ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಗ್ಗುತ್ತಿದೆ ಕಂದಕ

Last Updated 29 ಡಿಸೆಂಬರ್ 2016, 19:56 IST
ಅಕ್ಷರ ಗಾತ್ರ

‘ದೇಶವನ್ನು ಹಿಂದಕ್ಕೆ ಕೊಂಡೊಯ್ದಿರುವ ನೋಟು ರದ್ದತಿ ನಿರ್ಧಾರವು ಅನಿವಾರ್ಯವಾಗಿದ್ದು, ಆ ಮೂಲಕ ನಗದು ವಹಿವಾಟನ್ನು ನಿಯಂತ್ರಿಸುತ್ತದೆ’ ಎಂದು ಅರವಿಂದ ಚೊಕ್ಕಾಡಿ ಸಮರ್ಥಿಸಿಕೊಂಡಿದ್ದಾರೆ (ಸಂಗತ, ಡಿ. 28). ಆದರೆ ಮೇಲ್ನೋಟಕ್ಕೆ ಮುಗ್ಧತೆಯಿಂದ ಕೂಡಿರುವ ಈ ಮಾತುಗಳು ಆಳದಲ್ಲಿ ಹಾದಿ ತಪ್ಪಿಸುವಂತಿವೆ.

ನಿಜ, ಜಾಗತೀಕರಣದ ನಂತರ ಮಧ್ಯಮವರ್ಗದಲ್ಲಿ ಕೊಳ್ಳುಬಾಕುತನದ ಹಪಾಹಪಿತನ ತುಂಬಿಕೊಂಡಿದೆ.  ಜನ ಕ್ರಮೇಣ ಸ್ವಾರ್ಥಿಗಳಾಗುತ್ತಿದ್ದಾರೆ. ಖಾಸಗೀಕರಣವು ಸರ್ಕಾರಗಳ ಮುಖ್ಯ ಆದ್ಯತೆಯಾಗಿದ್ದರೆ, ಬಕಾಸುರ ಬಂಡವಾಳಶಾಹಿಗಳು ದೇಶದ ಆರ್ಥಿಕ ಚುಕ್ಕಾಣಿ ಹಿಡಿದು ಆಡಿಸುತ್ತಿದ್ದಾರೆ. ಆದರೆ ಇದರ ಜೊತೆ ಜೊತೆಗೆ ಸಾಮಾಜಿಕ-ಆರ್ಥಿಕ ಪಿರಮಿಡ್‌ನಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ದಿನದಿನಕ್ಕೂ ಹಿಗ್ಗುತ್ತಿದೆ.

ಹಳ್ಳಿಗಳಿಂದ ನಗರಕ್ಕೆ ವಲಸೆ ಬಂದ ಕುಟುಂಬಗಳು, ಬೀದಿ ವ್ಯಾಪಾರಸ್ಥರು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಇವರಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲ.ಮತ್ತೊಂದೆಡೆ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ ಕ್ರಮೇಣ ಕುಸಿಯುತ್ತಾ ರೈತ ಸಮುದಾಯದ ಬದುಕು ಅತಂತ್ರವಾಗಿದೆ. ಆದರೆ ದೇಶದ ಪ್ರಗತಿಯನ್ನು, ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿನ ಪ್ರಮಾಣದಲ್ಲಿರುವ ಈ ಜನಸಂಖ್ಯೆಯ ಬದುಕನ್ನು ಆಧರಿಸಿ ಅಳೆಯುವುದಿಲ್ಲ.

‘ಸೂಪರ್ ಶ್ರೀಮಂತ’ರ ಬಂಡವಾಳ ಹೂಡಿಕೆ ಮತ್ತು ವ್ಯಾಪಾರದ ವಿಸ್ತರಣೆಯನ್ನು ಆಧರಿಸಿ ಸರ್ಕಾರಗಳು ತಮ್ಮ ಆರ್ಥಿಕ ನೀತಿಗಳನ್ನು ರೂಪಿಸಿವೆ. ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವುದೇ ವ್ಯತ್ಯಾಸವಿಲ್ಲ. ದೇಶದ ಜಿಡಿಪಿಯು ಈ ಬಂಡವಾಳಶಾಹಿಗಳ ಹಣ ಹೂಡುವಿಕೆಯ ಮೇಲೆ ನಿರ್ಧಾರವಾಗುವಂತಹ ಸ್ಥಿತಿ ನಮ್ಮಲ್ಲಿದೆ.

ಹೀಗಾಗಿಯೇ ಈ ಬಂಡವಾಳಶಾಹಿಗಳು ಬ್ಯಾಂಕುಗಳಿಂದ ಹೆಚ್ಚು ಹೆಚ್ಚು ಸಾಲವನ್ನು ಪಡೆದಷ್ಟೂ ಅದನ್ನು ಆರ್ಥಿಕ ಪ್ರಗತಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ಮೋದಿಯವರ ಆರ್ಥಿಕ ನೀತಿಗಳು ಬಕಾಸುರ ಬಂಡವಾಳಶಾಹಿಗಳ ಪರವಾಗಿರುವುದು ಇಂದು ಗುಟ್ಟಾಗಿ ಉಳಿದಿಲ್ಲ. ತಾವು ಸಂಪೂರ್ಣವಾಗಿ ಖಾಸಗೀಕರಣದ ಪರವಾಗಿರುವುದನ್ನು ಸ್ವತಃ ಮೋದಿಯವರೂ ನಿರಾಕರಿಸುತ್ತಿಲ್ಲ.

ಹಿಮ್ಮಖ ಚಲನೆಯ ಆರ್ಥಿಕ ನಿಯಂತ್ರಣವು ಇಂದು ಅತ್ಯಂತ ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಮೂರು ದಶಕಗಳ ಹಿಂದೆ ಉತ್ತಮ ಸ್ಥಿತಿಯಲ್ಲಿದ್ದ ವಾತಾವರಣಕ್ಕೆ ತಂದು ಕೊಡುತ್ತದೆಯೇ? ಆರೋಗ್ಯ ವಲಯವನ್ನು ರಾಷ್ಟ್ರೀಕರಣಗೊಳಿಸುತ್ತದೆಯೇ? ಮುಚ್ಚಿರುವ ಸಾರ್ವಜನಿಕ ಉದ್ಯಮಗಳನ್ನು ಉತ್ಪಾದನೆಯಲ್ಲಿ ಮರಳಿ ಪುನಶ್ಚೇತನಗೊಳಿಸುತ್ತದೆಯೇ? ಬಕಾಸುರ ಬಂಡವಾಳಶಾಹಿಗಳನ್ನು ಕ್ರಮೇಣ ಹದ್ದುಬಸ್ತಿನಲ್ಲಿಡುತ್ತದೆಯೇ?

ಅಭಿವೃದ್ಧಿಯಲ್ಲಿ ಎಲ್ಲರನ್ನೂ ಒಳಗೊಳ್ಳಬೇಕೆನ್ನುವ ಸಮಾಜವಾದದ ಆಶಯಕ್ಕೆ ಸಂಪೂರ್ಣ ತಿಲಾಂಜಲಿ ನೀಡಿರುವ ಮೋದಿಯವರ ಆರ್ಥಿಕ ನೀತಿಯು ಅಸಂಘಟಿತ ಕೂಲಿ ಕಾರ್ಮಿಕರಿಗೆ, ರೈತರಿಗೆ ಈ ಆರ್ಥಿಕ ನಿಯಂತ್ರಣದ ಸಂದರ್ಭದಲ್ಲಿ ಯಾವ ನ್ಯಾಯ ಒದಗಿಸುತ್ತದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT