ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆಯಲ್ಲೂ ರಾಜಕೀಯ

Last Updated 30 ಡಿಸೆಂಬರ್ 2016, 7:21 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿ ಕೆರೆಗಳಿಗೆ ನೀರು ಹರಿಸುವ ಯೋಜನೆಗಳಿಗೆ ಜಿಲ್ಲೆಯ ಜನಪ್ರತಿನಿಧಿಗಳು ರಾಜಕೀಯ ಮಾಡುವ ಮೂಲಕ ಜನರನ್ನು ಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಶಾಸಕ ಬಸವರಾಜ್‌ ಬೊಮ್ಮಾಯಿ ಗುರುವಾರ ಹಿರೀಸಾವೆಯಲ್ಲಿ ಆರೋಪಿಸಿದರು.  

ನೀರಿಲ್ಲದೆ ಒಣಗಿರುವ ಕೆರೆಯ ಪರಿಶೀಲನೆ ನಡೆಸಿ ನಂತರ ಸುದ್ದಿಗಾರ ಜತೆ ಮಾತನಾಡಿದ ಅವರು, ಚನ್ನರಾಯ ಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ನಾನು ಸಚಿವನಾಗಿದ್ದ ಸಮಯದಲ್ಲಿ ಚಾಲನೆ ನೀಡಿದ್ದೆ. ಆದರೆ, ಇನ್ನೂ ಪೂರ್ಣವಾಗಿಲ್ಲ ಎಂದರು.

ಮಾಜಿ ಸಚಿವ ಎಚ್‌.ಸಿ.ಶ್ರೀಕಂಠಯ್ಯ ಅವರ ಆಶಯದಂತೆ ಹಿರೀಸಾವೆ ಶ್ರವಣಬೆಳಗೊಳ ಹೋಬಳಿಯ ಏತಾ ನೀರಾವರಿ ಯೋಜನೆಗೆ ನಮ್ಮ ಸರ್ಕಾರವು ಆಸಕ್ತಿ ವಹಿಸಿ, ಕೆಲಸ ಪ್ರಾರಂಭಿಸುವಂತೆ ಸೂಚನೆ ನೀಡಿತ್ತು. ಆದರೆ, ಇಲ್ಲಿಯವರೆಗೆ ಕೆಲಸ ಪ್ರಾರಂಭವಾಗಿಲ್ಲ ಎಂದರು.

ಜಿಲ್ಲೆಯಲ್ಲಿನ ನದಿಗಳು ಮತ್ತು ನಾಲೆಗಳಲ್ಲಿ ಹರಿವು ನೀರನ್ನು ಸದುಪಯೋಗಪಡಿಸಿಕೊಳ್ಳವ ಆಸಕ್ತಿ, ಜಿಲ್ಲೆಯ ರಾಜಕಾರಣಿಗಳಿಗೆ ಇಲ್ಲ ಎಂದು ಆರೋಪಿಸಿದರು.
ಬಿಜೆಪಿ ಬರ ಪರಿಸ್ಥಿತಿ ಅಧ್ಯಯನ ತಂಡ ಹೋಬಳಿ ಮತಿಘಟ್ಟ ಕೆರೆ, ಹಿರೀಸಾವೆ ಕೆರೆ ಮತ್ತು ಪಕ್ಕದಲ್ಲಿನ ತೆಂಗಿನ ತೋಟಗಳ ಪರಿಸ್ಥಿತಿಯನ್ನು ವೀಕ್ಷಿಸಿದರು.

ಶಾಸಕ ಆರ್‌.ಆಶೋಕ್, ಸುರೇಶ್‌ಕುಮಾರ್, ಅರವಿಂದ್ ಲಿಂಬಾವಳಿ, ಬಿ. ಸೋಮಶೇಖರ್, ಬಿಜೆಪಿ ಮುಖಂಡ ರಾದ ತೇಜಸ್ವಿನಿ, ವಿಜಯಶಂಕರ್, ಬಿ.ಜೆ. ಪುಟ್ಟಸ್ವಾಮಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಯೋಗಾರಮೇಶ್, ತಾಲ್ಲೂಕು ಘಟಕ ಅಧ್ಯಕ್ಷ ಶಿವನಂಜೇಗೌಡ, ಹಿರೀಸಾವೆ ಹೋಬಳಿಯ ಎಚ್‌.ಆರ್. ಬಾಲಕೃಷ್ಣ, ಬೂಕದ ಶಿವಣ್ಣ, ಗಂಗಾಧರ್ ಇತರರು ಇದ್ದರು.

ನಿದ್ದೆಯಲ್ಲಿರುವ ರಾಜ್ಯ ಸರ್ಕಾರ
ಅರಕಲಗೂಡು: ಸ್ವಕ್ಷೇತ್ರದಲ್ಲೇ ಈವರೆಗೂ ಮೇವು ಬ್ಯಾಂಕ್ ಸ್ಥಾಪಿಸಲು ಸಾಧ್ಯವಾಗದ ಪಶು ಸಂಗೋಪನಾ ಸಚಿವ ಎ.ಮಂಜು ಅವರು ರಾಜ್ಯದೆಲ್ಲೆಡೆ ಜಾನುವಾರುಗಳು ಎದುರಿಸುತ್ತಿರುವ ಮೇವಿನ ಕೊರತೆ ಸಮಸ್ಯೆಯನ್ನು ನಿಭಾಯಿಸುವುದಾದರೂ ಹೇಗೆ ಎಂದು ಮಾಜಿ ಸಚಿವ ಆರ್.ಅಶೋಕ್ ಟೀಕಿಸಿದರು.

ತಾಲ್ಲೂಕಿನ ಮುಂಡಗೋಡು ಗ್ರಾಮದಲ್ಲಿ ಗುರುವಾರ ಬರಪರಿಸ್ಥಿತಿ ವೀಕ್ಷಣೆ ನಡೆಸಿದ ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೃಷಿ ಹೊರತು ಪಡಿಸಿ ರೈತರಿಗೆ 2ನೇ ಆದಾಯದ ಮೂಲ ಹೈನುಗಾರಿಕೆ. ಆದರೂ ಸರ್ಕಾರ ಕಳೆದ ಜುಲೈ ತಿಂಗಳಿನಿಂದ ಪ್ರೋತ್ಸಾಹಧನವನ್ನು ವಿತರಿಸಿಲ್ಲ ಎಂದರು.

ರಾಜ್ಯ ಸರ್ಕಾರ ಬರ ಪರಿಹಾರಕ್ಕಾಗಿ ಕೇವಲ ₹ 400 ಕೋಟಿ ಹಣವನ್ನು ಮಾತ್ರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ದಿಂದ    ₹ 12 ಸಾವಿರ ಕೋಟಿ ಹಣ ಕೇಳುತ್ತಿದೆ. ಹಣ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜವಾಬ್ದಾರಿ ಇಲ್ಲಿ ಏನು, ಕಳೆದ ವರ್ಷ ಕೇಂದ್ರ ಸರ್ಕಾರ ಹಣ ನೀಡಿದೆ. ಈ ಬಾರಿಯೂ ₹ 300 ಕೋಟಿ  ಹಣ ಒದಗಿಸಿದೆ. ಇದರಲ್ಲಿ ಎಷ್ಟು ಖರ್ಚಾಗಿದೆ, ಎಷ್ಟು ವಾಪಸ್ಸಾಗಿದೆ, ಬರದಿಂದಾಗಿ ತತ್ತರಿಸಿರುವ ಜನತೆಗೆ ಒದಗಿಸಿರುವ ಪರಿಹಾರ ಎಷ್ಟು ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸಿ ಜ. 21, 22ರಂದು ಕಲಬುರ್ಗಿಯಲ್ಲಿ ನಡೆಯುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಮುಂದಿನ ನಡೆ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT