ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಕ್ ಟ್ರೀಟ್‌ಮೆಂಟ್‌ಗೇಕೆ ಈ ಕಳಂಕ?!

Last Updated 30 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಡಾಕ್ಟ್ರೇ, ಏನು ಟ್ರೀಟ್‌ಮೆಂಟ್ ಕೊಡ್ತೀರಾ? ಶಾಕ್ ಕೊಟ್ಟು ನನ್ನ ಡಲ್ ಮಾಡಿಬಿಡ್ತೀರಾ?’
‘ಸೈಕಿಯಾಟ್ರಿಸ್ಟ್ ಬಳಿ ಹೋದ್ರೆ ಶಾಕ್ ಕೊಟ್ಟುಬಿಡ್ತಾರಂತೆ. ಆಮೇಲೆ ಎಲ್ಲಾ ಮರತೇಹೋಗುತ್ತಂತೆ!’

ಇವು ಸಾಮಾನ್ಯವಾಗಿ ಜನರು ಮನೋವೈದ್ಯರಲ್ಲಿ ಹೆದರಿಕೆಯಿಂದ ಕೇಳುವ ಪ್ರಶ್ನೆಗಳು. ಅರಿವಿನ ಕೊರತೆಯಿಂದ ತಪ್ಪು ನಂಬಿಕೆಗಳು, ವಿಚಿತ್ರ  - ನಿಜವಲ್ಲದ ಕಲ್ಪನೆಗಳು ಹೇಗೆ ಹರಡಬಲ್ಲವು, ಒಂದು ಉಪಯುಕ್ತ ಚಿಕಿತ್ಸೆಯನ್ನು ಹೇಗೆ ಜನರು ದೂರ ತಳ್ಳುವಂತೆ ಮಾಡಬಲ್ಲವು ಎಂಬುದಕ್ಕೆ ಒಂದು ನಿದರ್ಶನ ‘ವಿದ್ಯುತ್ ಕಂಪನ ಚಿಕಿತ್ಸೆ’.

ಬಹು ಹಿಂದೆ ಮಾನಸಿಕ ಕಾಯಿಲೆಗಳ ಕಾರಣ ಪ್ರೇತಶಕ್ತಿಗಳು-ಮಾಟಮಂತ್ರ ಎಂದಾಗಿತ್ತು. ಹಾಗಾಗಿ ಈ ಪ್ರೇತಗಳನ್ನು ಓಡಿಸಲು ಹಲವು ಮಾರ್ಗಗಳನ್ನು ಜನರು ಹುಡುಕುತ್ತಿದ್ದರು. [ಈಗಲೂ ಹಲವರು ಹಾಗೆಯೇ ನಂಬುವವರಿದ್ದಾರೆ!]. ಹೀಗಾಗಿ ಮೈಯ್ಯಲ್ಲಿ ನಡುಕವನ್ನು ಉಂಟುಮಾಡುವುದರಿಂದ ಈ ದುಷ್ಟಶಕ್ತಿಗಳನ್ನು ಸುಲಭವಾಗಿ ಓಡಿಸಬಹುದು ಎಂದು ಅವರು ನಂಬಿ ಹಾಗೆ ನಡುಕ ಬರಿಸಬಹುದಾದ ಗಿಡಮೂಲಿಕೆಗಳನ್ನು ನೀಡುತ್ತಿದ್ದ ಕಾಲವೊಂದಿತ್ತು.

16ನೇ ಶತಮಾನದಲ್ಲಿ ಸರಿಯಾದ ಪ್ರಮಾಣದ ಕರ್ಪೂರವನ್ನು ಬಳಸಿ ಈ ನಡುಕವನ್ನು ನಿರ್ದಿಷ್ಟ ಅವಧಿಗೆ ನಿಯಂತ್ರಿಸಬಹುದೆಂದು ಸೆಕೆಲ್‌ ಎಂಬುವವನು ಕಂಡು ಹಿಡಿದ. ಮುಂದಿನ ಎರಡು  ಈ ರೀತಿಯ ಪ್ರಯೋಗಗಳು ಮುಂದುವರಿದವು. 1932ರಲ್ಲಿ ಮೂವರು ಇಟಲಿಯ ಮನೋವೈದ್ಯರು ಖಿನ್ನತೆಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಅವರು ಒಂದು ಆಸಕ್ತಿಕಾರಕ ವಿಷಯವನ್ನು ಗಮನಿಸಿದರು.

ಖಿನ್ನತೆ ಮತ್ತು ಅಪಸ್ಮಾರ - ಫಿಟ್ಸ್  – ಎರಡೂ ಇರುವ ರೋಗಿಗಳಲ್ಲಿ, ಫಿಟ್ಸ್ ಬಂದರೆ ಖಿನ್ನತೆ ಮಾಯವಾಗುತ್ತಿತ್ತು; ಮರುಕಳಿಸುವುದೂ ಕಡಿಮೆಯಾಗುತ್ತಿತ್ತು. ಆದರೆ ಫಿಟ್ಸ್ ಉಳಿಯುತ್ತಿತ್ತಷ್ಟೆ! ಹಾಗಾಗಿ ಅವರು ಮಾಡಿದ ಯೋಚನೆ ನಿರ್ದಿಷ್ಟ ಅವಧಿಯ, ಅಳೆಯಬಹುದಾದ, ನಿಯಂತ್ರಿಸಬಹುದಾದ ಫಿಟ್ಸ್ ಅನ್ನು ದೇಹದಲ್ಲಿ ಉತ್ಪತ್ತಿ ಮಾಡಿದರೆ ಅದು ಖಿನ್ನತೆಯನ್ನು ಗುಣಪಡಿಸಲು ಸಾಧ್ಯವಾಗಬಹುದು ಎಂಬುದು. ಸರಿ, ವಿದ್ಯುತ್ತಿನಿಂದ ಅಪಘಾತಗಳಾದಾಗ ಜನರು ಶಾಕ್ ಹೊಡೆಸಿಕೊಂಡು ನಡುಗುವುದನ್ನು ಅವರು ನೋಡಿದ್ದರು.

ಮೊದಲು ಹಂದಿಗಳ ಮೇಲೆ ಪ್ರಯೋಗ ನಡೆಸಲಾಯಿತು. ಶಾಕ್‌ನಿಂದ ಹಂದಿಗಳಿಗೆ ಫಿಟ್ಸ್ ಬಂದರೂ ಅವು ಸಾಯಲಿಲ್ಲ. ರೋಂನ ರೇಲ್ವೆ ಸ್ಟೇಷನ್‌ನ ಬಳಿ ಅಲೆದಾಡುತ್ತಿದ್ದ , ನಿರ್ಗತಿಕರಾದ ಮಾನಸಿಕ ಅಸ್ವಸ್ಥರು ಹಲವರಿದ್ದರು. ಪೋಲೀಸರ ಬಳಿ ಅವರಲ್ಲೊಬ್ಬರನ್ನು ಕರೆತರುವಂತೆ ಹೇಳಿದರು. ಆತ ಏನೇನೋ ಬಡಬಡಿಸುತ್ತಿರುತ್ತಿದ್ದ, ತನ್ನದೇ ಜಗತ್ತಿನಲ್ಲಿದ್ದ. ಮೈಮೇಲಿನ ಪರಿವೆಯನ್ನೇ ಕಳೆದುಕೊಂಡಿದ್ದ. 2–3 ವಾರಗಳ ಅವನ ಪರೀಕ್ಷೆಯ ನಂತರ  ಅವನಿಗೆ 55 ವೋಲ್ಟ್ ವಿದ್ಯುತ್ತನ್ನು, ಒಂದು ಸೆಕೆಂಡಿನ 2/10ನೇ ಅವಧಿಗೆ ನೀಡಿದರು. ಆತ ನಿದ್ದೆಗೂ ಜಾರಲಿಲ್ಲ.

ಆತ ಪವಾಡವೆನ್ನುವ ರೀತಿಯಲ್ಲಿ ಎದ್ದು ಕುಳಿತು ಸರಿಯಾಗಿ ಮಾತನಾಡತೊಡಗಿದ! ತಮ್ಮ ಸಂಶೋಧನೆಯ ಬಗ್ಗೆ, ತಾವು ನಿರ್ದಿಷ್ಟವಾಗಿ ಹೇಗೆ ವಿದ್ಯುತ್ತನ್ನು ಉಪಯೋಗಿಸಿದೆವು ಎನ್ನುವ ಬಗ್ಗೆ ಮೂವರು ವೈದ್ಯರು ದಾಖಲಿಸಿ, ವೈದ್ಯಕೀಯ ನಿಯತಕಾಲಿಕೆಗಳಲ್ಲಿ ಬರೆದರು. ಹೀಗೆ ವಿದ್ಯುತ್ ಕಂಪನ ಚಿಕಿತ್ಸೆ - ಶಾಕ್ ಟ್ರೀಟ್‌ಮೆಂಟ್ ಮೊದಲ ಬಾರಿ ವೈಜ್ಞಾನಿಕವಾಗಿ ಮನೋವೈದ್ಯಕೀಯಕ್ಕೆ ಕಾಲಿರಿಸಿತು. ಆಗಿನ್ನೂ ಮನೋರೋಗಗಳಿಗೆ ಔಷಧಿಗಳಿರಲಿಲ್ಲ. ಹೀಗಾಗಿ ಪಾಶ್ಚಾತ್ಯ ಜಗತ್ತಿನೆಲ್ಲೆಡೆ ವಿದ್ಯುತ್ ಕಂಪನ ಚಿಕಿತ್ಸೆ ಮನೋರೊಗಗಳಿಗೆ ಮನೆಮಾತಾಯಿತು. ಆದರೆ ಸಮಸ್ಯೆಗಳೂ ಎದುರಾದವು.

ಫಿಟ್ಸ್ ಬಂದಾಗ ಕೆಲವರ ಮೂಳೆಗಳೇ ಮುರಿದುಹೋಗುತ್ತಿದ್ದವು. ಖಿನ್ನತೆ ಮಾಯವಾದರೂ, ಕೈಕಾಲು ಮುರಿದಿರುತ್ತಿತ್ತು! ಮುದುಕರಲ್ಲಂತೂ ಮೂಳೆಯನ್ನು ಮತ್ತೆ ರಿಪೇರಿ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಖಿನ್ನತೆಯಲ್ಲಿ ಈ ಚಿಕಿತ್ಸೆ ಎಷ್ಟು ಪರಿಣಾಮಕಾರಿ ಎನಿಸುತ್ತಿತ್ತೋ ಉಳಿದವುಗಳಲ್ಲಿ ಅದರ ಪರಿಣಾಮ ಅಷ್ಟಿರಲಿಲ್ಲ. 1952ರಿಂದ 60ರವರೆಗೆ ಹೊಸಹೊಸ ಔಷಧಿಗಳೂ, ಸ್ನಾಯುಗಳನ್ನು ಸಡಿಲಿಸುವ ಔಷಧಗಳು, ಅರಿವಳಿಕೆ (ಅನಸ್ತೇಷಿಯಾ) ಎಲ್ಲವೂ ಬಳಕೆಗೆ ಬಂದವು.

ಈ ಸಮಯದಲ್ಲಿ ವಿದ್ಯುತ್ ಕಂಪನ ಚಿಕಿತ್ಸೆಯಲ್ಲಿ ನಡೆಯುವ ಫಿಟ್ಸ್ ಅರಿವಳಿಕೆ, ಸ್ನಾಯುಗಳನ್ನು ಸಡಿಲಿಸುವ ಔಷಧಗಳಿಂದ ಇಡೀ ಮೈ ನಡುಗಿಸದೆ, ಕೇವಲ ಬೆರಳುಗಳನ್ನು ಅಲುಗಿಸುವ ಕೋಮಲ ಕಂಪನವಾಗಿ, ಮೆದುಳಿನಲ್ಲಿ ನಡೆಯುವ ಕಂಪನದ ಅವಧಿಯನ್ನು ‘ಇ.ಇ.ಜಿ.’ ಎಂಬ ಮಾಪನದ ಮೂಲಕ ಅಳೆಯುವ ಕಂಪನವಾಗಿ ಬದಲಾಗಿದೆ. ವೈಜ್ಞಾನಿಕ ಆವಿಷ್ಕಾರಗಳ ಅರಿವಿಲ್ಲದೆ, ಉಪಯುಕ್ತತೆಯ - ಅತಿ ಕಡಿಮೆ ಖರ್ಚಿನ ಚಿಕಿತ್ಸೆ ಎಂಬ ಬಗ್ಗೆ ಗೊತ್ತಿರದೆ ನಾಗರಿಕ ಜಗತ್ತು, ರೋಗಿಗಳ ಹಕ್ಕುಗಳ ಬಗ್ಗೆ ಮಾತನಾಡುವ ಸಂಘಟನೆಗಳು ವಿದ್ಯುತ್ ಕಂಪನ ಚಿಕಿತ್ಸೆಯನ್ನು ಒಂದು ಸೀಮಿತ, ಕೇವಲ ಬೇರೆ ಯಾವ ಚಿಕಿತ್ಸೆಗೂ ಸ್ಪಂದಿಸದ ಮನೋರೋಗಗಳಿಗೆ ಕಾದಿರಿಸುವಂತೆ ಮಾಡಿಬಿಟ್ಟಿವೆ.

ಹಲವು ತಪ್ಪು ನಂಬಿಕೆಗಳು ಈಗಲೂ ಪ್ರಚಲಿತ. ಶಾಕ್ ಟ್ರೀಟ್‌ಮೆಂಟ್ ಎಂಬ ಹೆಸರೇ ಮನಸ್ಸಿಗೆ ಭಯದ, ಶಿಕ್ಷೆಯ ಚಿತ್ರಣ ತರುವಂತಹದ್ದು. ಹಾಗೆ ನೋಡಿದರೆ ವಿದ್ಯುತ್ತನ್ನು ಅಪರೇಷನ್ ಥಿಯೇಟರ್‌ಗಳಲ್ಲಿ, ಚಿಕಿತ್ಸೆಯ ಹಲವು ಸಂದರ್ಭಗಳಲ್ಲಿ ಉಪಯೋಗಿಸಲಾಗುತ್ತದೆ. ಆದರೆ ಅವು ವಿದ್ಯುತ್ ಚಿಕಿತ್ಸೆಯಾಗಿರುವುದಿಲ್ಲ ಅಷ್ಟೆ. ಶಾಕ್ ಟ್ರೀಟ್‌ಮೆಂಟ್ ಎಂಬ ಹೆಸರಿಗೆ ಬದಲಾಗಿ ವೈಜ್ಞಾನಿಕವಾದ ‘ಎಲೆಕ್ಟ್ರೋ ಕನ್ವಲ್ಸಿವ್ ಥೆರಪಿ - ಇಸಿಟಿ ’/ವಿದ್ಯುತ್ ಕಂಪನ ಚಿಕಿತ್ಸೆ – ಎನ್ನುವ ಹೆಸರೇ ಎಲ್ಲೆಡೆ, ವಿಶೇಷವಾಗಿ ಮಾಧ್ಯಮಗಳಲ್ಲಿ ಬಳಕೆಗೆ ಬರಬೇಕು.

ಒಂದು ಅಪರೇಷನ್‌ನ್ನು ಹೇಗೆ ರೋಗಿಯ, ಆತನ ಕುಟುಂಬದವರ ಒಪ್ಪಿಗೆಯಿಲ್ಲದೆ ಮಾಡಲು ಸಾಧ್ಯವಿಲ್ಲವೋ ಹಾಗೆಯೇ ವಿದ್ಯುತ್ ಕಂಪನ ಚಿಕಿತ್ಸೆಯನ್ನೂ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನೋವೈದ್ಯರ ಬಳಿ ಹೋದಾಕ್ಷಣ ನಿಮ್ಮನ್ನು ಹಿಡಿದು ಅವರು ಶಾಕ್ ಕೊಟ್ಟುಬಿಡುತ್ತಾರೆ ಎನ್ನುವುದು ಸುಳ್ಳು.  ಇ.ಸಿ.ಟಿ.ಯಲ್ಲಿ ನೀಡುವ ಕರೆಂಟ್ ಮೈಕ್ರೋವೋಲ್ಟಗಳಲ್ಲಿರುತ್ತದೆ. ಅದರಿಂದ ಶಾಕ್ ಹೊಡೆದಾಗ ಆಗುವ ಯಾವ ಅಪಾಯಗಳೂ ಆಗಲು ಸಾಧ್ಯವಿಲ್ಲ. ಇ.ಸಿ.ಟಿ.ಯ ಬಗೆಗಿನ ಇನ್ನೊಂದು ಬಹು ವ್ಯಾಪಕ ಭಯ – ಇ.ಸಿ.ಟಿ.ಯಿಂದ ಎಲ್ಲ ನೆನಪು ಮರೆಯುತ್ತದೆ ಎನ್ನುವುದು.

ಇ.ಸಿ.ಟಿ.ಯಿಂದ ಒಂದೆರಡು ದಿನಗಳ ಹಿಂದಿನ ನೆನಪು ಮರೆಯುವುದು ನಿಜ. ಅಂದರೆ ‘ಇಂದು ಬೆಳಗಿನ ತಿಂಡಿ ಏನು ತಿಂದೆವು?’ ‘ಆಸ್ಪತ್ರೆಯಲ್ಲಿ ಯಾರು ನೋಡಲು ಬಂದಿದ್ದರು’  ಮುಂತಾದ ವಿವರಗಳಷ್ಟೆ! ಇವುಗಳ ಹೊರತು ದೀರ್ಘಕಾಲಿಕ ನೆನಪಾಗಲೀ, ಹೊಸತನ್ನು ಕಲಿಯುವ ಶಕ್ತಿಯಾಗಲೀ ಬದಲಾಗುವುದಿಲ್ಲ.

ಕಾಯಿಲೆಯ ಕಹಿ ಅನುಭವ ಮರೆಯಲು ಈ ಕ್ಷಣಿಕ ಮರೆವು ಸಹಾಯಕವೇ ಎಂಬುದು ಗಮನಾರ್ಹ. ವಿದ್ಯುತ್ ಕಂಪನ ಚಿಕಿತ್ಸೆಯಿಂದ ಗುಣಮುಖರಾದ ಲಕ್ಷಾಂತರ ರೋಗಿಗಳಿದ್ದಾರೆ. ಆದರೆ ಅವರು ಯಾರೂ ತಮ್ಮ ಅನುಭವ ಹಂಚಿಕೊಳ್ಳದಿರುವುದು ಈ ಚಿಕಿತ್ಸೆಗಿರುವ ಸಾಮಾಜಿಕ ಕಳಂಕವನ್ನು ಎತ್ತಿ ತೋರಿಸುತ್ತದೆ. ಹಳ್ಳಿಯ ಮುಗ್ಧ ಗ್ರಾಮೀಣರು ಹಿಂದೆ ಇ.ಸಿ.ಟಿ.ಯಿಂದ ಗುಣಮುಖರಾದವರು,ಇನ್ನೊಬ್ಬ ರೋಗಿಯನ್ನು ಕರೆತಂದು ‘ಡಾಕ್ಟ್ರೇ, ಇವರಿಗೆ ಶಾಕ್ ಕೊಟ್ಟು ಗುಣ ಮಾಡಿಕೊಡಿ’ ಎಂದಾಗ ಆಶ್ಚರ್ಯವಾಗುತ್ತದೆ.

ಅದೇ ವಿದ್ಯಾವಂತರಾದರೂ, ತೀವ್ರ ಖಿನ್ನತೆಯಿಂದ ನರಳುತ್ತ, ಆತ್ಮಹತ್ಯೆಯ ಆಲೋಚನೆ ಮಾಡುತ್ತಿರುವ ರೋಗಿಯ ಸಂಬಂಧಿಕರು ಇ.ಸಿ.ಟಿ.ಯ ಬಗ್ಗೆ ಎಲ್ಲವನ್ನೂ ವಿವರಿಸಿದರೂ ‘ಅದೊಂದು ಬೇಡ ಡಾಕ್ಟ್ರೇ ’ಎಂದಾಗ ಆಘಾತವಾಗುತ್ತದೆ! ಸಾಮಾಜಿಕ ಕಳಂಕವನ್ನು ತೊಡೆದು ಈ ಉಪಯುಕ್ತ ಚಿಕಿತ್ಸೆಯನ್ನು ಜನರು ಒಪ್ಪಿಕೊಂಡು ಗುಣಮುಖರಾಗುವ ಸಂದರ್ಭ ಹೆಚ್ಚಾಗಲಿ ಎಂದು ಆಶಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT