ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತೆಯ ವಿಚಾರ ಆದ್ಯತೆಯ ಸಂಗತಿಯಾಗಲಿ

Last Updated 29 ಡಿಸೆಂಬರ್ 2016, 19:58 IST
ಅಕ್ಷರ ಗಾತ್ರ

ಬೆಂಗಳೂರಿನ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಆರು ವರ್ಷದ ಮಗುವಿನ ಸಾವು, ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರ ಸುರಕ್ಷತೆಯ ಪ್ರಶ್ನೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅದರಲ್ಲೂ ಲಾಲ್‌ಬಾಗ್‌ನಲ್ಲಿ ಮೂರು ವರ್ಷಗಳ ಅಂತರದಲ್ಲಿ ಸಂಭವಿಸಿರುವ ಮೂರನೇ ಸಾವು ಇದು ಎಂಬುದು ತೀವ್ರ ಆತಂಕ ಸೃಷ್ಟಿಸುವ ಸಂಗತಿ.

ಕಳೆದ ವರ್ಷ ಹೆಜ್ಜೇನು ದಾಳಿಯಿಂದ ಏಳು ವರ್ಷದ ಬಾಲಕಿ ಮೃತಪಟ್ಟಿದ್ದಳು. 2014ರಲ್ಲಿ ಲಾಲ್ ಬಾಗ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರ ಮಗು ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಬೆಂಗಳೂರಿನ ನಾಗರಿಕರು ಹಾಗೂ ಪ್ರವಾಸಿಗಳಿಗೆ ಪ್ರಮುಖ ಆಕರ್ಷಣೀಯ ಕೇಂದ್ರವಾಗಿರುವ ಲಾಲ್‌ಬಾಗ್‌ನಲ್ಲಿ ಇಂತಹ ಸರಣಿ ಸಾವುಗಳಾಗುತ್ತಿರುವುದನ್ನು  ಗಂಭೀರವಾಗಿ ಪರಿಗಣಿಸಬೇಕಿರುವುದು ಅವಶ್ಯ.

ಉದ್ಯಾನದಲ್ಲಿ ಸುರಕ್ಷತಾ ಕ್ರಮಗಳ ಅಳವಡಿಕೆಯಲ್ಲಿನ ನಿಷ್ಕಾಳಜಿಯನ್ನು ಈ ಪ್ರಕರಣಗಳು ಎತ್ತಿ ತೋರುತ್ತವೆ.  ಈ ವಿಚಾರದಲ್ಲಿ ಈ ಉದ್ಯಾನದ ನಿರ್ವಹಣೆಯ ಹೊಣೆ ಹೊತ್ತಿರುವ ತೋಟಗಾರಿಕಾ ಇಲಾಖೆಯ ಬೇಜವಾಬ್ದಾರಿತನ ಖಂಡನೀಯ. 

ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ, ರಜಾ ದಿನಗಳ ಸವಿ ಅನುಭವಿಸಲು ಬಂಧುಗಳೊಂದಿಗೆ ಲಾಲ್‌ಬಾಗ್‌ಗೆ ತೆರಳಿದ್ದ  ಬಾಲಕ ವಿಕ್ರಮ್  ಜೀವವನ್ನೇ  ಬಲಿಕೊಡಬೇಕಾಗಿ ಬಂದದ್ದು ದಾರುಣವಾದದ್ದು.  ಈ ವಿಚಾರದಲ್ಲಿ ಬಾಲಕನ ಜೊತೆಗಿದ್ದ ದೊಡ್ಡವರು ಮುಂಜಾಗ್ರತೆ  ವಹಿಸಲಿಲ್ಲ ಎಂದು ಜವಾಬ್ದಾರಿಯನ್ನು ವರ್ಗಾಯಿಸಲು ಅಧಿಕಾರಿಗಳು ಮುಂದಾಗುವುದು ಸಲ್ಲದು.

ಈ ಪ್ರಕರಣದ ಬಗ್ಗೆ ಹೀಗೆ ಮೊದಲೇ ತೀರ್ಮಾನಕ್ಕೆ ಬಂದುಬಿಡುವುದು ಸರಿಯಲ್ಲ. ಯಾವುದೇ ಪೂರ್ವಗ್ರಹಗಳಿಲ್ಲದ ನಿಷ್ಪಕ್ಷಪಾತ ತನಿಖೆ ಆಗಬೇಕಾದುದು ಅವಶ್ಯ.  ಪಕ್ಷಿಗಳಿಗೆ ನೀರುಣಿಸುವ ಉದ್ದೇಶದಿಂದ ನಿರ್ಮಿಸಲಾದ ನಾಲ್ಕು ಅಡಿ ಎತ್ತರದ ಪಿಲ್ಲರ್  ಹಾಗೂ ಅದರ ಮೇಲಿನ ಕಲ್ಲಿನ ತೊಟ್ಟಿ ಅಷ್ಟು ಸುಲಭವಾಗಿ ಕುಸಿಯುವುದಾದರೂ ಹೇಗೆ ಎಂಬ ಸಂಶಯ ಮೂಡದಿರದು. 

ಇಷ್ಟೆಲ್ಲಾ ದುರಂತಗಳು ಸಂಭವಿಸಿದ ನಂತರ ಈಗ ಉದ್ಯಾನದ ಅಪಾಯಕಾರಿ ಸ್ಥಳಗಳ ಸಮೀಕ್ಷೆ ನಡೆಸಲು ಮೂರು ಸಮಿತಿಗಳನ್ನು ಕಡೆಗೂ ತೋಟಗಾರಿಕೆ ಇಲಾಖೆ ರಚಿಸಿದೆ. ಉದ್ಯಾನದಲ್ಲಿರುವ ಅಪಾಯಕಾರಿ ಕಲ್ಲು, ಬೆಂಚ್ ಸೇರಿದಂತೆ ಎಲ್ಲ ಬಗೆಯ ವಸ್ತುಗಳನ್ನು ಪತ್ತೆ ಮಾಡಿ ಅವುಗಳನ್ನು ತೆರವುಗೊಳಿಸುವ ಉದ್ದೇಶದಿಂದ ಈ ಸಮಿತಿ ರಚಿಸಲಾಗಿದೆ ಎಂದು ಇಲಾಖೆ ಹೇಳಿದೆ. ಇದು ಬರೀ ಕಣ್ಣೊರೆಸುವ ತಕ್ಷಣದ ಪ್ರತಿಕ್ರಿಯೆಯಾಗಿಯಷ್ಟೇ ಉಳಿಯಬಾರದು.

ಪ್ರವಾಸಿಗರನ್ನು ಸೆಳೆಯುವ ಪ್ರಸಿದ್ಧವಾದ ಈ ಉದ್ಯಾನಕ್ಕೆ ಭೇಟಿ ನೀಡುವ ಸಾರ್ವಜನಿಕರ ಸುರಕ್ಷತೆ ಮುಖ್ಯವಾದುದು ಎಂಬುದನ್ನು ಅಧಿಕಾರಿಗಳು ಮನಗಾಣಬೇಕು.ಅಪಾಯಕಾರಿ ಸ್ಥಳಗಳು ಇದ್ದಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ದೊಡ್ಡದಾಗಿ ಹಾಕುವುದು ಅಗತ್ಯ. ಭದ್ರತಾ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರೆ ದುರಂತ ತಡೆಗಟ್ಟಬಹುದಿತ್ತು ಎಂಬ ಅಭಿಪ್ರಾಯವನ್ನು ಲಾಲ್‌ಬಾಗ್ ನಡಿಗೆದಾರರ ಸಂಘ ವ್ಯಕ್ತಪಡಿಸಿದೆ.

ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಹಲವು ತಿಂಗಳುಗಳಿಂದ ಪ್ರಸ್ತಾಪಿಸುತ್ತಿದ್ದರೂ ಅವನ್ನು ಇಲಾಖೆ  ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪವನ್ನೂ  ಗಂಭೀರವಾಗಿ ಪರಿಗಣಿಸಬೇಕು.

ಕಳೆದ ವರ್ಷ ಹೆಜ್ಜೇನುಗಳು ಕಚ್ಚಿ ಬಾಲಕಿ ಸತ್ತಂತಹ ಅವಘಡ ಸಂಭವಿಸಿದ ನಂತರ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿತ್ತು ಎಂಬುದನ್ನು ಮರೆಯಲಾಗದು.  ಆದರೆ  ಅದರಿಂದ ಫಲಿತಾಂಶ ಹೆಚ್ಚೇನೂ ಸಿಕ್ಕಿಲ್ಲ ಎಂಬುದು ಈಗಿನ ದುರಂತದಿಂದ ವ್ಯಕ್ತ.

ತುರ್ತು ಸಂದರ್ಭಗಳನ್ನು ನಿರ್ವಹಿಸಲು ಅಗತ್ಯವಾಗಿ ಇರಬೇಕಾದ  ಕನಿಷ್ಠ ವೈದ್ಯಕೀಯ ಸೌಲಭ್ಯಗಳೂ ಇಲ್ಲದಿರುವುದು ಅಕ್ಷಮ್ಯ. ಹೀಗಾಗಿಯೇ, ಈ ಬಾರಿಯೂ ಗಾಯಗೊಂಡ ಬಾಲಕ ವಿಕ್ರಮ್‌ಗೆ ವೈದ್ಯಕೀಯ ಉಪಚಾರ ಸಿಗುವಲ್ಲಿ ವಿಳಂಬವಾದದ್ದು ದುರದೃಷ್ಟಕರ. ನಾಗರಿಕರ ಸುರಕ್ಷತೆಯ ವಿಚಾರವನ್ನು ಆದ್ಯತೆಯ ಸಂಗತಿಯಾಗಿ ಅಧಿಕಾರಿಗಳು ಪರಿಭಾವಿಸಬೇಕು. ಜೊತೆಗೆ ವಿಕ್ರಮ್ ಸಾವಿಗೆ ಕಾರಣವಾದ ಅಂಶಗಳನ್ನು ಕೂಲಂಕಷವಾಗಿ ತನಿಖೆಗೆ ಒಳಪಡಿಸಿ ತಪ್ಪಿತಸ್ಥರನ್ನು ಗುರುತಿಸುವುದಲ್ಲದೆ ಶಿಕ್ಷೆಯೂ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT