್‌ದಹ್ ಎಕ್ಸ್‌ಪ್ರೆಸ್‌ನ 15 ಬೋಗಿಗಳು ಹಳಿತಪ್ಪಿದ ಪರಿಣಾಮ 70 ಜನ ಗಾಯಗೊಂಡ ಘಟನೆ ಉತ್ತರಪ್ರದೇಶದ ರೂರಾ ರೈಲ್ವೆ ನಿಲ್ದಾಣದ ಬಳಿ ಬುಧವಾರ ಸಂಭವಿಸಿದೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ರೈಲ್ವೆ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ. ಕಾನ್ಪುರ ಗ್ರಾಮಾಂತರ ಪ್ರದೇಶದಲ್ಲಿ ಎರಡು ತಿಂಗಳ ಒಳಗಿನ ಅವಧಿಯಲ್ಲಿ ಸಂಭವಿಸಿದ ಎರಡನೇ ರೈಲು ಅಪಘಾತ ಇದಾಗಿದೆ.

ಬೆಳಿಗ್ಗೆ 5.30ರ ವೇಳೆಗೆ ಅಪಘಾತ ಸಂಭವಿಸಿದೆ. ಒಣಕಾಲುವೆಯೊಂದರ ಸೇತುವೆಯಲ್ಲಿ ಸಂಚರಿಸುತ್ತಿದ್ದಾಗ ರೈಲು ಹಳಿತಪ್ಪಿದೆ ಎಂದು ಉತ್ತರ ಕೇಂದ್ರ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಮಿತ್ ಮಾಲವೀಯ ತಿಳಿಸಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ಕಾನ್ಪುರದ ಐಜಿ ಝಾಕಿ ಅಹಮದ್ ತಿಳಿಸಿದ್ದಾರೆ. ಆದರೆ, ಪ್ರಯಾಣಿಕರು ಮೃತಪಟ್ಟ ಬಗ್ಗೆ ರೈಲ್ವೆ ವೈದ್ಯಕೀಯ ತಂಡ ಮಾಹಿತಿ ನೀಡಿಲ್ಲ ಎಂದು ಉತ್ತರ ಕೇಂದ್ರ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರುಣ್ ಸಕ್ಸೇನಾ ಹೇಳಿದ್ದಾರೆ.

ಅಪಘಾತದಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಕಾನ್ಪುರದ ಮುಖ್ಯ ವೈದ್ಯಕೀಯ ಅಧಿಕಾರಿ ರಾಮಯಾನ ಪ್ರಸಾದ್ ತಿಳಿಸಿದ್ದಾರೆ. 42 ಗಾಯಾಳುಗಳನ್ನು ಕಾನ್ಪುರದ ಗ್ರಾಮಾಂತರ ಜಿಲ್ಲಾ ಆಸ್ಪತ್ರೆಗೆ ಮತ್ತು ಗಂಭೀರವಾಗಿ ಗಾಯಗೊಂಡಿರುವ 12 ಜನರನ್ನು ಕಾನ್ಪುರದ ಹಾಲೆಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ ಪೂರ್ಣ: ಹಳಿತಪ್ಪಿದ ಎಲ್ಲ ಬೋಗಿಗಳಿಂದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆರೋಗ್ಯ ಇಲಾಖೆಯ 14 ಆಂಬುಲೆನ್ಸ್‌ಗಳನ್ನು ಬಳಸಲಾಗಿದೆ. ಘಟನೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ.20ರಂದು ಕಾನ್ಪುರ ಗ್ರಾಮಾಂತರ ಜಿಲ್ಲೆಯ ಪುಖರಾಯಾಂನಲ್ಲಿ ಇಂದೋರ್ – ಪಟ್ನಾ ಎಕ್ಸ್‌ಪ್ರೆಸ್‌ನ 14 ಬೋಗಿಗಳು ಹಳಿತಪ್ಪಿ 150 ಪ್ರಯಾಣಿಕರು ಮೃತಪಟ್ಟಿದ್ದರು. 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಈ ಮಧ್ಯೆ, ಪರಿಸ್ಥಿತಿಯನ್ನು ಖುದ್ದು ನಿರ್ವಹಿಸುತ್ತಿರುವುದಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. ‘ಪ್ರಯಾಣ ಮುಂದುವರಿಸಲು ಪರ್ಯಾಯ ವ್ಯವಸ್ಥೆ ಒದಗಿಸುತ್ತಿದ್ದೇವೆ. ಗಾಯಾಳುಗಳಿಗೆ ಎಲ್ಲ ರೀತಿಯ ನೆರವು ನೀಡಲಿದ್ದೇವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

₹50 ಸಾವಿರ ಪರಿಹಾರ:  ಗಂಭೀರವಾಗಿ ಗಾಯಗೊಂಡವರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ₹50 ಸಾವಿರ ಪರಿಹಾರ ಘೋಷಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾದವರಿಗೆ ₹25 ಸಾವಿರ ನೀಡುವುದಾಗಿ ಅವರು ತಿಳಿಸಿದ್ದಾರೆ.

ಹಳಿ ತುಂಡಾಗಿದ್ದು ಕಾರಣ?: ಹಳಿ ತುಂಡಾಗಿದ್ದದ್ದು ಘಟನೆಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆ ಮೂಲಗಳು ಅನುಮಾನ ವ್ಯಕ್ತಪಡಿಸಿವೆ. ಆದರೆ, ನಿಖರವಾದ ಕಾರಣ ಏನೆಂಬುದು ತನಿಖೆಯ ಬಳಿಕ ತಿಳಿದುಬರಲಿದೆ.

ರೈಲು ಸಂಚಾರ ಸ್ಥಗಿತ
ಅಪಘಾತ ಸಂಭವಿಸಿರುವುದರಿಂದ ದೆಹಲಿ –ಹೌರಾ (ಕಾನ್ಪುರ ಮೂಲಕ ಸಾಗುವ ಮಾರ್ಗ) ನಡುವಣ ರೈಲು ಸಂಚಾರ ರದ್ದು ಮಾಡಲಾಗಿದೆ. ದೆಹಲಿಯಿಂದ ಕಾನ್ಪುರಕ್ಕೆ ತೆರಳಬೇಕಿದ್ದ ಶತಾಬ್ದಿ ಎಕ್ಸ್‌ಪ್ರೆಸ್ ಸಂಚಾರ ರದ್ದುಗೊಳಿಸಲಾಗಿದೆ. 12 ರೈಲುಗಳನ್ನು ಬೇರೆ ಮಾರ್ಗದ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಮಧ್ಯರಾತ್ರಿಯ ವೇಳೆಗೆ ಹಳಿ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

***
ರೈಲ್ವೆಯ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿದೆ. ತನಿಖೆ ನಡೆಸಲಾಗುತ್ತಿದೆ.
-ಅಮಿತ್ ಮಾಳವೀಯ,
ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT