ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರಲ್ಲಿ ಮೂಡಿದೆ ಆಶಾಕಿರಣ

ರಿಯಲ್ ಎಸ್ಟೇಟ್
Last Updated 29 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಈವರೆಗೂ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಏನೆಲ್ಲಾ ಏಳುಬೀಳುಗಳು ಸಂಭವಿಸಿದರೂ ಬೆಲೆ ಮಾತ್ರ ಇಳಿಯುತ್ತಿರಲಿಲ್ಲ ಅಥವಾ ಇಳಿಸುತ್ತಿರಲಿಲ್ಲ. ಆದರೆ ಇನ್ನು ಮುಂದೆ ಹಾಗಾಗದು. ಕಪ್ಪು ಹಣ, ಅಕ್ರಮ ವಹಿವಾಟು, ಬೇನಾಮಿ ಆಸ್ತಿ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡಿರುವ ನಿರ್ಣಯಗಳು ರಿಯಲ್‌ ಎಸ್ಟೇಟ್‌ ವಲಯದಲ್ಲಿ ಹೊಸ ಬದಲಾವಣೆಗಳನ್ನು ತರಲಿವೆ ಎನ್ನುವ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
 
ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರು ಸೇರಿದಂತೆ ದೇಶದ 8 ಮಹಾನಗರಗಳಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮದ ಪ್ರಗತಿ ಇಳಿಮುಖವಾಗಿದೆ. ಆದರೆ ಬೆಲೆಯಲ್ಲಿ ಇಳಿಕೆ ಕಂಡಿಲ್ಲ. 
 
ಆದರೂ ಕೆಲ ಸಂಸ್ಥೆಗಳು ಉದ್ಯಮ ಅಭಿವೃದ್ಧಿ ಪಥದಲ್ಲಿದೆ, ಉತ್ತಮ ಬೇಡಿಕೆ ಇದೆ ಎಂದು ವಾದಿಸುತ್ತಿವೆ. ಇನ್ನು ಬೆಲೆ ಇಳಿಸುವ ಮಾತೆಲ್ಲಿ? ಈಗಲೂ ಬಿಲ್ಡರ್‌ಗಳು ನಿಗದಿಪಡಿಸಿದ ಬೆಲೆಗೆ ಪ್ಲಾಟ್‌ಗಳನ್ನು ಖರೀದಿಸಬೇಕಾದ ಅನಿವಾರ್ಯತೆ ಇದೆ. ಆದರೆ 2016ರಲ್ಲಿ ಖರೀದಿದಾರರ ಪರ ಕೆಲ ನಿರ್ಧಾರಗಳು, ಕಾಯ್ದೆಗಳು ಹೊರ ಬಂದವು. ಸ್ವಂತ ಮನೆ ಹೊಂದಬೇಕು ಎನ್ನುವ ಮಹದಾಸೆ ಹೊಂದಿರುವವರಲ್ಲಿ ಇವು ಹೊಸ ಆಶಾಭಾವ ಮೂಡಿಸಿವೆ.
 
ಬಜೆಟ್‌ ನಿರ್ಧಾರಗಳು
2016ರ ಕೇಂದ್ರ ಬಜೆಟ್‌ನಲ್ಲಿ ಮನೆ ಖರೀದಿಸುವವರಿಗೆ ಸರ್ಕಾರ ತುಸು ನೆಮ್ಮದಿ ನೀಡುವ ನಿರ್ಧಾರಗಳನ್ನು ಪ್ರಕಟಿಸಿತು. ಆದರೆ ಯಾವುದೂ ನೇರವಾಗಿ ಲಾಭವಾಗುವಂಥದ್ದಲ್ಲ.
 
* ಕೈಗೆಟುಕುವ ಬೆಲೆಗೆ ಮನೆ ಖರೀದಿಸುವವರಿಗೆ ಸೇವಾ ತೆರಿಗೆಯಿಂದ ವಿನಾಯ್ತಿ. 
* 60 ಚದರ ಮೀಟರ್ ತನಕದ ಮನೆ ನಿರ್ಮಾಣದ ಮೇಲೆ ಸೇವಾ ತೆರಿಗೆ ವಿನಾಯಿತಿ.
 
ರಿಯಲ್‌ ಎಸ್ಟೇಟ್‌ ಇನ್‌ವೆಸ್ಟ್‌ಮೆಂಟ್‌ ಟ್ರಸ್ಟ್‌ (ಆರ್‌ಇಐಟಿ) 
ಆರ್‌ಇಐಟಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಕೆಲವು ವಿನಾಯ್ತಿಗಳನ್ನು ಘೋಷಿಸಲಾಗಿದೆ. ನಿರ್ಮಾಣ ಹಂತದಲ್ಲಿರುವ ಯೋಜನೆಗಳ ಅಡಿಯಲ್ಲಿ ಹೂಡಿಕೆ ನಿಧಿಯನ್ನು ಶೇ 10 ರಿಂದ ಶೇ 20ಕ್ಕೆ ಏರಿಸಲಾಗಿದೆ. 
 
ಆರ್‌ಇಐಟಿ ಕಾರ್ಯನಿರ್ವಹಣೆ ಬಗ್ಗೆ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕರಡು ಮಸೂದೆಯನ್ನು ಪ್ರಕಟಿಸಿದೆ. ಮ್ಯುಚುಯಲ್ ಫಂಡ್‌ಗಳ ಹಾಗೆಯೇ ಆರ್‌ಇಐಟಿ ಸಹ ಸೆಬಿಯಲ್ಲಿ ನೋಂದಣಿ ಆಗಿರುತ್ತದೆ. 2017ರಿಂದ ಇದು ಜಾರಿಗೆ ಬರಲಿದೆ.
 
ಆರ್‌ಇಐಟಿ ಸಣ್ಣ ಹೂಡಿಕೆದಾರರಿಂದ ಹಣವನ್ನು ಶೇಖರಿಸುತ್ತದೆ. ಜಮೀನು, ನಿವೇಶನ ಹಾಗೂ ಇತರೆ ಕಟ್ಟಡ ಇಲ್ಲದ ಆಸ್ತಿಯಲ್ಲಿ ಹೂಡಿಕೆ ಮಾಡುವಂತಿಲ್ಲ. ಕೇವಲ ಬಾಡಿಗೆ ಹಾಗೂ ಆದಾಯ ಬರುವ ಕಟ್ಟಡಗಳಲ್ಲಿ ಮಾತ್ರ ಹೂಡಿಕೆ ಮಾಡಬಹುದು. ಕಚೇರಿಗಳು, ಶಾಪಿಂಗ್ ಮಾಲ್‌ಗಳು, ವಾಣಿಜ್ಯ ಬಳಕೆಯ ಕಟ್ಟಡಗಳಲ್ಲಿ ಹೂಡಿಕೆಗೆ ಅವಕಾಶವಿದೆ. ಆಸ್ತಿಯಿಂದ ಬರುವ ಬಾಡಿಗೆ ಆದಾಯವನ್ನು ಸಣ್ಣ ಹೂಡಿಕೆದಾರರಿಗೆ ಲಾಭಾಂಶ (ಡಿವಿಡೆಂಡ್) ರೂಪದಲ್ಲಿ ಹಂಚಲಾಗುತ್ತದೆ.
 
ಆರ್‌ಇಐಟಿಗಳ ಬಂಡವಾಳ ಕನಿಷ್ಠ ₹1000 ಕೋಟಿ ಇರಬೇಕು. ಈ ಕಾರಣದಿಂದಲೇ ಸಣ್ಣ ಪುಟ್ಟ ಕಂಪೆನಿಗಳು ಈ ಕ್ಷೇತ್ರದಿಂದ ದೂರ ಉಳಿಯಲಿವೆ. ಹೂಡಿಕೆದಾರರು ಕನಿಷ್ಠ ₹2 ಲಕ್ಷ ಮೊತ್ತವನ್ನು ಆರ್‌ಇಐಟಿಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಏರಿಳಿತ ಇದರ ಹೂಡಿಕೆ ಮೇಲೆ ನೇರ ಪರಿಣಾಮ ಬೀರುತ್ತದೆ. 
 
ರೇರಾ (ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ –2016)
ಡೆವಲಪರ್‌ಗಳು ಮತ್ತು ಖರೀದಿದಾರರ ಮಧ್ಯೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಉದ್ಯಮದ ವಿಶ್ವಾಸ ಕಾಯ್ದುಕೊಂಡು ಅಭಿವೃದ್ಧಿ ಸಾಧಿಸುವ ಸಲುವಾಗಿ ‘ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ –2016’ ಜಾರಿಗೆ ತರಲಾಗಿದೆ. ಇದು ವಾಣಿಜ್ಯ ಮತ್ತು ವಸತಿ ವಿಭಾಗ ಎರಡನ್ನೂ ಒಳಗೊಂಡಿದೆ.
 
ಗ್ರಾಹಕನೇ ದೊರೆ: ರೇರಾ ಜಾರಿಯಿಂದ ಗ್ರಾಹಕರಿಗೆ ಆನೆಬಲ ಬಂದಾಂತಾಗಿದೆ. ರಿಯಲ್ ಎಸ್ಟೇಟ್ ಕುಳಗಳಿಗೆ ಕಡಿವಾಣ ಬೀಳಲಿದ್ದು, ಮನೆ, ನಿವೇಶನ ಕೊಳ್ಳುವ ಗ್ರಾಹಕರಿಗೆ ಹೆಚ್ಚಿನ ಅಧಿಕಾರ, ಕಾನೂನು ರಕ್ಷಣೆ ದೊರೆಯುತ್ತದೆ. ನಿಯಂತ್ರಣ ಕಾಯ್ದೆಯಿಂದ ಖರೀದಿದಾರನೇ ದೊರೆಯಾಗಲಿದ್ದಾನೆ. ಪ್ರಾಮಾಣಿಕವಾಗಿ ಉದ್ಯಮದಲ್ಲಿ ತೊಡಗಿಕೊಂಡಿರುವವರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಈ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 
ಪ್ರಮುಖ ಅಂಶಗಳು?
* ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸದಿದ್ದರೆ ಬಿಲ್ಡರ್‌ಗಳಿಗೆ 3 ವರ್ಷ ಜೈಲು
* ರಿಯಲ್‌ ಎಸ್ಟೇಟ್‌ ಏಜೆಂಟರು ಮತ್ತು ಖರೀದಿದಾರರು ಕಾನೂನು ಉಲ್ಲಂಘಿಸಿದರೆ ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆ ಜತೆಗೆ ದಂಡ ತೆರಬೇಕಾಗುತ್ತದೆ.
* ರಿಯಲ್ ಎಸ್ಟೇಟ್‌ನಲ್ಲಿ ಅಕ್ರಮವಾಗಿ ಹಣ ಹೂಡಿಕೆಯಾಗುವುದನ್ನು ತಪ್ಪಿಸಲಿದೆ.
 
ಬೇನಾಮಿ (ವಹಿವಾಟು ರದ್ದು) ಕಾಯ್ದೆ
ಮಾಲೀಕರು ಯಾರು ಎಂದು ಪತ್ತೆ ಹಚ್ಚಲು ಸಾಧ್ಯವಿಲ್ಲದ ಆಸ್ತಿಯನ್ನು ಬೇನಾಮಿ ಎಂದು ಪರಿಗಣಿಸಲಾಗುತ್ತದೆ. ನಿಜವಾದ ಫಲಾನುಭವಿಯ ಬದಲಿಗೆ ಬೇರೊಬ್ಬರ ಹೆಸರಿನಲ್ಲಿ ಆಸ್ತಿಪಾಸ್ತಿ ಖರೀದಿಸುವುದು, ವಹಿವಾಟು ನಡೆಸುವುದಕ್ಕೆ ಬೇನಾಮಿ ವಹಿವಾಟು ಎನ್ನಲಾಗುತ್ತಿದೆ. ಬೇನಾಮಿ (ವಹಿವಾಟು ರದ್ದು) ಕಾಯ್ದೆಯು ಕಳೆದ ನ.1 ರಿಂದಲೇ ಜಾರಿಗೆ ಬಂದಿದೆ.
 
ಶಿಕ್ಷೆ ಸ್ವರೂಪ: ಬೇನಾಮಿ ಆಸ್ತಿ ಖರೀದಿ ಸಾಬೀತಾದರೆ ಗರಿಷ್ಠ 7 ವರ್ಷಗಳವರೆಗೆ ಸೆರೆಮನೆ ಮತ್ತು ಆಸ್ತಿಯ ಆಗಿನ ಮಾರುಕಟ್ಟೆ ಮೌಲ್ಯದ ಶೇ 25ರಷ್ಟು ದಂಡ ತೆರಬೇಕಾಗುತ್ತದೆ. ಸುಳ್ಳು ಮಾಹಿತಿ ನೀಡಿದರೆ 6 ತಿಂಗಳಿಂದ ಐದು ವರ್ಷದವರೆಗೆ ಜೈಲು ಮತ್ತು ಆಸ್ತಿಯ ಮಾರುಕಟ್ಟೆ ಮೌಲ್ಯದಲ್ಲಿ ಶೇ10ರಷ್ಟು ದಂಡ ತೆರಬೇಕು.
ತಮ್ಮ ಅಘೋಷಿತ ವರಮಾನ ಬಹಿರಂಗಪಡಿಸುವವರು, ಅದರ ಜತೆಗೆ ಬೇನಾಮಿ ಆಸ್ತಿ ವಿವರಗಳನ್ನೂ ನೀಡಿದರೆ ಅವರಿಗೆ ಬೇನಾಮಿ ಕಾಯ್ದೆಯಡಿ ರಕ್ಷಣೆ ದೊರೆಯಲಿದೆ. 
 
ನೋಟು ರದ್ದತಿ
ನೋಟು ರದ್ದತಿಯಿಂದ ದೇಶದ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹರಿದಾಡುತ್ತಿರುವ ಕಪ್ಪುಹಣ ನಿಯಂತ್ರಣಕ್ಕೆ ಬರಲಿದೆ. ಅಕ್ರಮ ಹಣ ವರ್ಗಾವಣೆ ಪ್ರಮಾಣವೂ ತಗ್ಗಲಿದೆ ಎಂದು ತಜ್ಞರು ಹೇಳಿದ್ದಾರೆ. 
 
ನೋಟು ರದ್ದತಿಯಿಂದ ತಕ್ಷಣಕ್ಕೆ ಮನೆ/ನಿವೇಶನದ ಬೆಲೆ ತಗ್ಗಲಿದೆ ಎಂದು ಹೇಳಲಾಗುವುದಿಲ್ಲ. ಆದರೆ ಅಕ್ರಮ ಹೂಡಿಕೆ ನಿಯಂತ್ರಣಕ್ಕೆ ಬಂದರೆ ಖಂಡಿತವಾಗಿಯೂ ಖರೀದಿದಾರರಿಗೆ ಅನುಕೂಲವಾಗಲಿದೆ ಎನ್ನುವುದು ತಜ್ಞರು ಅಭಿಪ್ರಾಯವಾಗಿದೆ.
 
‘ಆಸ್ತಿ/ಮನೆಗಳ ಮರು ಮಾರಾಟಕ್ಕೆ ಸಂಬಂಧಿಸಿದಂತೆ ಮೌಲ್ಯದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬರಲಿದೆ’ ಎಂದು ಪ್ರಾಪ್‌ ಈಕ್ವಿಟಿ ಸಂಸ್ಥೆಯ ಸ್ಥಾಪಕ ಸಮೀರ್‌ ಜಸೂಜಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT